ಚಿತ್ರದುರ್ಗ:
ವಿಶ್ವ ಸಾಹಿತ್ಯಕ್ಕೆ ಕನ್ನಡ ಸಾಹಿತ್ಯದ ಶ್ರೇಷ್ಠ ಕೊಡುಗೆ ವಚನ ಸಾಹಿತ್ಯ. ಅಂತಹ ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿದವರು 12ನೇ ಶತಮಾನದ ಶಿವಶರಣರು ಎಂದು ಸರ್ಕಾರಿ ಕಲಾ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಯಶೋಧರ ಜಿ.ಎನ್. ಅಭಿಪ್ರಾಯಪಟ್ಟರು.

ಅವರು ಸೋಮವಾರ ಇಲ್ಲಿನ ಬಸವಕೇಂದ್ರ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮೂಲಕರ್ತೃ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾ ವಿಶ್ರಾಂತಿ ಸನ್ನಿಧಾನದಲ್ಲಿ ಆಯೋಜಿಸಿದ್ದ ಶಿವಶರಣ ಅಂಬಿಗರ ಚೌಡಯ್ಯನವರ (ಶರಣೋತ್ಸವ) ಜಯಂತಿಯಲ್ಲಿ ಭಾಗವಹಿಸಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಸಮಾಜದಲ್ಲಿನ ಮೌಢ್ಯ, ಕಂದಾಚಾರ, ಡಾಂಬಿಕ ಭಕ್ತಿಯನ್ನು ಅಲ್ಲಗಳೆದು ಸಮ ಸಮಾಜದ ನಿರ್ಮಾಣಕ್ಕೆ ಕಟಿಬದ್ಧರಾದ ಶರಣರು ಬಸವಣ್ಣನವರ ನೇತೃತ್ವದಲ್ಲಿ ಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಿಸಿ ಸಕಲ ಜನಾಂಗದ ಶರಣರಿಗೂ ಆದ್ಯತೆಯನ್ನು ನೀಡಿದರು.
ಅಂಬಿಗರ ಚೌಡಯ್ಯ ಬಸವಣ್ಣನವರ ಅನುಭವ ಮಂಟಪದ ಸದಸ್ಯರಲ್ಲಿ ಒಬ್ಬರಾಗಿದ್ದವರು. ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಚೌಡಯ್ಯ ದಾನಪುರದಲ್ಲಿ ಜನಿಸಿದರು ಎಂದು ವಿದ್ವಾಂಸರ ಅಭಿಪ್ರಾಯವಿದೆ. ತಂದೆ ವಿರೂಪಾಕ್ಷಪ್ಪ, ತಾಯಿ ಹಂಪಾಂಬಿಕೆ, ಹೆಂಡತಿ ಸುಲೋಚನ, ಮಗ ಪುರವಂತ. ಇವರ ಕಾಯಕ ದೋಣಿ ನಡೆಸುವುದು. ಕಾಯಕವನ್ನು ಅತ್ಯಂತ ನಿಷ್ಠೆಯಿಂದ ನೆರವೇರಿಸುತ್ತ ತನ್ನ ಜೀವನದ ಅನುಭವಗಳನ್ನೇ ವಚನಾಮೃತವಾಗಿಸಿದವರು ನಿಜಶರಣ ಅಂಬಿಗರ ಚೌಡಯ್ಯನವರು ಎಂದು ಹೇಳಿದರು.
ಬಸವಣ್ಣನವರು ಇವರ ದಿಟ್ಟತನ ಅತ್ಯಂತ ಶ್ರೇಷ್ಠವಾದ ಅನುಭವದ ಮಾತುಗಳನ್ನು ಕೇಳಿ, ನಿಮ್ಮ ನೇರ ನಿಷ್ಠುರ ನುಡಿಗಳಿಂದ ನೀವು ನಿಜಶರಣರು ಎಂದು ಕರೆದು ಅವರನ್ನು ನಿಜಶರಣ ಅಂಬಿಗರ ಚೌಡಯ್ಯ ಎಂದು ಶರಣರೆಲ್ಲರಿಗೆ ಪರಿಚಯಿಸಿದರು.
ಬಸವಣ್ಣ ಮತ್ತು ಅಲ್ಲಮಪ್ರಭುವಿನ ಮೇಲಿನ ಭಕ್ತಿ ಭಾವದಿಂದ ಚೌಡಯ್ಯನವರು ಹೀಗೆ ಹೇಳುತ್ತಾರೆ- ಬಸವಣ್ಣನೇ ಭಕ್ತ ಪ್ರಭುದೇವರೇ ಜಂಗಮ ಇಂಥ ಎಂಬ ಭೇದವಿಲ್ಲವಯ್ಯ ಅರಿವೇ ಗುರುವೇ ಪರಶಿವನ ತಿಳಿದವನೇ ಪರಂಜ್ಯೋತಿಯೆಂದ ಅಂಬಿಗರ ಚೌಡಯ್ಯ. ಇದಲ್ಲದೆ ಮನುಷ್ಯ ಸದಾ ಯಾವ ಚಿಂತೆಯಲ್ಲಿದ್ದಾನೆ ಯಾರ ಚಿಂತನೆಯಲ್ಲಿರಬೇಕು ಎಂದು ತಿಳಿಸುತ್ತಾ, ಬಡತನಕ್ಕೆ ಉಂಬುವ ಚಿಂತೆ ಉಣಲಾದರೆ ಉಡುವ ಚಿಂತೆ, ಉಡಲಾದರೆ ಇಡುವ ಚಿಂತೆ, ಇಡಲಾದರೆ ಹೆಂಡಿರ ಚಿಂತೆ, ಹೆಂಡಿರಾದರೆ ಮಕ್ಕಳ ಚಿಂತೆ, ಮಕ್ಕಳಾದರೆ ಬದುಕಿನ ಚಿಂತೆ, ಬದುಕಾದರೆ ಕೇಡಿನ ಚಿಂತೆ, ಇಂತಿ ಹಲವು ಚಿಂತೆಯಲ್ಲಿಪ್ಪರ ಕಂಡೆನು ಶಿವನ ಚಿಂತೆಯಲ್ಲಿದ್ದವರನೊಬ್ಬರನ್ನೂ ಕಾಣದಾದೇನು ಎಂದು ಮನುಷ್ಯನ ಸಹಜ ಗುಣಗಳ ಬಗ್ಗೆ ತಿಳಿಸುತ್ತಾರೆ.
ಡಾಂಭಿಕ ಭಕ್ತರನ್ನು ಕುರಿತು, ಕಂತೆ ತೊಟ್ಟವ ಗುರುವಲ್ಲ ಕಾವಿ ತೊಟ್ಟವ ಜಂಗಮನಲ್ಲ, ಶೀಲ ಕೆಟ್ಟವ ಶಿವಭಕ್ತನಲ್ಲ, ಹೌದೆಂಬುವನ ಬಾಯ ಮೇಲೆ ಅರ್ಧ ಮಳೆಯ ಪಾದರಕ್ಷೆಯ ತೆಗೆದುಕೊಂಡು ಮಾಸಿ ಕಡಿಮೆ ಇಲ್ಲದೆ ಹೋಗಿ ತೂಗಿ ಟೊಕಟೊಕನೆ ಹೊಡೆ ಎಂದಾತ ನಮ್ಮ ಅಂಬಿಗರ ಚೌಡಯ್ಯ ಎಂದು ಅತ್ಯಂತ ನಿಷ್ಠುರವಾಗಿ ಮಾತನಾಡುತ್ತಾರೆ ನಮ್ಮ ಅಂಬಿಗರ ಚೌಡಯ್ಯ.
ಕಾಯಕನಿಷ್ಠೆಯ ಮೇಲೆ ಕೌಶಲ್ಯಗಳನ್ನು ಕಲಿಸುವ ಶಿಕ್ಷಣ ವ್ಯವಸ್ಥೆ ಇಂದಿನ ಅಗತ್ಯ. ಎಲ್ಲ ಕಾಯಕವೂ ಶ್ರೇಷ್ಠ ಎಂದು ಜನಸಾಮಾನ್ಯರಿಗೆ ತಿಳಿಸುವ ಅಗತ್ಯ ಇಂದು ಅತ್ಯಂತ ತುರ್ತಾಗಿದೆ. ಜಾತಿ ಧರ್ಮಗಳನ್ನು ಮೀರಿದ ಕೌಶಲ್ಯಾದಾರಿತ ಶಿಕ್ಷಣ ವ್ಯವಸ್ಥೆ ಜಾರಿ ಆಗಬೇಕು. ಬುದ್ಧಿ ಮತ್ತು ದೇಹ ಎರಡರ ಕೆಲಸವು ಶ್ರೇಷ್ಠವೆಂಬ ನಿಲುವನ್ನು ನಾವು ತಾಳಬೇಕಿದೆ ಎಂದು ತಿಳಿಸಿದರು.

ಸಮ್ಮುಖ ವಹಿಸಿದ್ದ ಬಸವ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ಅಂಬು ಎಂದರೆ ನೀರು. ನೀರಿನ ಮೇಲೆ ನಡೆಯುವವನು ನೀರನ್ನೇ ಆಧರಿಸಿ ಬದುಕುವವನು, ನೀರಿನ ಮೇಲೆ ದೋಣಿ ನಡೆಸಿ ಜನರನ್ನು ದಡ ಸೇರಿಸುವ ವೃತ್ತಿಯನ್ನು ಅಂಬಿಗರ ಚೌಡಯ್ಯನವರು ಮಾಡುತ್ತಿದ್ದರು. ಆಸೆಯ ಬಗ್ಗೆ ವಚನವೊಂದರಲ್ಲಿ ಹೀಗೆ ಹೇಳುತ್ತಾರೆ- ಆಶೆಗೊಳಗಾದವನು ಇನ್ನೊಬ್ಬರ ಹಂಗಿನಲ್ಲಿರಬೇಕಾಗುತ್ತದೆ. ಆಸೆಬಿಟ್ಟವನು ಕೈಲಾಸದಲ್ಲಿ ಅದಕ್ಕೂ ಮೀರಿದ ಸ್ಥಿತಿ ತಲುಪುತ್ತಾರೆನ್ನುವಂತಹ ಮಾರ್ಮಿಕ ವಚನಗಳನ್ನು ರಚಿಸಿದ್ದಾರೆ. ಎಲ್ಲರೂ ತಮ್ಮ ಆರಾಧ್ಯ ದೈವವನ್ನು ತಮ್ಮ ವಚನಗಳ ಅಂಕಿತವನ್ನಾಗಿಸಿದರೆ ಇವರು ಮಾತ್ರ ತನ್ನ ಹೆಸರನ್ನೇ ಅಂಕಿತದಲ್ಲಿರಿಸಿಕೊಂಡಿರುವ ವ್ಯಕ್ತಿತ್ವದವರಾಗಿದ್ದರೆಂದು ಸ್ಮರಿಸಿದರು.
ಸಮಾರಂಭದ ಸಾನಿಧ್ಯ ವಹಿಸಿದ್ದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಮಾತನಾಡಿ, ಇಂದು ನುಡಿಯಲ್ಲಿ ನಿಸ್ಸೀಮರು, ನಡೆಯಲ್ಲಿ ಅಧಮರಾಗುವ ಸಂಭವವಿದೆ. ಇವರು ಸಮಾಜದ ಪ್ರಗತಿಗೆ ಅಭಿವೃದ್ಧಿಗೆ ಕಂಟಕ. ಇಂಥವರಿಂದ ಸಮಾಜದ ಏಳಿಗೆಯನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ.
೧೨ನೇ ಶತಮಾನದ ಬಸವಾದಿ ಶರಣರ ನಡೆ ನುಡಿ ಶುದ್ಧತೆಯ ಶ್ರೇಷ್ಠತೆಯ ಅಂತರಂಗ ಬಹಿರಂಗದ ಮಹತ್ವವನ್ನು ಅರಿತು ಇಂದಿನ ಪೀಳಿಗೆ ಮುಂದುವರಿಯಬೇಕಿದೆ. ಅದನ್ನು ನಮ್ಮ ಶ್ರೀಮಠ ಎಂದಿಗೂ ನೆರವೇರಿಸಿಕೊಂಡು ಬರುತ್ತಿದೆ. ಆ ನಿಟ್ಟಿನಲ್ಲಿ ನಮ್ಮ ಕಾರ್ಯಗಳು ಮುಂದುವರೆಯುತ್ತಿವೆ.

ಈಗ ಸತ್ಯ ಹೇಳುವುದೇ ಕಷ್ಟವಾಗಿದೆ. ಅಂತಹ ವಾತಾವರಣದಲ್ಲಿದ್ದೇವೆ. ಸಾಧ್ಯವಾದಷ್ಟು ಸತ್ಯಕ್ಕೆ ಸಮೀಪವಾಗಿ ನಮ್ಮ ನಡೆ ಇದ್ದರೆ ಸಾರ್ಥಕವಾಗುತ್ತದೆಂದು ನುಡಿದರು.
ಈ ಸಂದರ್ಭದಲ್ಲಿ ನಿಪ್ಪಾಣಿಯ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಈಚಲನಾಗೇನಹಳ್ಳಿಯ ಗೋವಿಂದ ಸ್ವಾಮೀಜಿ, ವಿವಿಧ ಸಮಾಜಗಳ ಪದಾಧಿಕಾರಿಗಳಾದ ಕಣಿವೆ ಮಾರಮ್ಮ ತಿಪ್ಪೇಸ್ವಾಮಿ, ಬಸವರಾಜ ಕಟ್ಟಿ, ಎಸ್.ಎಂ. ಕೊಟ್ರೇಶಪ್ಪ, ಕವಿ ಗಂಗಾಧರಪ್ಪ, ಅಣ್ಣಪ್ಪ ಹೆಚ್.ಡಿ.ಪುರ, ರಾಜಶೇಖರ್, ಬಸವರಾಜ ಅಂಗಡಿ, ಸಿದ್ದಾಪುರ ಮಲ್ಲಿಕಾರ್ಜುನಪ್ಪ, ರಂಗಕರ್ಮಿ ಕೆ.ಪಿ. ಗಣೇಶಯ್ಯ, ಶಿವಮೊಗ್ಗ ರಂಗಾಯಣದ ವ್ಯವಸ್ಥಾಪಕ ಮಂಜುನಾಥ ಹಿರೇಮಠ ಮತ್ತು ಸಹ ಕಲಾವಿದರು ಸೇರಿದಂತೆ ವಿವಿಧ ಸಮಾಜಗಳ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಎಸ್.ಜೆ.ಎಂ. ವಿದ್ಯಾಪೀಠದ ಶಾಲಾ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಬೃಹನ್ಮಠದ ಆವರಣದಲ್ಲಿರುವ ಎಸ್.ಜೆ.ಎಂ. ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ನಿರ್ವಹಣೆಯಲ್ಲಿ ನಡೆದ ಸಮಾರಂಭಕ್ಕೆ ಜಮುರಾ ಕಲಾವಿದ ಉಮೇಶ್ ಪತ್ತಾರ್ ಅಂಬಿಗರ ಚೌಡಯ್ಯನವರ ವಚನ ಹಾಡಿದರು. ಶಿಕ್ಷಕಿ ವಿಜಯಲಕ್ಷ್ಮಿ ಸ್ವಾಗತಿಸಿದರು. ಎನ್. ನಿರ್ಮಲಾ ಕಾರ್ಯಕ್ರಮ ನಿರ್ವಹಿಸಿ ಕೊನೆಯಲ್ಲಿ ಶರಣು ಸಮರ್ಪಣೆ ಮಾಡಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP?s=sh&p=a&ilr=4&amv=1
