ಕನ್ನೇರಿ ಸ್ವಾಮಿ, ಮುತಾಲಿಕ್ ಅವರನ್ನು ಗಡಿಪಾರು ಮಾಡಲು ಆಗ್ರಹ

ಶರಣರ ಹೆಸರಿನಲ್ಲಿ ಹಿಂದೂ ಸಮಾವೇಶ ಮಾಡುವುದನ್ನು ಸರ್ಕಾರ ತಡೆಯಬೇಕು

ಯಲಬುರ್ಗಾ:

ಬೀದರ ಜಿಲ್ಲೆಯ ಬಸವಕಲ್ಯಾಣದಲ್ಲಿ 28ರಂದು ಬಸವಾದಿ ಶರಣರ ಹಿಂದೂ ಸಮಾವೇಶ ಮಾಡಲು ಹೊರಟಿರುವದು ಸರಿಯಲ್ಲ. ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಬಸವಾನುಯಿಗಳನ್ನು ತಾಲಿಬಾನಿಗಳು ಎಂದಿರುವುದನ್ನು ನಾವು ಸಹಿಸುವುದಿಲ್ಲ ಎಂದು ಬಸವ ಕೇಂದ್ರದ ಅಧ್ಯಕ್ಷ ಅಮರೇಶಪ್ಪ ಬಳ್ಳಾರಿ ಹೇಳಿದರು.

ತಾಲೂಕಿನ ಗುಳೆ ಗ್ರಾಮದ ಅನುಭವ ಮಂಟಪದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ಕನ್ನೇರಿ ಸ್ವಾಮಿ, ಬಸವಕಲ್ಯಾಣದಲ್ಲಿ ಬಸವಾದಿ ಶರಣರ ಹಿಂದೂ ಸಮಾವೇಶ ಮಾಡಲು ಹೊರಟಿದ್ದಾರೆ. ಹಿಂದೂ ಸಮಾವೇಶ ಮಾಡಲು ನಮ್ಮ ಅಭ್ಯಂತರವಿಲ್ಲ. ಆದರೆ ಶರಣರ ಹೆಸರಿನಲ್ಲಿ ಹಿಂದೂ ಸಮಾವೇಶ ಮಾಡುವುದು ಅಪರಾಧ. ಇದನ್ನು ಸರ್ಕಾರ ತಡೆಯಬೇಕೆಂದು ಒತ್ತಾಯಿಸಿದರು.

ಬಸವಾದಿ ಶರಣರು ಸಮಾನತೆ, ಸಹೋದರತ್ವ ಮತ್ತು ಮಾನವೀಯತೆಯ ಸಂದೇಶ ಸಾರಿದವರು. ಬಸವಣ್ಣನವರನ್ನು ಜಾತಿವಾದಿಯನ್ನಾಗಿ, ಸನಾತನವಾದಿಯನ್ನಾಗಿ ಬಿಂಬಿಸಲು ಕನ್ನೇರಿ ಸ್ವಾಮಿ ಹೊರಟಿದ್ದಾರೆ. ಇಂಥ ಸುಳ್ಳು ಪ್ರಚಾರಕರನ್ನು ಮತ್ತು ಸಮಾಜ ವಿಭಜಕರನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದರು.

ಲಿಂಗಾಯತರಲ್ಲಿ ಜಾತಿ, ಲಿಂಗ ಬೇಧವಿಲ್ಲ. ಮನುಜರೆಲ್ಲರೂ ಸಮಾನರು, ಬಸವಣ್ಣನವರ ತತ್ವ ಸಮಾಜವನ್ನು ಒಗ್ಗೂಡಿಸುವುದೇ ಹೊರತು, ಒಡೆಯುವುದಲ್ಲ. ಅವರ ಹೆಸರಿನಲ್ಲಿ ದ್ವೇಷ ಬಿತ್ತಲು ಹೊರಟಿರುವ ಸನಾತನವಾದಿಗಳಿಗೆ ಜನತೆ ತಕ್ಕಪಾಠ ಕಲಿಸಬೇಕು ಎಂದರು.

ಈಚೆಗೆ ಶ್ರೀರಾಮ ಸೇನೆಯ ಪ್ರಮೋದ ಮುತಾಲಿಕ್ ಲಿಂಗಾಯತರನ್ನು ಬಡ್ಡಿಮಕ್ಕಳು ಎಂದು ಹೀಯಾಳಿಸಿದ್ದಾರೆ. ಹಾಗಾಗಿ ಮುತಾಲಿಕ್ ಮತ್ತು ಕನ್ನೇರಿ ಸ್ವಾಮಿಯನ್ನು ಗಡಿಪಾರು ಮಾಡಬೇಕು. ಇಲ್ಲದೇ ಹೋದರೆ ರಾಜ್ಯದ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ಬಸವದಳದ ಅಧ್ಯಕ್ಷ ರೇಣುಕಪ್ಪ ಮಂತ್ರಿ, ನಾಗನಗೌಡ ಜಾಲಿಹಾಳ, ಬಸವನಗೌಡ ಪೊಲೀಸ್ ಪಾಟೀಲ್ ದೇವಪ್ಪ ಕೋಳೂರು, ಹನುಮಗೌಡ ಬಳ್ಳಾರಿ, ಬಸವರಾಜ ಹೂಗಾರ, ಶಿವಣ್ಣ ಕರುವಿನ, ಶರಣಪ್ಪ ಮೇಟಿ, ಮಹಾಲಿಂಗಪ್ಪ ಮೇಟಿ, ಗಿರಿಮಲ್ಲಪ್ಪ ಸಾಹುಕಾರ, ಶರಣಪ್ಪ ಹೊಸಳ್ಳಿ, ದೇವೇಂದ್ರಪ್ಪ ಆವಾರಿ, ನಿಜಲಿಂಗಪ್ಪ ಮಂತ್ರಿ, ಯಮನೂರಪ್ಪ ಚಿಕ್ಕಮನ್ನಾಪೂರ, ಮಲ್ಲಪ್ಪ ಹಡಪದ, ಶರಣಪ್ಪ ಕೋರಿ, ಶಿವಾನಂದಪ್ಪ ಬೇವೂರು ಸೇರಿದಂತೆ ಮತ್ತಿತರರು ಇದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

Share This Article
Leave a comment

Leave a Reply

Your email address will not be published. Required fields are marked *