ಸಾಮೂಹಿಕ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮ
ಮೊಳಕಾಲ್ಮೂರು:
“12ನೇ ಶತಮಾನದಲ್ಲಿ ಬಸವಾದಿ ಶಿವಶರಣರು ಸಮಾನತೆಯ ಸಮಾಜ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದರು. ಆ ಹಾದಿಯಲ್ಲಿ ಸಾಗಿದ ಡಾ. ಮಹಾಂತ ಅಪ್ಪಗಳು ನಾಲ್ಕು ದಶಕಗಳ ಕಾಲ ಸಮಾಜದ ಎಲ್ಲಾ ವರ್ಗದ ಜನರಿಗೆ ಇಷ್ಟಲಿಂಗ ದೀಕ್ಷೆ ನೀಡುವ ಮೂಲಕ ಬಸವತತ್ವದ ಬೆಳಕನ್ನು ಪಸರಿಸಿದ್ದಾರೆ” ಎಂದು ಇಳಕಲ್ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಪೂಜ್ಯ ಡಾ. ಗುರುಮಹಾಂತ ಮಹಾಸ್ವಾಮಿಗಳು ಬಣ್ಣಿಸಿದರು.

ತಾಲೂಕಿನ ಸಿದ್ದಯ್ಯನಕೋಟೆ ಶಾಖಾಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಮೂಹಿಕ ಲಿಂಗದೀಕ್ಷಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
“ಇಷ್ಟಲಿಂಗ ಪೂಜೆಯು ಮನಸ್ಸಿನ ಏಕಾಗ್ರತೆಗೆ ಮತ್ತು ವ್ಯಕ್ತಿತ್ವದ ವಿಕಸನಕ್ಕೆ ಸಹಕಾರಿ. ನಿತ್ಯ ಪೂಜೆ, ಧ್ಯಾನದಿಂದ ಉತ್ತಮ ಸಂಸ್ಕಾರ ಲಭಿಸುತ್ತದೆ. ಬಸವಣ್ಣನವರ ವಚನ ಸಾಹಿತ್ಯ, ಕನ್ನಡ ಭಾಷೆ ಮತ್ತು ಇಷ್ಟಲಿಂಗ ನಮ್ಮ ಧರ್ಮದ ಮೂಲ ತತ್ವಗಳು. ಇವುಗಳನ್ನು ಅರಿತು ಬದುಕಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ” ಎಂದು ಶ್ರೀಗಳು ಕಿವಿಮಾತು ಹೇಳಿದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶಿರೂರು ಶ್ರೀ ವಿಜಯ ಮಹಾಂತೇಶ್ವರ ತೀರ್ಥದ ಪೂಜ್ಯ ಡಾ. ಬಸವಲಿಂಗ ಮಹಾಸ್ವಾಮಿಗಳು ಮಾತನಾಡಿ, “ಸಿದ್ದಯ್ಯನಕೋಟೆಯ ಶ್ರೀಗಳು ದೀನ-ದಲಿತ ಮಕ್ಕಳ ಏಳಿಗೆಗಾಗಿ ಶಿಕ್ಷಣ, ಕೃಷಿ ಮತ್ತು ಅನ್ನದಾಸೋಹದ ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಆಸರೆಯಾಗಿರುವ ಅವರು ಈ ಭಾಗದ ‘ನಡೆದಾಡುವ ದೇವರು’ ಆಗಿದ್ದಾರೆ” ಎಂದು ಶ್ಲಾಘಿಸಿದರು.

ಸಿದ್ದಯ್ಯನಕೋಟೆಯ ಶ್ರೀ ಬಸವಲಿಂಗ ಮಹಾಸ್ವಾಮಿಗಳು ಮಾತನಾಡಿ, ತಮ್ಮ ಗುರುಗಳಾದ ಡಾ. ಮಹಾಂತಪ್ಪಗಳ ಮಾರ್ಗದರ್ಶನದಲ್ಲಿ ಸಮಾಜದ ಕೆಡಕುಗಳನ್ನು ಹೋಗಲಾಡಿಸಿ, ಸಂಸ್ಕಾರವಂತ ಶರಣ ಸಮಾಜ ನಿರ್ಮಾಣದ ಕಾಯಕವನ್ನು ಮುಂದುವರೆಸುವುದಾಗಿ ತಿಳಿಸಿದರು.
ಇದೇ ವೇಳೆ ‘ಲಿಂಗೈಕ್ಯ ಶ್ರೀಮತಿ ಭೀಮಕ್ಕ ಸಾಂಸ್ಕೃತಿಕ ಕಲಾ ಸಂಘ’ವನ್ನು ಡಾ. ಗುರುಮಹಾಂತ ಮಹಾಸ್ವಾಮಿಗಳು ಉದ್ಘಾಟಿಸಿದರು. ಸಂಘದ ಗೌರವಾಧ್ಯಕ್ಷ ಎಂ.ಬಿ. ಭೋಗೇಶಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶ್ರೀಮಠದ ಕಾರ್ಯದರ್ಶಿ ಪಿ.ಆರ್. ಕಾಂತರಾಜ, ಕೆ.ಓ. ಶಿವಣ್ಣ, ಎಂ. ನುಂಕೇಶ್, ಗುರು ಶಂಕ್ರಪ್ಪ, ಶಿಕ್ಷಕ ನವೀನ್, ಚೇತನ ಗೌಡ, ಎಂ.ಬಿ. ಬಸವರಾಜ, ಡಿ. ಮಲ್ಲಿಕಾರ್ಜುನ, ಡಾ. ರಂಗಪ್ಪ, ಕೋನಸಾಗರದ ಶರಣೇಶ, ಅಕ್ಕನ ಬಳಗದ ಅಧ್ಯಕ್ಷೆ ಸಂಧ್ಯಾ, ಎಂ.ಬಿ. ಮೋಹನ, ಎಂ.ಬಿ. ಲಕ್ಷ್ಮೀದೇವಿ, ರುದ್ರಮ್ಮ, ಈಶ್ವರಮ್ಮ, ದೀಪ, ಸುನಿತಾ, ಅಕ್ಕಮಹಾದೇವಿ, ಯಶಸ್ವಿನಿ ಸೇರಿದಂತೆ ಅನೇಕ ಭಕ್ತರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
