‘ವಚನಗಳಿಗೆ ಶಾಶ್ವತ ಅಸ್ತಿತ್ವ ದೊರಕಿಸಿಕೊಟ್ಟ ಹಳಕಟ್ಟಿ’

ಬಸವ ಮೀಡಿಯಾ
ಬಸವ ಮೀಡಿಯಾ

ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ

ಕೊಪ್ಪಳ:

ವಚನ ಪಿತಾಮಹರೆಂದೇ ಖ್ಯಾತರಾದ ಫ.ಗು. ಹಳಕಟ್ಟಿಯವರು 12ನೇ ಶತಮಾನದ ಬಸವಾದಿ ಶರಣರ ವಚನಗಳನ್ನು ಸಂರಕ್ಷಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟು, ವಚನಗಳಿಗೆ ಶಾಶ್ವತ ಅಸ್ತಿತ್ವ ದೊರಕಿಸಿಕೊಟ್ಟರು ಎಂದು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಶರಣಬಸಪ್ಪ ಬಿಳಿಎಲಿ ಅವರು ಹೇಳಿದರು.

ಗುರುವಾರ ಕೊಪ್ಪಳದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು(ಪ್ರೌಢಶಾಲಾ ವಿಭಾಗ)ದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ, ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಫ.ಗು. ಹಳಕಟ್ಟಿಯವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.

12ನೇ ಶತಮಾನ ಸಾಮಾಜಿಕವಾಗಿ, ಆರ್ಥಿಕವಾಗಿ, ಆಧ್ಯಾತ್ಮಿಕವಾಗಿ, ಮಹಿಳಾ ಸಬಕಲೀರಣ, ಮುಂತಾದ ವಿಷಯಗಳಿಂದಾಗಿ ಕ್ರಾಂತಿಕಾರಿ ಶತಮಾನವಾಗಿತ್ತು. ಆಗ ಬಸವಾದಿ ಶರಣರು ತಾಳೆಗರಿಯ ಮೇಲೆ ರಚಿಸಿದ ವಚನಗಳು ರಾಜ್ಯಾದ್ಯಂತ ಹಂಚಿ ಹೋದವು. ವಚನ ಸಾಹಿತ್ಯದ ಬಗ್ಗೆ ಅಪಾರ ಗೌರವ ಒಲವು ಇದ್ದ ಮೂಲತಃ ಧಾರವಾಡ ಜಿಲ್ಲೆಯ ಫಕೀರಪ್ಪ ಗುರುಬಸಪ್ಪ ಹಳಕಟ್ಟಿಯವರು ಹೀಗೆ ಹಂಚಿ ಹೋದ ವಚನಗಳನ್ನು ಸಂಗ್ರಹಿಸಲು ಆಸಕ್ತಿ ತೋರಿದರು.

ಸತತ 18 ವರ್ಷಗಳ ಕಾಲ ರಾಜ್ಯಾದ್ಯಂತ ಸಂಚರಿಸಿ, ವಚನಗಳ ತಾಳೆಗರಿಯನ್ನು ಸಂಗ್ರಹಿಸಿದರು. ನಂತರ ಅವುಗಳನ್ನು ಶಾಶ್ವತವಾಗಿ ಉಳಿಸುವ ಉದ್ದೇಶದಿಂದ ಹಿತಚಿಂತಕ ಎಂಬ ಮೊಟ್ಟ ಮೊದಲ ವಚನ ಸಾಹಿತ್ಯ ಮುದ್ರಣಾಲಯವನ್ನು ಸ್ಥಾಪಿಸಿದರು. ವೃತ್ತಿಯಿಂದ ವಕೀಲರಾಗಿದ್ದ ಹಳಕಟ್ಟಿಯವರು ವಚನಗಳನ್ನು ಸಂರಕ್ಷಿಸುವ ಉದ್ದೇಶದಿಂದ ವೃತ್ತಿಯಲ್ಲಿನ ಅತ್ಯುತ್ತಮ ಅವಕಾಶಗಳನ್ನು ತ್ಯಜಿಸಿ, ತಮ್ಮ ಜೀವನವನ್ನೇ ವಚನಗಳ ಸಂರಕ್ಷಣೆಗಾಗಿ ಮುಡಿಪಾಗಿಟ್ಟರು.

ವಚನ ಸಾಹಿತ್ಯ ಸಂರಕ್ಷಣೆಯಲ್ಲಿನ ಅವರ ಸಾಧನೆಗೆ ಕನ್ನಡದ ಕಣ್ವ ಬಿ.ಎಂ.ಶ್ರೀ ಅವರು ಹಳಕಟ್ಟಿವರಿಗೆ ವಚನ ಗುಮ್ಮಟ ಎಂದು ಬಿರುದು ನೀಡಿದರು. ಹಳಕಟ್ಟಿಯವರು ವಚನ ಪಿತಾಮಹ ಎಂದೇ ಖ್ಯಾತರಾದರು ಎಂದು ಅವರು ಹೇಳಿದರು.

ಹಳಕಟ್ಟಿಯವರು ಒಟ್ಟು 2,209 ತಾಳೆಗರಿಯ ವಚನಗಳನ್ನು ಸಂಗ್ರಹಿಸಿದ್ದರು. ಅವುಗಳನ್ನು 250 ವಿವಿಧ ವಿಭಾಗಗಳಾಗಿ ವರ್ಗೀಕರಿಸಿ, 219 ಹೊಸ ವಚನಕಾರರನ್ನು ಗುರುತಿಸಿದರು. ಅಲ್ಲಿಯವರೆಗೂ ಕೇವಲ 50 ವಚನಕಾರರ ಹೆಸರುಗಳಷ್ಟನ್ನೇ ಗುರುತಿಸಲಾಗಿತ್ತು. ಹಳಕಟ್ಟಿಯವರ ವಚನಗಳ ಸಂಗ್ರಹದಿಂದ ಹೊಸ ವಚನಕಾರರು ಗುರುತಿಸಲ್ಪಟ್ಟರು. ವಿವಿಧ ವಿಭಾಗಗಳ ವಚನಗಳ ವರ್ಗೀಕರಣದಲ್ಲಿ 160 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ, 25,000 ಪುಟಗಳ ಸಾಹಿತ್ಯವನ್ನು ಅವರು ಬರೆದಿದ್ದಾರೆ.

ಶಿವಾನುಭವ ಎಂಬ ಮಾಸಪತ್ರಿಕೆಯನ್ನು ಆರಂಭಿಸಿದ ಅವರು ಸತತ 36 ವರ್ಷಗಳ ಕಾಲ ಅದನ್ನು ಪ್ರತಿ ಮಾಹೆ ಮುದ್ರಣವಾಗುವಂತೆ ನೋಡಿಕೊಂಡರು. ಕರ್ನಾಟಕ ಏಕೀಕರಣದ ಚಳುವಳಿಗೆ ಬೆಂಬಲ ನೀಡಲು ನವಕರ್ನಾಟಕ ಎಂಬ ವಾರಪತ್ರಿಕೆಯನ್ನು ಆರಂಭಿಸಿದರು. ಕೇವಲ ನಮ್ಮ ನಾಡಿಗೆ ಮಾತ್ರವಲ್ಲದೆ, ಪ್ರಪಂಚಕ್ಕೆ ಕೊಡುಗೆಯಾಗಬಲ್ಲ ವಚನ ಸಾಹಿತ್ಯದ ಸಂರಕ್ಷಣೆಯನ್ನು ತಮ್ಮ ಬದುಕಿನ ಧ್ಯೇಯವಾಗಿ ಸಾಧಿಸಿದವರು ಹಳಕಟ್ಟಿಯವರು ಎಂದು ಅವರು ಹೇಳಿದರು.

ವಿಶ್ವಗುರು ಬಸವೇಶ್ವರ ಟ್ರಸ್ಟ್ ನ ರಾಜೇಶ ಶಶಿಮಠ ಅವರು ಮಾತನಾಡಿ, ಫ.ಗು. ಹಳಕಟ್ಟಿಯವರು ಕೇವಲ ವಚನ ಸಾಹಿತ್ಯದ ಪಿತಾಮಹ ಮಾತ್ರವಲ್ಲ, ಶಿಕ್ಷಣ ಕ್ಷೇತ್ರಕ್ಕೂ ಅವರ ಕೊಡುಗೆ ಅಪಾರವಾಗಿದೆ. ಅಖಂಡ ಬಿಜಾಪುರ ಜಿಲ್ಲೆಯಲ್ಲಿ ಮರಾಠಿ ಭಾಷೆಯ ಪ್ರಭಾವ ಹೆಚ್ಚಿರುವ ಪ್ರದೇಶದಲ್ಲಿ ಕನ್ನಡ ಭಾಷೆಯ ಉಳಿವಿಗಾಗಿ 6 ಗಂಡು ಮಕ್ಕಳ ಶಾಲೆಗಳನ್ನು ಹಾಗೂ 3 ಹೆಣ್ಣುಮಕ್ಕಳ ಶಾಲೆಯನ್ನು ತೆರೆದರು.

ಇಂದಿನ ಬಿ.ಎಲ್.ಡಿ.ಇ ಸಂಸ್ಥೆಯ ಮೂಲ ಸಂಸ್ಥಾಪಕರು ಹಳಕಟ್ಟಿಯವರು. ವಿಶ್ವ ಸಾಹಿತ್ಯಕ್ಕೆ ವಚನ ಸಾಹಿತ್ಯವನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ಹೇಳಿದರು.

ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪಪ್ರಾಚಾರ್ಯರಾದ ಶರಣಬಸವಗೌಡ ಪಾಟೀಲ ಅವರು ಮಾತನಾಡಿ, ಇಂದಿನ ಮಕ್ಕಳು ಮೊಬೈಲ್ ಗೀಳಿನಿಂದ ಹೊರಬಂದು ಫ.ಗು. ಹಳಕಟ್ಟಿಯವರಂತಹ ಮಹನೀಯರು ನಮಗೆ ನೀಡಿದ ಕೊಡುಗೆಗಳನ್ನು ಗೌರವಿಸಿ, ಅನುಸರಿಸಬೇಕಿದೆ. ಏನನ್ನೂ ಓದದಿರುವುದು ಕೆಟ್ಟ ಸಾಹಿತ್ಯ ಓದುವುದಕ್ಕಿಂತಲೂ ಕೆಟ್ಟದ್ದು ಎಂಬ ಮಾತಿನಂತೆ ಓದುವ ಹವ್ಯಾಸವನ್ನು ಮಕ್ಕಳು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪತಹಶೀಲ್ದಾರರಾದ ಗವಿಸಿದ್ದಪ್ಪ ಮಣ್ಣೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕರ್ಣಕುಮಾರ, ಹಿರಿಯ ಶಿಕ್ಷಕರಾದ ಮಹಮ್ಮದ್ ಅಬ್ದುಲ್ ರಹೀಮ್, ಬಸವ ಸಮಿತಿಯ ಅಧ್ಯಕ್ಷರಾದ ಬಸವರಾಜ ಬಳ್ಳೊಳ್ಳಿ, ಜೆ.ಎಲ್.ಎಂ.ನ ಹನುಮೇಶ ಕಲ್ಮಂಗಿ ಸೇರಿದಂತೆ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವೆಂಕಟೇಶ ಹಾಗೂ ಸಂಗಡಿಗರು ವಚನ ಗಾಯನ ನಡೆಸಿಕೊಟ್ಟರು. ಶಿಕ್ಷಕ ಹನುಮಂತಪ್ಪ ಕುರಿ ಅವರು ಕಾರ್ಯಕ್ರಮ ನಿರೂಪಿಸಿದರು.

ಬಸವಪರ ಸಂಘಟಗಳಿಂದ ಆಚರಣೆ:

ನಗರದ ಫ.ಗು. ಹಳಕಟ್ಟಿ ವೃತ್ತದಲ್ಲಿ ಬಸವಪರ ಸಂಘಟನೆಗಳಿಂದ ವಚನ ಸಾಹಿತ್ಯ ಸಂರಕ್ಷಕ ಫ. ಗು. ಹಳಕಟ್ಟಿ ಅವರ ಜಯಂತಿ ಆಚರಣೆ ಮಾಡಲಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
Leave a comment

Leave a Reply

Your email address will not be published. Required fields are marked *