ಮೈಸೂರು:
ಶರಣರು ತಮ್ಮನ್ನು ಸಂಪೂರ್ಣವಾಗಿ ಸಮಾಜ ಉದ್ಧಾರಕ್ಕೆ ತೊಡಗಿಸಿಕೊಂಡು ವಚನ ಸಾಹಿತ್ಯವನ್ನು ವಿಶ್ವಕ್ಕೆ ಕಾಣಿಕೆಯಾಗಿ ನೀಡಿದರು.
ವಚನ ಸಾಹಿತ್ಯ ವಿದ್ಯಾರ್ಥಿಗಳಲ್ಲಿ ವೈಚಾರಿಕ ಚಿಂತನೆ ಬೆಳೆಸಿ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ನೆರವಾಗುತ್ತದೆ ಎಂದು ಗಂಗಾವತಿಯ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಅರಳಿ ನಾಗರಾಜ ಹೇಳಿದರು.

ಶರಣು ವಿಶ್ವವಚನ ಫೌಂಡೇಶನ್ ವತಿಯಿಂದ ಬೋಗಾದಿಯ ದೀಪನಗರದ ದೀಪ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾರನಹಳ್ಳಿ ಬಸವಣ್ಣ ಮತ್ತು ಗುರುಸಿದ್ಧಮ್ಮ ಅವರ ದತ್ತಿ ಅಂಗವಾಗಿ ಹಮ್ಮಿಕೊಂಡಿದ್ದ, 127ನೇ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಸಾಧನೆಯ ಜ್ಯೋತಿಯನ್ನು ಬೆಳಗಿಸಲು ಜಗತ್ ಪ್ರಸಿದ್ಧ ವಿಜ್ಞಾನಿ ಥಾಮಸ್ ಆಲ್ವಾ ಎಡಿಸನ್ ಅವರ ಜೀವನದ ಅದ್ಭುತ ಪ್ರಸಂಗ ಹೇಳಿದ ಅವರು, ಬುದ್ಧಿಮಾಂದ್ಯ ಎಂದು ಶಾಲೆಯಿಂದ ಹೊರಹಾಕಲ್ಪಟ್ಟ ಎಡಿಸನ್‌ನನ್ನು ಜಗತ್ತಿಗೆ ಬೆಳಕು ನೀಡುವ ಮಹಾನ್ ವಿಜ್ಞಾನಿಯನ್ನಾಗಿ ಮಾಡಿದ್ದು ಅವರ ತಾಯಿ.
ತಾಯಿಯೇ ಮೊದಲ ಗುರುವಾಗಿ ನೀಡಿದ ಪ್ರೇರಣೆಯಿಂದಾಗಿ ಎಡಿಸನ್ ಇಡೀ ಜಗತ್ತನ್ನು ಬೆಳಗಲು ಸಾಧ್ಯವಾಯಿತು. ಶಾಲೆಗಳು ಮತ್ತು ಶಿಕ್ಷಕರ ಮನಪ್ರಜ್ಞೆಯು ಉತ್ತಮ ಪ್ರಜೆಗಳನ್ನು ತಯಾರಿಸುವ ಕಾರ್ಖಾನೆಗಳಿದ್ದಂತೆ. ನಮ್ಮ ಜೀವನ ನಮ್ಮ ಕೈಯಲ್ಲೇ ಇದೆ ಎಂಬ ಧೃಢ ನಂಬಿಕೆಯಿಂದ ವಿದ್ಯಾರ್ಥಿಗಳು ಮುನ್ನಡೆಯಬೇಕು ಎಂದು ನಾಗರಾಜ ನುಡಿದರು.

ನಂತರ ಮಾತನಾಡಿದ ನಿವೃತ್ತ ಪ್ರಾಂಶುಪಾಲರಾದ ಎಚ್. ಬಿ ಓಂಕಾರಯ್ಯ ಅವರು, ಸಮಾಜದಲ್ಲಿ ಸುಧಾರಕರು ಕೆಲವರಿದ್ದರೆ, ದಾರಿ ತಪ್ಪುತ್ತಿರುವವರು ಅನೇಕರಿದ್ದಾರೆ. ಇಂತಹ ಅನೇಕರನ್ನು ಸುಧಾರಣೆ ಮಾಡಲು ಬಸವಾದಿ ಶರಣರು ಈ ಭೂಮಿಯಲ್ಲಿ ಅವತರಿಸಿ, ವಚನಗಳ ಮೂಲಕವೇ ಕ್ರಾಂತಿಕಾರಿ ಸುಧಾರಣೆಯನ್ನು ತಂದರು.
ಸಂಸ್ಕಾರವಿಲ್ಲದ ಶಿಕ್ಷಣವು ಎಂದಿಗೂ ನಿಜವಾದ ಶಿಕ್ಷಣವೆನಿಸಿಕೊಳ್ಳುವುದಿಲ್ಲ. ವಚನ ಜ್ಞಾನವಿಲ್ಲದವರಲ್ಲಿ ಅಂತಹ ಮೌಲ್ಯಯುತ ಸಂಸ್ಕಾರವನ್ನು ಕಾಣುವುದು ಕಷ್ಟ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ವಚನಗಳನ್ನು ಕಲಿತು, ಬದುಕಿನಲ್ಲಿ ಶರಣರ ಸಂಸ್ಕಾರವನ್ನು ರೂಢಿಸಿಕೊಳ್ಳಬೇಕು ಎಂದರು.
ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪಾ ಕುಮಾರಸ್ವಾಮಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಬಸವಣ್ಣನವರ ಸಪ್ತ ಸೂತ್ರಗಳನ್ನು ಮಕ್ಕಳಿಗೆ ಸಾಮೂಹಿಕವಾಗಿ ಹೇಳಿಕೊಟ್ಟು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಕರೆ ನೀಡಿದರು.

ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ ವಚನಗಳನ್ನು ಬದುಕಿಗೆ ದಾರಿ ತೋರುವ ‘ದೀಪಸ್ತಂಭ’ಕ್ಕೆ ಹೋಲಿಸಿ, ಏಕಾಗ್ರತೆಯನ್ನು ರೂಡಿಸಿಕೊಳ್ಳಲು ಶರಣರ ವಚನಗಳನ್ನು ಅಭ್ಯಸಿಸಲು ತಿಳಿಸಿದರು.
ಶಾಲೆಯ 30 ವಿದ್ಯಾರ್ಥಿಗಳು 30 ವಚನಗಳನ್ನು ಹೇಳಿದರು. ನಂತರ ಅವರಿಗೆ ‘ವಚನ ದೀವಿಗೆ’ ಪ್ರಮಾಣಪತ್ರ ಹಾಗೂ ‘ವಚನ ಶಾಲೆ’ ಪುಸ್ತಕವನ್ನು ವಿತರಿಸಲಾಯಿತು.
ಶಾಲೆಯ ಮುಖ್ಯ ಶಿಕ್ಷಕ ಬಾಬು ಅವರು ಸ್ವಾಗತಿಸಿದರೆ, ಶಿಕ್ಷಕಿ ಅಶ್ವಿನಿ ನಿರೂಪಿಸಿದರು. ಶಿಕ್ಷಕಿ ಪ್ರತಿಭಾ ವಂದನಾರ್ಪಣೆ ಮಾಡಿದರು. ಪೌಂಡೇಷನ್ ಕೇಂದ್ರೀಯ ಸಂಚಾಲಕ ವಿ. ಲಿಂಗಣ್ಣ, ಶಿಕ್ಷಕರುಗಳಾದ ಜಿ. ಸರ್ವೇಶ, ಮಹದೇವಯ್ಯ, ಉಮಾಮಹೇಶ್ವರಿ, ಚಂದ್ರಿಕಾ, ನೇತ್ರಾವತಿ, ಪ್ರತಿಭಾ, ರಾಧಿಕಾ, ಚೈತ್ರ, ಸೌಮ್ಯ ಉಪಸ್ಥಿತರಿದ್ದರು.
