‘ಬಸವಣ್ಣನವರನ್ನು ಅಪ್ಪ ಎಂದು ಒಪ್ಪಿ ನಡೆದವರು ಅಥಣಿ ಶಿವಯೋಗಿಗಳು’

ಬಸವ ಮೀಡಿಯಾ
ಬಸವ ಮೀಡಿಯಾ

ಚಿತ್ರದುರ್ಗ:

ಶಿವಯೋಗ ಸಾಧನೆ ಅಷ್ಟು ಸುಲಭ ಸಾಧ್ಯವಲ್ಲ. ನಾಡಿನಲ್ಲಿ ನಿಜ ಶಿವಯೋಗದ ನೆಲೆಗೇರಿ ಶಿವಯೋಗಿಗಳಾದವರು ಬೆರಳೆಣಿಕೆಯಷ್ಟು ಮಾತ್ರ. ಅಂಗ-ಲಿಂಗಗಳ ವಿಕಸನ ಮತ್ತು ಅನುಸಂಧಾನ ಸಾಮಾನ್ಯರಿಗೆ ಸಾಧ್ಯವಿಲ್ಲ. ಎಷ್ಟೋ ಶರಣರು, ವಿರಕ್ತರಿಗೆ ಈ ಸಿದ್ಧಿ ತಲುಪಿಲ್ಲ. ಅಂತಹ ಶಿವಯೋಗ ಸಿದ್ಧಿಯನ್ನು ೨೦ ವರ್ಷಗಳ ಕಾಲ ಅನುಷ್ಠಾನ ಮಾಡಿ ಸಾಧಿಸಿದವರು ಅಥಣಿ ಮುರುಘೇಂದ್ರ ಶಿವಯೋಗಿಗಳು ಎಂದು ಹಾನಗಲ್ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಡಾ. ಪುಷ್ಪಾ ಶೆಲವಡಿಮಠ ಅವರು ಹೇಳಿದರು.

ಅವರು ಇಲ್ಲಿನ ಶ್ರೀ ಜಗದ್ಗುರು ಶ್ರೀ ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಲೀಲಾವಿಶ್ರಾಂತಿ ಸನ್ನಿಧಾನದಲ್ಲಿ ಬುಧವಾರ ಏರ್ಪಡಿಸಿದ್ದ ಅಥಣಿ ಮುರುಘೇಂದ್ರ ಶಿವಯೋಗಿಗಳವರ ೧೯೧ನೇ ಜಯಂತ್ಯುತ್ಸವದಲ್ಲಿ ಶಿವಯೋಗಿಗಳವರ ಬಗ್ಗೆ ವಿಷಯಾವಲೋಕನ ಮಾಡುತ್ತ, ಅಜ್ಞಾನದಲ್ಲಿರುವ ಸಾಧಕ ಲಿಂಗ ಹಿಡಿದು ಅರಿವು ಪಡೆಯುವ ಮಹಾಜ್ಞಾನಿಯಾಗುವ ಹಂತವೇ ಶಿವಯೋಗ ಎಂದು ಅವರು ತಿಳಿಸಿದರು.

 ಶಿವಯೋಗವೆಂದರೆ ಅರಿವಿನ ಸಾಧನೆ, ಅದ್ವೈತ ಮಾರ್ಗ, ಲಿಂಗಾಂಗ ಸಾಮರಸ್ಯ. ಶಿವಯೋಗ ಕೇವಲ ಅಂತರಂಗ ವಿಕಸನಕ್ಕೆ ಮಾತ್ರ ಸೀಮಿತವಲ್ಲ. ಅದು ಬಹಿರಂಗ ವಿಕಾಸಕ್ಕೂ ಕಾರಣವಾಗುವುದರಿಂದ ಶಿವಯೋಗ ಸಾಧನೆಯಿಂದ ಶರಣರು ಸಿದ್ಧಪುರುಷರಾಗುತ್ತಾರೆ.

ಇಷ್ಟಲಿಂಗದ ಮೂಲಕ ಮಾಡುವ ದೃಷ್ಟಿಯೋಗ ಮಾನವನ ಅಂತರಂಗದ ಆಳದಲ್ಲಿ ಹುದುಗಿರುವ ಚೈತನ್ಯ, ಅರಿವು ಸಂಪೂರ್ಣ ವಿಕಾಸವಾಗಿ ಸಾಧಕ ಚೈತನ್ಯ ಸ್ವರೂಪಿಯಾಗಿ ದೈವತ್ವದ ಹಾದಿ ತುಳಿಯುತ್ತಾನೆ. ಮಾನವ ದೇವನಾಗುವ ಶಿವಯೋಗ ಸಾಧನೆ ಪ್ರಯೋಗಾತ್ಮಕವಾಗಿ ೧೨ನೇ ಶತಮಾನದ ಕಲ್ಯಾಣದಲ್ಲಿ ನಡೆಯುತ್ತಿತ್ತು. ಇದನ್ನು ಜಗತ್ತಿಗೆ ಬೋಧಿಸಿದವರು ಬಸವಣ್ಣನವರು. ಅಂತಹ ಶಿವಯೋಗವನ್ನು ಸಾಧಿಸಿದ ಅಪ್ಪಟ ಶಿವಯೋಗಿಗಳು. ಶಿವಯೋಗಿಗಳವರಿಗೆ ವಾಕ್‌ಸಿದ್ಧಿ, ದೃಷ್ಟಿಸಿದ್ಧಿ, ಹಸ್ತಸಿದ್ಧಿ ಸಾಧ್ಯವಾಗಿತ್ತು.

ಅಂತರಧ್ಯಾನ ದೃಷ್ಟಿ ಎಷ್ಟಿತ್ತು ಎಂದರೆ ಬಿತ್ತಿದ್ದನ್ನು ಬೆಳೆದುಕೋ ಎನ್ನುತ್ತಿದ್ದರು. ಈ ಸಾಧನೆಯಿಂದ ಫ.ಗು. ಹಳಕಟ್ಟಿ, ಹರ್ಡೇಕರ್ ಮಂಜಪ್ಪ, ಬಿ.ಡಿ. ಜತ್ತಿ, ಬಾಲಗಂಗಾಧರ ತಿಲಕ, ಶಿರಸಂಗಿ ಲಿಂಗರಾಜ, ಧಾರವಾಡದ ಮೃತ್ಯುಂಜಯಪ್ಪಗಳು ಉಪಕೃತರಾಗಿದ್ದಾರೆ.

ಅಥಣಿಯ ಶಿವಯೋಗಿಗಳು ಎಂತಹ ಅದ್ಭುತ ಶಿವಯೋಗಿಗಳೆಂದರೆ ಭಾರತದ ಋಷಿಮುನಿಗಳ ಅನಂತ ಯೋಗ, ಅಲ್ಲಮನ ಅನಿಮಿಷ ಯೋಗ, ಅರವಿಂದರ ಪೂರ್ಣಯೋಗ, ರಮಣರ ಭಾವಯೋಗ, ಚಿನ್ಮಯಾನಂದರ ಧ್ಯಾನಯೋಗ, ನಾಥಪಂಥೀಯರ ಸಿದ್ಧಿಯೋಗ, ಸಿದ್ಧರ, ಸಂತರ, ಶಾಂಭವಿ ಯೋಗ, ತೋಂಟದ ಸಿದ್ಧಲಿಂಗರ ಮಹಾಲಿಂಗಯೋಗ ಸೇರಿದಂತೆ ಇತರ ಸಂತ ಮಹಾಂತರ, ಯತಿವರ್ಯರ ಸಮಾಜಯೋಗ ಹೀಗೆ ಎಲ್ಲ ಯೋಗಗಳ ಸಂಗಮವೇ ಆಗಿದ್ದರು.

 ಶಿವಯೋಗಿಗಳವರ ಸಾಧನೆಯನ್ನು ಹೇಳುತ್ತ ಹೋದರೆ ಕೊನೆ ಮೊದಲಿಲ್ಲ ಎಂದಾಗುತ್ತದೆ ಎನ್ನುತ್ತ ಅವರ ವಿಶಿಷ್ಟ ವ್ಯಕ್ತಿತ್ವವನ್ನು ಅವರು ಸಮಾಜದೊಂದಿಗೆ ಬೆರೆತು ಅವರ ಹೇಳಿಕೆಗಳು ಆ ಮಾತುಗಳೆಲ್ಲ ಸತ್ಯಸ್ಯ ಸತ್ಯವಾಗಿವೆ. ಅವರು ಧರಿಸುತ್ತಿದ್ದ ಕಪನಿ ತೊಟ್ಟು ತೊಟ್ಟು ಸವೆದು ಹೋಗಿದ್ದರೂ ಅದನ್ನೇ ಮತ್ತೆ ಸ್ವಚ್ಛ ಮಾಡಿ ಹಾಕಿಕೊಳ್ಳುತ್ತಿದ್ದರು. ಭಕ್ತರು ಹೊಸ ಬಟ್ಟೆ ತಂದುಕೊಟ್ಟರೆ ಅದನ್ನು ಹಾಕಿಕೊಳ್ಳದೆ ಸ್ಮಶಾನಕ್ಕೆ ಹೋಗಿ ಅಲ್ಲಿ ಸಮಾಧಿಗಳ ಮೇಲೆ ಬಿದ್ದ ವಸ್ತ್ರ ತಂದು ಸ್ವಚ್ಛಗೊಳಿಸಿ ಅವುಗಳನ್ನೇ ಮತ್ತೆ ಬಳಸುತ್ತಿದ್ದರು. ಅವರು ಎಂತಹ ಸ್ಥಿತಿಗೆ ಹೋಗಿದ್ದರು ಎಂಬುದಕ್ಕೆ ವಿಶ್ಲೇಷಣೆ ಮಾಡಲಿಕ್ಕೆ ಪದಗಳೇ ಬರುತ್ತಿಲ್ಲ ಎಂದು ಬಣ್ಣಿಸಿದರು.

ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಮಾತನಾಡಿ, ಶಿವಯೋಗಿಗಳವರನ್ನು ಅವರ ಬದುಕನ್ನು ಓದಿಕೊಂಡು ಅರ್ಥ ಮಾಡಿಕೊಂಡರೆ ಏಕತೆ ಬಿಟ್ಟು ಒಂದು ಧರ್ಮದ ಸಮಾವೇಶ ಮಾಡುವವರು ಅದರ ಗೋಜಿಗೆ ಹೋಗುತ್ತಿರಲಿಲ್ಲವೇನೋ. ಕಾರಣ ಬಸವಣ್ಣ ಪ್ರಜಾಪ್ರಭುತ್ವವಾದಿ, ಸಮತಾವಾದಿ, ಜಾತ್ಯತೀತ ನಿಲುವಿನ ನಾಯಕ. ಹಾಗಾಗಿ ಅವರನ್ನು ಯಾವುದೇ ಒಂದು ಧರ್ಮ ಜಾತಿಗೆ ಸೀಮಿತಗೊಳಿಸಲು ಸಾಧ್ಯವಿಲ್ಲ. ಅಂತಹ ಪುಣ್ಯಪುರುಷರನ್ನು ತನ್ನ ಅಪ್ಪ ಎಂದು ಒಪ್ಪಿ ನಡೆದವರು ಅಥಣಿ ಶಿವಯೋಗಿಗಳು. ಎಲ್ಲಿಗೋದರೂ ವಚನಗಳ ಗಂಟು ಇದ್ದೇ ಇರುತ್ತಿತ್ತು. ಅವರ ಪರಮ ಆದ್ಯತೆ ಸೇವೆ. ಸೇವೆ ಅದರೊಂದಿಗೆ ಶಿವಯೋಗ ಇವೆರಡೂ ಅವರ ಜೀವನದ ಪ್ರಮುಖ ಗುರಿಗಳಾಗಿದ್ದವು.

ಸ್ವಾಮಿಗಳೊಬ್ಬರಿಗೆ ಕುಷ್ಟರೋಗ ಬಂದಿರುತ್ತದೆ. ಅದನ್ನು ಆರೈಕೆ ಮಾಡಿ ಗುಣಪಡಿಸಿದ ಸತ್ಕೀರ್ತಿ ಶಿವಯೋಗಿಗಳವರಿಗೆ ಸಲ್ಲುತ್ತದೆ. ಅಂದರೆ ಸೇವೆಯನ್ನು ಶಿವಯೋಗಿಗಳ ಬದುಕನ್ನು ನೋಡಿ ಕಲಿಯಬೇಕಿದೆ. ಅದಕ್ಕಾಗಿ ಎಲ್ಲರೂ ಸೇವೆ ಮಾಡುವ ಔದಾರ್ಯವನ್ನು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಕಲಿಸಬೇಕಿದೆ. ಶಿವಯೋಗಿಗಳದು ಮೌನ ಅನುಷ್ಠಾನ, ಶಿವಯೋಗ ಮಾಡುವುದಕ್ಕಾಗಿಯೇ ಅವರೊಂದು ಕಿರಿದಾದ ಕಟ್ಟಡವೊಂದನ್ನು ನಿರ್ಮಿಸಿಕೊಂಡಿದ್ದರು. ಅದನ್ನು ನೀವು ಅಥಣಿಗೆ ಹೋದಾಗ ಗುಂಡಾ ಅಂತ ಇದೆ. ಅದನ್ನು ನೋಡಲೇಬೇಕಾದ ಪರಮಪವಿತ್ರ ಸ್ಥಳ. ಅವರ ಲೀಲೆ ಒಂದೆರಡಲ್ಲ. ಅಥಣಿ ಗಚ್ಚಿನಮಠ ಮುರುಘಾಮಠದ ತವರುಮನೆ. ಕಾರಣ ಇಲ್ಲಿನ ಜಯದೇವ, ಜಯವಿಭವ, ಮಲ್ಲಿಕಾರ್ಜುನ ಶ್ರೀಗಳವರು ಶಿವಯೋಗಿಗಳವರ ಆಶೀರ್ವಾದ ಪಡೆದವರೇ ಆಗಿದ್ದರು.

ಅಂತಹ ಪುಣ್ಯಪುರುಷರ ವ್ಯಕ್ತಿತ್ವವನ್ನು ಅಧ್ಯಾಪಕಿ ಪುಷ್ಪಾ ಶೆಲವಡಿಮಠ ಅವರು ಸೊಗಸಾಗಿ ಎಲ್ಲರೂ ಮಂತ್ರಮುಗ್ಧರಾಗುವಂತೆ ಕಣ್ಣಿಗೆ ಕಟ್ಟಿದಂತೆ ಚಿತ್ರಿಸಿದ್ದಾರೆಂದರು.

ಹಾಗೆಯೇ ಇಂತಹುದೇ ಬಸವತತ್ವದ ಕಾಯಕ ಮಾಡಿ ಕಳೆದ ಒಂದೂವರೆ ಶತಮಾನದ ಹಿಂದೆ ಆಗಿಹೋದ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ದೇವನೂರು ಗುರುಮಲ್ಲೇಶ್ವರ ಜಯಂತಿ ಬರುವ ಸೋಮವಾರ ಜುಲೈ ೨೦ರಂದು ನಡೆಯಲಿದೆ. ಅವರದು ತ್ರಿವಿಧ ದಾಸೋಹ ಪರಂಪರೆಯ ಮಠ. ಅಂದು ಹೊತ್ತಿಸಿದ ದಾಸೋಹದ ಒಲೆ ಇಂದಿಗೂ ನಂದದೆ ಪ್ರತಿನಿತ್ಯ ದಾಸೋಹ ನಡೆಯುತ್ತಿದೆ ಎಂದು ನುಡಿದರು.

ವೇದಿಕೆಯಲ್ಲಿ ಶಿರಸಂಗಿ ಮಹಾಲಿಂಗೇಶ್ವರ ಮಠದ ಬಸವಮಹಾಂತ ಸ್ವಾಮೀಜಿ, ತಿಪ್ಪೇರುದ್ರ ಸ್ವಾಮೀಜಿ, ಡಾ. ಬಸವಚೇತನ ಸ್ವಾಮೀಜಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳಾದ ಎಸ್. ಷಣ್ಮುಖಪ್ಪ, ಕುಬೇರಪ್ಪ, ಎಸ್. ವೀರೇಶ, ಬಸವರಾಜ ಕಟ್ಟಿ, ನಾಗರಾಜ ಸಂಗಮ್, ಗೀತಾ ರುದ್ರೇಶ, ಮಹಾಂತಮ್ಮ ಜಯಪ್ಪ, ಕಮ್ಮಾರ ಹನುಮಂತಪ್ಪ, ಜಯಶೀಲ, ರಾಜಶೇಖರಮೂರ್ತಿ, ಇಟಗಿ ವಿಜಯಕುಮಾರ, ಕವಿ ಗಂಗಾಧರಪ್ಪ, ಚಂದ್ರಣ್ಣ, ಸಿದ್ದಾಪುರ ಮಲ್ಲಿಕಾರ್ಜುನಪ್ಪ, ಪ್ರಾಚಾರ್ಯ ಎಸ್.ವಿ. ರವಿಶಂಕರ, ಡಾ. ಪಿ.ಬಿ. ಭರತ್ ಸೇರಿದಂತೆ ಎಸ್.ಜೆ.ಎಂ. ವಿದ್ಯಾಪೀಠದ ಶಾಲಾಕಾಲೇಜುಗಳ ಕೆಲ ಸಿಬ್ಬಂದಿ, ನಿವೃತ್ತ ನೌಕರರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಎಸ್.ಜೆ.ಎಂ. ಪಾಲಿಟೆಕ್ನಿಕ್ ಕಾಲೇಜಿನ ನಿರ್ವಹಣೆಯಲ್ಲಿ ನಡೆದ ಸಮಾರಂಭಕ್ಕೆ ಜಮುರಾ ಕಲಾವಿದ ಉಮೇಶ ಪತ್ತಾರ, ಶಿವಯೋಗಿಗಳವರ ಗೀತೆಯೊಂದನ್ನು ಹಾಡಿದರು. ಬೋಧಕ ಕೆ. ಸುರೇಶ ಸ್ವಾಗತಿಸಿದರು. ಉಪನ್ಯಾಸಕಿ ಲತಾ ಕಾರ್ಯಕ್ರಮ ನಿರ್ವಹಿಸಿ ಶರಣು ಸಮರ್ಪಣೆ ಮಾಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
Leave a comment

Leave a Reply

Your email address will not be published. Required fields are marked *