ವಚನ ಗಾಯನ ಸ್ಪರ್ಧೆಗಳಿಂದ ಕನ್ನಡ ಸಂಸ್ಕೃತಿ, ಮೌಲ್ಯಗಳ ಪ್ರಸಾರ: ಸತ್ಯಂಪೇಟೆ

ಕಲಬುರಗಿ:

ಸಂಗೀತ ಕೇವಲ ಮನರಂಜನೆಯ ಮಾಧ್ಯಮವಲ್ಲ. ಇದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಒಂದು ದಿವ್ಯ ಔಷಧವಾಗಿದೆ ಎಂದು ಪತ್ರಕರ್ತ-ಲೇಖಕ ಡಾ. ಶಿವರಂಜನ ಸತ್ಯಂಪೇಟೆ ಅಭಿಪ್ರಾಯಪಟ್ಟರು.

ಪಂಡಿತ ಡಿ.ವಿ. ಪಲುಸ್ಕರ ಸಂಗೀತ ಸಾಹಿತ್ಯ ಕಲಾ ಸಂಘ ಹಾಗೂ ದೇವಿಂದ್ರಪ್ಪ ಜಿ.ಸಿ. ಸಂಗೀತ ಸಾಹಿತ್ಯ ಕಲಾ ಸಂಸ್ಥೆ ವತಿಯಿಂದ ನಗರದ ಮರಾಠ ಮಹಾ ಮಂಡಳದಲ್ಲಿ ಭಾನುವಾರ ಆಯೋಜಿಸಿದ್ದ ವಚನ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಚನ ಗಾಯನ ಸ್ಪರ್ಧೆ ಕನ್ನಡ ಸಾಹಿತ್ಯ ಸಂಸ್ಕೃತಿ ಮತ್ತು ಅಧ್ಯಾತ್ಮದ ಮೌಲ್ಯಗಳನ್ನು ಬಿಂಬಿಸುವ ಉತ್ತಮ ವೇದಿಕೆಯಾಗಿದೆ ಎಂದರು.

ಸಂಗೀತವು ಒತ್ತಡವನ್ನು ಕಡಿಮೆಗೊಳಿಸಿ ಮನುಷ್ಯನ ಕಾರ್ಯಕ್ಷಮತೆ ಹೆಚ್ಚಿಸುತ್ತದೆ. ವಚನಗಳ ಮಧುರವಾದ ರಾಗ ಮತ್ತು ಅರ್ಥಪೂರ್ಣ ಸಾಲುಗಳು ಮನಸ್ಸಿಗೆ ಮುದ ನೀಡುತ್ತವೆ ಮಾತ್ರವಲ್ಲ ಏಕಾಗ್ರತೆ ಹೆಚ್ಚಿಸಬಲ್ಲವು. ಮಾನವೀಯ ಮೌಲ್ಯ ಹೊಂದಿರುವ ವಚನ, ದಾಸ ಹಾಗೂ ತತ್ವಪದ ಸಾಹಿತ್ಯ ಜನಮನಕ್ಕೆ ಮುಟ್ಟಿಸುವ ಕೆಲಸ ಆಗಬೇಕಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ನಿವೃತ್ತ ಪ್ರಾಧ್ಯಾಪಕ ಪ್ರೊ. ಎಸ್.ಎಲ್. ಪಾಟೀಲ ಮಾತನಾಡಿದರು. ಹಂಪಿ ಕನ್ನಡ ವಿವಿ ಸಂಗೀತ ವಿಭಾಗದ ಅತಿಥಿ ಉಪನ್ಯಾಸಕ ಡಾ. ತಿಮ್ಮಣ್ಣ ಭಜಂತ್ರಿ, ದೇವಿಂದ್ರಪ್ಪ ಜಿ.ಸಿ. ಸಂಗೀತ ಸಾಹಿತ್ಯ ಕಲಾ ಸಂಸ್ಥೆ ಅಧ್ಯಕ್ಷ ಸಿದ್ಧಾರ್ಥ ಚಿಮ್ಮಾಇದಲಾಯಿ, ಪಂಡಿತ ಡಿ.ವಿ. ಪಲುಸ್ಕರ ಸಂಗೀತ ಸಾಹಿತ್ಯ ಕಲಾ ಸಂಘದ ಅಧ್ಯಕ್ಷ ಡಾ.‌ ನಾಗರಾಜ ಪುರಂಕರ್ ವೇದಿಕೆಯಲ್ಲಿದ್ದರು.

ಶ್ರೀಧರ ಹೊಸಮನಿ ನಿರೂಪಿಸಿದರು.

ಸಿದ್ಧರಾಮ ಹೊನ್ಕಲ್, ಸಂತೋಷಕುಮಾರ ಕಾಮಶೆಟ್ಟಿ, ದೇವರಾಜ ತೀರ್ಥಪ್ಪ, ಡಾ.ಕೆ.ಎಸ್. ಬಂಧು, ಪಾಲಕರು ಹಾಗೂ ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
Leave a comment

Leave a Reply

Your email address will not be published. Required fields are marked *