ದೇಗುಲ ಮಠದ ಸಮಾಜಮುಖಿ ಸೇವೆ ಅನನ್ಯ : ಎಂ.ಬಿ. ಪಾಟೀಲ

ಬಸವ ಮೀಡಿಯಾ
ಬಸವ ಮೀಡಿಯಾ

ಕನಕಪುರ:

ಲಿಂಗಾಯತ ಪರಂಪರೆಯ ದೇಗುಲ ಮಠವು ಶಿಕ್ಷಣ, ದಾಸೋಹ ಹಾಗೂ ಸಮಾಜಮುಖಿ ಸೇವೆಗಳ ಮೂಲಕ ಕನಕಪುರ ತಾಲೂಕಿಗೆ ಅನನ್ಯ ಕೊಡುಗೆ ನೀಡಿದ್ದು, ಮಠದ ರಚನಾತ್ಮಕ ಕಾರ್ಯಗಳು ಕ್ರಾಂತಿಕಾರಕವಾಗಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.

ಈಚೆಗೆ ಲಿಂಗೈಕ್ಯರಾದ ದೇಗುಲ ಮಠದ ಪೂಜ್ಯ ಮುಮ್ಮಡಿ ನಿರ್ವಾಣ ಸ್ವಾಮೀಜಿಗಳ ಪುಣ್ಯಸ್ಮರಣೋತ್ಸವ ಪೂರ್ವಭಾವಿ ಕಾರ್ಯಕ್ರಮದಲ್ಲಿ ಅವರು ಗದ್ದುಗೆಗೆ ಪೂಜೆ ಸಲ್ಲಿಸಿ, ಶ್ರದ್ಧಾಂಜಲಿ ಅರ್ಪಿಸಿದ ಬಳಿಕ ಮಾತನಾಡಿದರು.

ಮಠವು ತನ್ನ ಭವ್ಯ ಪರಂಪರೆಯನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು. ಈ ನಿಟ್ಟಿನಲ್ಲಿ ತಮ್ಮಿಂದಾಗುವ ಎಲ್ಲ ರೀತಿಯ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು.

ಹಳೆಮೈಸೂರು ಭಾಗದಲ್ಲಿ ಸಿದ್ದಗಂಗಾ ಮಠ ಹಾಗೂ ಪೂಜ್ಯ ಶಿವಕುಮಾರ ಸ್ವಾಮೀಜಿಗಳ ದೂರದೃಷ್ಟಿಯಿಂದ ಶಿಕ್ಷಣ ಮತ್ತು ದಾಸೋಹ ಪರಂಪರೆ ಬಲಗೊಂಡಿದ್ದು, ಉತ್ತರ ಕರ್ನಾಟಕದಲ್ಲಿ ಶಿರಸಂಗಿ ಲಿಂಗರಾಜ ಪ್ರಭುಗಳು ಹಾಗೂ ನಂತರ ಕೆಎಲ್‌ಇ ಮತ್ತು ಬಿಎಲ್‌ಡಿಇ ಸಂಸ್ಥೆಗಳು ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಿದವು. ಅದೇ ಮಾದರಿಯಲ್ಲಿ ದೇಗುಲ ಮಠವೂ ಸಮಾಜದ ಅಭಿವೃದ್ಧಿಗೆ ಮಹತ್ವದ ಪಾತ್ರ ವಹಿಸಿದೆ ಎಂದು ಹೇಳಿದರು.

ಲಿಂಗಾಯತ ಪರಂಪರೆಗೆ ಸೇರಿದ ಮಠವಾಗಿ, ಜಾತ್ಯತೀತ ನೆಲೆಯಲ್ಲಿ ಎಲ್ಲ ವರ್ಗದ ಜನರ ಸೇವೆಗೆ ಸಮರ್ಪಿತವಾಗಿ ಕಾರ್ಯನಿರ್ವಹಿಸಿರುವುದರಿಂದ ದೇಗುಲ ಮಠದ ಬಗ್ಗೆ ಜನರಲ್ಲಿ ಅಪಾರ ವಿಶ್ವಾಸ ಬೆಳೆದಿದೆ. ಲಿಂಗೈಕ್ಯ ಪೂಜ್ಯ ಮುಮ್ಮಡಿ ನಿರ್ವಾಣ ಸ್ವಾಮೀಜಿಗಳ ಸಮಾಜಮುಖಿ ಸೇವೆ ಮತ್ತು ದೂರದೃಷ್ಟಿಯ ಕೊಡುಗೆ ಸದಾ ಸ್ಮರಣೀಯವಾಗಿರುತ್ತದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಪುಣ್ಯಸ್ಮರಣೆ ಮಹೋತ್ಸವದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ, ಮಹೋತ್ಸವವನ್ನು ಯಶಸ್ವಿಗೊಳಿಸಲು ಎಲ್ಲ ವರ್ಗದ ಜನರು ಸಹಕರಿಸುವಂತೆ ಮನವಿ ಮಾಡಿದರು.

ದೇಗುಲ ಮಠದ ಶ್ರೀ ಚನ್ನಬಸವ ಸ್ವಾಮೀಜಿಗಳು, ಬೆಂಗಳೂರಿನ ಮಾಜಿ ಉಪಮೇಯರ್ ಪುಟ್ಟರಾಜು, ಸಮುದಾಯದ ಮುಖಂಡ ಮಲ್ಲಿಕಾರ್ಜುನ ಸೇರಿದಂತೆ ಹಲವು ಗಣ್ಯರು, ಭಕ್ತರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

Share This Article
Leave a comment

Leave a Reply

Your email address will not be published. Required fields are marked *