ಹಡಪದ ಅಪ್ಪಣ್ಣನವರ ಜಯಂತ್ಯುತ್ಸವ
ಹೊಸಪೇಟೆ:
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿಜಯನಗರ ಜಿಲ್ಲೆ ಹಾಗೂ ನಗರಸಭೆ ಹೊಸಪೇಟೆ ಇವರ ಸಂಯುಕ್ತಾಶ್ರಯದಲ್ಲಿ ಲಿಂಗಾಯತ ಸಮಾಜ ಬಾಂಧವರಿಂದ ಶಿವಶರಣ ಹಡಪದ ಅಪ್ಪಣ್ಣನವರ ಜಯಂತ್ಯುತ್ಸವ ಬುಧವಾರ ಹೊಸಪೇಟೆಯ ಅನಂತಶಯನಗುಡಿ ರಾಯಣ್ಣ ಕಾಲೋನಿಯಲ್ಲಿ ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಬಾಲಕೃಷ್ಣ ಅವರು, 12ನೇ ಶತಮಾನದಲ್ಲಿ ಬಸವಾದಿ ಶರಣರು ಕ್ರಾಂತಿಯನ್ನು ಮಾಡಿದರು. ಈ ಕ್ರಾಂತಿ ರಕ್ತಕ್ರಾಂತಿ ಆಗಿರಲಿಲ್ಲ, ಬದಲಾಗಿ ಸಾಮಾಜಿಕ ವೈಚಾರಿಕ ಕ್ರಾಂತಿಯಾಗಿತ್ತು.
ಅಂದು ಸಮಾಜದಲ್ಲಿದ್ದ ಅಸಮಾನತೆ, ಧಾರ್ಮಿಕ ಅಂಧಕಾರ, ಮೌಡ್ಯತೆಯ ವಿರುದ್ಧವಾಗಿ ನಡೆದ ಕ್ರಾಂತಿ ಅದಾಗಿತ್ತು. ಶರಣರ ಆ ವಿಚಾರಗಳು ಪ್ರಸ್ತುತ ಸಮಾಜಕ್ಕೆ ಅವಶ್ಯಕತೆ ಇದೆ. ಆ ತತ್ವ ವಿಚಾರಗಳನ್ನು ಪ್ರತಿಯೊಬ್ಬ ವ್ಯಕ್ತಿಯೂ ಅರಿವಿನ ಮೂಲಕ ವೈಯಕ್ತಿಕ ಜೀವನದಲ್ಲಿ ಅಳವಡಿಸಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಟಿ. ಎಚ್. ಬಸವರಾಜ ಅವರು ಉಪನ್ಯಾಸ ನೀಡಿದರು. ಅವರು ಮಾತನಾಡುತ್ತಾ, ಅಂದು ಬಸವಾದಿ ಶರಣರು ವಚನ ಚಳುವಳಿಯ ಸಂದರ್ಭದಲ್ಲಿ ದಯವೇ ಧರ್ಮದ ಮೂಲ ಎನ್ನುವ ತತ್ವವನ್ನು ಪ್ರಬಲವಾಗಿ ಪ್ರತಿಪಾದಿಸಿದರು. ಆದರೆ ಇಂದಿನ ಸಮಾಜ ಭಯವೇ ಧರ್ಮದ ಮೂಲ ಎನ್ನುವ ತತ್ವವನ್ನು ಮೈಗೂಡಿಸಿಕೊಂಡಿದೆ.
ಅಂದು ಬಸವಾದಿ ಶರಣರು ಯಾವ ತತ್ವ, ಸಿದ್ಧಾಂತಗಳ ವಿರುದ್ಧವಾಗಿ ಹೋರಾಡಿದರೊ ಆ ತತ್ವಗಳನ್ನು ಇಂದು ಲಿಂಗಾಯತ ಸಮಾಜ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿ, ಇದು ಸಮಾಜದ ಅಪಾಯಕಾರಿ ಬೆಳವಣಿಗೆ ಎಂದರು.
ಪ್ರತಿಯೊಬ್ಬ ಲಿಂಗಾಯತರಿಗೆ ಅರಿವೇ ಗುರು, ಆದ್ದರಿಂದ ಯಾವುದೇ ಗುಡಿ ಗುಂಡಾರಗಳಿಗೆ ಹೋಗದೆ ತನ್ನನ್ನ ತಾನು ಅರಿತು ಜೀವಿಸಿ ಈ ಧಾರ್ಮಿಕ ಮೌಡ್ಯತೆಯಿಂದ ಹೊರಬರಬೇಕು, ಹಾಗೂ ಬಸವದಿ ಶರಣರ ಜಯಂತಿಗಳ ಆಚರಣೆಯ ಸಂದರ್ಭದಲ್ಲಿ ಆ ಸಮಾಜದ ಜನರಿಗೆ ಮಾತ್ರ ಸೀಮಿತ ಮಾಡದೆ ಲಿಂಗಾಯತ ಒಳಪಂಗಡಗಳ ಎಲ್ಲ ಸಮಾಜವನ್ನು ಒಗ್ಗೂಡಿಸಿಕೊಂಡು ಜಯಂತಿ ಆಚರಣೆ ಮಾಡಿದಾಗ ಈ ಶರಣರ ಜಯಂತಿಗಳು ಅರ್ಥಪೂರ್ಣವಾಗುತ್ತವೆ.
ಈ ದಿವಸ ಲಿಂಗಾಯತ ಸಮಾಜದ ಎಲ್ಲ ಒಳಪಂಗಡಗಳು ಈ ಜಯಂತಿಯಲ್ಲಿ ಭಾಗವಹಿಸಿರುವುದು ತುಂಬಾ ಸಂತೋಷದ ವಿಚಾರ. ಲಿಂಗಾಯತ ಸಮಾಜದ ಎಲ್ಲ ಒಳಪಂಗಡಗಳನ್ನು ಒಂದುಗೂಡಿಸಿಕೊಂಡು ಸಮಾನತೆ ತರಲು ಪ್ರಯತ್ನಿಸೋಣ ಎಂದು ತಿಳಿಸಿದರು.

ಜಯಂತಿ ಪ್ರಯುಕ್ತ ವಚನ ಕಂಠಪಾಠ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು, ಹಾಗೂ ಲಿಂಗಾಯತ ಹಡಪದ ಸಮಾಜದ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ಬಹುಮಾನ ವಿತರಿಸಲಾಯಿತು. ಸಮಾಜದ ನಿವೃತ್ತ ನೌಕರರಿಗೆ ಸಹ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಸಾನಿಧ್ಯವನ್ನು ವೆಂಕಟಾಪುರದ ಬಸವರಾಜಪ್ಪ ಶರಣರು ವಹಿಸಿಕೊಂಡು ಆಶೀರ್ವಚನ ನೀಡಿದರು. ಅವರು ಹಡಪದ ಅಪ್ಪಣ್ಣನ ಜೀವನ ಚರಿತ್ರೆಯನ್ನು ತಿಳಿಸುವುದರ ಜೊತೆಗೆ ಪ್ರತಿಯೊಬ್ಬ ಲಿಂಗಾಯತರು ಇಷ್ಟಲಿಂಗವನ್ನು ಕಡ್ಡಾಯವಾಗಿ ಧರಿಸಬೇಕು, ಹಾಗೂ ಇಷ್ಟಲಿಂಗದಿಂದ ಆಗುವ ಪ್ರಯೋಜನಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷರಾದ ಎಸ್. ಬಸವರಾಜ ಮಾವಿನಹಳ್ಳಿ, ಹಡಪದ ಸಮಾಜದ ಜಿಲ್ಲಾಧ್ಯಕ್ಷರಾದ ಮಲ್ಲಪ್ಪ, ಕಾರ್ಯದರ್ಶಿಗಳಾದ ಕೊಟ್ರೇಶ, ಜೀವಣ್ಣ, ನಾಗರಾಜ, ಗೊಗ್ಗ ಚೆನ್ನಬಸವರಾಜ, ಅಕ್ಕಿ ಮಲ್ಲಿಕಾರ್ಜುನ, ಮಧುರ ಚೆನ್ನಶಾಸ್ತ್ರಿ, ನೀಲಕಂಠಗೌಡ ಉಪಸ್ಥಿತರಿದ್ದರು.
ಹಡಪದ ವೀರಭದ್ರಪ್ಪ ಅವರು ಸ್ವಾಗತಿಸಿದರು. ಶಿಕ್ಷಕರಾದ ಪ್ರಭಾಕರ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

ನಾವೆಲ್ಲರೂ ಲಿಂಗಾಯತರು ಅಷ್ಟೇ ಸಾಕು. ಈ ಒಂದೇ ವೇದಿಕೆಯಲ್ಲಿ ಸೇರೋಣ ಒಳ ಪಂಗಡನ್ನು ಬೇಡ ಹೊರ ಪಂಗಡನ್ನು ಬೇಡ. ಬರುವವರಿಗೆ ಶರಣುಶರಣಾಥಿ೯ಗಳು🙏🙏🙏