ಭಾಲ್ಕಿ:
ಭಾಲ್ಕಿ ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ 500ನೆಯ ಶಿವಾನುಭವ ಗೋಷ್ಠಿ ಹಾಗೂ ಶರಣ ಅಂಬಿಗರ ಚೌಡಯ್ಯನವರ ಸ್ಮರಣೋತ್ಸವ ನಡೆಯಿತು.
ಪೂಜ್ಯ ಗುರುಬಸವ ಪಟ್ಟದ್ದೇವರು ಸಾನಿಧ್ಯ ವಹಿಸಿ ಮಾತನಾಡುತ್ತ, ಮಹಾಶರಣ ಅಂಬಿಗರ ಚೌಡಯ್ಯನವರ ಕಾಯಕ ದೋಣಿ ನಡೆಸುವುದಾಗಿತ್ತು. ತನ್ನ ಹೆಸರೆ ವಚನದ ಅಂಕಿತನಾಮ ಇಟ್ಟುಕೊಂಡ ವೀರಶರಣ ಅವರು.
ಚೌಡಯ್ಯನವರು ಕೇವಲ ದೋಣಿ ನಡೆಸುವ ಅಂಬಿಗ ವೃತ್ತಿ ಮಾಡುವ ಚೌಡಯ್ಯನಲ್ಲ, ದೋಣಿ ನಡೆಸುತ್ತ ಶಿವಯೋಗ ಸಾಧನೆ ಮಾಡುತ್ತ ಅಂಗಾಂಗ ಸಾಮರಸ್ಯದ ಸುಖ ನೀಡುವ ಮಹಾಗುರು ಆಗಿದ್ದರು.
ನೇರ ನಿರ್ಭೀತ ನುಡಿಗಳಿಂದ ವಚನಗಳನ್ನು ಬರೆದಿದ್ದಾರೆ. ಅನುಭವ ಮಂಟಪದಲ್ಲಿ ಸಮಾನ ಭೂಮಿಕೆಯ ಸಮ್ಮೇಳನದಲ್ಲಿ ಸೇರಿಕೊಂಡವರು. ಬಸವಣ್ಣನವರಿಂದ ಲಿಂಗದೀಕ್ಷೆಯನ್ನು ಪಡೆದುಕೊಂಡು ಅನೇಕ ವಚನಗಳನ್ನು ರಚಿಸಿದ್ದಾರೆ.
ತುಂಬಿದ ಹೊಳೆಯಲ್ಲಿ ದೋಣಿಗೆ ಹುಟ್ಟುಹಾಕುವ ಅಂಬಿಗ ಮಾತ್ರವಲ್ಲ, ಭವಸಾಗರದಲ್ಲೂ ಹುಟ್ಟುಹಾಕುವ ಕೌಶಲ್ಯವುಳ್ಳ ಶರಣರಾಗಿದ್ದರು. ತೀಕ್ಷ್ಣ ವಚನಗಳಿಂದ ಶರಣರ ವಚನ ಕ್ರಾಂತಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ಅಂಬಿಗರ ಚೌಡಯ್ಯ, ಬಸವ ಬಾನಂಗಳದಲ್ಲಿ ಶಿವಶರಣರೆಂಬ ಅಮೂಲ್ಯ ನಕ್ಷತ್ರಗಳು ಮಿನುಗಿದವು.
ಈ ನಕ್ಷತ್ರಗಳಲ್ಲಿ ಧ್ರುವತಾರೆಯಂತೆ ಮಿನುಗಿದವರು ಚೌಡಯ್ಯನವರು ಎಂದು ಆರ್ಶೀವಚನ ನೀಡಿದರು.
ಪೂಜ್ಯ ಸಿದ್ಧಬಸವ ಸ್ವಾಮಿಗಳು, ಶಿವಬಸವ ಸ್ವಾಮಿಗಳು ಸಮ್ಮುಖ ವಹಿಸಿದ್ದರು.

ಗುಂಡಪ್ಪ ಸಂಗಮಕರ ಅವರು ಅಂಬಿಗರ ಚೌಡಯ್ಯನವರ ಜೀವನ ಸಾಧನೆ ಕುರಿತು ಅನುಭಾವ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿದ್ರಾಮಪ್ಪ ಅಣದೂರೆ ಅವರು ವಹಿಸಿಕೊಂಡಿದ್ದರು.
ಮಲ್ಲಿಕಾರ್ಜುನ ಸ್ವಾಮಿ ಬಸವಗುರುಪೂಜೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಗೌರವ ಡಾಕ್ಟರೇಟ್ ಪದವಿ ಪುರಸ್ಕೃತರಾದ ಡಾ. ಜನಾರ್ಧನ ಬಿರಾದಾರ ಅವರಿಗೆ ಸನ್ಮಾನಿಸಲಾಯಿತು. ವಯೋನಿವೃತ್ತಿ ಹೊಂದಿರುವ ಬಸವರಾಜ ಶಂಕರೆಪ್ಪ ರಂಜೇರೆ, ವಿಶ್ವನಾಥ ಖಾಜಾಪುರೆ, ರಾಮರಾವ ಮೇತ್ರೆ, ಬಸಪ್ಪ ಚನ್ನಬಸಪ್ಪ ಜಲ್ಲೆ ಅವರಿಗೆ ಸನ್ಮಾನಿಸಲಾಯಿತು.
ಇಂದು ನಾವು ಸರಕಾರಿ ಹುದ್ದೆಯಲ್ಲಿ ಸೇವೆ ಸಲ್ಲಿಸಿ, ವಯೋನಿವೃತ್ತಿ ಹೊಂದಿರುವುದು ಪೂಜ್ಯರ ಆಶೀರ್ವಾದದ ಶಕ್ತಿಯೇ ಕಾರಣವಾಗಿದೆ ಎಂದು ಸನ್ಮಾನಿತರು ನುಡಿದರು. ಬಸವರಾಜ ಮರೆ ಮುಖ್ಯ ಅತಿಥಿಗಳಾಗಿ ಆಗಮಿಸಿದರು.
ನಾಗಶೆಟ್ಟಿ ಲಂಜವಾಡೆ, ಭಾವರಾವ ನೆಲವಾಡೆ, ವಿಠಲರಾವ ಮೇತ್ರೆ, ಸೋಮನಾಥ ಏಣಕೂರು, ಮಲ್ಲಿಕಾರ್ಜುನ ಬಿರಾದಾರ, ಕಾಶಿನಾಥ ಭೂರೆ, ಶಾಂತಮ್ಮ ಮೂಲಗೆ, ಅನ್ನಪೂರ್ಣ ಬಿರಾದಾರ, ನಾಗಶೆಟ್ಟಿ ಖಂಡಾರೆ, ಬಾಬುರಾವ ಭಾಸಗೆ, ಅಶೋಕ ಅಂಬಿಗಾರ, ಸಂತೋಷ ನಾಟಕ, ಶ್ರೀದೇವಿ ಲಾಲಪ್ಪ ಮುಂತಾದವರು ಉಪಸ್ಥಿತರಿದ್ದರು.

ದೀಪಕ ಠಮಕೆ ನಿರೂಪಿಸಿದರು. ಶ್ರೀಮಠದ ಪ್ರಸಾದ ನಿಲಯದ ಮಕ್ಕಳಿಂದ ವಚನ ಪ್ರಾರ್ಥನೆ ನಡೆಯಿತು. ಬಸವಜಯಂತಿ ವಚನ ಗಾಯನ ನಡೆಸಿದರು. ಕಾರಹುಣ್ಣಿಮೆ ನಿಮಿತ್ಯ ಎತ್ತುಗಳಿಗೆ ಪೂಜೆ ಸಲ್ಲಿಸಿ, ಎತ್ತುಗಳ ಮೆರವಣಿಗೆ ಮಾಡಲಾಯಿತು.
