ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶಕ್ಕೆ ಶಿವಮೊಗ್ಗದಲ್ಲಿ ವಿರೋಧ

ಶಿವಮೊಗ್ಗ:

ಸಾಂಸ್ಕೃತಿಕ ನಾಯಕ ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣದಲ್ಲಿ ಕನ್ನೇರಿ ಸ್ವಾಮಿ ನೇತೃತ್ವದ ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶಕ್ಕೆ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ವಿರೋಧಿಸಿದೆ.

ಸಂಘಟನೆಯ ಜಿಲ್ಲಾ ಹಾಗೂ ತಾಲೂಕ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿ ಸಮಾವೇಶ ನಡೆಸಲು ಬಿಡಬಾರದು ಎಂದು ಒತ್ತಾಯಿಸಿದೆ.

ಬಸವಣ್ಣನವರು ಏಕದೇವೋಪಾಸಕರು ಆಗಿದ್ದೂ, ವೇದ ಉಪನಿಷತ್‌ಗಳಲ್ಲಿ ಇರುವ ವರ್ಣ ವ್ಯವಸ್ಥೆಯನ್ನು ತೆಗೆದು ಮಾನವರಲ್ಲಿ ಮೇಲು ಕೀಳೆನ್ನದೇ ಸ್ತ್ರೀ, ಪುರುಷ ಎನ್ನುವ ಬೇಧ ತೊಡೆದು ಸಮಾನತೆಯ ಸಮಾಜಕ್ಕಾಗಿ ಜೀವದ ಹಂಗು ತೊರೆದು ದುಡಿದು ವಿಶ್ವ ಜನಮಾನಸದಲ್ಲಿ ನೆಲೆಯೂರಿದ್ದಾರೆ.

ಅಂಥ ಬಸವಣ್ಣನವರ ಬಸವಭಕ್ತರಿಗೆ ನೋವುಂಟು ಮಾಡುವ ಹಾಗೂ ವರ್ಣ ವ್ಯವಸ್ಥೆ ಸಮಾಜದಲ್ಲಿ ಮೇಲು ಕೀಳೆಂಬ ಭಾವನೆ ಬರುವಂತಹ ಹೇಳಿಕೆಗಳನ್ನು ಕೊಡುತ್ತಿರುವ ಕನ್ನೇರಿ ಸ್ವಾಮಿ ಬಸವ ಹಿಂದೂ ಸಮಾವೇಶ ಮಾಡಿ, ಪವಿತ್ರ ಬಸವಕಲ್ಯಾಣವನ್ನು ಅಪವಿತ್ರಗೊಳಿಸಬಾರದೆಂದು ಮನವಿ ಮಾಡುತ್ತೇವೆ.

ಬಸವಣ್ಣನವರ ವಚನ ಪ್ರಸಾರ ಮಾಡುವ ಲಿಂಗಾಯತ ಮಠದ ಪೀಠದಲ್ಲಿ ಕೂತು ವಚನ ಸಾರವನ್ನು ಜನಸಾಮಾನ್ಯರಿಗೆ ಅರ್ಥೈಸುವುದನ್ನು ಬಿಟ್ಟು, ಬಸವಣ್ಣನ ಆಶಯಗಳನ್ನು ಗಾಳಿಗೆ ತೂರಿ ಶರಣರ ವಚನಗಳನ್ನು ತಪ್ಪಾಗಿ ಅರ್ಥೈಸುತ್ತಾ, ಬಸವ ಸಂಸ್ಕೃತಿ ಅಭಿಯಾನದಲ್ಲಿ ಸೇರಿದ ಲಕ್ಷಾಂತರ ಬಸವಭಕ್ತರು, ನೂರಾರು ಮಠಾಧೀಶರನ್ನು ನೋಡಿ ಹುಚ್ಚು ಹಿಡಿಸಿಕೊಂಡ ಕನ್ನೇರಿ ಸ್ವಾಮಿ ನಿಂದನೆಯ ಅವಾಚ್ಯ ಶಬ್ದಗಳಿಂದ ಮಾತಾಡಿ ತನ್ನ ನೀಚ ಸಂಸ್ಕೃತಿಯನ್ನು ಪ್ರದರ್ಶನ ಮಾಡಿದ್ದಾರೆ.

ತಾನಿರುವ ಮಠದ ಆಶಯಕ್ಕೆ ತದ್ವಿರುದ್ಧವಾಗಿ ಕೆಲಸ ಮಾಡುವ ಮತ್ತು ಬಸವತತ್ವ ಪ್ರಚಾರ ಮಾಡುವ ಶ್ರೀಗಳಿಗೆ ಹಂದಿ, ನಾಯಿ, ಶಿಖಂಡಿಗಳಿಗೆ ಹೋಲಿಸುವುದು. ಬಸವಭಕ್ತರನ್ನು ತಾಲಿಬಾನಿಗಳೆನ್ನುವ ಕನ್ನೇರಿ ಸ್ವಾಮಿಗೆ ನಮ್ಮ ದೇಶದ ಸರ್ವೋಚ್ಚ ನ್ಯಾಯಾಲಯವು ಛೀಮಾರಿ ಹಾಕಿ ಮಠ ಬಿಟ್ಟು ತೊಲಗು ಎಂದು ಹೇಳಿದೆ.

ಆಗ ಕೆಲಕಾಲ ಬಾಯಿಗೆ ಬೀಗ ಹಾಕಿಕೊಂಡಿದ್ದ ಕನ್ನೇರಿ ಶ್ರೀ ಪುನಃ ಬಾಯಿಗೆ ಬಂದಂತೆ ನಾಲಿಗೆ ಹರಿಬಿಡುತ್ತಿದ್ದಾರೆ. ಆದ್ದರಿಂದ ಕನ್ನೇರಿ ಸ್ವಾಮಿ ಮತ್ತು ಅವರಿಗೆ ಹಿಂದಿನಿಂದ ಬೆಂಬಲ ನೀಡುವವರೆಲ್ಲರಿಗೂ ಪವಿತ್ರ ಬಸವಕಲ್ಯಾಣದಲ್ಲಿ ‘ಬಸವ ಹಿಂದೂ ಸಮಾವೇಶ’ ನಡೆಸಲು ಬಿಡಬಾರದೆಂದು ಸರ್ಕಾರಕ್ಕೆ ಈ ಮೂಲಕ ಮನವಿ ಮಾಡುತ್ತೇವೆ ಎಂದು ಮನವಿಪತ್ರದಲ್ಲಿ ಹೇಳಲಾಗಿದೆ.

ಮನವಿಪತ್ರ ಸಲ್ಲಿಸುವ ಸಂದರ್ಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಲವಟ್ಟಿ, ಜಿಲ್ಲಾ ಪದಾಧಿಕಾರಿಗಳಾದ ಎಂ.ಎಸ್. ತಿಮ್ಮಪ್ಪ ಅರಬಿಳಚಿ, ಸುಭಾಶ್ಚಂದ್ರ, ಹೆಚ್.ಎಸ್. ಹಾಲೇಶಪ್ಪ, ಜಿ.ಎಸ್. ಶಿವಕುಮಾರ, ಕೆ.ಬಿ. ಮಹೇಶ್ವರಪ್ಪ, ಮರುಳಸಿದ್ಧಾರಾಧ್ಯ, ಪಂಚಾಕ್ಷರಿ ಮತ್ತಿತರರು ಹಾಜರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

Share This Article
Leave a comment

Leave a Reply

Your email address will not be published. Required fields are marked *