ದಾವಣಗೆರೆ
ಜಿಲ್ಲಾ ಪೋಕ್ಸೋ ವಿಶೇಷ ನ್ಯಾಯಾಲಯ ವಚನಾನಂದ ಸ್ವಾಮೀಜಿಗೆ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ.
ಅರ್ಜಿದಾರರು ಹಾಗೂ ಸಂತ್ರಸ್ತ ಬಾಲಕನ ಪರ ವಕೀಲರ ವಾದ–ಪ್ರತಿವಾದ ಆಲಿಸಿದ್ದ ನ್ಯಾಯಾಧೀಶ ಶ್ರೀರಾಮ ನಾರಾಯಣ ಹೆಗಡೆ ಕಾಯ್ದಿರಿಸಿದ್ದ ಆದೇಶವನ್ನು ಸೋಮವಾರ ಪ್ರಕಟಿಸಿದರು.
‘ನ್ಯಾಯಾಲಯಕ್ಕೆ ಸ್ವಾಮೀಜಿ ಖುದ್ದು ಹಾಜರಾಗಿ ತ್ವರಿತ ವಿಚಾರಣೆಗೆ ಸಹಕರಿಸಬೇಕು. ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು ಹಾಗೂ ಸೂಕ್ತ ಭದ್ರತೆ ಒದಗಿಸಬೇಕು ಎಂಬ ಷರತ್ತುಗಳನ್ನು ವಿಧಿಸಿದೆ. ಷರತ್ತು ಪ್ರಕ್ರಿಯೆ ಪೂರ್ಣಗೊಳಿಸಲು ಜುಲೈ 14ರಂದು ಸ್ವಾಮೀಜಿ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ’ ಎಂದು ವಕೀಲ ಎಸ್.ವಿ. ಪಾಟೀಲ್ ತಿಳಿಸಿದ್ದಾರೆ.
ಮಠದಲ್ಲಿದ್ದ ಬಾಲಕನ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಸಂತ್ರಸ್ತ ಬಾಲಕನ ತಾಯಿ ವಚನಾನಂದ ಶ್ರೀ ವಿರುದ್ಧ ದೂರು ನೀಡಿದ್ದರು.
ಗದಗ ಜಿಲ್ಲೆ ಲಕ್ಷ್ಮೇಶ್ವರ ಠಾಣೆಯಲ್ಲಿ ಝೀರೋ ಎಫ್ಐಆರ್ ದಾಖಲಾಗಿತ್ತು. ಬಳಿಕ ಹರಿಹರ ಗ್ರಾಮಾಂತರ ಠಾಣೆಗೆ ಪ್ರಕರಣ ವರ್ಗಾವಣೆ ಆಗಿತ್ತು. ಪ್ರಕರಣ ದಾಖಲಾಗುವ ಮುನ್ನವೇ ವಚನಾನಂದ ಶ್ರೀ ನಿರೀಕ್ಷಣಾ ಜಾಮೀನು ಪಡೆದಿದ್ದರು.
ಬಳಿಕ ವಚನಾನಂದ ಶ್ರೀ ಜಾಮೀನು ರದ್ದು ಕೋರಿ ಬಾಲಕನ ತಾಯಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೀಗಾಗಿ ವಚನಾನಂದ ಶ್ರೀ ನಿರೀಕ್ಷಣಾ ಜಾಮೀನು ರದ್ದಾಗಿತ್ತು. ರೆಗ್ಯುಲರ್ ಬೇಲ್ ಪಡೆಯಲು ಮೂರು ವಾರಗಳ ಕಾಲಾವಕಾಶ ನೀಡಿತ್ತು.
ವಾದ-ವಿವಾದ ಆಲಿಸಿ ಇಂದು ಆದೇಶ ಕಾಯ್ದಿರಿಸಿದ್ದ ನ್ಯಾಯಾಲಯ, ಇದೀಗ ರೆಗ್ಯುಲರ್ ಬೇಲ್ ಮಂಜೂರು ಮಾಡಿದೆ. ಇತ್ತ ಸಂತ್ರಸ್ತ ಬಾಲಕನ ತಾಯಿ ಪರ ವಕೀಲರು ಹೈಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ.
ಹಿನ್ನಲೆ
ವಚನಾನಂದ ಸ್ವಾಮೀಜಿ ವಿರುದ್ಧ ಮೂವರು ಮಕ್ಕಳು ದೌರ್ಜನ್ಯದ ಆರೋಪ ಮಾಡಿದ್ದರು. ಮಠದಲ್ಲಿ ಸ್ವಾಮೀಜಿ ತಮ್ಮ ಮೇಲೆ ಹಲ್ಲೆ ನಡೆಸುತ್ತಾರೆ, ದುರ್ವ್ಯವಹಾರ ಮಾಡುತ್ತಾರೆ ಮತ್ತು ಅಸ್ವಸ್ಥರಾಗಿದ್ದಾಗ ಔಷಧ ನೀಡುವುದಿಲ್ಲ ಎಂದು ಆರೋಪಿಸಿದ್ದರು.
ಏಪ್ರಿಲ್ 17ರಂದು ಮಕ್ಕಳ ಮೇಲಿನ ದೌರ್ಜನ್ಯ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಮಂಜುಳಾ ಮಹೇಶ್ ನೇತೃತ್ವದ ತಂಡ ಮಠಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.
