ಜಗತ್ತಿನ ಅಶಾಂತಿಗೆ ವಚನ ಸಾಹಿತ್ಯದಲ್ಲಿ ಪರಿಹಾರ: ಸಿದ್ಧರಾಮ ಸ್ವಾಮೀಜಿ

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ:

ಕಾಯಕ, ಸಮಾನತೆ, ದಾಸೋಹ ಪರಂಪರೆ ಇವು ಬಸವಾದಿ ಶಿವಶರಣರು ಜಗತ್ತಿಗೆ ನೀಡಿದ ಅಮೂಲ್ಯ ಕೊಡುಗೆಗಳು. ಜಗತ್ತು ಅಶಾಂತಿಯಿಂದ ಬಳಲುತ್ತಿದೆ. ವಚನ ಸಾಹಿತ್ಯದಲ್ಲಿ ಜಗತ್ತಿನ ಪ್ರತಿಯೊಂದು ಸಮಸ್ಯೆಗೂ ಪರಿಹಾರ ಇದೆ. ವಚನ ಸಾಹಿತ್ಯದಿಂದ ವಿಶ್ವಶಾಂತಿ ಸಾಧ್ಯವಿದೆ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ ೨೮೦೫ ನೆಯ ಶಿವಾನುಭವದ ಸಾನಿಧ್ಯವನ್ನು ವಹಿಸಿ ಮಾತನಾಡಿದ ಶ್ರೀಗಳು, ಬಸವಾದಿ ಶಿವಶರಣರ ವಚನಗಳಲ್ಲಿ ಅತ್ಯಂತ ಮಹತ್ವದ ಸಂದೇಶಗಳಿವೆ.

ಈ ವಚನಗಳು ಜಾತಿ, ಮತ, ಪಂಥ, ಭೇದ, ಮೌಢ್ಯತೆಗಳನ್ನು ಹೋಗಲಾಡಿಸಿ ಮಾನವಕುಲ ಒಂದೇ ಎಂಬ ಭಾವವನ್ನು ಮೂಡಿಸುತ್ತವೆ. ಇಲ್ಲಿ ಸಕಲ ಜೀವಾತ್ಮರಿಗೂ ಲೇಸಾಗುತ್ತದೆ. ಶಾಂತಿ, ನೆಮ್ಮದಿ, ಸಹಬಾಳ್ವೆಯಿಂದ ಬದುಕಬೇಕಾದರೆ ಸಹಕಾರ ಮುಖ್ಯ.

ಸಹಕಾರ ಇಲ್ಲದಿದ್ದರೆ ಬೆಳೆಯುವುದು ಕಷ್ಟ. ಸಹಕಾರ ಕ್ಷೇತ್ರದಲ್ಲಿ ಸಾಧನೆಗೈದ ಅನೇಕ ಮಹನೀಯರು ಇದ್ದಾರೆ. ವಿಶ್ವದ ಚರಾಚರ ವಸ್ತುಗಳಲ್ಲಿಯೂ ಪರಸ್ಪರ ಸಹಕಾರವಿದೆ. ಸಹಕಾರ ತಪ್ಪಿದಾಗ ಮಾತ್ರ ಬದುಕು ದುಸ್ಥರವಾಗುತ್ತದೆ ಎಂದು ಮಾತನಾಡಿದರು.

ಉಪನ್ಯಾಸಕರಾಗಿ ಕೆಸಿಸಿ ಬ್ಯಾಂಕಿನ ನಿವೃತ್ತ ಅಧಿಕಾರಿಗಳಾದ ಮುಂಡರಗಿಯ ಎಸ್.ವಿ. ಪಾಟೀಲ ಮಾತನಾಡಿ,  ಸಹಕಾರ ಚಳುವಳಿ ವಿಶ್ವಮಟ್ಟದಲ್ಲಿ ಬೆಳೆದು ಬಂದ ಬಗೆ ಮತ್ತು ಭಾರತದಲ್ಲಿ ಅದು ವ್ಯಾಪಿಸಿದ ರೀತಿ, ಕರ್ನಾಟಕದಲ್ಲಿ ಅದರ ಇಂದಿನ ಸ್ಥಿತಿ ಕುರಿತು ಸವಿಸ್ತಾರವಾಗಿ ಮಾತನಾಡಿದರು.

ಗೌರವ ಸನ್ಮಾನ ಸ್ವೀಕರಿಸಿದ ಶಿವಸಂಗಮ ಗ್ರೂಪ್ ಸಂಸ್ಥಾಪಕ ಅಧ್ಯಕ್ಷರಾದ ಜಿ.ಎಂ. ಪಲ್ಲೇದ ಅವರು, ಸಹಕಾರ ಎಂಬುದು ನಮ್ಮ ದೇಹದ ಅಂಗಗಳಲ್ಲಿಯೇ ಇದೆ. ದೇಹದ ಅಂಗಗಳಲ್ಲಿಯೇ ಸಹಕಾರ ತಪ್ಪಿದರೆ, ಯಾವ ಕಾರ್ಯಗಳು ಸರಿಯಾಗಿ ಜರಗುವುದಿಲ್ಲವೆಂದು ಹೇಳಿ ಸಹಕಾರ ತತ್ವದ ಮಹತ್ವ ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ ಮಾಜಿ ಅಧ್ಯಕ್ಷ ಕೆ. ಎಸ್. ಚೆಟ್ಟಿ, ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಾಧನೆಗೈದ ಗದುಗಿನ ಸ್ವಾತಿ ಕರಮುಡಿ, ವಿರೂಪಾಕ್ಷಪ್ಪ ನವಲಗುಂದ, ಪೂಜಾ ಗುಗ್ಗರಿ, ರೋಹನ್ ಜೋಗಿನ ಅವರನ್ನು ಸನ್ಮಾನಿಸಲಾಯಿತು.

ವಚನ ಸಂಗೀತ ಸಾಯಿಪ್ರಸಾದ ಬಡಿಗೇರ ಹಾಗೂ ಗುರುನಾಥ ಸುತಾರ, ಧರ್ಮಗ್ರಂಥ ಪಠಣ ಖುಷಿ ಕಟ್ಟೆಕಾರ, ವಚನ ಚಿಂತನ ಕೋಮಲ ಮುಗಳಿ, ದಾಸೋಹ ಸೇವೆಯನ್ನು ಡಾ. ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಮತ್ತು ಪರಿವಾರ ಹಾಗೂ ಕೊಟ್ರೇಶ ದಾನಪ್ಪ ಮೆಣಸಿನಕಾಯಿ ಮತ್ತು ಪರಿವಾರದವರು ವಹಿಸಿಕೊಂಡಿದ್ದರು.

ಶಿವಾನುಭವದಲ್ಲಿ ಸಂಘದ ಅಧ್ಯಕ್ಷ ಡಾ. ಉಮೇಶ ಪುರದ, ಶಿವಾನುಭವ ಸಮಿತಿ ಚೇರ್ಮನ್ ರಮೇಶ ಕಲ್ಲನಗೌಡರ, ಉಪಾಧ್ಯಕ್ಷ ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ, ಕಾರ್ಯದರ್ಶಿ ಸಿದ್ಧರಾಮ ಪಟ್ಟೇದ, ಸಹಕಾರ್ಯದರ್ಶಿ ಪ್ರತಿಭಾ ಬಡ್ನಿ, ಕೋಶಾಧ್ಯಕ್ಷ ವೀರಣ್ಣ ಗೋಟಡಕಿ, ಕೆ.ಎಸ್. ಕೋರಿಮಠ, ಸೋಮಶೇಖರ ಪುರಾಣಿಕ, ಆದೇಶ ಅಂಗಡಿ ಸೇರಿದಂತೆ ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
Leave a comment

Leave a Reply

Your email address will not be published. Required fields are marked *