ಹುಬ್ಬಳ್ಳಿ:
ಕರ್ನಾಟಕ ವಿಶ್ವವಿದ್ಯಾಲಯದ ಬಸವೇಶ್ವರ ಪೀಠ, ಆಕಾಶವಾಣಿ ಧಾರವಾಡ ಹಾಗೂ ಮೂರುಸಾವಿರ ಮಠಗಳ ಸಹಯೋಗದೊಂದಿಗೆ ರವಿವಾರ ಮೂಜಗಂ ಸಭಾಭವನದಲ್ಲಿ ವಚನಾಮೃತ 250ರ ಸಂಭ್ರಮ ಕಾರ್ಯಕ್ರಮವನ್ನು ಆಚರಿಸಲಾಯಿತು.
ಚಿತ್ರದುರ್ಗದ ಮುರುಗರಾಜೇಂದ್ರ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ.ಕೆ.ಬಿ. ಗುಡಸಿ ಅವರು ದೀಪವನ್ನು ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅವರು ಮಾತನಾಡುತ್ತಾ -12ನೇ ಶತಮಾನದಲ್ಲಿ ಬಸವಣ್ಣವರು ಪ್ರತಿಪಾದಿಸಿದ ಚಿಂತನೆಗಳು ಎಲ್ಲ ಜಾತಿ, ಪ್ರದೇಶ, ಮತ್ತು ಕಾಲಕ್ಕೂ ಅನ್ವಯಿಸುಕೊಳ್ಳಬಹುದಾದ ಸರ್ವಕಾಲಿಕ ಸತ್ಯವಾಗಿವೆ.
ವಚನಾಮೃತ ಕಾರ್ಯಕ್ರಮದ ಮೂಲಕ ಸಮಾಜದ ಎಲ್ಲ ಜನರಿಗೂ ಸುಲಭವಾಗಿ ಮನೆ ಮನೆಗೂ ತಲುಪಿಸುವಲ್ಲಿ ಬಸವ ಪೀಠ ಮತ್ತು ಆಕಾಶವಾಣಿಯು ಪ್ರಾಮಾಣಿಕವಾಗಿ ಶ್ರಮಿಸುತ್ತಿರುವುದರ ಕುರಿತು ಹರ್ಷ ವ್ಯಕ್ತಪಡಿಸಿದರು.
ಅಧಿಕಾರ ಎಂದರೆ ಪ್ರಭುತ್ವವಲ್ಲ. ಅದು ಸರ್ವರನ್ನೂ ಸಮಾನತೆ ಹಾದಿಯಲ್ಲಿ ಕರೆತರುವ ಗುರುತರವಾದ ಜವಾಬ್ದಾರಿಯಾಗಿದೆ ಎನ್ನುವುದನ್ನು ಬಸವಣ್ಣನವರು ನಮಗೆ ಕಲಿಸಿಕೊಟ್ಟಿದ್ದಾರೆ. ಇಂದಿನ ಆಧುನಿಕ (NEP) ಶಿಕ್ಷಣದಲ್ಲೂ ಬಸವಣ್ಣನವರ ತತ್ವ ಸಿದ್ಧಾಂತಗಳ ಅಳವಡಿಸಿಕೊಂಡಿರುವುದನ್ನು ಸ್ಮರಿಸಿಕೊಂಡರು.
ಮತ್ತೋರ್ವ ಅತಿಥಿಗಳಾದ ಹಿರಿಯ ಸಾಹಿತಿಗಳಾದ ಪ್ರೊ. ವೀರಣ್ಣ ರಾಜೂರು ಅವರು ಮಾತನಾಡುತ್ತಾ, ವಚನಗಳು ಅನುಭವದ ನುಡಿಗಳಾಗಿರುವುದರಿಂದ ಅವುಗಳಲ್ಲಿ ಮನುಷ್ಯನ ಬದುಕಿನ ಎಲ್ಲಾ ಬಗೆಯ ಸಮಸ್ಯೆಗಳಿಗೂ ಪರಿಹಾರ ಅಡಗಿದೆ.
ದಾಸೋಹ ಚಿಂತನೆಯು ಶರಣ ಧರ್ಮದ ಪ್ರಧಾನ ಮಾರ್ಗವಾಗಿದೆ. ಜ್ಞಾನ ಸಂಪತ್ತು ಸಮಾಜದಿಂದ ಸಮಾಜಕ್ಕೆ ಬಳಕೆಯಾದಾಗ ಮಾತ್ರ ಪರಿಪೂರ್ಣ ಬದುಕು ಸಾಧ್ಯವಾಗುತ್ತದೆ ಎಂಬುದನ್ನು ಶಿವಶರಣರು ನಮಗೆ ಕಲಿಸಿಕೊಟ್ಟಿದ್ದಾರೆ.
ಇಂದು 250 ರ ವಚನಾಮೃತ ಕಾರ್ಯಕ್ರಮ ಆಚರಿಸುತ್ತಿರುವುದು ಸಂಭ್ರಮದ ಗಳಿಗೆಯಾಗಿದೆ. ಈ ಸಂಭ್ರಮಕ್ಕೆ ಕಾರಣರಾದ ಎಲ್ಲಾ ದಾಸೋಹಿಗಳನ್ನು ಸ್ಮರಿಸಿಕೊಂಡರು. ಈ ವಚನಾಮೃತ 250ರ ಚಿಂತನೆಗಳು ಪುಸ್ತಕ ರೂಪದಲ್ಲಿ, ಸಂಸ್ಮರಣೆ ಮತ್ತು ಧ್ವನಿಮುದ್ರಿಕೆ ರೂಪದಲ್ಲಿ ಸಂಗ್ರವಾಗಬೇಕೆಂದು ಸಲಹೆ ನೀಡಿದರು.
ಮತೋರ್ವ ಅತಿಥಿಗಳಾದ ಕರ್ನಾಟಕ ರಾಜ್ಯ ಹಿಂದುಳಿದ ಆಯೋಗದ ಸದಸ್ಯರಾದ ಡಾ. ಸಿ.ಎಂ. ಕುಂದಗೋಳ ಅವರು ಮಾತನಾಡುತ್ತಾ, ವಚನಾಮೃತ ಕಾರ್ಯಕ್ರಮವು ಸಾಹಿತ್ಯ, ಸಂಗೀತ, ಅನುಭವ ಇವೆಲ್ಲವನ್ನೂ ಹೂರಣದ ರೂಪದಲ್ಲಿ ಉಣಬಡಿಸುವ ಆಕಾಶವಾಣಿಯ ಜನಪ್ರಿಯ ಕಾರ್ಯಕ್ರಮವಾಗಿದೆ.
ಇಂದಿನ ಯುವಜನತೆ ಆಧುನಿಕ ತಂತ್ರಜ್ಞಾನಗಳನ್ನು ಬಳಸುತ್ತಿದ್ದಾರೆ. ಅವುಗಳ ಮೂಲಕವೇ ಅವರಿಗೆ ಶಿವಶರಣರ ಚಿಂತನೆಗಳು ಸುಲಭವಾಗಿ ಕಲಿಯುವಂತೆ ಮಾಡುವ ಮಾಡಿರುವ ವಿನೂತನ ಕಾರ್ಯಕ್ರಮವಾಗಿದೆ ಎಂದರು.
ಕುಲಸಚಿವರಾದ ಪ್ರೊ. ರಾಮಾಂಜಯನೇಯಲು ಅವರು ಮಾತನಾಡುತ್ತಾ, ಕರ್ನಾಟಕ ವಿಶ್ವವಿದ್ಯಾಲಯವು ಬಸವೇಶ್ವರ ಪೀಠದ ವಚನಾಮೃತ ಕಾರ್ಯಕ್ರಮದ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಜ್ಞಾನವನ್ನು ತಲುಪಿಸುವಲ್ಲಿ ಯಶಸ್ವಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಇಂತಹ ಕಾರ್ಯಕ್ರಮಗಳು ಗಡಿಗಳಾಚೆಗೂ ನಡೆದುಕೊಂಡು ಹೋಗಲಿ ಎಂದು ಸಲಹೆ ನೀಡಿದರು.
ಅತಿಥಿಗಳಾಗಿ ಧಾರವಾಡ ಆಕಾಶವಾಣಿ ಮುಖ್ಯಸ್ಥರಾದ ಮಂಜುಳಾ ಪುರಾಣಿಕ, ಆಕಾಶವಾಣಿ ವಿಶ್ರಾಂತ ಕಾರ್ಯಕ್ರಮ ಮುಖ್ಯಸ್ಥರಾದ ಶರಣಬಸವ ಚೋಳಿನ, ಕರ್ನಾಟಕ ಸಿಂಡಿಕೇಟ್ ಸದಸ್ಯರಾದ ಶ್ಯಾಮ ಮಲ್ಲನಗೌಡ, ಮಹೇಶ ಹುಲ್ಲಣ್ಣವರ, ದಾಸೋಹಿಗಳಾದ ವಿಜಯಕುಮಾರ ಕಮ್ಮಾರ ವಚನಾಮೃತ ಕಾರ್ಯಕ್ರಮದ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಎ.ಎಂ.ಖಾನ್ ಅವರು ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡುತ್ತಾ, ಶ್ರೀ ಬಸವೇಶ್ವರ ಪೀಠವು ತುಂಬಾ ಅರ್ಥಪೂರ್ಣವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದೆ. ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದು ನನಗೆ ತುಂಬಾ ಸಂತೋಷವನ್ನು ನೀಡಿದೆ ಎಂದರು.
ಶ್ರೀ ಬಸವೇಶ್ವರ ಪೀಠದ ಸಂಯೋಜಕರಾದ ಪ್ರೊ. ನಿಜಲಿಂಗಪ್ಪ ಮಟ್ಟಿಹಾಳ ಅವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಕನ್ನಡ ನೆಲದಲ್ಲಿ ವಚನ ಸಾಹಿತ್ಯವು ಬೆಳೆದು ಬಂದ ಬಗೆಯನ್ನು ತಿಳಿಸುತ್ತಾ ಅದರ ಮಹತ್ವ ಮತ್ತು ವಿಸ್ತಾರವನ್ನು ಸ್ಮರಿಸಿಕೊಂಡರು.
ಮೂರುಸಾವಿರ ಮಠದ ಪೂಜ್ಯ ಡಾ. ಗುರುಸಿದ್ಧ ರಾಜಯೋಗೇಂದ್ರ ಮಹಾಸ್ವಾಮಿಗಳು ಕಾರ್ಯಕ್ರಮದ ಸನ್ನಿಧಾನ ವಹಿಸಿಕೊಂಡು ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಬಸವರಾಜ ಲಿಂಗಶೆಟ್ಟರ, ಜಿ.ಬಿ.ಹಳ್ಯಾಳ, ಡಾ.ಸಿಸಿಲಿಯಾ ಡಿಕ್ರೋಜ್, ಶೈಲಜಾ ರಾಜಕುಮಾರ, ಬಸವ ಪೀಠದ ಸಲಹಾ ಸಮಿತಿ ಸದಸ್ಯರಾದ ಶಂಕರ ಕೋಳಿವಾಡ, ಶಂಕರ ಕುಂಬಿ, ಸವಿತಾ ಅಮರಶೆಟ್ಟಿ, ಮೂರುಸಾವಿರ ಮಠದ ಆಡಳಿತಾಧಿಕಾರಿಗಳಾದ ಎ.ಬಿ.ಪಾಟೀಲ, ಬಿ.ಎಂ.ಸಾಲಿಮಠ, ಕರವೀರಶೆಟ್ಟರ, ಕೆ.ಎಂ.ಅಂಗಡಿ, ನಡಕಟ್ಟಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಡಾ.ಜ್ಯೋತಿ ಲಕ್ಷ್ಮಿ ಮತ್ತು ಡಾ.ಶಿವಲೀಲಾ ವೈಜನಾಥ ಪ್ರಾರ್ಥಿಸಿದರು. ಡಾ.ಈರಣ್ಣ ಇಂಜಗನೇರಿ ಹಾಗೂ ಡಾ. ಸುಪ್ರಿಯಾ ಮಲಶೆಟ್ಟಿ ನಿರೂಪಿಸಿದರು. ಶ್ರೀ ಬಸವೇಶ್ವರ ಪೀಠದ ಸಂಯೋಜಕರಾದ ಪ್ರೊ ನಿಜಲಿಂಗಪ್ಪ ಮಟ್ಟಿಹಾಳ ವಂದಿಸಿದರು.
ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಧಾರವಾಡದ ಬಸವ ಅಭಿಮಾನಿಗಳು, ತಾಯಂದಿರು, ಮೂರುಸಾವಿರ ಮಠದ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು, ಪ್ರಾಧ್ಯಾಪಕ ವೃಂದ, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
