ಬಸವನಬಾಗೇವಾಡಿ:
ವಚನಸಾಹಿತ್ಯ ಸಂಶೋಧನೆ ಮತ್ತು ಮುದ್ರಣಕ್ಕಾಗಿ ಸಾಲಕ್ಕೆ ಅಂಜದೇ ಕಾಲಕ್ಕೆ ನಂಜದೇ ಇಡೀ ತಮ್ಮ ಬದುಕನ್ನೇ, ವಚನ ಸಾಹಿತ್ಯ ಸಂರಕ್ಷಣೆಗಾಗಿ ಸವೆಸಿ 250ಕ್ಕೂ ಹೆಚ್ಚು ಶರಣರ ವಚನಗಳನ್ನು ಊರೂರು ಸುತ್ತಿ ಸಂಗ್ರಹಿಸಿ ಪ್ರಕಟಿಸಿ ನಮಗೆ ಕೊಟ್ಟು ಹೋದವರು ಹಳಕಟ್ಟಿಯವರೆಂದು ಇಲ್ಲಿನ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರಭಾಕರ ಖೇಡದವರು ಅಭಿಪ್ರಾಯಪಟ್ಟರು.
ಇಲ್ಲಿನ ತಹಶೀಲ್ದಾರ್ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಹಳಕಟ್ಟಿ ಅವರ 146 ಜಯಂತ್ಯೋತ್ಸವ, ವಚನ ಸಂರಕ್ಷಣಾ ದಿನದ ವಿಶೇಷ ಉಪನ್ಯಾಸಕರಾಗಿ ಮಾತನಾಡುತ್ತಾ, ವಚನ ಸಾಹಿತ್ಯ ಸಂರಕ್ಷಣೆಯೊಂದಿಗೆ ವಿಜಯಪುರ ಜಿಲ್ಲೆಯ ವಿಕಾಸಕ್ಕೆ ಅವರು ಕೊಟ್ಟ ಕೊಡುಗೆ ಅಪಾರ.

ಶಿಕ್ಷಣ ಅದರಲ್ಲೂ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಅವರು ತೋರುತ್ತಿದ್ದ ಕಾಳಜಿ, ಬರಗಾಲ ನಿವಾರಣ ಕೇಂದ್ರ, ಪ್ರತಿಷ್ಠಿತ ಬಿ ಎಲ್ ಡಿ ಈ ಶಿಕ್ಷಣ ಸಂಸ್ಥೆ ಹಾಗೂ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್, ಎಸ್ ಎಸ್ ಹೈಸ್ಕೂಲ್ ಹಾಗೂ ವಿಜಯ ಕಾಲೇಜ್ ಹೀಗೇ ಅನೇಕ ಸಹಕಾರಿ ಸಂಘ ಸಂಸ್ಥೆಗಳ ಉದಯಕ್ಕೆ ಮೂಲ ಕಾರಣರಾದವರು.
ವಕೀಲರಾಗಿ ಶ್ರದ್ಧೆ, ತ್ಯಾಗ, ಶುದ್ಧಹಸ್ತ ಒಂದು ಕಡೆಯಾದರೆ ಹಸಿವು, ಪರಹಿತಕ್ಕಾಗಿ ಸ್ವಂತ ಮನೆ ಮಾರಿದ್ದು, ಕೈಗೆ ಬಂದ ಮಗ ಮರಣಿಸಿದ್ದು ಇನ್ನೊಂದು ಕಡೆ. ಇದಾವುದಕ್ಕೂ ಧೃತಿಗೆಡದೇ 20ನೇ ಶತಮಾನದ ಶರಣರಂತೆ ಬಾಳಿ ತೋರಿಸಿದವರು ಪರಮಪುರುಷ ರಾವ್ ಬಹುದ್ದೂರ್ ಡಾ. ಫ ಗು ಹಳಕಟ್ಟಿಯವರು.

ಹರಕು ಅಂಗಿಯ ಮೇಲೆ ಕರಿಕೋಟು, ಆಸರೆಗೆ ಬಣ್ಣ ಮಾಸಿದ ಸೈಕಲ್, ವಾಸಿಸಲು ಕೊನೆಯವರೆಗೂ ಬಾಡಿಗೆ ಮನೆ ಇದು ಅವರ ಸರಳ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿತ್ತು ಎಂದು ಅಭಿಪ್ರಾಯಪಟ್ಟರು.
ತಾಲೂಕು ದಂಡಾಧಿಕಾರಿಗಳಾದ ವಾಯ್. ಎಸ್. ಸೋಮನಕಟ್ಟಿ ಅವರು ಮಾತನಾಡುತ್ತಾ, ಹಳಕಟ್ಟಿ ಅವರದು ಸರಳ ಜೀವನ ಉನ್ನತ ವಿಚಾರವಾಗಿತ್ತು. ಸರ್ಕಾರ ಅವರ ಜಯಂತಿ ದಿನವನ್ನು ವಚನ ಸಂರಕ್ಷಣಾ ದಿನವನ್ನಾಗಿ ಆಚರಿಸುತ್ತಿರುವುದು ಸ್ತುತ್ಯವಾಗಿದೆ ಎಂದರು.
ಪೂಜಾಸ್ಮರಣೆಯಲ್ಲಿ ಕಾರ್ಯಾಲಯದ ಸಿಬ್ಬಂದಿ ಜೊತೆ ಶರಣರಾದ ಎಸ್ ಕೆ ಸೋಮನಕಟ್ಟಿ, ವಿವೇಕಾನಂದ ಕಲ್ಯಾಣ ಶೆಟ್ಟಿ, ಬಿ ಎಸ್ ಪಟ್ಟಣದ, ಶ್ರೀಶೈಲ ಸಿರಗುಪ್ಪಿ, ಕಾಶಿನಾಥ ಎಸ್ ಅವಟಿ, ಆಯ್ ಜಿ ಬೆಕಿನಾಳ, ಲಕ್ಷ್ಮಣ ಮೇತ್ರಿ, ಶಿವಾನಂದ ತುಬಾಕಿ, ವಿಲಾಸ ಜಾಡರ, ಎನ್ ಎನ್ ಹೊಸಮನಿ ಮತ್ತಿತರರು ಇದ್ದರು. ಸಿದ್ದು ಶಿರಶ್ಯಾಡ ನಿರೂಪಿಸಿದರು, ಎಸ್ ಬಿ ಅಂಕದ ವಂದಿಸಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP
