ನಿರ್ವಾಣ ಸ್ವಾಮೀಜಿ ಕಾರ್ಯ ಮುಂದುವರೆಸೋಣ: ಶಿವಕುಮಾರ್

ಬಸವ ಮೀಡಿಯಾ
ಬಸವ ಮೀಡಿಯಾ

ಕನಕಪುರ

ಬೆಂಗಳೂರು‌ ದಕ್ಷಿಣ ಜಿಲ್ಲೆ ಕನಕಪುರದ ದೇಗುಲ ಮಠದ ಆವರಣದಲ್ಲಿ ಶುಕ್ರವಾರ ನಡೆದ ಲಿಂಗೈಕ್ಯ ಮುಮ್ಮಡಿ ನಿರ್ವಾಣ ಶ್ರೀಗಳ ಪುಣ್ಯ ಸಂಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿದರು.

ಪರಮಪೂಜ್ಯರಾದ ಡಾ. ಮುಮ್ಮಡಿ ನಿರ್ವಾಣ ಮಹಾಸ್ವಾಮೀಜಿಗಳು ನಮ್ಮ ಬೆಂಗಳೂರು ದಕ್ಷಿಣ ಜಿಲ್ಲೆ ಹಾಗೂ ಸುತ್ತಮುತ್ತಲ ಪ್ರದೇಶಕ್ಕೆ ದೊಡ್ಡ ದೀಪವಾಗಿದ್ದರು ಎಂದು ಸ್ಮರಿಸಿದರು.

ನಮ್ಮ ಶ್ರೀಗಳು ಉತ್ತಮ ಚಿಂತನೆ ಮಾಡುತ್ತಾ ಸರಳ ಜೀವನ ನಡೆಸಿದರು. ಲಿಂಗವೇ ಗುರು, ಲಿಂಗವೇ ಜಂಗಮ, ಲಿಂಗವೇ ಪರಮಾತ್ಮ, ಲಿಂಗವಿಲ್ಲದ ಬದುಕು ದಿಕ್ಕಿಲ್ಲದ ಬದುಕು ಎಂದು ಬಸವಣ್ಣನವರು ಹೇಳಿದ್ದಾರೆ.

ಇದು ಕಣ್ಣೀರು ಹಾಕುವ ದಿನವಲ್ಲ. ಶ್ರೀಗಳ ಕಾರ್ಯವನ್ನು ಉಳಿಸಿಕೊಂಡು ಮುಂದುವರಿಸುವ ದಿನ. ಶ್ರೀಗಳು ಇಲ್ಲಿ ಒಂದು ಸೇತುವೆ ಮಾಡಬೇಕು ಎಂದು ಬಹಳಷ್ಟು ಬಾರಿ ಹೇಳಿದ್ದರು. ಇಂದು ಶ್ರೀಗಳ ಚಿಂತನೆಯಂತೆ ಸೇತುವೆ ಉದ್ಘಾಟನೆ ಮಾಡಿರುವುದು ನನ್ನ ಭಾಗ್ಯ. ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿಗಳ ಹೆಸರನ್ನೇ ಈ ಸೇತುವೆಗೆ ನಾಮಕರಣ ಮಾಡಲಾಗಿದೆ.

ವೀರಶೈವ ಸಮಾಜದ ಜೊತೆ ಬಾಂಧವ್ಯ

ನಮ್ಮ ವೀರಗಂಗಾಧರ ಅಜ್ಜಯ್ಯನವರು ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ. ನಾಡು ಧರ್ಮ ಸಾಮ್ರಾಜ್ಯವಾಗಲಿ. ಭಕ್ತಿಯ ನೆಲೆ ಬೀಡಾಗಲಿ ಎಂದು ಮಾರ್ಗದರ್ಶನ ನೀಡಿದ್ದಾರೆ.

ನಮ್ಮ ತಾಯಿ ಶಿವಾಲ್ದಪ್ಪ ಬೆಟ್ಟದ ಶಿವನಿಗೆ ಹರಕೆ ಕಟ್ಟಿಕೊಂಡ ಹಿನ್ನೆಲೆಯಲ್ಲಿ ನನಗೆ ಶಿವಕುಮಾರ್ ಎಂದು ಹೆಸರಿಟ್ಟರು. ಶ್ರೀ ದೇಗುಲ ಮಠದ ಸ್ವಾಮೀಜಿಗಳ ಬಳಿ ಆಶೀರ್ವಾದ ಪಡೆದಿದ್ದರು.

ನಮ್ಮ ಮನೆಯಲ್ಲಿ ಏನೇ ಕೆಲಸವಾಗಬೇಕಾದರೂ ಈ ಮಠಕ್ಕೆ ಬಂದು ಮಾರ್ಗದರ್ಶನ ಪಡೆಯುತ್ತಿದ್ದರು.

ನಾನು ಹೈದರಾಬಾದ್ ಕರ್ನಾಟಕ ವಿದ್ಯಾಸಂಸ್ಥೆಯಲ್ಲಿ ಪಿಯುಸಿ ಓದಿದೆ, ಅಜ್ಜಯ್ಯ ಅವರು ಸ್ಥಾಪಿಸಿರುವ ರೇಣುಕಾಚಾರ್ಯ ಕಾಲೇಜಿನಲ್ಲಿ ಪದವಿ ಓದಿದೆ. ಹೀಗೆ ನನಗೂ ಈ ಸಮಾಜಕ್ಕೂ ದೊಡ್ಡ ಸಂಬಂಧ, ಬಾಂಧವ್ಯ ಇದೆ. ಇದನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುತ್ತೇನೆ ಎಂದು ತಿಳಿಸಿದರು.

ನಾನು ಅಜ್ಜಯ್ಯನವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದಾಗ ಸಾಕಷ್ಟು ಚರ್ಚೆಯಾಯಿತು. ಅನೇಕ ಗಣ್ಯರು ನನ್ನನ್ನು ವಿವಿಧ ರೀತಿಯಲ್ಲಿ ಕೇಳಿದರು.

ನಾನು ಅವರಿಗೆ ಇದು ನನ್ನ ನಂಬಿಕೆ ಎಂದು ಹೇಳಿದೆ. ನಮ್ಮ ಆರಾಧ್ಯ ದೈವ, ನಂಬಿಕೆ, ಮಾರ್ಗದರ್ಶನ ಕೊಟ್ಟವರನ್ನು, ಕಷ್ಟಕಾಲದಲ್ಲಿ ನಿಂತವರನ್ನು ನಾವು ಸ್ಮರಿಸಬೇಕು. ಈ ವಿಚಾರ ನನಗೆ, ಯಡಿಯೂರಪ್ಪನವರಿಗೆ, ಸೋಮಣ್ಣ ಅವರಿಗೆ ಗೊತ್ತು. ಬೇರೆಯವರಿಗೆ ಇದು ಗೊತ್ತಿಲ್ಲ ಎಂದು ತಿಳಿಸಿದರು.

ನಾನು ಮುಖ್ಯಮಂತ್ರಿಯಾಗಬೇಕು ಎಂದು ಹರಸಿದ್ದರು: ನಾನು ಕಳೆದ 45 ವರ್ಷಗಳಿಂದ ಇಲ್ಲಿಗೆ ಬಂದಾಗೆಲ್ಲಾ ನನಗೆ ಆಶೀರ್ವಾದ ಮಾಡಿ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಸಿದ್ದಾರೆ.

ಅದರಂತೆ ನನ್ನ ಮನೆಯನ್ನು ಕಾಪಾಡಿಕೊಳ್ಳುವಂತೆ ಈ ಮಠವನ್ನು ಕಾಪಾಡಿಕೊಳ್ಳುತ್ತೇನೆ ಎಂದು ಭರವಸೆ ನೀಡುತ್ತೇನೆ ಎಂದು ಶಿವಕುಮಾರ್ ತಿಳಿಸಿದರು.

ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿ, ಲಿಂಗೈಕ್ಯ ನಿರ್ವಾಣ ಶ್ರೀಗಳ ದಾರಿಯಲ್ಲಿ ಕಿರಿಯ ಶ್ರೀಗಳು ಮಠವನ್ನು ಮುನ್ನಡೆಸಲಿ ನಮ್ಮೆಲ್ಲರ ಸಹಕಾರ ಸದಾ ಇರುತ್ತದೆ ಎಂದು ತಿಳಿಸಿದರು.

ಕೇಂದ್ರ ಸಚಿವ ಸೋಮಣ್ಣ ಮಾತನಾಡಿ, ಲಿಂಗೈಕ್ಯ ಶ್ರೀಗಳು 50 ವರ್ಷ ಪೀಠಾಧಿಪತಿಯಾಗಿ ಅನೇಕ ಕಾರ್ಯಕ್ರಮಗಳಿಂದ ತಾಲೂಕಿನ ಶೈಕ್ಷಣಿಕ ಪ್ರಗತಿಗೆ ಕಾರಣವಾಗಿದ್ದಾರೆ ಎಂದು ಹೇಳಿದರು.

ಸಿದ್ದಗಂಗಾ ಮಠದ ಪೂಜ್ಯ ಸಿದ್ದಲಿಂಗ ಸ್ವಾಮೀಜಿ, ಸುತ್ತೂರು ಮಠದ ಪೂಜ್ಯ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
Leave a comment

Leave a Reply

Your email address will not be published. Required fields are marked *