ಕಾಂಗ್ರೆಸ್ ಪರ ಅನ್ನುವ ಹಣೆಪಟ್ಟಿ ಸಡಿಲಮಾಡಿಕೊಳ್ಳಲು ಲಿಂಗಾಯತ ಹೋರಾಟಗಾರರಿಗೆ ಅನೇಕ ವರ್ಷಗಳು ಬೇಕಾದವು
ಬೆಂಗಳೂರು
ಕಳೆದ ನೂರು ವರ್ಷಗಳಿಂದ ಸ್ವತಂತ್ರ ಧರ್ಮ ಮಾನ್ಯತೆಗೆ ಲಿಂಗಾಯತ ಚಳುವಳಿಗೆ ನಡೆಯುತ್ತಿದೆ.
1928ರಿಂದ ಸರಕಾರಗಳಿಗೆ ಮನವಿ, ಸಮಾವೇಶ, ಸಂಶೋಧನೆ, ಚರ್ಚೆ, ರ್ಯಾಲಿಗಳ ಮೂಲಕ ಲಿಂಗಾಯತ ಚಳುವಳಿ ನಿರಂತರವಾಗಿ ಕಾವು ಉಳಿಸಿಕೊಂಡೇ ಬಂದಿದೆ.
ಪೂಜ್ಯ ಲಿಂಗಾನಂದ ಸ್ವಾಮೀಜಿ ಮತ್ತು ಮಾತಾಜಿ ಈ ಹೋರಾಟ ತೀವ್ರಗೊಳಿಸಿದರು. ನಂತರ ವೀರಶೈವ ಮಹಾಸಭಾದವರೂ ಪ್ರತ್ಯೇಕ ಧರ್ಮಕ್ಕಾಗಿ ಅನೇಕ ರ್ಯಾಲಿಗಳನ್ನು ನಡೆಸಿದ್ದರು.
ಲಿಂಗಾಯತ ಚಳುವಳಿ ಸ್ಫೋಟಗೊಂಡಿದ್ದು 2017-18ರಲ್ಲಿ. ರಾಷ್ಟ್ರೀಯ, ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುವಷ್ಟು ಲಕ್ಷಾಂತರ ಜನರ ಹಲವಾರು ರ್ಯಾಲಿಗಳು ಭುಗಿಲೆದ್ದವು.
ಆಗ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ಸರಕಾರಕ್ಕೆ ಈ ಬೃಹತ್ ರ್ಯಾಲಿಗಳು 2018ರ ಚುನಾವಣೆಯನ್ನು ಬುಟ್ಟಿಗೆ ಹಾಕಿಕೊಳ್ಳುವ ಅಸ್ತ್ರವಾಗಿ ಕಂಡವು.
ಕಾಂಗ್ರೆಸ್ಸಿನ ಲಿಂಗಾಯತ ರಾಜಕಾರಣಿಗಳ ಮೂಲಕ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿ, ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡಲು ಸಿದ್ದರಾಮಯ್ಯ ನಿರ್ಧರಿಸಿದರು.
ದಶಕಗಳ ಹೋರಾಟಕ್ಕೆ ಆ ನಿರ್ಧಾರ ಐತಿಹಾಸಿಕ ತಿರುವು ನೀಡಿತು ಎನ್ನುವುದರ ಬಗ್ಗೆ ಎರಡು ಮಾತಿಲ್ಲ.
ಆದರೆ ಅದರ ಎರಡು ಅಡ್ಡ ಪರಿಣಾಮಗಳನ್ನು ನಾವು ಇಂದಿಗೂ ಎದುರಿಸುತ್ತಿದ್ದೇವೆ.
ಮೊದಲನದೆಯಾಗಿ, ಇದು ರಾಜಕೀಯ ಪ್ರೇರಿತ ಹೋರಾಟ ಎನ್ನುವ ಆರೋಪ ಬೇತಾಳದಂತೆ ಲಿಂಗಾಯತರ ಹೆಗಲು ಏರಿ ಕುಳಿತುಕೊಂಡು ಬಿಟ್ಟಿತು.
ಶತಮಾನಗಳ ಸಂಘರ್ಷ, ನಮ್ಮ ವಿಶಿಷ್ಟ ಧರ್ಮ, ಸಂಸ್ಕೃತಿ ಸಂರಕ್ಷಿಸಿಕೊಳ್ಳುವ ಅನಿವಾರ್ಯತೆ, ನಮ್ಮ ಮಕ್ಕಳ ಭವಿಷ್ಯ ಎಲ್ಲವನ್ನೂ ಪಕ್ಕಕ್ಕೆ ತಳ್ಳಿ, ಲಿಂಗಾಯತ ಚಳುವಳಿ ಕಾಂಗ್ರೆಸ್ ಪ್ರಾಯೋಜಿತ ಸರ್ಕಸ್ ಅನ್ನುವ ರೀತಿಯಲ್ಲಿ ಗೌಣಗೊಳಿಸುವ ವ್ಯವಸ್ಥಿತ ಪ್ರಯತ್ನ ಶುರುವಾಯಿತು.

ಇದರ ನೇರ ಪರಿಣಾಮವಾಗಿ ಬಿಜೆಪಿ ರಾಜಕಾರಣಿಗಳ ವಿರೋಧ ಎದುರಿಸುವ ಪರಿಸ್ಥಿತಿ ಲಿಂಗಾಯತ ಹೋರಾಟಗಾರರಿಗೆ ನಿರ್ಮಾಣವಾಯಿತು.
ಪ್ರತ್ಯೇಕ ಧರ್ಮ ಕೇಳುತ್ತಿರುವ ಚಳುವಳಿ ಒಂದು ಕಾಂಗ್ರೆಸ್ ಕುತಂತ್ರ ಎಂದು ಬಿಜೆಪಿಗೆ ಮತ ಹಾಕುವ ಲಿಂಗಾಯತರನ್ನು ನಂಬಿಸುವ ವ್ಯವಸ್ಥಿತ ಪ್ರಯತ್ನವೂ ನಡೆಯಿತು.
ಕಾಂಗ್ರೆಸ್ ಪರ ಅನ್ನುವ ಹಣೆಪಟ್ಟಿ ಸಡಿಲಮಾಡಿಕೊಳ್ಳಲು ಲಿಂಗಾಯತ ಹೋರಾಟಗಾರರಿಗೆ ಅನೇಕ ವರ್ಷಗಳು ಬೇಕಾದವು.
ಸುಮಾರು ಒಂದು ದಶಕದ ಹೋರಾಟದ ನಂತರ ಲಿಂಗಾಯತ ಚಳುವಳಿ ಈಗ ಪಕ್ಷಾತೀತವಾಗಿ ಬಸವ ಭಕ್ತರನ್ನು ಸೆಳೆಯುತ್ತಿರುವ ಸೂಚನೆಗಳು ಕಾಣಿಸುತ್ತಿವೆ.
ಎರಡನೆಯದಾಗಿ, ಸಿದ್ದರಾಮಯ್ಯ ಸರಕಾರದ ನಿರ್ಧಾರದಿಂದ ಹಾಗೂ ಮಾಧ್ಯಮಗಳು ಕೊಟ್ಟ ಪ್ರಚಾರದಿಂದ ಲಿಂಗಾಯತ ಚಳುವಳಿ 2018ರ ಚುನಾವಣೆಯ ಬಹು ಮುಖ್ಯ ವಿಷಯವಾಗಿ ಹೊಮ್ಮಿತು.
ಆದರೆ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಬಾರದೆ ಕಾಂಗ್ರೆಸ್ ಪಕ್ಷದ ಎಂಎಲ್ಎಗಳ ಸಂಖ್ಯೆ 122ರಿಂದ 78ಕ್ಕೆ ಕುಸಿಯಿತು.
ಕಾಂಗ್ರೆಸ್ಸಿನ ಲಿಂಗಾಯತ ಎಂಎಲ್ಎಗಳ ಸಂಖ್ಯೆ 26ರಿಂದ 18ಕ್ಕೆ ಇಳಿಯಿತು.
ಈ ಸೋಲನ್ನು ಲಿಂಗಾಯತ ಚಳುವಳಿಯ ತಲೆಗೆ ಕಟ್ಟಲಾಯಿತು.
2018ರ ಫಲಿತಾಂಶವನ್ನು ಸಂಘಪರಿವಾರ, ಪಂಚಾಚಾರ್ಯರು, ವೀರಶೈವ ಸಂಘಟನೆಗಳು, ಬಿಜೆಪಿ ರಾಜಕಾರಣಿಗಳು, ಸಿದ್ದರಾಮಯ್ಯ-ಎಂ.ಬಿ. ಪಾಟೀಲ್ ವಿರೋಧಿಗಳು ಹುರುಪಿನಿಂದ ಬಳಸಿಕೊಂಡರು.
ಇದರಲ್ಲಿ ವೈದಿಕ ಮಾಧ್ಯಮಗಳ, ಸಂಘ ಪರಿವಾರದವರ ಕೊಡುಗೆಯನ್ನು ವಿಶೇಷವಾಗಿ ಗಮನಿಸಬೇಕು.
ಪ್ರತ್ಯೇಕ ಧರ್ಮ ಕೇಳಲು ಲಕ್ಷಾಂತರ ಸಂಖ್ಯೆಯಲ್ಲಿ ನೆರೆದಿದ್ದ ಲಿಂಗಾಯತರು ಅಖಂಡ ಹಿಂದೂ ರಾಷ್ಟ್ರದ ಕನಸು ಕಾಣುತ್ತಿರುವವರ ಬೆವರಿಳಿಸಿದ್ದರು.
ಲಿಂಗಾಯತ ಹೋರಾಟವನ್ನು ಹತ್ತಿಕ್ಕಲು 2018ರ ಫಲಿತಾಂಶ ಅವರಿಗೆ ಒಂದು ದೊಡ್ಡ ಸಾಧನವಾಯಿತು.
(ಹಿಂದೂ) ಧರ್ಮ ಒಡೆಯಲು ಹೊರಟ್ಟಿದ್ದರಿಂದ ಕಾಂಗ್ರೆಸ್ಸಿಗೆ ಸೋಲಾಯಿತು, ಪ್ರತ್ಯೇಕ ಧರ್ಮ ಬೇಡಿಕೆಯನ್ನು ಲಿಂಗಾಯತರೇ ತಿರಸ್ಕರಿಸಿದರು, ಎಂ ಬಿ ಪಾಟೀಲ್ ಭವಿಷ್ಯ ಮುಗಿಯಿತು ಮುಂತಾದ ಮಾತುಗಳನ್ನು ವ್ಯವಸ್ಥಿತವಾಗಿ ಹರಡಲು ಶುರುಮಾಡಿದರು.
ಇದರಿಂದ ಗಾಬರಿಯಾಗಿ ಲಿಂಗಾಯತ ಹೋರಾಟಕ್ಕೆ ವೀರಾವೇಶದಿಂದ ಧುಮುಕಿದ್ದ ಅನೇಕ ರಾಜಕಾರಣಿಗಳು ಬಂದ ವೇಗದಲ್ಲಿ ಕಣ್ಮರೆಯಾದರು.
ಲಿಂಗಾಯತ ಹೋರಾಟದಿಂದ ಕಾಂಗ್ರೆಸ್ಸಿಗೆ ಹಿನ್ನಡೆಯಾಯಿತು ಎಂಬ ಮಾತನ್ನು ಬಹಳಷ್ಟು ಲಿಂಗಾಯತರು, ಸತೀಶ್ ಜಾರಕಿಹೊಳಿಯಂತವರೂ ನಂಬುವಷ್ಟು ಆಳವಾಗಿ ಇವರ ಅಪಪ್ರಚಾರ ನಡೆಯುತ್ತಲೇ ಬಂದಿದೆ.
ನಿಜಕ್ಕೂ ಲಿಂಗಾಯತ ಹೋರಾಟ ಕಾಂಗ್ರೆಸ್ ಪ್ರಾಯೋಜಿತವೇ?
ಲಿಂಗಾಯತ ಹೋರಾಟ ಬೆಂಬಲಿಸಿದ್ದರಿಂದ 2018ರಲ್ಲಿ ಕಾಂಗ್ರೆಸ್ಸಿಗೆ ಸೋಲಾಯಿತೇ?
‘ಧರ್ಮ ಒಡೆದರು’ ಎಂಬ ಕಾರಣಕ್ಕೆ ಲಿಂಗಾಯತರು ಕಾಂಗ್ರೆಸ್ ಮೇಲೆ ಮುನಿಸಿಕೊಂಡಿದ್ದಾರೆಯೇ?
ಇವು ಈಗ ನಾವು ಕೇಳಬೇಕಾಗಿರುವ ಪ್ರಶ್ನೆಗಳು.
ಲಿಂಗಾಯತ ಚಳುವಳಿ ಗಟ್ಟಿಯಾಗಿ ಮುಂದುವರಿಯಬೇಕಾದರೆ ಇವುಗಳಿಗೆ ಸ್ಪಷ್ಟ ಉತ್ತರ ಹುಡುಕುವ ಅಗತ್ಯವಿದೆ.
(ಮುಂದುವರೆಯುವುದು)

ಲಿಂಗಾಯತರಿಂದ ಕಾಂಗ್ರೆಸ್ ಪಕ್ಷ ಸೋತಿಲ್ಲ ಮತದಾರರು ಸರ್ಕಾರ ಬದಲಾಯಿಸುತ್ತಾರೆ.