ಗದಗ:
ಕನ್ನಡ ನಾಡು-ನುಡಿಯನ್ನು ಶ್ರೀಮಂತಗೊಳಿಸುವಲ್ಲಿ ವಚನಗಳ ಪಾತ್ರ ಮಹತ್ವದ್ದಾಗಿದೆ. ಸೌಹಾರ್ದಯುತ ಸುಂದರ ಸಮಾಜ ನಿರ್ಮಾಣಕ್ಕೆ ವಚನಗಳು ಅವಶ್ಯ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳವರು ಹೇಳಿದರು.
ಲಿಂಗಾಯತ ಪ್ರಗತಿಶೀಲ ಸಂಘದ ೨೮೦೪ನೇ ಶಿವಾನುಭವ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ಕಾಲಗರ್ಭದಲ್ಲಿ ಮರೆಯಾಗಲಿದ್ದ ಈ ಅಮೂಲ್ಯ ವಚನಸಾಹಿತ್ಯವನ್ನು ಸಂಗ್ರಹಿಸಿ ಸಂಶೋಧಿಸಿ ಸಂರಕ್ಷಿಸಿದವರು ಶರಣ ಫಕೀರಪ್ಪ ಗುರಪ್ಪ ಹಳಕಟ್ಟಿಯವರು.

ಫ.ಗು. ಹಳಕಟ್ಟಿ ಅವರನ್ನು ವಚನಪಿತಾಮಹ ಎಂದು ಗೌರವಿಸುತ್ತೇವೆ. ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿಯೂ ಫ. ಗು. ಹಳಕಟ್ಟಿಯವರು ಸಮಾಜಕ್ಕಾಗಿ ತಮ್ಮ ಸಂಪೂರ್ಣ ಜೀವನವನ್ನೂ ಮುಡಿಪಾಗಿಟ್ಟಿದ್ದಾರೆ. ಅವರ ಜೀವಿತ ಕಾಲವೇ ಲಿಂಗಾಯತ ಧರ್ಮದ ಸೌಭಾಗ್ಯ.
ವಚನಸಾಹಿತ್ಯ ಎಂಬ ಬೆಲೆಬಾಳುವ ಅನರ್ಘ್ಯ ರತ್ನವನ್ನು ಹಾಗೂ ಶರಣರ ಆದರ್ಶದ ಬದುಕನ್ನು ಜಗತ್ತಿಗೆ ತೋರಿದ ಮಹಾನ್ ಪುರುಷರು. ನಮ್ಮ ನಾಡಿನ ಅನೇಕ ಮಠಮಾನ್ಯಗಳಿಗೆ, ಸಾಹಿತಿಗಳಿಗೆ, ಸಂಶೋಧಕರಿಗೆ ಈ ವಚನ ಸಾಹಿತ್ಯ ವಿಶೇಷ ಜ್ಞಾನ ಭಂಡಾರವಾಗಿದೆ ಎಂದು ಹೇಳಿದರು.
ವಿಜಯಪುರದ ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಡಾ. ಎಂ. ಎಸ್. ಮದಭಾವಿ ಮಾತನಾಡಿ, ಹಳಕಟ್ಟಿ ಅವರ ಜೀವನ ಸುಖದ ಬದುಕು ಆಗಿರಲಿಲ್ಲ. ಅವರು ಸ್ವಸುಖಕ್ಕಿಂತ ಸಮಾಜ ಸುಖವನ್ನು ಬಯಸಿದರು. ವಚನ ಸಾಹಿತ್ಯ ಸಂರಕ್ಷಣೆಗಾಗಿ ತಮ್ಮ ಆಸ್ತಿಯನ್ನೆಲ್ಲವನ್ನು ಮಾರಿಕೊಂಡರು.
ಸಂಸಾರಿಕ ಸುಖವನ್ನು ತ್ಯಜಿಸಿ, ತಮ್ಮ ವೈಯಕ್ತಿಕ ಬದುಕನ್ನು ಮೀರಿ ಇತಿಹಾಸದಲ್ಲಿ ಉಳಿದರು. ಅವರ ಐತಿಹಾಸಿಕ ಈ ಕಾರ್ಯವನ್ನು ಅಂದು ಹಾನಗಲ್ಲ ಕುಮಾರಸ್ವಾಮಿಗಳು, ನಾಗನೂರು ಶಿವಬಸವ ಸ್ವಾಮಿಗಳು, ಭಾಲ್ಕಿಯ ಪೂಜ್ಯರು, ಗದುಗಿನ ತೋಂಟದಾರ್ಯ ಪೂಜ್ಯರು, ಮೈಸೂರು ಮಹಾರಾಜರಾದಿಯಾಗಿ ಅನೇಕ ಮಹನೀಯರು ಅವರ ಕಾರ್ಯಕ್ಕೆ ಬಲವಾಗಿ ನಿಂತಿದ್ದಾರೆ ಎಂದು ಮಾತನಾಡಿದರು.
ಶಿವಾನುಭವದಲ್ಲಿ ಲಿಂಗಾಯುತ ಪ್ರಗತಿಶೀಲ ಸಂಘದ ಮಾಜಿ ಅಧ್ಯಕ್ಷರಾದ ಡಾ. ಜಿ. ಬಿ. ಪಾಟೀಲ ದಂಪತಿಗಳನ್ನು ಸನ್ಮಾನಿಸಲಾಯಿತು.

ಸನ್ಮಾನೋತ್ತರವಾಗಿ ಪಾಟೀಲರು ಮಾತನಾಡುತ್ತ, ಲಿಂಗಾಯತ ಪ್ರಗತಿಶೀಲ ಸಂಘವು ಶ್ರೀಮಠದ ಹಿರಿಯ ಮಗನಿದ್ದಂತೆ. ಸಂಘವು ತನ್ನ ಐವತ್ತು ವರ್ಷಗಳ ಇತಿಹಾಸದಲ್ಲಿ ಬಹುಮುಖ ಕಾರ್ಯನಿರ್ವಹಿಸಿದೆ. ಸರ್ವಜನಾಂಗವನ್ನು ಒಳಗೊಳ್ಳುವ ಸಂಘವು ವಿಶ್ವಮಟ್ಟದಲ್ಲಿ ದಾಖಲಾರ್ಹ ಕಾರ್ಯಮಾಡಿದೆ ಎಂದರು.
ಬಳ್ಳಾರಿಯ ಡಾ. ತಿಪ್ಪೇರುದ್ರ ಸಂಡೂರ ಅವರು ಬರೆದ ‘ಭುವಿಯ ಬೆಳಕು ಬಸವಣ್ಣ’ ಎಂಬ ಗ್ರಂಥವನ್ನು ಪೂಜ್ಯರು ಲೋಕಾರ್ಪಣೆ ಮಾಡಿದರು.

ಉತ್ತರಾಖಂಡದ ಉತ್ತರ ಕಾಶಿಯ ಟೆರ್ರಾಕೋಟ್ ಶಿಖರವನ್ನು ಆರೋಹಣ ಮಾಡಿದ ಗದಗ ಪರಿಸರದ ಸೃಷ್ಟಿ ಉಮೇಶ ಮೇಟಿ, ಅಶ್ವಿನಿ ತಿರ್ಲಾಪೂರ, ಜಯಲಕ್ಷ್ಮಿ ಸಿ. ಹೊಳೆಯಾಚೆ ಅವರನ್ನು ಸನ್ಮಾನಿಸಲಾಯಿತು.
ವಚನ ಸಂಗೀತವನ್ನು ಮೃತ್ಯುಂಜಯ ಹಿರೇಮಠ ಗುರುನಾಥ ಸುತಾರ, ಧರ್ಮಗ್ರಂಥ ಪಠಣ ಸಾತ್ವಿಕ ಹೊಸೂರ, ವಚನ ಚಿಂತನ ಪ್ರಣವಮಹಾಂತ ಬಳಿಗಾರ, ದಾಸೋಹ ಸೇವೆಯನ್ನು ಅಂದಾನಪ್ಪ ಚವಡಿ ಹಾಗೂ ಬಸವರಾಜ ಶಿವಪ್ಪ ಅಂಗಡಿ ಪರಿವಾರ ನೆರವೇರಿಸಿದರು.
ಶಿವಾನುಭವದಲ್ಲಿ ಸಂಘದ ಅಧ್ಯಕ್ಷ ಡಾ. ಉಮೇಶ ಪುರದ, ಶಿವಾನುಭವ ಸಮಿತಿ ಚೇರ್ಮನ್ ರಮೇಶ ಕಲ್ಲನಗೌಡರ, ಉಪಾಧ್ಯಕ್ಷ ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ, ಕಾರ್ಯದರ್ಶಿ ಸಿದ್ಧರಾಮ ಪಟ್ಟೇದ, ಸಹಕಾರ್ಯದರ್ಶಿ ಪ್ರತಿಭಾ ಬಡ್ನಿ, ಕೋಶಾಧ್ಯಕ್ಷ ವೀರಣ್ಣ ಗೋಟಡಕಿ, ಕೆ.ಎಸ್. ಕೋರಿಮಠ, ಸೋಮಶೇಖರ ಪುರಾಣಿಕ, ಆದೇಶ ಅಂಗಡಿ ಹಾಗೂ ಶ್ರೀಮಠದ ಭಕ್ತರಾದ ಈಶಣ್ಣ ಮುನವಳ್ಳಿ, ದಾನಯ್ಯ ಗಣಾಚಾರಿ, ಶೇಖಣ್ಣ ಕವಳಿಕಾಯಿ, ವಿವೇಕಾನಂದಗೌಡ ಪಾಟೀಲ, ರಾಚಪ್ಪ ಮಿಣಜಗಿ, ದಾನಯ್ಯ ಗಣಾಚಾರಿ, ಅಶೋಕ ಬರಗುಂಡಿ, ಪ್ರಕಾಶ ಅಸುಂಡಿ, ಗಂಗಾಧರ ಹಿರೇಮಠ ಮುಂತಾದವರಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP
