ಎಂದೆಂದಿಗೂ ನಮ್ಮ ಹೃದಯದಲ್ಲಿ: ನಾಡಿನಲ್ಲಿ ಎಲ್ಲೆಡೆ ಹಳಕಟ್ಟಿಗೆ ನಮನ

ಬಸವ ಮೀಡಿಯಾ
ಬಸವ ಮೀಡಿಯಾ
14Posts
Auto Updates

ಫ.ಗು. ಹಳಕಟ್ಟಿ ಜಯಂತಿ ಪ್ರಯುಕ್ತ ಜೂಲೈ 2 ನಡೆದ ಕಾರ್ಯಕ್ರಮಗಳ ಕೆಲವು ವರದಿಗಳು

15 hr 23 min agoJuly 3, 2026 8:44 am

ಗದಗ: ಸೈಕಲ್ ಮೇಲೆ ಹಳ್ಳಿಹಳ್ಳಿ ಸುತ್ತಿದರು

ವಚನ ಸಾಹಿತ್ಯದ ಸಂರಕ್ಷಣೆಗಾಗಿ ಇಡೀ ಜೀವನವನ್ನೇ ಮುಡುಪಾಗಿಟ್ಟಿದ್ದ ಡಾ. ಫ.ಗು. ಹಳಕಟ್ಟಿ ಅವರ ಜನ್ಮದಿನದ ಅಂಗವಾಗಿ ಆಚರಿಸಲಾಗುವ ವಚನ ಸಾಹಿತ್ಯ ಸಂರಕ್ಷಣಾ ದಿನವು ಪ್ರತಿಯೊಬ್ಬರಿಗೂ ವಚನಗಳ ಮಹತ್ವವನ್ನು ನೆನಪಿಸುತ್ತದೆ.

ಹಳಕಟ್ಟಿ ಅವರ ಆದರ್ಶಗಳು ಮತ್ತು ವಚನಗಳ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಯೋಗದಲ್ಲಿ ಜರುಗಿದ ಡಾ. ಫ.ಗು. ಹಳಕಟ್ಟಿಯವರ ಜನ್ಮದಿನದ ಪ್ರಯುಕ್ತ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

12ನೇ ಶತಮಾನದಲ್ಲಿ ಶರಣರು ತಾಳೆಗರಿ, ಓಲೆಗರಿಗಳಲ್ಲಿ ಬರೆದಿಟ್ಟಿದ್ದ ವಚನಗಳನ್ನು ಕಡುಬಡತನ ಮತ್ತು ಕಷ್ಟದ ಕಾಲದಲ್ಲೂ ಊರೂರು ಅಲೆದು ಸಂಗ್ರಹಿಸಿದ ಕೀರ್ತಿ ಫ.ಗು. ಹಳಕಟ್ಟಿ ಅವರಿಗೆ ಸಲ್ಲುತ್ತದೆ. ಇದೇ ಕಾರಣಕ್ಕಾಗಿ ಅವರನ್ನು ವಚನ ಪಿತಾಮಹ ಎಂದು ಗೌರವಿಸಲಾಗುತ್ತದೆ.

ವಕೀಲಿ ವೃತ್ತಿಯನ್ನು ಬದಿಗಿಟ್ಟು, ಸೈಕಲ್ ಮೇಲೆ ಹಳ್ಳಿಹಳ್ಳಿಗಳಿಗೆ ಭೇಟಿ ನೀಡಿ ಸಾವಿರಾರು ವಚನಗಳನ್ನು ಅವರು ಸಂರಕ್ಷಿಸಿದರು. ವಚನಗಳ ಮುದ್ರಣಕ್ಕಾಗಿ ಸ್ವಂತ ಪ್ರಿಂಟಿಂಗ್ ಪ್ರೆಸ್ ಸ್ಥಾಪಿಸುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.ಶರಣ ತತ್ವ ಚಿಂತಕ ಅಶೋಕ ಬರಗುಂಡಿ ಮಾತನಾಡಿ, ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿಯವರು ತಮ್ಮ ಬದುಕನ್ನು ಲೆಕ್ಕಿಸದೆ ವಚನ ಸಾಹಿತ್ಯದ ಉಳಿವಿಗಾಗಿ ನಡೆಸಿದ ಹೋರಾಟ ಮತ್ತು ಸಮರ್ಪಣಾ ಮನೋಭಾವ ಅನನ್ಯ. ವಚನಗಳು ಕೇವಲ ಓದುವ ಗ್ರಂಥಗಳಲ್ಲ, ಅವು ನಮ್ಮ ದೈನಂದಿನ ಬದುಕಿನ ದಾರಿಯಾಗಬೇಕು ಎಂದರು.

ಈ ಸಂದರ್ಭದಲ್ಲಿ ಡಾ. ಫ.ಗು. ಹಳಕಟ್ಟಿ ಅವರ ಜನ್ಮದಿನದ ಪ್ರಯುಕ್ತ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕುರಿತು ಪ್ರೌಢಶಾಲಾ ಮತ್ತು ಕಾಲೇಜುಗಳಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸಿದ್ದು, ಸ್ಪರ್ಧೆ ವಿಜೇತರಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

15 hr 22 min agoJuly 3, 2026 8:45 am

ಹಾವೇರಿ: ವಚನ ಸಾಹಿತ್ಯ ಮುಂದಿನ ಪೀಳಿಗೆಗೆ ತಲುಪಿಸಿದರು

ಡಾ. ಫ.ಗು. ಹಳಕಟ್ಟಿ ಅವರು ವಚನ ಸಾಹಿತ್ಯದ ಸಂಗ್ರಹ, ಸಂರಕ್ಷಣೆ ಹಾಗೂ ಪ್ರಸಾರಕ್ಕಾಗಿ ತಮ್ಮ ಇಡೀ ಬದುಕನ್ನೇ ಮುಡಿಪಾಗಿಟ್ಟ ಮಹಾನ್ ವ್ಯಕ್ತಿ. ಕನ್ನಡ ಸಾಹಿತ್ಯ ಸಂರಕ್ಷಣೆಗೆ ಅಪಾರ ಕೊಡುಗೆ ನೀಡಿದ್ದಾರೆ. ವಚನ ಸಾಹಿತ್ಯದ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಂ. ಮೈದೂರ ಹೇಳಿದರು.

ನಗರದ ಗಾಂಧಿ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಟಿ.ಎಂ.ಎ.ಇ.ಎಸ್. ಬಿಇಡಿ ಕಾಲೇಜು ಸಹಯೋಗದಲ್ಲಿ ಜರುಗಿದ ಡಾ. ಫ.ಗು. ಹಳಕಟ್ಟಿ ಜನ್ಮದಿನ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಸವಣ್ಣನವರ ವಚನಗಳು ಸೇರಿದಂತೆ ನೂರಾರು ಶರಣರ ವಚನಗಳನ್ನು ಊರೂರು ಸಂಚರಿಸಿ ಸಂಗ್ರಹಿಸಿ, ಸಂಪಾದಿಸಿ ಕನ್ನಡ ಸಾಹಿತ್ಯಕ್ಕೆ ಅಪೂರ್ವ ಕೊಡುಗೆ ನೀಡಿದ ಮಹನೀಯರು ಫ.ಗು. ಹಳಕಟ್ಟಿ. ಅವರ ಸೇವೆಯಿಂದಲೇ ವಚನ ಸಾಹಿತ್ಯ ಮುಂದಿನ ಪೀಳಿಗೆಗೆ ತಲುಪಲು ಸಾಧ್ಯವಾಯಿತು. ಬಸವಣ್ಣನವರ ತತ್ವ, ಆದರ್ಶ ಮತ್ತು ಜೀವನ ಮೌಲ್ಯಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ ಎಂದು ಹೇಳಿದರು.

ಧಾರವಾಡ ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲ ಕೆ.ಎಸ್. ಕೋರಿಶೆಟ್ಟರ ಮಾತನಾಡಿ ವಚನ ಸಾಹಿತ್ಯವು ಕೇವಲ ಅನುವಾದ ಸಾಹಿತ್ಯವಲ್ಲ, ಅದು ಕಾಯಕಜೀವಿಗಳ ಅನುಭಾವ ಸಾಹಿತ್ಯವಾಗಿದೆ.

ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪವು ವಿಶ್ವದ ಮೊದಲ ಪ್ರಜಾಸತ್ತಾತ್ಮಕ ಚಿಂತನಾ ವೇದಿಕೆಯಾಗಿದೆ. ಮಹಿಳೆಯರು ಹಾಗೂ ದಲಿತರಿಗೆ ಸಮಾನ ಅವಕಾಶ ಕಲ್ಪಿಸಿತ್ತು. ಸಮಾಜದ ಅಸಮಾನತೆ, ಶೋಷಣೆ ಮತ್ತು ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ವಚನಗಳನ್ನು ಸಂಗ್ರಹಿಸಿ, ಸಂರಕ್ಷಿಸಿ ಪ್ರಕಟಿಸಿದ ಕೀರ್ತಿ ಫ.ಗು. ಹಳಕಟ್ಟಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

15 hr 20 min agoJuly 3, 2026 8:47 am

ತುಮಕೂರು: ಮಗನ ಶವವನ್ನು ತರಲು ಹಣವಿಲ್ಲದ ಸ್ಥಿತಿಗೆ ಹೋದರು

ವಚನ ಸಾಹಿತ್ಯವನ್ನು ಸಂಗ್ರಹಿಸಿ, ಅದನ್ನು ಮುಂದಿನ ಪೀಳಿಗೆಗೆ ಉಳಿಸಿಕೊಟ್ಟು ಶ್ರೀಮಂತಗೊಳಿಸಿದ ಡಾ.ಫ.ಗು.ಹಳಕಟ್ಟಿಯವರು, ಬದುಕಿನಲ್ಲಿ ಅತ್ಯಂತ ಕಡು ಬಡವರಾದರು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಅಭಿಪ್ರಾಯಪಟ್ಟಿದ್ದಾರೆ.

ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕಸಾಪ ವತಿಯಿಂದ ಆಯೋಜಿಸಿದ್ದ ಡಾ.ಫ.ಗು.ಹಳಕಟ್ಟಿ ಅವರ ಜನ್ಮದಿನ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ವಕೀಲರಾಗಿ, ಪತ್ರಕರ್ತರಾಗಿ, ಮುದ್ರಕರಾಗಿ, ತಮ್ಮ ತನು, ಮನ, ದನವನ್ನು ವಿನಿಯೋಗಿಸಿ, ವಚನ ಸಾಹಿತ್ಯವನ್ನು ಸಂಗ್ರಹಿಸಿ, ಅದನ್ನು ಪ್ರಕಟಿಸುವ ಮೂಲಕ ಅದನ್ನು ವಿಶ್ವದಲ್ಲಿಯೇ ಶ್ರೀಮಂತಗೊಳ್ಳಲು ಕಾರಣರಾದ ಡಾ.ಫ.ಗು.ಹಳಕಟ್ಟಿ, ಜೀವನದುದ್ದಕ್ಕೂ ಹರಿದ ಹಂಗಿ, ಅರೆ ಹೊಟ್ಟೆಯಲ್ಲಿಯೇ ಜೀವನ ನಡೆಸಿದರು.

ಮೃತನಾದ ಮಗನ ಶವವನ್ನು ತರಲು ಹಣವಿಲ್ಲದ ಸ್ಥಿತಿಗೆ ತಲುಪಿದ್ದು ಮಾತ್ರ ದುರಂತ ಎಂದರು.

ಇಂದು ಜನರು ಅವಕಾಶ ಸಿಕ್ಕಾಗ ತಮಗೆ, ತಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ, ಮರಿ ಮಕ್ಕಳಿಗೆ ಆಗುವಷ್ಟು ಕೂಡಿಡುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ.

ಆದರೆ 20ನೇ ಶತಮಾನದಲ್ಲಿ ಯಾವ ಪ್ರತಿಫಲಾಫೇಕ್ಷೆ ಇಲ್ಲದೆ, ಸೈಕಲ್ ಹತ್ತಿ, ಊರೂರು ತಿರುಗಿ, ತಾಳೆಗರಿ, ತಾಡಪತ್ರ, ಒಲೆಗರಿಗಳನ್ನು ಸಂಗ್ರಹಿಸಿ ಅವುಗಳಲ್ಲಿ ಇರುವುದನ್ನು ಬರಹ ರೂಪಕ್ಕೆ ತಂದು, ಮುದ್ರಿಸಿ, ಸಮಾಜಕ್ಕೆ ಉಡುಗೊರೆಯಾಗಿ ನೀಡಿದವರು ಡಾ.ಫ.ಗು.ಹಳಕಟ್ಟಿರುವರು, ಹಾಗಾಗಿಯೇ ಅವರನ್ನು ವಚನ ಗುಮ್ಮಟ್ಟ ಎಂಬ ಹೆಸರಿನಿಂದ ಕರೆಯಲಾಗುತ್ತಿದೆ. ವಚನ ಸಾಹಿತ್ಯ ಉಳಿದಿದ್ದರೆ, ಅದರ ಹಿಂದೆ ಡಾ.ಫ.ಗು.ಹಳಕಟ್ಟಿ ಅವರ ಶ್ರಮವಿದೆ.

ವಿದ್ವಾನ್ ಡಾ.ಎಂ.ಜಿ.ಸಿದ್ದರಾಮಯ್ಯ ಮಾತನಾಡಿ, ಡಾ.ಫ.ಗು.ಹಳಕಟ್ಟಿ ಶರಣರು ಹೇಳುವಂತೆ ಸ್ಥಾವರವಲ್ಲ, ಜಂಗಮ, ಅವರು ಸಂಗ್ರಹಿಸಿದ ವಚನ ಸಾಹಿತ್ಯವೂ ಸ್ಥಾವರವಾಗದೆ, ಜಂಗಮವಾಗಿ ಎಲ್ಲರ ಮನ, ಮನೆಗಳನ್ನು ಬೆಳಗುವಂತೆ ಮಾಡಬೇಕಾಗಿದೆ ಎಂದರು.

ವಚನ ಪಿತಾಮಹಾ ಡಾ.ಫ.ಗು.ಹಳಕಟ್ಟಿ ಅವರ ಕುರಿತು ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಗಂಗಾಧರ ಕೊಡ್ಲಿ, ವಕೀಲರಾದ ಡಾ.ಫಕೀರಪ್ಪ, ಗುರುಬಸಪ್ಪ ಹಳಕಟ್ಟಿ ಅವರು ವಕೀಲರಾಗಿ ವೃತ್ತಿ ಆರಂಭಿಸಿದ್ದರೂ, ಹಗಲಿರುಳು ದುಡಿದಿದ್ದು, ವಚನ ಸಾಹಿತ್ಯ ಸಂಗ್ರಹ ಮತ್ತು ಪ್ರಚಾರಕಕ್ಕೆ,ತಮ್ಮ ಮನೆಯನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಪ್ರಿಟಿಂಗ್ ಪ್ರೆಸ್ ಆರಂಭಿಸಿದರು. ವಚನ ಸಾಹಿತ್ಯದ ಜೊತೆಗೆ, ಶಿವಾನುಭವ ಪತ್ರಿಕೆಯ ಮೂಲಕ ಜನರಿಗೆ ಶರಣ ಸಾಹಿತ್ಯವನ್ನು ತಲುಪಿಸುವ ಕೆಲಸ ಮಾಡಿದರು.ಅ ರಿವೇ ಗುರು ಎಂಬ ನಾಣ್ನುಡಿ ಇವರಿಗೆ ಅನ್ವರ್ಥ,ತಮ್ಮ ಪತ್ರಿಕೆಗಳ ಮೂಲಕ ವಚನ ಸಾಹಿತ್ಯದ ಜ್ಞಾನ ಲೋಕಕ್ಕೆ ಪರಿಚಯಿಸಿದರು. ಅನುಭವ, ಅನುಭಾವ ಮತ್ತು ಅನುಸಂಧಾನದ ಭಾಗವೇ ಆಗಿರುವ ವಚನ ಸಾಹಿತ್ಯಕ್ಕಾಗಿ ಎಲ್ಲವನ್ನು ಆರ್ಪಿಸಿಕೊಂಡವರು.

ಬಿಎಲ್‌ಡಿಯಂತಹ ಸಂಸ್ಥೆಯ ಜೊತೆಗೆ, ಶ್ರೀಸಿದ್ದೇಶ್ವರಸ್ವಾಮಿ ಪ್ರಾಥಮಿಕ ಶಾಲೆ, ಸಹಕಾರಿ ಬ್ಯಾಂಕ್ ಸ್ಥಾಪಿಸಿ, ಸಮುದಾಯದ ಏಳಿಗೆಗೆ ತಮ್ಮನ್ನು ಮುಡಿಪಾಗಿಟ್ಟವರು ಎಂದರು.ಇದೇ ವೇಳೆ ವಚನ ಸಾಹಿತ್ಯ ಸಮೂಹ ಗಾಯನ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

15 hr 19 min agoJuly 3, 2026 8:48 am

ಧಾರವಾಡ: ನಾಡಿನ ಮೂಲೆ ಮೂಲೆಗಳಲ್ಲಿ ವಚನ ಹುಡುಕಿದರು

‘ವಚನ ಸಾಹಿತ್ಯ ಸಂಶೋಧನೆ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಫ.ಗು. ಹಳಕಟ್ಟಿ ಅವರ ಕೊಡುಗೆ ಅಪಾರ’ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕಾರ್ಯದರ್ಶಿ ಸುವರ್ಣಾ ಬಿರಾದಾರ ಹೇಳಿದರು.

ನಗರದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ವತಿಯಿಂದ ಲಿಂಗಾಯತ ಭವನದಲ್ಲಿ ಗುರುವಾರ ಆಯೋಜಿಸಿದ್ದ ವಚನ ಸಂಶೋಧಕ ಫ.ಗು. ಹಳಕಟ್ಟಿ ಅವರ 147ನೇ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

‘ಹಳಕಟ್ಟಿ ಅವರು ಶರಣರ ವಚನಗಳನ್ನು ನಾಡಿನ ಮೂಲೆ ಮೂಲೆಗಳಿಂದ ಸಂಗ್ರಹಿಸಿ, ಸಂಶೋಧಿಸಿ, ಪ್ರಕಟಿಸುವ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಹೊಸ ಚೈತನ್ಯ ನೀಡಿದರು. ವಚನ ಸಾಹಿತ್ಯದ ಪುನರುತ್ಥಾನಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಅವರ ಕಾರ್ಯ ಯುವಜನತೆಗೆ ಪ್ರೇರಣೆ’ ಎಂದು ತಿಳಿಸಿದರು.

15 hr 18 min agoJuly 3, 2026 8:49 am

ಶಿವಮೊಗ್ಗ: ನಿಸ್ವಾರ್ಥ, ಸತ್ಯನಿಷ್ಠ ವ್ಯಕ್ತಿ

‘ವಚನಗಳು ಜನಸಾಮಾನ್ಯರ ಸಾಹಿತ್ಯ. ಅವುಗಳನ್ನು ಸಂಗ್ರಹಿಸಿ, ಸಂರಕ್ಷಿಸಿ ಮುಂದಿನ ಪೀಳಿಗೆಗೆ ತಲುಪಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ಫ.ಗು.ಹಳಕಟ್ಟಿ ಅವರ ವ್ಯಕ್ತಿತ್ವ ಸದಾ ಮಾದರಿ’ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್ ತಿಳಿಸಿದರು.

ಜಿಲ್ಲಾಡಳಿತದಿಂದ ಗುರುವಾರ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ಫ.ಗು.ಹಳಕಟ್ಟಿ ಅವರ ಜನ್ಮದಿನ- ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

‘12ನೇ ಶತಮಾನದ ಬಸವಾದಿ ಶರಣರು ರಚಿಸಿರುವ ವಚನ ಸಾಹಿತ್ಯ ಸಂರಕ್ಷಿಸಲು ಫ.ಗು.ಹಳಕಟ್ಟಿ ಅವರು ಮಾಡಿದ ಶ್ರಮ, ಸಾಧನೆ ವರ್ಣಿಸಲು ಸಾಧ್ಯವಿಲ್ಲ. ವಚನ ಎಂದರೆ ‘ಕೊಟ್ಟ ಮಾತು’, ಪ್ರಮಾಣ ಅಥವಾ ನುಡಿ ಎಂದರ್ಥ. ಆಡುಭಾಷೆಯಲ್ಲಿ ಜೀವನ ಸಾರವನ್ನು ಸರಳವಾಗಿ ಹೇಳಿರುವ ಒಂದು ಶೈಲಿ’ ಎಂದರು.

ಶಿವಮೊಗ್ಗದ ಬಸವತತ್ವ ಚಿಂತಕ ಬಸನಗೌಡ ಮಾಳಗಿ ವಿಶೇಷ ಉಪನ್ಯಾಸ ನೀಡಿದರು. ‘ಫ.ಗು.ಹಳಕಟ್ಟಿ ಅವರು ಸರಳ, ಸಜ್ಜನಿಕೆಯ ಉದಾತ್ತ ಮನೋಭಾವದ ವ್ಯಕ್ತಿ. ನಿಸ್ವಾರ್ಥ, ನ್ಯಾಯಪರತೆ, ಸತ್ಯನಿಷ್ಠತೆಗೆ ಹೆಸರಾಗಿದ್ದಾರೆ’ ಎಂದರು.

‘12ನೇ ಶತಮಾನದಲ್ಲಿ ಬಸವಣ್ಣನವರು ಸೇರಿದಂತೆ ನೂರಾರು ಶರಣರು ಕ್ರಾಂತಿ ಮಾಡಿದರು. ಆದರೆ, ಕಾಲಗರ್ಭದಲ್ಲಿ ಆ ವಚನಗಳೆಲ್ಲವೂ ತಾಳೆಗರಿಗಳ ರೂಪದಲ್ಲಿ ಮೂಲೆ ಸೇರಿದ್ದವು. ಗೆದ್ದಲು ಪಾಲಾಗುತ್ತಿದ್ದವು. ಅಂತಹ ಕತ್ತಲೆಯಲ್ಲಿದ್ದ ವಚನ ಸಾಹಿತ್ಯದ ಅಮೂಲ್ಯ ರತ್ನಗಳನ್ನು ಜಗತ್ತಿಗೆ ಪರಿಚಯಿಸಿದ ಮಹಾಪುರುಷ ಫ.ಗು. ಹಳಕಟ್ಟಿ’ ಎಂದು ಹೇಳಿದರು.

‘ಶರಣರ ವಚನಗಳು ಕೇವಲ ಸಾಹಿತ್ಯವಲ್ಲ, ಅವು ಬದುಕಿನ ದಾರಿಗಳು ಎಂಬುದನ್ನು ಅರಿತು, ಹಳ್ಳಿಹಳ್ಳಿಗಳಿಗೆ ಅಲೆದಾಡಿ, ದೂಳು ಹಿಡಿದಿದ್ದ ತಾಳೆಗರಿಗಳನ್ನು ಸಂಗ್ರಹಿಸಿ, ಅವುಗಳನ್ನು ಪರಿಷ್ಕರಿಸಿ ಪ್ರಕಟಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ’ ಎಂದರು.

‘ವಕೀಲರಾಗಿದ್ದ ಹಳಕಟ್ಟಿ ಅವರು ಮನಸ್ಸು ಮಾಡಿದ್ದರೆ ಕೋಟ್ಯಧಿಪತಿ ಆಗಬಹುದಿತ್ತು. ಆದರೆ, ಅವರಿಗೆ ವಚನ ಸಾಹಿತ್ಯದ ಉದ್ಧಾರವೇ ಮುಖ್ಯವಾಗಿತ್ತು. ತಮ್ಮ ಸ್ವಂತ ಹಣ ಖರ್ಚು ಮಾಡಿ, ಮನೆ-ಆಸ್ತಿ ಮಾರಿ ವಚನಗಳನ್ನು ಮುದ್ರಿಸಿದರು. ಹಣದ ಕೊರತೆ ಆದಾಗ ತಮ್ಮ ಹಳೆಯ ಮುದ್ರಣಾಲಯ (ಹಿತ ಚಿಂತಕ ಮುದ್ರಣಾಲಯ) ನಡೆಸಲು ಪಟ್ಟ ಕಷ್ಟಗಳು ಅಸದೃಶವಾದವು. ಶರಣರ ವಚನಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಅವರು ತಮ್ಮ ಇಡೀ ಜೀವನ ಮುಡಿಪಾಗಿಟ್ಟಿದ್ದರು’ ಎಂದು ಸ್ಮರಿಸಿದರು.

15 hr 17 min agoJuly 3, 2026 8:50 am

ಅಂಕೋಲಾ: ವಚನ ಸಂಗ್ರಹ, ಮುದ್ರಣ, ಪ್ರಸಾರ

ಫ.ಗು. ಹಳಕಟ್ಟಿ ಅವರು ವಚನ ಸಾಹಿತ್ಯ ಸಂಗ್ರಹ, ಸಂಶೋಧನೆ ಮೂಲಕ ನಾಡಿನ ಸಾಂಸ್ಕೃತಿಕ ಹಿರಿಮೆಯನ್ನು ಉಳಿಸಿದ್ದಾರೆ. ವಚನ ಸಾಹಿತ್ಯ ಮುದ್ರಣ, ಪ್ರಸಾರಕ್ಕಾಗಿ ಸ್ವಂತ ಮನೆಯನ್ನೇ ಮಾರಾಟ ಮಾಡಿದ್ದರು. ಇಂತಹ ಮಹನೀಯರ ಜನ್ಮದಿನವನ್ನು ‘ವಚನ ಸಂರಕ್ಷಣೆ ದಿನ’ ವನ್ನಾಗಿ ಸರ್ಕಾರ ಘೋಷಿಸಿರುವುದು ಶ್ಲಾಘನೀಯ’ ಎಂದು ಪ್ರಾಚಾರ್ಯ ಸಿದ್ದಲಿಂಗಸ್ವಾಮಿ ವಸ್ತ್ರದ ಹೇಳಿದರು.

ಪಟ್ಟಣದ ಜಿ.ಸಿ. ಕಾಲೇಜಿನಲ್ಲಿ ಗುರುವಾರ ವಚನ ಪಿತಾಮಹ ಫ.ಗು. ಹಳಕಟ್ಟಿ ಅವರ ಜನ್ಮದಿನ ಅಂಗವಾಗಿ ಹಮ್ಮಿಕೊಂಡಿದ್ದ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ವೇಳೆ ಗ್ರಂಥಪಾಲಕ ನಂಜುಂಡಯ್ಯ, ಸಿಬ್ಬಂದಿಗಳಾದ ಪ್ರವೀಣ ನಾಯ್ಕ, ಸುಲಕ್ಷಾ ನಾಯ್ಕ, ಪೃಥ್ವಿ ನಾಯಕ, ರೇಣುಕಾ ಮೇಥಾ, ಮಂಜು ಆಗೇರ, ಭರತ ಗುನಗಾ, ಕವಿತಾ ನಾಯಕ, ಸಚಿನ್ ಶೆಟ್ಟಿ, ನಾಗರಾಜ ಶೆಟ್ಟಿ ಇದ್ದರು.

15 hr 17 min agoJuly 3, 2026 8:51 am

ಬೆಳಗಾವಿ: ಅಪಾರ ಕೊಡುಗೆ

‘ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ರಂಗಕ್ಕೆ ಫ.ಗು.ಹಳಕಟ್ಟಿ ಅಪಾರ ಕೊಡುಗೆ ನೀಡಿದ್ದಾರೆ’ ಎಂದು ನಾಗನೂರು ರುದ್ರಾಕ್ಷಿಮಠದ ಅಲ್ಲಮಪ್ರಭು ಸ್ವಾಮೀಜಿ ಹೇಳಿದರು.

ಇಲ್ಲಿನ ಕುಮಾರ ಗಂಧರ್ವ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಚನ ಪಿತಾಮಹ ಫ.ಗು.ಹಳಕಟ್ಟಿ ಜನ್ಮದಿನ ಆಚರಣೆ ಮತ್ತು ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಿಮ್ಸ್ ವೈದ್ಯಾಧಿಕಾರಿ ಭವ್ಯ ಸಂಪಗಾರ ಉಪನ್ಯಾಸ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ, ರಾಜಶೇಖರ ಭೋಜ, ಅಶೋಕ ಮಳಗಲಿ, ಮುರಗೇಶ ಶಿವಪೂಜಿ ಇದ್ದರು.

15 hr 16 min agoJuly 3, 2026 8:51 am

ಕೊಪ್ಪಳ: 18 ವರ್ಷ ಸಂಚರಿಸಿ ವಚನ ಸಂಗ್ರಹಿಸಿದರು

‘ವಚನಗಳ ಪಿತಾಮಹರೆಂದೇ ಖ್ಯಾತರಾದ ಫ.ಗು.ಹಳಕಟ್ಟಿಯವರು 12ನೇ ಶತಮಾನದ ಬಸವಾದಿ ಶರಣರ ವಚನಗಳನ್ನು ಸಂರಕ್ಷಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟು, ವಚನಗಳಿಗೆ ಶಾಶ್ವತ ಅಸ್ತಿತ್ವ ದೊರಕಿಸಿಕೊಟ್ಟರು’ ಎಂದು ಕೊಪ್ಪಳದ ಗವಿಸಿದ್ದೇಶ್ವರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಶರಣಬಸಪ್ಪ ಬಿಳಿಎಲಿ ಅವರು ಹೇಳಿದರು.

ಗುರುವಾರ ಇಲ್ಲಿನ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ)ನಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಫ.ಗು.ಹಳಕಟ್ಟಿಯವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

‘12ನೇ ಶತಮಾನ ಸಾಮಾಜಿಕವಾಗಿ, ಆರ್ಥಿಕವಾಗಿ, ಆಧ್ಯಾತ್ಮಿಕವಾಗಿ, ಮಹಿಳಾ ಸಬಲೀಕರಣ ಮುಂತಾದ ವಿಷಯಗಳಿಂದಾಗಿ ಕ್ರಾಂತಿಕಾರಿಯಿಂದ ಕೂಡಿತ್ತು. ಆಗ ಬಸವಾದಿ ಶರಣರು ತಾಳೆಗರಿಯ ಮೇಲೆ ರಚಿಸಿದ ವಚನಗಳು ರಾಜ್ಯದಾದ್ಯಂತ ಹಂಚಿ ಹೋದವು. ವಚನ ಸಾಹಿತ್ಯದ ಬಗ್ಗೆ ಅಪಾರ ಗೌರವ ಒಲವು ಇದ್ದ ಮೂಲತಃ ಧಾರವಾಡ ಜಿಲ್ಲೆಯ ಹಳಕಟ್ಟಿಯವರು ಹೀಗೆ ಹಂಚಿ ಹೋದ ವಚನಗಳನ್ನು ಸಂಗ್ರಹಿಸಲು ಆಸಕ್ತಿ ತೋರಿದರು. 18 ವರ್ಷ ಸಂಚರಿಸಿ ವಚನಗಳ ತಾಳೆಗರಿಯನ್ನು ಸಂಗ್ರಹಿಸಿದರು. ನಂತರ ಅವುಗಳನ್ನು ಶಾಶ್ವತವಾಗಿ ಉಳಿಸುವ ಉದ್ದೇಶದಿಂದ ಹಿತಚಿಂತಕ ಎಂಬ ಮೊಟ್ಟ ಮೊದಲ ವಚನ ಸಾಹಿತ್ಯ ಮುದ್ರಣಾಲಯವನ್ನು ಸ್ಥಾಪಿಸಿದರು’ ಎಂದು ಸ್ಮರಿಸಿದರು.

ವಿಶ್ವಗುರು ಬಸವೇಶ್ವರ ಸಮಿತಿಯ ರಾಜೇಶ ಶಶಿಮಠ ಮಾತನಾಡಿ ‘ಹಳಕಟ್ಟಿಯವರು ಕೇವಲ ವಚನ ಸಾಹಿತ್ಯದ ಪಿತಾಮಹ ಮಾತ್ರವಲ್ಲ ಶಿಕ್ಷಣ ಕ್ಷೇತ್ರಕ್ಕೂ ಅವರ ಕೊಡುಗೆ ಅಪಾರವಾಗಿದೆ. ಅಖಂಡ ವಿಜಯಪುರ ಜಿಲ್ಲೆಯಲ್ಲಿ ಮರಾಠಿ ಭಾಷೆಯ ಪ್ರಭಾವ ಹೆಚ್ಚಿರುವ ಪ್ರದೇಶದಲ್ಲಿ ಕನ್ನಡ ಭಾಷೆಯ ಉಳಿವಿಗಾಗಿ 6 ಗಂಡು ಮಕ್ಕಳ ಶಾಲೆಗಳನ್ನು ಹಾಗೂ 3 ಹೆಣ್ಣುಮಕ್ಕಳ ಶಾಲೆಯನ್ನು ತೆರೆದರು. ಇಂದಿನ ಬಿ.ಎಲ್.ಡಿ.ಇ ಸಂಸ್ಥೆಯ ಮೂಲ ಸಂಸ್ಥಾಪಕರು ಹಳಕಟ್ಟಿಯವರು’ ಎಂದು ಹೇಳಿದರು.

15 hr 15 min agoJuly 3, 2026 8:52 am

ಚನ್ನಗಿರಿ: ಮನೆ ಮಾರಿ ವಚನ ಪ್ರಕಟಿಸಿದರು

‘ಕಳೆದು ಹೋಗುತ್ತಿದ್ದ 12ನೇ ಶತಮಾನದ ಬಸವಾದಿ ಶರಣರ ವಚನಗಳನ್ನು ತಾಡವೋಲೆಗಳಿಂದ ಸಂಗ್ರಹಿಸಿ, ಪ್ರಕಟಿಸುವ ಮೂಲಕ ಫ.ಗು. ಹಳಕಟ್ಟಿ ಅವರು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ’ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಗುರುಬಸವ ಸ್ವಾಮೀಜಿ

ಪಟ್ಟಣದ ನಿವೃತ್ತ ನೌಕರರ ಭವನದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದಿಂದ ಗುರುವಾರ ನಡೆದ ವಚನ ಪಿತಾಮಹ ಫ.ಗು. ಹಳಕಟ್ಟಿ ಅವರ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ಸಮೃದ್ಧ ಸಮಾಜ ನಿರ್ಮಾಣಕ್ಕೆ ಪಣತೊಟ್ಟು ಮಹಿಳೆಯರ ಸಂಘಟನೆಗಾಗಿ ಅಕ್ಕಮಹಾದೇವಿ ಬಳಗ ಹಾಗೂ ರೈತರ ಬದುಕು ಹಸನಾಗಿಸಲು ಸಿದ್ಧೇಶ್ವರ ಸಹಕಾರ ಬ್ಯಾಂಕ್ ಸ್ಥಾಪನೆ ಮಾಡಿದರು. ಸಹಕಾರ ಕ್ಷೇತ್ರಗಳಿಂದ ಬಾಳು ಬಂಗಾರವಾಗುತ್ತದೆ ಎಂದು ತಿಳಿದು ಆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಗುರುತರವಾದ ಸೇವೆ ನೀಡಿದರು. ಬಸವಾದಿ ಶರಣರು ರಚಿಸಿದ ವಚನಗಳು ನಾಶವಾಗದಂತೆ ಎಲ್ಲಾ ಕಡೆ ಪ್ರವಾಸ ಮಾಡಿ ವಚನಗಳನ್ನು ಸಂಗ್ರಹಿಸಿ, ತಮ್ಮ ಮನೆಯನ್ನು ಮಾರಾಟ ಮಾಡಿ ಅವುಗಳನ್ನು ಪ್ರಕಟಿಸಿ ಜನ ಸಾಮಾನ್ಯರಿಗೆ ತಲುಪಿಸಿದವರು ಹಳಕಟ್ಟಿಯವರು’ ಎಂದರು.

ನಿವೃತ್ತ ಪ್ರಾಂಶುಪಾಲ ಜಿ.ಬಿ. ಚಂದ್ರಶೇಖರಪ್ಪ ಉಪನ್ಯಾಸ ನೀಡಿದರು.

ಲಿಂಗಾಯತ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಎಂ. ರಾಜಪ್ಪ, ಕಾರ್ಯಾಧ್ಯಕ್ಷ ಎಂ.ಯು. ಚನ್ನಬಸಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಟಿ.ವಿ. ರಾಜು, ಪುಷ್ಪಾವತಿ, ಕಸಬಾ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ. ಚಿನ್ನಸ್ವಾಮಿ, ಆರ್.ಎಸ್. ಮಲ್ಲಿಕಾರ್ಜುನಪ್ಪ, ಶಿವಮೂರ್ತಿ ಉಪಸ್ಥಿತರಿದ್ದರು.

15 hr 15 min agoJuly 3, 2026 8:53 am

ಮಡಿಕೇರಿ: ಕಾಟಾಚಾರದ ಜಯಂತಿ ಬೇಡ

ಫ.ಗು.ಹಳಕಟ್ಟಿ ಸೇರಿದಂತೆ ಮಹನೀಯರ ಜಯಂತಿ ಆಚರಣೆಗಳು ಜನರ ಮಧ್ಯೆ, ವಿದ್ಯಾರ್ಥಿಗಳ ಸಮ್ಮುಖದಲ್ಲಿ ನಡೆಯಬೇಕು. ಕಾಟಾಚಾರಕ್ಕೆ ಎಂಬಂತೆ ನಡೆಯುವ ಜಯಂತಿ ಕಾರ್ಯಕ್ರಮಗಳು ಸರಿಯಲ್ಲ ಎಂದು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಗುರುವಾರ ಇಲ್ಲಿನ ಗಾಂಧಿ ಭವನದಲ್ಲಿ ನಡೆದ ಡಾ.ಫ.ಗು.ಹಳಕಟ್ಟಿಯವರ ಜನ್ಮದಿನಾಚರಣೆ –ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಚನ ಸಾಹಿತ್ಯವನ್ನು ಸಂಗ್ರಹಿಸುವಲ್ಲಿ ಡಾ.ಫ.ಗು.ಹಳಕಟ್ಟಿ ಅವರ ಕಾರ್ಯ ಅವಿಸ್ಮರಣೀಯ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಅಖಿಲ ಭಾರತ ವೀರಶೈವ ಮಹಾಸಭಾದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಎಚ್.ವಿ.ಶಿವಪ್ಪ ಮಾತನಾಡಿದರು.

15 hr 14 min agoJuly 3, 2026 8:53 am

ಸಂಡೂರು: ಮಾನವೀಯತೆಯ ಪರಂಪರೆ

ಸಂಡೂರು ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಅನಿಲ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ವಚನ ಪಿತಾಮಹ ಡಾ. ಫ.ಗು. (ಫಕೀರಪ್ಪ ಗುರುಬಸಪ್ಪ) ಹಳಕಟ್ಟಿ ಅವರ ಜನ್ಮದಿನ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಡಾ. ಫ.ಗು. ಹಳಕಟ್ಟಿ ಅವರ ವಚನ ಸಾಹಿತ್ಯ ಸಂರಕ್ಷಣೆ, ಸಂಗ್ರಹ ಹಾಗೂ ಕನ್ನಡ ಸಾಹಿತ್ಯಕ್ಕೆ ನೀಡಿದ ಅಪಾರ ಕೊಡುಗೆಯನ್ನು ಸ್ಮರಿಸಲಾಯಿತು. ವಚನ ಸಾಹಿತ್ಯವು ಸಮಾನತೆ, ಮಾನವೀಯತೆ ಹಾಗೂ ಮೌಲ್ಯಯುತ ಬದುಕಿನ ಸಂದೇಶ ಸಾರುವ ಅಮೂಲ್ಯ ಪರಂಪರೆಯಾಗಿದ್ದು, ಅದನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ಸಂರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಯಿತು.

ಕಾರ್ಯಕ್ರಮದಲ್ಲಿ ಶಿರಸ್ತೇದಾರ್ ಸಿದ್ದಲಿಂಗಯ್ಯ ಸ್ವಾಮಿ, ಗ್ರೇಡ್–2 ತಹಶೀಲ್ದಾರ್ ಸುಧಾ ಸೇರಿದಂತೆ ತಾಲೂಕು ಕಚೇರಿಯ ವಿವಿಧ ವಿಭಾಗಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಡಾ. ಫ.ಗು. ಹಳಕಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸಿದರು

15 hr 13 min agoJuly 3, 2026 8:54 am

ಯಾದಗಿರಿ: ಜನಸಾಮಾನ್ಯರಿಗೆ ವಚನ ತಲುಪಿಸಿದರು

ವಚನ ಸಾಹಿತ್ಯದ ಉಳಿವು, ಸಂರಕ್ಷಣೆ ಮತ್ತು ಪ್ರಸಾರಕ್ಕೆ ಡಾ. ಫ.ಗು. ಹಳಕಟ್ಟಿ ಅವರ ಕೊಡುಗೆ ಅಪಾರವಾಗಿದ್ದು, ಅವರು ಸಮಾಜದ ವಚನಗುಮ್ಮಟ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಬಣ್ಣಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಲಿಂಗೇರಿ ಕೊನಪ್ಪ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ಆಯೋಜಿಸಿದ್ದ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಜನ್ಮದಿನ ಹಾಗೂ ವಚನ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.

ಮನೆ, ಮಠ ಹಾಗೂ ಜಗುಲಿಗಳಲ್ಲಿದ್ದ ತಾಡೋಲೆಗಳನ್ನು ಹುಡುಕಿ ಸಂಗ್ರಹಿಸಿ, ಅವುಗಳ ಅರ್ಥವನ್ನು ಬಿಡಿಸಿ ವಚನ ಸಾಹಿತ್ಯವನ್ನು ಜನಸಾಮಾನ್ಯರಿಗೆ ತಲುಪಿಸುವ ಮಹತ್ತರ ಕಾರ್ಯವನ್ನು ಹಳಕಟ್ಟಿಯವರು ಕೈಗೊಂಡರು. ಈ ಉದ್ದೇಶಕ್ಕಾಗಿ 1925ರಲ್ಲಿ ಹಿತಚಿಂತಕ ಮುದ್ರಣಾಲಯ ಸ್ಥಾಪಿಸಿದ್ದು, ಮುದ್ರಣ ಯಂತ್ರ ಖರೀದಿಸಲು ಆರ್ಥಿಕ ಸಂಕಷ್ಟ ಎದುರಾದಾಗ ತಮ್ಮ ಮನೆಯನ್ನು ಮಾರಾಟ ಮಾಡಿ ಬಾಡಿಗೆ ಮನೆಯಲ್ಲಿ ಜೀವನ ನಡೆಸಿದ ತ್ಯಾಗಮೂರ್ತಿ ಎಂದು ಸ್ಮರಿಸಿದರು.

15 hr 13 min agoJuly 3, 2026 8:55 am

ಉಡುಪಿ: ಸಾವಿರಾರು ವಚನಗಳನ್ನು ಉಳಿಸಿದರು

ಕಲ್ಯಾಣ ಕ್ರಾಂತಿಯ ನಂತರ ನಶಿಸಿಹೋಗುತ್ತಿದ್ದ ಬಸವಣ್ಣ, ಅಲ್ಲಮಪ್ರಭು, ಅಕ್ಕ ಮಹಾದೇವಿ ಸೇರಿದಂತೆ ಹಲವಾರು ಶರಣರು ರಚಿಸಿದ ಸಾವಿರಾರು ವಚನಗಳನ್ನು ಸಂಗ್ರಹಿಸಿ, ಸಂರಕ್ಷಿಸಿ, ಅವುಗಳನ್ನು ಮುದ್ರಿಸುವ ಮೂಲಕ ವಚನ ಸಾಹಿತ್ಯ ಇಂದಿಗೂ ಜನಮಾನಸ ದಲ್ಲಿ ಸ್ಥಿರವಾಗಿ ಉಳಿಯುವಂತೆ ಮಾಡಿದ ಫ.ಗು. ಹಳಕಟ್ಟಿ ಅವರ ಶ್ರಮ ಅವಿರತವಾದುದು ಎಂದು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್ ಅಭಿಪ್ರಾಯಪಟ್ಟಿದ್ದಾರೆ.

ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಡೆದ ಡಾ.ಫ.ಗು. ಹಳಕಟ್ಟಿಯವರ ಜನ್ಮದಿನ -ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ-ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹಳಕಟ್ಟಿ ಅವರ ಕುರಿತು ಉಪನ್ಯಾಸ ನೀಡಿ ಮಾತನಾಡಿ, ಪವಾಡ ಸದೃಶ್ಯ ಕಾರ್ಯ, ತ್ಯಾಗ, ಸೇವೆಗಳ ಮೂಲಕ ನಾಡಿನ ಚರಿತ್ರೆಯಲ್ಲಿ ತನ್ನದೇ ಆದ ಚಾಪು ಮೂಡಿಸಿದ ಫ.ಗು ಹಳಕಟ್ಟಿ ಅವರ 147ನೇ ಜಯಂತಿಯನ್ನು ಇಂದು ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದೇವೆ. ಅವರು ಮಾಡಿದ ಸಂಶೋಧನೆ, ಸಂಪಾದನೆ, ಸಾಹಿತ್ಯಿಕ ಕಾರ್ಯ ಗಳಿಂದಾಗಿ ಜನರು ಅವರನ್ನು ವಚನ ಪಿತಾಮಹರೆಂದೇ ಕರೆಯುತ್ತಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಮಾತನಾಡಿ, 12ನೇ ಶತಮಾನದಲ್ಲಿ ಶಿವಶರಣರಿಂದ ರಚಿತಗೊಂಡು, ಕಲ್ಯಾಣ ಕ್ರಾಂತಿಯ ನಂತರ ಚದುರಿಹೋಗಿದ್ದ ವಚನ ಸಾಹಿತ್ಯಗಳನ್ನು ಫ.ಗು ಹಳಕಟ್ಟಿಯವರು ಅಂದು ರಕ್ಷಿಸದೇ ಹೋಗಿದ್ದರೆ ಇಂದು ಕನ್ನಡ ಸಾಹಿತ್ಯ ಇಷ್ಟು ಶ್ರೀಮಂತವಾಗಿ ಉಳಿಯುತ್ತಿರಲಿಲ್ಲ. ವಕೀಲ ವೃತ್ತಿಯಿಂದ ಬಂದ ಆದಾಯವನ್ನೆಲ್ಲಾ ವಚನ ಸಾಹಿತ್ಯಗಳ ಸಂರಕ್ಷಣೆ, ಪ್ರಚಾರಕ್ಕೆ ಮುಡಿಪಾಗಿಟ್ಟ ಇವರು ಅವುಗಳನ್ನು ಸಂಗ್ರಹಿಸಿ, ವಿಶ್ಲೇಷಿಸಿ, ವರ್ಗಿಕರಿಸದೇ ಇದ್ದಲ್ಲಿ ಅಜ್ಞಾತವಾಗಿ ಉಳಿದಿದ್ದ ಕನ್ನಡದ ಅಮೂಲ್ಯ ವಚನ ಗ್ರಂಥ ಭಂಡಾರ ಇಂದು ವಿಶ್ವಕ್ಕೆ ಪರಿಚಯ ವಾಗುತ್ತಿರಲಿಲ್ಲ ಎಂದು ಗದ್ಯಾಳ್ ನುಡಿದರು.

15 hr 12 min agoJuly 3, 2026 8:55 am

ಕಲಬುರಗಿ: ಜಿಮ್ಸ್ ಜಿಲ್ಲಾ ಆಸ್ಪತ್ರೆ

ನಗರದ ಜಿಮ್ಸ್ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಜ್ಞರು ಹಾಗೂ ಅಧೀಕ್ಷಕರ ಕಚೇರಿಯಲ್ಲಿ ಗುರುವಾರ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಅವರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಡಾ. ಫ.ಗು. ಹಳಕಟ್ಟಿ ಅವರ ಭಾವಚಿತ್ರಕ್ಕೆ ಜಿಲ್ಲಾ ಶಸ್ತ್ರಜ್ಞರು ಹಾಗೂ ಅಧೀಕ್ಷಕರಾದ ಡಾ. ರೂಕಿಯ ಆಸ್ನಾ ರಬಾ ಅವರು ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಓಪಿಡಿ ಸರ್ಜನ್ ಡಾ. ಶಾಲಾನಿ ಸಜ್ಜನಶೆಟ್ಟಿ, ಸ್ಥಳೀಯ ವೈದ್ಯಾಧಿಕಾರಿ ಡಾ. ಜಯಮ್ಮ ಎಸ್. ಗಣಜಲಖೇಡ್, ಕಚೇರಿ ಅಧೀಕ್ಷಕ ವಿಜಯಕುಮಾರ, ಎಚ್‌ಎಫ್‌ಡಬ್ಲ್ಯು ಇಂತಿಜ್, ಜಿಲ್ಲಾ ಟಿಸಿಸಿ ಸೈಕ್ಯಾಟ್ರಿಕ್ ಕೌನ್ಸಿಲರ್ ಮಂಜುನಾಥ ಕಂಬಾಳಿಮಠ, ಸಹಾಯಕರು ಕಾವ್ಯ, ಅಕೌಂಟೆಂಟ್ ಸಿದ್ದಪ್ಪ, ಗಣಕಯಂತ್ರ ಸಹಾಯಕರು ಪಾರ್ವತಿ ಭೀಮರಾವ್, ಸುರೇಖಾ ದಿವಟಗಿ, ಅವಿನಾಶ್ ಪಾಟೀಲ, ಕೈಲಾಶ್ ಶರಣು, ಪೃಥ್ವಿ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
Leave a comment

Leave a Reply

Your email address will not be published. Required fields are marked *