ಮೊಳಕಾಲ್ಮುರು:
ಬಸವ ಕೇಂದ್ರ, ಚಿತ್ತರಗಿ ಶ್ರೀ ವಿಜಯಮಹಾಂತೇಶ್ವರ ಶಾಖಾಮಠ, ಚಿತ್ತರಗಿ ಚಿಜ್ಯೋತಿ ಸಾಂಸ್ಕೃತಿಕ ಕಲಾ ವೇದಿಕೆ ಮತ್ತು ಕ್ರೀಡಾ ಯುವಕ ಸಂಘ, ಸಿದ್ದಯ್ಯನ ಕೋಟೆ ಇವರ ಸಂಯುಕ್ತ ಆಶ್ರಯದಲ್ಲಿ 97ನೇ ಶಿವಾನುಭವ ಗೋಷ್ಠಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಶಾಖಾಮಠದ ಪೀಠಾಧಿಪತಿ, ಕಾಯಕಯೋಗಿ ಪೂಜ್ಯ ಬಸವಲಿಂಗ ಮಹಾಸ್ವಾಮಿಗಳು, ಶರಣರ ಚಿಂತನ ಸತ್ಸಂಗ ಸಂಸ್ಕಾರ ಬಹಳ ಮುಖ್ಯ.
ನಾವುಗಳು ಶಿವಚಿಂತೆ, ಶಿವಜ್ಞಾನ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಬಸವಾದಿ ಶಿವಶರಣರು ಕೊಟ್ಟಿರುವ ವಚನ ಸಾಹಿತ್ಯವನ್ನು ಮೈಗೂಡಿಸಿಕೊಂಡು ಜೀವನವನ್ನು ಸಾಗಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅನುಭಾವವನ್ನು ಎಡೆ ಮಾಡಿದ ಕೆ. ಚಂದ್ರಪ್ಪ ಚಿತ್ರದುರ್ಗ ಅವರು, ಈ ಬೆಂಗಾಡಿನಲ್ಲಿ ಶ್ರೀಮಠವು ಮೂರು ದಶಕಗಳಿಂದ ಬಸವಾದಿ ಶಿವಶರಣರ ತತ್ವ ವಿಚಾರಗಳನ್ನು ಜನಮನಕ್ಕೆ ಮುಟ್ಟಿಸುತ್ತಾ, ಜನರಲ್ಲಿರುವ ದುಶ್ಚಟಗಳನ್ನು ನಮ್ಮ ಜೋಳಿಗೆಗೆ ಹಾಕಿ ಎಂದು ಬೇಡುತ್ತಾ, ಹಳ್ಳಿ ಹಳ್ಳಿಗಳಲ್ಲಿ ತಿರುಗಾಡುತ್ತ ಶರಣರ ತತ್ವ ವಿಚಾರಗಳು ಈ ಗಡಿ ಭಾಗದಲ್ಲಿ ಚಾಚೂತಪ್ಪದೇ ಪಾಲಿಸುತ್ತಿರುವ ಶ್ರೀಗಳ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ದಾಸೋಹಸೇವೆ ಸಲ್ಲಿಸಿ ಮಾತನಾಡಿದ ಕೆ. ಬಸಣ್ಣ, ಶ್ರೀಗಳು ಪರಿಶ್ರಮದಿಂದ ಶೈಕ್ಷಣಿಕವಾಗಿ ಇವತ್ತು ಶ್ರೀಮಠದಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ವಸತಿ, ಅನ್ನ ದಾಸೋಹ ನಡೆಸುತ್ತಿರುವುದು ನಮ್ಮ ಭಾಗದ ಬಡ ಕುಟುಂಬದ ಮಕ್ಕಳಿಗೆ ಬಹಳ ಅನುಕೂಲವಾಗಿದೆ.
ನಾವುಗಳು ಪ್ರತಿತಿಂಗಳು ನಡೆಯುವ ಶಿವಾನುಭವ ಕಾರ್ಯಕ್ರಮದಲ್ಲಿ ಕುಟುಂಬ ಸಮೇತರಾಗಿ ಭಾಗವಹಿಸಿ ಮಕ್ಕಳಿಗೆ ಉತ್ತಮವಾದ ಸಂಸ್ಕಾರ ಮತ್ತು ಶರಣರ ವಿಚಾರಧಾರೆಗಳು ನಮಗೆ ದೊರಕುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಮಠದ ಕಾರ್ಯದರ್ಶಿ ಪಿ. ಆರ್. ಕಾಂತರಾಜ, ಬಸವ ಕೇಂದ್ರ ಅಧ್ಯಕ್ಷರಾದ ಎಂ.ಬಿ. ಭೋಗೇಶಗೌಡ, ಅಕ್ಕನ ಬಳಗದ ಅಧ್ಯಕ್ಷರಾದ ಸಂಧ್ಯಾ, ಕೆ. ಈಶ್ವರಮ್ಮ, ಡಾ. ರಂಗಪ್ಪ, ಎಸ್.ಪಿ. ಲಕ್ಷ್ಮಣ, ಗುರು, ಶಂಕ್ರಪ್ಪ, ಶ್ರೀ ವಿಜಯ ಮಹಾಂತೇಶ್ವರ ಮಹಿಳಾ ಸಂಘದ ಅಧ್ಯಕ್ಷರಾದ ಪಿ. ತುಳಸಿ, ಎಂ.ಬಿ. ಮಹಾಂತಮ್ಮ, ರುದ್ರಮ್ಮ, ಶಿಕ್ಷಕ ನವೀನ್ ಮತ್ತಿತರು ಭಾಗವಹಿಸಿದ್ದರು.
