ತುಮಕೂರು:
ವಚನ ಸಂರಕ್ಷಣೆಯ ಮಹಾರೂವಾರಿ ಫ.ಗು. ಹಳಕಟ್ಟಿ 12ನೇ ಶತಮಾನದ ಶರಣರ ವಚನಗಳು 20ನೇ ಶತಮಾನದಲ್ಲಿ ಅಳಿವಿನ ಅಂಚಿನಲ್ಲಿದ್ದಾಗ ಅವುಗಳನ್ನು ಹುಡುಕಿ ಸಂಪಾದಿಸಿ ಸ್ವಂತ ಹಣದಿಂದ ಮುದ್ರಣಾಲಯ ತೆರೆದು ಪ್ರಕಟಿಸಿದ ಕೀರ್ತಿಗೆ ಭಾಜನರಾದ ಫ.ಗು ಹಳಕಟ್ಟಿ ಅವರು ವಚನ ಸಾಹಿತ್ಯದ ಪುನರುಜ್ಜೀವನ ಮತ್ತು ಸಂರಕ್ಷಣೆಯ ಮಹಾರೂವಾರಿ ಆಗಿದ್ದಾರೆ ಎಂದು ಮಧುಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಎಂ. ಗೋವಿಂದರಾಯ ಅಭಿಪ್ರಾಯಪಟ್ಟರು.
ಅವರು ಬಸವಕೇಂದ್ರ ಮತ್ತು ಜಯದೇವ ವಿದ್ಯಾರ್ಥಿ ನಿಲಯ ಟ್ರಸ್ಟ್ ನಗರದ ಜಯದೇವ ಮುರುಘರಾಜೇಂದ್ರ ಸಭಾಂಗಣದಲ್ಲಿ ಏರ್ಪಡಿಸಿದ್ದ ಫ.ಗು. ಹಳಕಟ್ಟಿ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ತಮ್ಮ ವಕೀಲಿವೃತ್ತಿಯ ಗಳಿಕೆಯ ಬಹುಭಾಗವನ್ನು ಹಸ್ತಪ್ರತಿಗಳನ್ನು ಕೊಳ್ಳಲು ಬಳಸಿದ್ದಲ್ಲದೆ ಅವುಗಳ ಮುದ್ರಣಕ್ಕಾಗಿ ಬಿಜಾಪುರದಲ್ಲಿದ್ದ ತಮ್ಮ ಸ್ವಂತ ಮನೆಯನ್ನೇ ಮಾರಿ ಕಡುಬಡತನದಲ್ಲೂ ವಚನಗಳ ಸಂಗ್ರಹವನ್ನು ಮಾಡಿದ್ದಾರೆ.
ಅವರ ಕಾರ್ಯ ಕೇವಲ ಪುಸ್ತಕ ಪ್ರಕಟಣೆಗೆ ಸೀಮಿತವಾಗಿರದೆ ವೈಚಾರಿಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ರಾಂತಿಯ ಮರುಜನ್ಮವಾಗಿದೆ ಎಂದ ಅವರು ವಚನಕಾರರ ಅಂಕಿತನಾಮಗಳ ಗುರುತಿಸುವಿಕೆ, ವಚನಶಾಸ್ತ್ರ ಸಾರ ಕೃತಿ, ಶಿವಾನುಭವ ಪತ್ರಿಕೆ, ಗ್ರಾಮೀಣಾಭಿವೃದ್ದಿ ಸಂಘ, ನೇಕಾರರ ಸಂಘ, ಸಿದ್ದೇಶ್ವರ ಬ್ಯಾಂಕ್ ಮೊದಲಾದವುಗಳ ಹುಟ್ಟಿಗೆ ಕಾರಣರಾಗಿ ಆಧುನಿಕ ಕರ್ನಾಟಕದ ಸಾಂಸ್ಕೃತಿಕ ಭಗೀರಥ ಎಂಬ ಬಿರುದಿಗೆ ಪಾತ್ರರಾಗಿದ್ದಾರೆ ಎಂದರು.
ಫ.ಗು. ಹಳಕಟ್ಟಿ ಜಯಂತಿ ನಿಮಿತ್ತ ಸನ್ಮಾನ ಸ್ವೀಕರಿಸಿದ ಇತಿಹಾಸ ಸಂಶೋಧಕ ಡಾ. ಡಿ.ಎನ್. ಯೋಗೀಶ್ವರಪ್ಪ ಮಾತನಾಡಿ, ಕನ್ನಡ ಸಾಹಿತ್ಯದ ನವೋದಯ ಕಾಲದಲ್ಲಿ ಬಿ.ಎಂ.ಶ್ರೀ ಅವರು ಕನ್ನಡ ಕಟ್ಟುವ ಕೆಲಸ ಮಾಡುತ್ತಿದ್ದರೆ ಅವರ ಸಮಕಾಲೀನರಾಗಿ ಶ್ರೇಷ್ಠ ನ್ಯಾಯವಾದಿಗಳಾಗಿದ್ದ ಹಳಕಟ್ಟಿಯವರು ಮಧ್ಯಕಾಲೀನ ಕನ್ನಡ ಸಾಹಿತ್ಯವನ್ನು ಉದ್ದರಿಸ ಹೊರಟ ಮಹಾಪುರುಷರು.
ವೃತ್ತಿಯಲ್ಲಿ ವಕೀಲರಾದರೂ ಪ್ರವೃತ್ತಿಯಲ್ಲಿ ಸಾಹಿತ್ಯವನ್ನು ತಮ್ಮ ಉಸಿರಾಗಿ ಸ್ವೀಕರಿಸಿದವರು.
ತಾವು ಗಳಿಸಿದ್ದ ಹಣವನ್ನೆಲ್ಲಾ ವಚನ ಸಾಹಿತ್ಯ ಪ್ರಕಟಣೆಗೆ ವ್ಯಯಮಾಡಿ ಇದ್ದ ಮನೆಯನ್ನು ಮಾರಿಕೊಂಡು ಬದುಕಿನುದ್ದಕ್ಕೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಾ ವಚನ ಸಂಶೋಧನೆಗೆ ತಮ್ಮ ಇಡೀ ಜೀವನವನ್ನು ಮಿಸಲಾಗಿಟ್ಟು ವಚನ ಸಂರಕ್ಷಣೆಯ ಪಿತಾಮಹ ಎನಿಸಿಕೊಂಡು ಅವರ ಕಾರ್ಯ ವೈಖರಿಯನ್ನು ಮೆಚ್ಚಿದ ಆಚಾರ್ಯ ಬಿ.ಎಂ.ಶ್ರೀಯವರು ಅವರನ್ನು ವಿಜಾಪುರದ ವಚನ ಗುಮ್ಮಟ ಎಂದು ಕರೆದಿದ್ದಾರೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮತ್ತೊಬ್ಬ ಸಂಶೋಧಕ ಡಾ. ಬಿ. ನಂಜುಂಡಸ್ವಾಮಿ ಅವರು ಫ.ಗು. ಹಳಕಟ್ಟಿಯವರು ತುಮಕೂರು ಜಿಲ್ಲೆಯ ಗೋಡೆಕೆರೆ ಮಠದ ಕಾರ್ಯಕ್ರಮವೊಂದಕ್ಕೆ ಆಗಮಿಸಿ ವಚನಶಾಸ್ತ್ರ ಸಾರದ ಬಗ್ಗೆ ವಿಶೇಷ ಉಪನ್ಯಾಸ ನೀಡಿದ್ದರು ಎಂಬುದನ್ನು ಸ್ಮರಿಸಿದ ಅವರು ಆ ಸಂದರ್ಭದಲ್ಲಿ ಹಳಕಟ್ಟಿಯವರು ಈ ಭಾಗದಲ್ಲಿ ಸಿದ್ದರಾಮೇಶ್ವರರ ಭಕ್ತರೇ ಹೆಚ್ಚಾಗಿರುವುದನ್ನು ಮನಗಂಡು ಸಿದ್ದರಾಮೇಶ್ವರ ಜಯಂತಿಯನ್ನು ಆಚರಿಸಲು ಕರೆ ನೀಡಿದ್ದರು. ಇವರ ಸಾಹಿತ್ಯ ದುಡಿಮೆಯನ್ನು ಏಕವ್ಯಕ್ತಿ ಸಾಹಸ ಸಾಹಿತ್ಯ ದುಡಿಮೆಯೆಂದು ಹೇಳಬಹುದು ಎಂದು ಅಭಿಪ್ರಾಯಪಟ್ಟರು.
ಬಸವಕೇಂದ್ರದ ಅಧ್ಯಕ್ಷರಾದ ಸಿದ್ದಗಂಗಮ್ಮ ಬಿ. ಸಿದ್ದರಾಮಣ್ಣ ಅಧ್ಯಕ್ಷತೆ ವಹಿಸಿದ್ದರು. ಬಸವಕೇಂದ್ರದ ಕಾರ್ಯದರ್ಶಿ ಚಂದ್ರಶೇಖರ ನಿರೂಪಿಸಿದರು. ಕಲ್ಪನಾ ಬಿ. ಉಮೇಶ್ ಸ್ವಾಗತಿಸಿದರು. ಎಲೆರಾಂಪುರ ರುದ್ರಮೂರ್ತಿ ವಂದಿಸಿದರು. ರಾಗಿಣಿ ವಚನಗಾಯನ ನಡೆಸಿಕೊಟ್ಟರು.
