ಬೀದರಿನಲ್ಲಿ ಅಲ್ಲಮಪ್ರಭು ದೇವರು ವಿಚಾರ ಸಂಕಿರಣ

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ:

ಬಸವಾದಿ ಶರಣರ ತತ್ವಗಳ ಪಾಲನೆಯಿಂದ ಜೀವನ ಸಾರ್ಥಕವಾಗುತ್ತದೆ ಎಂದು ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಹೇಳಿದರು.

ವಚನಾಮೃತ ಕನ್ನಡ ಸಂಘದಿಂದ ಇಲ್ಲಿಯ ಪೂಜ್ಯ ಚೆನ್ನಬಸವ ಪಟ್ಟದ್ದೇವರು ರಂಗಮಂದಿರಲ್ಲಿ ಶುಕ್ರವಾರ ಆಯೋಜಿಸಿದ್ದ ಮಹಾನುಭಾವಿ ಅಲ್ಲಮಪ್ರಭು ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಶರಣರ ವಿಚಾರಗಳಲ್ಲಿ ಅಗಾಧ ಶಕ್ತಿ ಇದೆ. ಅವುಗಳನ್ನು ಅನುಸರಿಸಿದರೆ ಜೀವನದಲ್ಲಿ ಬಯಸಿದ್ದೆಲ್ಲ ಪಡೆಯಬಹುದು ಎಂದು ತಿಳಿಸಿದರು.

ಬಸವಣ್ಣನವರು ಅಲ್ಲಮಪ್ರಭುದೇವರ ಬಗ್ಗೆ ಅಪಾರ ಗೌರವ ಹೊಂದಿದ್ದರು. ಅಂತೆಯೇ ಅವರಿಗೆ ಅನುಭವ ಮಂಟಪದ ಅಧ್ಯಕ್ಷ ಸ್ಥಾನ ನೀಡಿದ್ದರು ಎಂದು ಹೇಳಿದರು.

ಆಶಯ ನುಡಿ ಆಡಿದ ಹುಬ್ಬಳ್ಳಿಯ ಹಿರಿಯ ಸಾಹಿತಿ ಡಾ. ಶ್ಯಾಮಸುಂದರ ಬಿದರಕುಂದಿ ಅವರು, ಅಲ್ಲಮಪ್ರಭುದೇವರ ವ್ಯಕ್ತಿತ್ವ ಯಾರ ಕೈಗೂ ಸಿಗದಂತಹದ್ದು, ಅವರು ವಿಶ್ವಮಟ್ಟದ ಪ್ರತಿಭೆಯಾಗಿದ್ದರು ಎಂದು ಬಣ್ಣಿಸಿದರು.

ಅಲ್ಲಮರು ಅರಿವು ಹಾಗೂ ಬೆಳಕನ್ನು ಹೋಲಿಕೆ ಮಾಡಿದ್ದರು. ಅರಿವು ಮತ್ತು ಬೆಳಕು ಒಂದೇ ಎಂದು ಸಾರಿದ್ದರು. ವಿಶ್ವ ಜೀವನದ ಜ್ಞಾನ ಅವರಿಗೆ ಇತ್ತು. ಜೀವನಕ್ಕೆ ಅವರದ್ದೇ ಸಂವಿಧಾನ ಇದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವಚನಾಮೃತ ಕನ್ನಡ ಸಂಘದ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಮಾತನಾಡಿ, ಜಗತ್ತಿನಲ್ಲೇ ಶ್ರೇಷ್ಠ ವಿಚಾರಗಳು ಜನ್ಮತಳೆದ ಕೇಂದ್ರ ಸ್ಥಾನ ಬೀದರ. ಇಂಥ ವಿಚಾರಗಳು ಬೇರೆಲ್ಲೂ ಕಾಣಸಿಗುವುದಿಲ್ಲ ಎಂದು ಹೇಳಿದರು.

ಸಾಂಸ್ಕೃತಿಕ ನಾಯಕ ಬಸವಣ್ಣ ಹಾಗೂ ಅಲ್ಲಮಪ್ರಭುದೇವರ ವಿಚಾರಗಳು ಕಲ್ಯಾಣ ನಾಡಿನಿಂದ ಜಗತ್ತಿನಾದ್ಯಂತ ಪಸರಿಸಬೇಕಾಗಿದೆ ಎಂದು ತಿಳಿಸಿದರು.

ವಚನಾಮೃತ ಕನ್ನಡ ಸಂಘ ಬಸವಾದಿ ಶರಣರ ವಚನಗಳನ್ನು ಜನಮನಕ್ಕೆ ಮುಟ್ಟಿಸುವುದಕ್ಕಾಯೇ ಹುಟ್ಟಿಕೊಂಡಿದೆ. ಸಂಘವು ಶರಣರ ವಿಚಾರಧಾರೆಗಳ ಪ್ರಚಾರ, ಪ್ರಸಾರದಲ್ಲಿ ತೊಡಗಿಸಿಕೊಂಡಿದೆ. ಶರಣರು ಹಾಗೂ ವಚನ ಸಾಹಿತ್ಯದ ಕುರಿತು ಬರುವ ದಿನಗಳಲ್ಲಿ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದು ಹೇಳಿದರು.

ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು, ಹಾರಕೂಡದ ಚನ್ನವೀರ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು.

ದತ್ತಗಿರಿ ಮಹಾರಾಜ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಲಿಕಾರ್ಜುನ ಹತ್ತಿ, ಕರ್ನಾಟಕ ಕೌನ್ಸಿಲ್ ಆಫ್ ಪ್ರೊಫೆಷನಲ್ ಸಿವಿಲ್ ಎಂಜಿನಿಯರ್ ಸದಸ್ಯ ಹಾವಶೆಟ್ಟಿ ಪಾಟೀಲ, ಉದ್ಯಮಿ ಜೈರಾಜ ಖಂಡ್ರೆ, ಸ್ವಾಗತ ಸಮಿತಿಯ ಅಧ್ಯಕ್ಷ ಪ್ರೊ. ಉಮಾಕಾಂತ ಮೀಸೆ ಮತ್ತಿತರರು ಇದ್ದರು.

ಮೀರಾ ಖೇಣಿ ನಿರೂಪಿಸಿದರು. ಪರಮೇಶ್ವ‌ರ ಬಿರಾದಾರ ಸ್ವಾಗತಿಸಿದರು, ಬಸವರಾಜ ಬಿರಾದಾರ ವಂದಿಸಿದರು.

ಮೊದಲನೇ ವಿಚಾರ ಸಂಕಿರಣ ಹರಿಹರ ಹಾಗೂ ಚಾಮರಸರ ಕಾವ್ಯಗಳಲ್ಲಿ ಅಲ್ಲಮ ಕುರಿತು ಕಲಬುರಗಿಯ ಶ್ರೀಶೈಲ ನಾಗರಾಳ, ಶೂನ್ಯ ಸಂಪಾದನೆಗಳಲ್ಲಿ ಅಲ್ಲಮ ಕುರಿತು ಹೊಸಪೇಟೆಯ ಮೃತ್ಯುಂಜಯ ರುಮಾಲೆ ಹಾಗೂ ಅಲ್ಲಮಪ್ರಭು ದೇವರ ಆಧ್ಯಾತ್ಮಿಕ ಚಿಂತನೆ ಕುರಿತು ಶಿವಲಿಂಗ ಹೇಡೆ ಉಪನ್ಯಾಸ ನೀಡಿದರು.

ಎರಡನೇ ವಿಚಾರ ಸಂಕಿರಣದಲ್ಲಿ ಡಿ.ಆರ್. ನಾಗರಾಜ ಅವರ ‘ಕಣ್ಣೋಟದಲ್ಲಿ ಅಲ್ಲಮ ಪ್ರತಿಭೆ’ ಕುರಿತು ವಿಕ್ರಮ ವಿಸಾಜಿ, ‘ಅಲ್ಲಮರ ವಚನಗಳಲ್ಲಿ ಅನುಭಾವ’ ಕುರಿತು ಕಾವ್ಯಶ್ರೀ ಮಹಾಗಾಂವಕರ್ ಹಾಗೂ ‘ಕನ್ನಡ ನಾಟಕಗಳಲ್ಲಿ ಅಲ್ಲಮ’ ಕುರಿತು ಬೆಳಗಾವಿಯ ಡಿ.ಎಸ್. ಚೌಗುಲೆ ಉಪನ್ಯಾಸ ನೀಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
Leave a comment

Leave a Reply

Your email address will not be published. Required fields are marked *