ಕಳಬೇಡ ಅಂದವ ಕಳ್ಳನಂತ! ಕೊಲಬೇಡ ಅಂದವ ಕೊಲೆಗಾರನಂತ! (ಭಾಗ 1)

ವಿಚಿತ್ರ ವೀರ್ಯ ಸಂತಾನಿಗಳಿಗೆ ಉತ್ತರ.

ಬೆಂಗಳೂರು

ಕಳಬೇಡ ಅಂದವ ಕಳ್ಳನಂತ! ಕೊಲಬೇಡ ಅಂದವ ಕೊಲೆಗಾರನಂತ! ಹುಸಿಯ ನುಡಿಯಲು ಬೇಡ ಅಂದವ ಸುಳ್ಳನಂತ!

ನಮ್ಮಪ್ಪ ಬಸವಣ್ಣನ ಮ್ಯಾಲೆ ಹಿಂಗ ಆರೋಪ ಹೊರಿಸಿದವರಿಗೆ ಉತ್ತರ ಬ್ಯಾಡೇನು?

ಇಂದು ಬೆಂಗಳೂರಾಗ ಅದೇ ಮಾತಿನ ಆರುನೂರು ಪುಟದ ಪುಸ್ತಕ ಬಿಡುಗಡೆ. ಅದಕ್ಕೂ ಮೊದಲ, ವಿಚಿತ್ರ ವೀರ್ಯ ಸಂತಾನಿಗಳಿಗೆ ಉತ್ತರ.

ಲೇಖಕರ ಹೆಸರು ನಾ ತಗೊಳ್ಳಂಗಿಲ್ಲ. ಅವರಿಗೊಂದು ಹೆಸರು ಅವರ ನಡತಿಯಿಂದನ ಸಿಕ್ಕದ. ಸಂದರ್ಶನದಾಗ ತಮ್ಮ ವಿರೋಧಿಗೆ “ದಮ್ ಇದ್ರ ಬಾರಪ್ಪ” ಅಂತ ಸವಾಲು ಹಾಕಿದ ಕಥಿ ಹೇಳ್ತಾರ. ಸಾವು ಬಂದ್ರ “ಬಾರೋ ನನ್ನ ಮಗನೆ” ಅಂತ ರೆಡಿ ಇರ್ತೀನಿ ಅಂತಾರ.

ಒಂದು ರೂಪಾಯಿ ವಸೂಲು ಮಾಡಾಕ ಒಬ್ಬ ಹಿರಿಯ ನಿವೃತ್ತ ಐಎಎಸ್ ಅಧಿಕಾರಿಯ ಮನಿಗೆ ಹಲಗಿ ಬಾರಿಸ್ಕೋತ ಮೆರವಣಿಗಿ ಹೋಗ್ತೀನಿ ಅಂತ ಟಿವಿಯಾಗ ಘೋಷಣೆ ಮಾಡ್ತಾರ.

ಇದು ಸಂಶೋಧಕನ ಭಾಷೆ ಅಲ್ಲ, ಊರ ಅಗಸಿ ಕಟ್ಟಿ ಮ್ಯಾಲೆ ಕುಂತ ಪಡ್ಡೆ ಹುಡುಗನ ಭಾಷೆ. ಇವತ್ತಿನಿಂದ ಅವರು ಪಡುವಾರಹಳ್ಳಿ ತುಂಡೈಕ್ಲ ಪಡ್ಡೆ ನಾಯಕ.
ಪಡ್ಡೆ ಸಾಹೇಬರ ಆರೋಪ ಅವರ ಮಾತಿನಾಗನ ಕೇಳ್ರಿ.

ಬಸವಣ್ಣ ಬಿಜ್ಜಳನ ಖಜಾನೆ ಜಂಗಮ ದಾಸೋಹಕ್ಕ ಬಳಸಿದ, ಅದು “ಕಳಬೇಡ”ಕ್ಕ ವಿರುದ್ಧ. “ಕೊಲಬೇಡ” ಅಂದವ ಬಿಜ್ಜಳನ್ನ ಕೊಲ್ಲಿಸಿದ “ಅಂತ ಹೇಳ್ತಾರ”. ಖಜಾನೆ ಲೆಕ್ಕದಾಗ ಹುಸಿನೂ ನುಡಿದ. ಬಸವಣ್ಣನ ಮಾತಿಗೂ ಬದುಕಿಗೂ ತಾಳ ಇಲ್ಲ. ಶರಣರು ಅಂದ್ರ “ಬಸವಣ್ಣ ಅಂಡ್ ಕಂಪನಿ”.

ಅಂಡ್ ಕಂಪನಿ! ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಮಡಿವಾಳ ಮಾಚಯ್ಯ, ಸಮಗಾರ ಹರಳಯ್ಯ, ಅಕ್ಕ, ಅಲ್ಲಮ.

ಕೇರಿಕೇರಿಯಿಂದ ಎದ್ದು ಬಂದು ಒಂದೇ ಸಭೆಯಾಗ ಕುಂತು ದೇವರ ಬಗ್ಗೆ ಮಾತಾಡಿದ ಆ ಜನ ಪಡ್ಡೆ ಸಾಹೇಬರ ಕಣ್ಣಿಗೆ ಪ್ರೈವೇಟ್ ಲಿಮಿಟೆಡ್ ಕಂಪನಿ ಕಂಡಾರ. ನಮ್ಮ ಅಜ್ಜ ಮುತ್ತಜ್ಜಂದಿರು ಎಂಟನೂರು ವರ್ಷ ಕೈ ಮುಗಿದ ಹೆಸರುಗಳು ಇವು.

ಸಾಕ್ಷಿ ಏನು ಅಂತ ಕೇಳಿದ್ರ ಒಂದು ಶಾಸನದ ಹೆಸರಿಲ್ಲ, ಒಂದು ಕಾವ್ಯದ ಪುಟ ಇಲ್ಲ. ಇರೋದು “ಅಂತ ಹೇಳ್ತಾರ” ಅಷ್ಟ.

ನಮ್ಮ ಹಳ್ಳಿ ಪಂಚಾಯ್ತ್ಯಾಗೂ ಒಬ್ಬನ ಮ್ಯಾಲೆ ಕೋಳಿ ಕದ್ದ ಆರೋಪ ಹೊರಿಸಬೇಕಂದ್ರ ಕೋಳಿ ಎಲ್ಲಿ, ಕಂಡವರು ಯಾರು ಅಂತ ಕೇಳ್ತಾರ. ಇಲ್ಲಿ ಕೋಳಿನೂ ಇಲ್ಲ, ಕಂಡವರೂ ಇಲ್ಲ. ಆದ್ರ ತೀರ್ಪು ಪ್ರಿಂಟಾಗಿ ತಯಾರ ಅದ.

ಬಸವಣ್ಣನೂ ಒಂದು ಮಾತು ಹೇಳ್ಯಾನ, ಕೇಳ್ರಿ. “ಹೊನ್ನಿನೊಳಗೊಂದೊರೆಯ, ಸೀರೆಯೊಳಗೊಂದೆಳೆಯ ಇಂದಿಂಗೆ ನಾಳಿಂಗೆ ಬೇಕೆಂದೆನಾದಡೆ ನಿಮ್ಮಾಣೆ.”

ಬಂಗಾರದ ಒಂದು ಚೂರು, ಸೀರಿಯ ಒಂದು ಎಳಿ ನಾಳಿಗಂತ ಇಟ್ಟುಕೊಂಡ್ರ ದೇವರಾಣಿ ಅಂತ ಆಣಿ ಮಾಡಿದವ ಅವ. ಇಂಥವನ ಮ್ಯಾಲೆ ಕಳವಿನ ಕೇಸು ಹಾಕಾಕ ಎದಿ ಬೇಕು, ಇಲ್ಲಂದ್ರ ನಾಚಿಕಿ ಇರಬಾರದು.

ಪಡ್ಡೆ ಸಾಹೇಬರು ಓದಿದ್ದು “ಕಳಬೇಡ” ವಚನದ ಮೊದಲ ಸಾಲು ಮಾತ್ರ. ಅದೇ ವಚನದ ಮೂರನೇ ಸಾಲು ಓದ್ರಿ, “ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ.”

ಒಂದೂವರಿ ತಾಸು ತಮ್ಮ ಧೈರ್ಯ, ತಮ್ಮ ಕಂಪನಿ, ತಮ್ಮ ಹೋಟೆಲ್ ಪಾಯಿಂಟ್ಸ್ ಬಣ್ಣಿಸಿಕೊಂಡು ಪ್ರೊಫೆಸರ್‌ರನ್ನ, ಸ್ವಾಮಿಗಳನ್ನ, ಪಿಎಚ್‌ಡಿ ಹುಡುಗರನ್ನ ಹಳಿದವರು ಆ ಸಾಲಿನ ಹತ್ರ ಬಂದ ಕೂಡಲೇ ಕನ್ನಡಕ ತಗದಿಟ್ಟರು ಅನಸ್ತದ.

ಇನ್ನೊಂದು ವಚನಕ್ಕ ಅವರು ಕೊಟ್ಟ ಅರ್ಥ ಕೇಳಿದ್ರ ನಗಬೇಕೋ ಅಳಬೇಕೋ ತಿಳಿಯಂಗಿಲ್ಲ.

“ಮಾದಾರನೆಂಬೆನೆ ಚೆನ್ನಯ್ಯನ, ಆನು ಹಾರುವನೆಂದಡೆ ಕೂಡಲಸಂಗಯ್ಯ ನಗುವನಯ್ಯಾ.” ಇದನ್ನ ಬಸವಣ್ಣ ತನ್ನ ಬಗ್ಗೆ ಹೇಳಿಲ್ಲಂತ.

ವಕೀಲ ಕಕ್ಷಿದಾರನ ಪರ ವಾದಿಸಿದಂಗ ಬ್ಯಾರೆಯವರ ಮಾತು ಹೇಳ್ಯಾನಂತ! “ಆನು” ಅಂದ್ರ ನಾನು. ಇದಕ್ಕ ವಕೀಲ ಬ್ಯಾಡ, ಒಂದನೇ ಕ್ಲಾಸಿನ ಕನ್ನಡ ಮಾಸ್ತರು ಸಾಕು. ಕೂಡಲಸಂಗಯ್ಯ ಇವತ್ತೂ ನಗತಾನ. ಯಾರನ್ನ ನೋಡಿ ಅಂತ ನಿಮಗ ಗೊತ್ತದ.

ವಚನಗಳೇ ನಮ್ಮ ಧರ್ಮಗ್ರಂಥ ಅನ್ನೋ ನಾವು ಲಿಂಗಾಯತರಲ್ಲಂತ, “ಲಿಂಗಾಹತರು”. ಹುಟ್ಟಿದ ದಿನ ಕೊರಳಿಗೆ ಲಿಂಗ ಕಟ್ಟಿಸಿಕೊಂಡು, ಮಣ್ಣಾಗೋ ದಿನಾನೂ ಅದನ್ನ ಎದಿಗೊತ್ತಿಕೊಂಡು ಹೋಗೋ ಜನಕ್ಕ ಲಿಂಗ ಹತ ಮಾಡಿದವರು ಅನ್ನೋ ಹೆಸರು.

ಎಷ್ಟು ಮಂದಿ ನಾವು? “ಒಂದು ಐದು ಸಾವಿರ ಇರಬಹುದು.” 2017ರ ಜುಲೈದಾಗ ಬೀದರಿನ ನೆಹರೂ ಮೈದಾನಕ್ಕ ಒಂದ ದಿನ ಬಂದವರು ಐವತ್ತು ಸಾವಿರಕ್ಕೂ ಹೆಚ್ಚು ಅಂತ ಆವಾಗಿನ ಪತ್ರಿಕೆಗಳು ಬರದಾವ. ಪಡ್ಡೆ ಸಾಹೇಬರ ಕ್ಯಾಲ್ಕುಲೇಟರ್‌ನ್ಯಾಗ ಒಂದು ಸೊನ್ನಿ ಎಲ್ಲೋ ಉದುರಿ ಹೋಗೇತಿ.

ಇನ್ನೊಂದು ಕೇಳ್ರಿಪಾ, ಡಾ. ಎಂ.ಎಂ. ಕಲಬುರ್ಗಿ ಅವರ ಬಗ್ಗೆ ಪಡ್ಡೆ ಸಾಹೇಬರು ಹೇಳಿದ್ದು, “ಹೊಡೆದರೆ ಹುಲಿ ಹೊಡಿಬೇಕು.” ಗಾದಿ ಮಾತು ಅಂತ ನನಗೂ ಗೊತ್ತದ. ಆದ್ರ 2015ರ ಆಗಸ್ಟ್ 30ರ ಮುಂಜಾನೆ ಧಾರವಾಡದ ತಮ್ಮ ಮನಿ ಬಾಗಿಲು ತಗದ ಆ ಹಿರೇರ ಹಣಿಗೆ ಗುಂಡು ಹೊಡದು ಕೊಂದಾರ.

ಆ ಮನಿ ಅಂಗಳದಾಗ ನಿಂತು ಈ ಗಾದಿ ಹೇಳಿ ನೋಡ್ರಿ ಪಡ್ಡೆ ಸಾಹೇಬರೇ. ನಾಲಿಗಿ ಹೊರಳತದೇನು?
ರಕ್ತ ಕುದಿತದ. ನಿಮ್ಮದೂ ಕುದಿತಿರಬೇಕು. ಆದ್ರ ಅದೇ ಸಂದರ್ಶನದಾಗ ಪಡ್ಡೆ ಸಾಹೇಬರು ಖುಷಿಯಿಂದ ಹೇಳ್ತಾರ, ತಮ್ಮ ವಿರುದ್ಧ ಅಪಪ್ರಚಾರ ಮಾಡಿದವರೇ ತಮ್ಮ ಪುಸ್ತಕಕ್ಕ ಮಾರ್ಕೆಟಿಂಗ್ ಮಾಡಿದ್ರು ಅಂತ.

ಊರ ಜಾತ್ರೆಯಲ್ಲಿ ಮಿಠಾಯಿ ಸ್ಪರ್ಧೆ. ತೀರ್ಪುಗಾರ ಮಿಠಾಯಿ ಅಂಗಡಿಯ ಮಾಲೀಕನೇ. ಮೊದಲ ಬಹುಮಾನ ಯಾರಿಗೆ ಹೋಯಿತು ಅಂತ ನೀವೇ ಊಹಿಸಿ.

ವಿಶ್ವವಾಣಿಯ ಟಾಪ್ ಟೆನ್ ಪಟ್ಟಿಯಲ್ಲಿ ಒಂದನೇ ಸ್ಥಾನದಲ್ಲಿರುವ “ಬಸವ ಮಂಟಪ” ಪುಸ್ತಕದ ಪ್ರಕಾಶಕರು ಯಾರು ಗೊತ್ತೇ? ವಿಶ್ವವಾಣಿ ಪುಸ್ತಕ, ಬೆಂಗಳೂರು!

ಇದು ನಾನು ಕಟ್ಟಿದ ಕತೆ ಅಲ್ಲ. ಪಟ್ಟಿಯಲ್ಲೇ ಅಚ್ಚಾಗಿದೆ. ಎಷ್ಟು ಪ್ರತಿ ಮಾರಾಟವಾಯಿತು, ಯಾವ ಅಂಗಡಿಗಳ ಲೆಕ್ಕ, ಯಾವ ವಾರದ ಲೆಕ್ಕ ಎಂಬ ಒಂದು ಅಂಕಿಯೂ ಅಲ್ಲಿಲ್ಲ. ಇರಲಿ ಬಿಡಿ. ಹೆಚ್ಚು ಮಾರಾಟವಾದದ್ದೆಲ್ಲ ಸತ್ಯವಾಗಿದ್ದರೆ ಜಾತ್ರೆಯ ಗಿಲೀಟು ಸರವೂ ಬಂಗಾರ ಆಗುತ್ತಿತ್ತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
1 Comment

Leave a Reply

Your email address will not be published. Required fields are marked *