ಶರಣರ ಪರಿಚಯ ಮರಾಠಿ ಭಾಷಿಕರಿಗೆ ಮಾಡಿಕೊಟ್ಟ ಜಯದೇವಿ ತಾಯಿ ಲಿಗಾಡೆ

ಬಸವ ಮೀಡಿಯಾ
ಬಸವ ಮೀಡಿಯಾ

ಡಾ. ಗುರಮ್ಮ ಸಿದ್ದಾರೆಡ್ಡಿ ಅವರಿಗೆ ಲಿಗಾಡೆ ರಾಷ್ಟ್ರೀಯ ಪುರಸ್ಕಾರ ಪ್ರದಾನ

ಬಸವಕಲ್ಯಾಣ:

ಕನ್ನಡಕ್ಕೆ ಅಪಾರ ಕೊಡುಗೆ ನೀಡಿದ ಡಾ. ಜಯದೇವಿತಾಯಿ ಲಿಗಾಡೆ ಅವರ 115ನೆಯ ಜಯಂತಿ ಹಾಗೂ ಡಾ. ಜಯದೇವಿತಾಯಿ ಲಿಗಾಡೆ ರಾಷ್ಟ್ರೀಯ ಪುರಸ್ಕಾರ ಪ್ರದಾನ ಸಮಾರಂಭ ಇಲ್ಲಿನ ಅನುಭವ ಮಂಟಪದ ಭಕ್ತಿಭವನ ಪರಿಸರದಲ್ಲಿ ಮಂಗಳವಾರ ನಡೆಯಿತು.

ಸಮಾರಂಭದ ಸಾನಿಧ್ಯ ವಹಿಸಿ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡುತ್ತ, ಜಯದೇವಿತಾಯಿ ಲಿಗಾಡೆ ಅವರು ಕನ್ನಡಕ್ಕಾಗಿ ಅಪಾರ ಕೊಡುಗೆ ನೀಡಿದ್ದಾರೆ. ಅವರು ಹುಟ್ಟಿದ್ದು ಇಂದಿನ ಮಹಾರಾಷ್ಟ್ರದ ಸೋಲಾಪುರ ಆಗಿದ್ದರೂ, ಅವರು ತಮ್ಮ ಸಂಪೂರ್ಣ ಜೀವನವನ್ನು ಕನ್ನಡ ಮತ್ತು ಕರ್ನಾಟಕಕ್ಕಾಗಿ ಸಮರ್ಪಿಸಿದ ಧೀಮಂತ ಮಹಿಳೆಯಾಗಿದ್ದರು.

ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಡಾ. ಜಯದೇವಿತಾಯಿ ಲಿಗಾಡೆ ಅವರು ಕನ್ನಡ ಕೋಟೆ ಭದ್ರಗೊಳಿಸುವ ಕಾರ್ಯ ಮಾಡಿದ್ದರು. ಬಸವಾದಿ ಶರಣರ ಚಿಂತನೆಗಳನ್ನು ಅನುಷ್ಠಾನದಲ್ಲಿ ತರುವ ಮೂಲಕ ಕನ್ನಡತ್ವ ಮತ್ತು ಬಸವತತ್ವವನ್ನೇ ಉಸಿರಾಗಿಸಿಕೊಂಡಿದ್ದರು.

ಕನ್ನಡ ಶರಣರ ಪರಿಚಯ ಮರಾಠಿ ಭಾಷಿಕರಿಗೆ ಮಾಡಿಕೊಡುವ ಶ್ರೇಯಸ್ಸು ತಾಯಿಯವರಿಗೆ ಸಲ್ಲುತ್ತದೆ.

ಚನ್ನಬಸವ ಪಟ್ಟದ್ದೇವರು ಜೊತೆ ಆತ್ಮೀಯ ಭಕ್ತಿಸಂಬಂಧ ಹೊಂದಿದ್ದರು.

ತಾಯಿಯವರ ಸ್ಮರಣೆಯಲ್ಲಿ ಪ್ರತಿವರ್ಷ ನೀಡುತ್ತಿರುವ ಈ ಪ್ರಶಸ್ತಿಯನ್ನು ಈ ವರ್ಷ ಡಾ. ಗುರಮ್ಮ ಸಿದ್ದಾರೆಡ್ಡಿ ಅವರಿಗೆ ಪ್ರದಾನ ಮಾಡಲು ನಮಗೆ ಸಂತೋಷವಾಗುತ್ತಿದೆ. ಗುರಮ್ಮ ತಾಯಿಯವರ ಸೇವೆ ಅಪಾರವಾಗಿದೆ. ಅವರ ಬದುಕು ಸೇವೆಯ ಬದುಕಾಗಿದೆ ಎಂದು ಪೂಜ್ಯರು ಆಶೀರ್ವಚನ ನೀಡಿದರು.

ಪೂಜ್ಯ ಗುರುಬಸವ ಪಟ್ಟದ್ದೇವರು ಆಶಯ ನುಡಿಗಳನ್ನು ಆಡಿದರು. ಪೂಜ್ಯ ಶಿವಾನಂದ ಮಹಾಸ್ವಾಮಿಗಳು ಸಮ್ಮುಖ ವಹಿಸಿದ್ದರು.

ಬೀದರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಬಿ.ಎಸ್. ಬಿರಾದಾರ ಅವರು ಪ್ರಶಸ್ತಿ ಪ್ರದಾನ ಮಾಡಿ, ಡಾ. ಜಯದೇವಿತಾಯಿ ಲಿಗಾಡೆ ಅವರ ಕನ್ನಡ ಸೇವೆ ಸ್ಮರಿಸಿದರು.

ಸಮಾರಂಭದ ಉದ್ಘಾಟನೆ ಮಾಡಿದ ಬಸವರಾಜ ಪಾಟೀಲ ಸೇಡಂ ಅವರು, ತಾಯಿಯವರ ನಾಡು-ನುಡಿಯ ಭಕ್ತಿ ಸೇವೆಯನ್ನು ಸ್ಮರಿಸಿದರು.

ಡಾ. ಗುರಮ್ಮ ಸಿದ್ದಾರೆಡ್ಡಿ ಅವರಿಗೆ ಪುರಸ್ಕಾರ ಪ್ರದಾನ ಮಾಡಲಾಯಿತು.

ಡಾ. ಪಲ್ಲವಿ ಪಾಟೀಲ ಅವರು ಡಾ. ಜಯದೇವಿತಾಯಿ ಲಿಗಾಡೆ ಅವರ ಬದುಕು ಮತ್ತು ಬರಹ ಸವಿಸ್ತಾರವಾಗಿ ಅನುಭಾವದ ಮೂಲಕ ಉಣಬಡಿಸಿದರು.

ಪ್ರಾಸ್ತಾವಿಕ ಸವಿತಾ ನಿರಂಜನ ದೇಶಮುಖ ಅವರು ಮಾತನಾಡಿದರು. ಡಾ. ಎಸ್.ಬಿ. ದುರ್ಗೆ, ಎಸ್.ಎಸ್. ಹಿರೇಮಠ, ಡಾ. ರಾಜೇಶ್ವರಿ ರೆಡ್ಡಿ ಉಪಸ್ಥಿತರಿದ್ದರು.

ಡಾ. ಸಂಗೀತಾ ಮಂಠಾಳೆ ನಿರೂಪಿಸಿದರು. ಚೇತನಾ ವೀರಶೆಟ್ಟಿ ಪಾಟೀಲ ಸ್ವಾಗತಿಸಿದರು. ರಾಜಕುಮಾರ ಹೂಗಾರ ವಚನ ಗಾಯನ ಮಾಡಿದರು. ಮೂಗಿ ಪರಿವಾರದವರಿಂದ ಪ್ರಸಾದ ದಾಸೋಹ ನಡೆಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
Leave a comment

Leave a Reply

Your email address will not be published. Required fields are marked *