ಬಸವಕಲ್ಯಾಣ:
ಮಹಾಪುರುಷರ ಆದರ್ಶ, ತತ್ವ ಮತ್ತು ಮೌಲ್ಯಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ರಾಷ್ಟ್ರಪತಿ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಪಂಡೀತ ಬಾಳೂರೆ ಅಭಿಪ್ರಾಯಪಟ್ಟರು.

ಅವರು ಗುಣತೀರ್ಥವಾಡಿಯ ಕಲ್ಯಾಣ ಮಹಾಮನೆ ಮಹಾಮಠದಲ್ಲಿ ಹಮ್ಮಿಕೊಂಡಿದ್ದ ಡಾ. ಫ. ಗು. ಹಳಕಟ್ಟಿ ಮತ್ತು ಪೂಜ್ಯ ಲಿಂಗಾನಂದ ಸ್ವಾಮೀಜಿಯವರ ಸ್ಮರಣೋತ್ಸವ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು.
ಮಕ್ಕಳಿಗೆ ಬಾಲ್ಯದಿಂದಲೇ ಮಹಾಪುರುಷರ ಜೀವನ ಚರಿತ್ರೆ, ತ್ಯಾಗ, ಸಾಧನೆ ಮತ್ತು ಮೌಲ್ಯಗಳನ್ನು ಪರಿಚಯಿಸಬೇಕು. ಶಿಕ್ಷಣದ ಜೊತೆಗೆ ಸಂಸ್ಕಾರವೂ ಅತ್ಯಗತ್ಯವಾಗಿದ್ದು, ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತವೆ ಎಂದು ಹೇಳಿದರು.

ಫ.ಗು. ಹಳಕಟ್ಟಿಯವರ ಕುರಿತು ಅನುಭಾವ ನೀಡಿದ ಮೀನಾಕ್ಷಿ ಬಿರಾದಾರ ಅವರು, ಫ. ಗು. ಹಳಕಟ್ಟಿ ಅವರ ಕನ್ನಡ ನಾಡು-ನುಡಿಗೆ ಸಲ್ಲಿಸಿದ ಅಪಾರ ಕೊಡುಗೆ, ವಚನ ಸಾಹಿತ್ಯದ ಸಂರಕ್ಷಣೆ ಮತ್ತು ಸಂಶೋಧನಾ ಕಾರ್ಯಗಳನ್ನು ವಿವರಿಸಿದರು. ಹಳಕಟ್ಟಿಯವರ ಸೇವೆ ಕನ್ನಡಿಗರಿಗೆ ಸದಾ ಪ್ರೇರಣೆಯಾಗಿದ್ದು, ಯುವಪೀಳಿಗೆ ಅವರ ಆದರ್ಶಗಳನ್ನು ಅರಿತು ಮುನ್ನಡೆಯಬೇಕು ಎಂದು ತಿಳಿಸಿದರು.
ಗಿರಿಜಾ ಸಿದ್ಧಣ್ಣ ಅವರು ಲಿಂಗಾನಂದ ಸ್ವಾಮೀಜಿ ಅವರ ಜೀವನ ಸಾಧನೆ, ಸಮಾಜಮುಖಿ ಕಾರ್ಯಗಳು, ಶಿಕ್ಷಣ ಮತ್ತು ಸೇವಾ ಮನೋಭಾವದ ಕುರಿತು ಮಾತನಾಡಿ, ಸ್ವಾಮೀಜಿಯವರ ತತ್ವಗಳು ಇಂದಿನ ಸಮಾಜಕ್ಕೂ ಮಾರ್ಗದರ್ಶಿಯಾಗಿವೆ ಎಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಪೂಜ್ಯ ಬಸವಪ್ರಭು ಸ್ವಾಮೀಜಿಯವರು ಆಶೀರ್ವಚನ ನೀಡಿ, ಮಕ್ಕಳಲ್ಲಿ ಮಾನವೀಯ ಮೌಲ್ಯಗಳು, ಶಿಸ್ತು, ಸೇವಾ ಮನೋಭಾವ ಮತ್ತು ಮಹಾಪುರುಷರ ಆದರ್ಶಗಳನ್ನು ಬೆಳೆಸುವಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದರು. ಜ್ಞಾನ, ಭಕ್ತಿ ಹಾಗೂ ಸೇವೆಯ ಮೂಲಕ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಬೆಳೆಸುವಂತೆ ಆಶೀರ್ವದಿಸಿದರು.

ಕಾರ್ಯಕ್ರಮದಲ್ಲಿ ಬಸವರಾಜ ಹೊನ್ನಾ ಮಾತನಾಡಿದರು. ಜಯಪ್ರಕಾಶ ಸದಾನಂದೆ, ಲಕ್ಷ್ಮಿಬಾಯಿ ಪಾಟೀಲ, ದಿಲೀಪ ಶಿಂದೆ, ಜಗನ್ನಾಥ ಪತಂಗೆ, ಲಕ್ಷ್ಮಣರಾವ ಹಂದಿಕೆರೆ, ನಾಗಶೆಟ್ಟಿ ಪಾಟೀಲ, ಮಹಾದೇವ ಬಾಪೂರೆ, ಕರುಣಾ ಮಾಮ, ರಾಮ ಮಜ್ಜಿಗೆ, ಗಣಪತಿ ಖಾಸ್ತೆ, ಮಹಾದೇವಪ್ಪ ಹಿಜಾರೆ, ನೀಲಕಂಠ ಸ್ವಾಮಿ, ಶಿವಕುಮಾರ ಬಿರಾದಾರ ಉಪಸ್ಥಿತರಿದ್ದರು.
ಬಸವಜ್ಯೋತಿ ಹಂಗರಗೀಕರ್ ಸ್ವಾಗತಿಸಿದರೆ, ಸಂಗಮೇಶ ತೊಗರಖೇಡ ನಿರೂಪಿಸಿದರು, ರೇಣುಕಾ ಮಾಮನೆ ವಂದಿಸಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

👍