ನರಗುಂದ:
ಗೋವಾ ಸರಕಾರ ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ ಅವರಿಗೆ ಭೈರನಹಟ್ಟಿ ಶ್ರೀ ಶಾಂತಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಮನವಿಪತ್ರ ಸಲ್ಲಿಸಿ ಅಲ್ಲಿನ ಕನ್ನಡ ಶಾಲೆಗಳನ್ನು ಉಳಿಸಬೇಕು. ಅವನ್ನು ಅಭಿವೃದ್ಧಿಪಡಿಸಬೇಕೆಂದು ಆಗ್ರಹಿಸಲಾಗಿದೆ.
ನರಗುಂದ ತಾಲೂಕಿನ ಭೈರನಹಟ್ಟಿಯ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ದೊರೆಸ್ವಾಮಿ ವಿರಕ್ತಮಠದ ಗುರುಗಳು ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿಯ ನೆಪದಲ್ಲಿ ಗೋವಾ ಸರಕಾರದ ಮುಖ್ಯಮಂತ್ರಿ ಮಾನ್ಯ ಪ್ರಮೋದ ಸಾವಂತ ಅವರು ಅಲ್ಲಿರುವ ೪ ಶಾಲೆಗಳನ್ನು ಈಗಾಗಲೆ ಮುಚ್ಚಿದ್ದಾರೆ. ಮತ್ತು ೧೭ ಶಾಲೆಗಳಲ್ಲಿ ಕನ್ನಡ ಶಿಕ್ಷಕರಿಲ್ಲದೇ ನರಳುವಂತೆ ಮಾಡಿ ಕನ್ನಡ ಮಕ್ಕಳ ಶಿಕ್ಷಣ ಹಕ್ಕನ್ನು ಬಲವಂತವಾಗಿ ಕಸಿದುಕೊಳ್ಳುತ್ತಿದ್ದಾರೆ.
ಬದಲಾದ ಶಿಕ್ಷಣ ನೀತಿಗೆ ಹೊಂದಿಕೊಳ್ಳಬೇಕೆಂಬ ಗೋವಾ ಮುಖ್ಯಮಂತ್ರಿಗಳ ಭಯಾನಕ ಹೇಳಿಕೆ ಗಡಿಭಾಗದಲ್ಲಿರುವ ಕನ್ನಡಿಗರ ಮುಂಬರುವ ಸ್ಥಿತಿಯನ್ನು ನೆನಪಿಸಿಕೊಂಡರೆ ಆಘಾತಕಾರಿಯೆನಿಸಿದೆ.
ಗೋವಾ ರಾಜ್ಯವನ್ನು ಕಟ್ಟಿ ಬೆಳೆಸಿದವರು ಕನ್ನಡಿಗರು. ಗೋವಾ ವಿಮೋಚನಾ ಚಳುವಳಿಯಲ್ಲಿ ಬಹುತೇಕ ಕನ್ನಡಿಗರ ಪಾತ್ರ ಮಹತ್ತರವಾಗಿದೆ. ಅದರಲ್ಲೂ ನಮ್ಮ ನರಗುಂದದ ಶ್ರೀ ಜಗನ್ನಾಥರಾವ ಜೋಶಿಯವರು ಪ್ರಮುಖ ಪಾತ್ರವಹಿಸಿ ಗೋವಾ ವಿಮೋಚನೆಯ ರೂವಾರಿಯಾಗಿದ್ದಾರೆ.
ಗೋವಾ ರಾಜ್ಯಕ್ಕೆ ಕರ್ನಾಟಕ ಇಷ್ಟೆಲ್ಲ ಕೊಡುಗೆ ನೀಡಿದ್ದರೂ, ಕನ್ನಡ ಹಾಗೂ ಕನ್ನಡಿಗರನ್ನು ಕಡೆಗಣಿಸುತ್ತಿರುವ ಗೋವಾ ಸರಕಾರದ ನಡೆ ಖಂಡನೀಯವಾಗಿದೆ, ಸುಮಾರು ೪ ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಕನ್ನಡಿಗರು ಕಳೆದ ೫-೬ ದಶಕಗಳಿಂದ ಅಲ್ಲಿಯೇ ವಾಸವಿರುವ ಕನ್ನಡ ಮಕ್ಕಳ ಶೈಕ್ಷಣಿಕ ಸ್ಥಿತಿ ಚಿಂತಾಜನಕವಾಗಿದೆ.
ಈಗಾಗಲೇ ನಾವು ಗೋವಾದಲ್ಲಿರುವ ಕನ್ನಡ ಶಾಲೆಗಳಿಗೆ ನಾಲ್ಕು ಸಲ ಬೇಟಿ ನೀಡಿ ಅಲ್ಲಿರುವ ವಾಸ್ತವತೆಯನ್ನು ತಿಳಿದಿದ್ದೇವೆ. ಅಲ್ಲಿ ಕನ್ನಡ ಮಾದ್ಯಮ ಶಾಲೆಗಳ ಅವಶ್ಯಕತೆ ಬಹಳಷ್ಟಿದೆ.
ಭಾರತ ವಿವಿಧತೆಯಲ್ಲಿ ಏಕತೆಯನ್ನು ಕಾಣುತ್ತಿರುವ ರಾಷ್ಟ್ರ. ಗೋವಾ ಸರಕಾರದ ನಡೆ ಏಕತೆಯ ನಡೆಗೆ ವಿರುದ್ದವಾಗಿದೆ. ಹಾಗೂ ಭಾಷಾ ವೈವಿದ್ಯತೆಗೆ ಹಾಗೂ ಸಹಬಾಳ್ವೆಯ ಮೌಲ್ಯಗಳಿಗೆ ಧಕ್ಕೆಯುಂಟು ಮಾಡುವಂತಿದೆ.

ಹೀಗಾಗಿ ಕರ್ನಾಟಕ ಸರಕಾರದ ಮಾನ್ಯ ಮುಖ್ಯಮಂತ್ರಿಗಳಾದ ತಾವು ಈ ವಿಷಯವನ್ನು ಗಂಬೀರವಾಗಿ ಪರಿಗಣಿಸಿ ಸಚಿವರನ್ನೊಳಗೊಂಡ ಉನ್ನತಮಟ್ಟದ ನಿಯೋಗವನ್ನು ರಚಿಸಬೇಕು. ಕೇಂದ್ರ ಸರಕಾರದ ಸಮನ್ವಯ ಅಧಿಕಾರಿಗಳನ್ನು ಹಾಗೂ ಗೋವಾ ಸರಕಾರದ ಮುಖ್ಯಮಂತ್ರಿಗಳನ್ನು, ಶಿಕ್ಷಣ ಸಚಿವರನ್ನು ಬೇಟಿ ಮಾಡಿ ಮಾತೃ ಭಾಷೆಯಲ್ಲಿ ಕಲಿಯುವ ಅವಕಾಶವನ್ನು ಕಸಿದುಕೊಳ್ಳುತ್ತಿರುವ ಗೋವಾ ರಾಜ್ಯದ ಕನ್ನಡ ಮಾದ್ಯಮ ಮಕ್ಕಳ ಹಿತವನ್ನು ಕಾಪಾಡಬೇಕೆಂದು ಮನವಿಯ ಮೂಲಕ ತಿಳಿಸಿದ್ದಾರೆ.
ಮನವಿಪತ್ರ ಸಲ್ಲಿಸುವ ಸಂದರ್ಭದಲ್ಲಿ ಚನ್ನಬಸಪ್ಪ ಕಂಠಿ, ಚೆನ್ನು ನಂದಿ, ವೀರಣ್ಣ ಸೊಪ್ಪಿನ, ಎಸ್.ಎಸ್. ಪಾಟೀಲ, ನಂದೀಶ ಮಠದ, ಚೇತನ ಕಾಳೆ, ನಬೀಸಾಬ ಕಿಲ್ಲೇದಾರ, ಮನೋಹರ ಹುಯಿಲಗೋಳ, ಬಸವರಾಜ ಸಾಬಳೆ, ಶಿವಪ್ಪ ನರಸಾಪುರ, ವೈ.ಬಿ. ಯಲ್ಲಪ್ಪಗೌಡ್ರ, ಮಹಾಂತೇಶ ಹಿರೇಮಠ, ಈರಣ್ಣ ಹುರಕಡ್ಲಿ ಮತ್ತಿತರರು ಹಾಜರಿದ್ದರು.
