ಸಿಂಗಾಪುರ ಕನ್ನಡ ಸಂಘದಲ್ಲಿ ‘ವಚನಾಂಜಲಿ’ ಕಾರ್ಯಕ್ರಮ

ಬಸವ ಮೀಡಿಯಾ
ಬಸವ ಮೀಡಿಯಾ

ವಚನಕಾರರು ಭುವಿಯಲ್ಲೇ ಕೈಲಾಸ ತೋರಿದ ದಾರ್ಶನಿಕರು:  ಜಿ.ಎಲ್. ತ್ರಿಪುರಾಂತಕ

ಸಿಂಗಾಪುರ:

ಮನುಷ್ಯ ವಿಧಿವಶನಾದ ಮೇಲೆ ಕೈಲಾಸ ಕಾಣುತ್ತಾನೆ ಎಂಬ ನಂಬಿಕೆ ಅನೇಕರಿಗಿದೆ. ಆದರೆ ಸತ್ಯಶುದ್ಧ ಕಾಯಕದಿಂದ ಭುವಿಯಲ್ಲೇ ಕೈಲಾಸ ಕಾಣಬಹುದು ಎಂಬ ಶ್ರೇಷ್ಠ ಸಂದೇಶವನ್ನು ಜಗತ್ತಿಗೆ ವಚನಕಾರರು ನೀಡಿದ್ದಾರೆ ಎಂದು ಜಿ.ಎಲ್. ತ್ರಿಪುರಾಂತಕ ನುಡಿದರು.

ಸಿಂಗಾಪುರದ ಕನ್ನಡ ಸಂಘದ ವತಿಯಿಂದ ಜುಲೈ ೧೮ರಂದು ಸ್ಪ್ರಿಂಗ್ ಆಡಿಟೋರಿಯಮ್‌ನಲ್ಲಿ ಏರ್ಪಡಿಸಿದ್ದ ‘ವಚನಾಂಜಲಿ’ ಕಾರ್ಯಕ್ರಮದಲ್ಲಿ ‘ವಚನ ಸಾಹಿತ್ಯದಲ್ಲಿ ಕಾಯಕತತ್ತ್ವ’ ಎಂಬ ವಿಷಯವಾಗಿ ಉಪನ್ಯಾಸ ನೀಡುತ್ತಾ ಶರಣರ ಜೀವನ-ಸಾಧನೆ, ಕಾಯಕದ ಕುರಿತಾದ ಅವರ ಸಂದೇಶಗಳನ್ನು ಸಭೆಗೆ ತಿಳಿಸಿದರು.

ಶಿವನು ಕೈಲಾಸದಲ್ಲಿ ನೆಲೆಸಿಲ್ಲ, ನಿಷ್ಠಾವಂತ ಶಿವಶರಣರ ಮನೆಮನಗಳಲ್ಲಿ ನೆಲೆಸಿದ್ದಾನೆ ಎಂದು ಹೇಳುತ್ತಾ, ಕಾಯಕ ಹಾಗೂ ದಾಸೋಹ ಮಾಡುವ ಯೋಗಿಗೆ ಭುವಿಯೇ ನಿಜ ಕೈಲಾಸ ಎಂಬ ಸತ್ಯವನ್ನು ಅರಿಯುವ ಅಗತ್ಯವಿದೆ ಎಂದರು.

ಬಸವಾದಿ ಶರಣರು ನುಡಿದಂತೆ ನಡೆದ ಕಾರಣಕ್ಕೆ ೯ ಶತಮಾನಗಳು ಕಳೆದರೂ ಇಂದಿಗೂ ಅವರ ಕೊಡುಗೆಗಳನ್ನು ನಾಡು ಕೊಂಡಾಡುತ್ತಿದೆ. ಸಾಂಸ್ಕೃತಿಕ ನಾಯಕ ಬಸವಣ್ಣನವರ ಕಾಯಕ ಹಾಗೂ ದಾಸೋಹ ಪರಿಕಲ್ಪನೆಯನ್ನು ಒಪ್ಪಿ ಅನುಸರಿಸಿದ ಕಾರಣಕ್ಕೆ ೧೨ನೇ ಶತಮಾನದಲ್ಲಿ ಒಂದು ಸಾಮಾಜಿಕ ಕ್ರಾಂತಿಯೇ ನಡೆಯಿತು.

ಜೇಡರ ದಾಸಿಮಯ್ಯ, ಅಂಬಿಗರ ಚೌಡಯ್ಯ, ಆಯ್ದಕ್ಕಿ ಮಾರಯ್ಯ, ಅಕ್ಕಮಹಾದೇವಿ, ಹಡಪದ ಅಪ್ಪಣ್ಣ ಮುಂತಾದ ನೂರಾರು ಶರಣ, ಶರಣೆಯರು ಮೌಲಿಕ ವಚನಗಳನ್ನು ರಚಿಸುವ ಮೂಲಕ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ.

ಸಮಸಮಾಜ ನಿರ್ಮಾಣ, ಸ್ತ್ರೀ ಸಮಾನತೆ ಹಾಗೂ ಪ್ರತಿಯೊಂದು ವೃತ್ತಿಯನ್ನು ಗೌರವಿಸುವ ತತ್ತ್ವಗಳು ವಚನಗಳ ಸಾರವಾಗಿವೆ. ಶರಣರ ವಚನಗಳು ಬದುಕಿನ ದಾರಿದೀಪಗಳಾಗಿವೆ.

ಅವರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸುವಂತೆಯೇ ಅವರ ಆದರ್ಶಗಳು ಹಾಗೂ ಸಂದೇಶಗಳನ್ನು ಪಾಲಿಸುವ ಮೂಲಕ ಅವರನ್ನು ಗೌರವಿಸುವ ಅಗತ್ಯವಿದೆ ಎಂದರು.

ಮನೆಯ ಕಸವನ್ನು ಗುಡಿಸುವುದು ಸುಲಭ, ಆದರೆ ಮನದ ಕಸವನ್ನು ಗುಡಿಸುವುದು ಕಷ್ಟ. ವಚನಗಳು ಆತ್ಮಶುದ್ಧಿ, ಕಾಯಕಶುದ್ಧಿ ಮಾಡುವ ಬೀಜಮಂತ್ರಗಳಾಗಿವೆ. ಶರಣರ ಜೀವನ ಸಾಧನೆಯನ್ನು ಪಾಲಿಸಿದಲ್ಲಿ ಸಮಾಜ ಸುಧಾರಣೆಯನ್ನು ಕಾಣಬಹುದು ಎಂದರು.

ವಚನ ಸಾಹಿತ್ಯವು ಇಡೀ ವಿಶ್ವಕ್ಕೆ ತಲುಪಲು ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಪ್ರಯತ್ನಿಸುತ್ತಿರುವುದು ಶ್ಲಾಘನೀಯ ಕಾರ್ಯ, ಅದರಲ್ಲೂ ಸಿಂಗಾಪುರದ ಕನ್ನಡ ಸಂಘದವರು ‘ವಚನಾಂಜಲಿ’ಕಾರ್ಯಕ್ರಮದ ಮೂಲಕ ಕನ್ನಡ ಮಣ್ಣಿನ ವಚನ ಸಾಹಿತ್ಯವನ್ನು ಭಾಷಣ, ಗಾಯನ, ನೃತ್ಯರೂಪಕ ಹಾಗೂ ನಾಟಕಗಳನ್ನು ಪ್ರಸ್ತುತಪಡಿಸುವ ಮೂಲಕ ಮುಂದಿನ ಪೀಳಿಗೆಗೆ ಅರ್ಥಪೂರ್ಣವಾಗಿ ತಲುಪಿಸುವ ಮೂಲಕ ಶರಣರ ಆಶಯಗಳನ್ನು ಈಡೇರಿಸಿದಂತಾಗುತ್ತದೆ ಎಂದು ಕನ್ನಡ ಸಂಘದ ಕುರಿತು ಪ್ರಶಂಸನೀಯ ಮಾತುಗಳನ್ನಾಡಿದರು.

ಉಪನ್ಯಾಸದ ನಂತರ ವಚನಾಧಾರಿತ ಭರತನಾಟ್ಯ ನೃತ್ಯರೂಪಕವನ್ನು ಶ್ರವ್ಯಾರಾವ್ ಹಾಗೂ ಶೃತಿರಾವ್ ಅವರು ಪ್ರಸ್ತುತ ಪಡಿಸಿದರೆ, ಕನ್ನಡ ಸಂಘದ ಸದಸ್ಯರುಗಳೇ ಪಾತ್ರಧಾರಿಗಳಾಗಿ ನಟಿಸಿದರು. ಉ.ಮ. ರೇವಣ್ಣ ಅವರು ನಿರ್ದೇಶಿಸಿದ ‘ಕಾಯಕವೇ ಕೈಲಾಸ’ಎಂಬ ಕಿರುನಾಟಕದ ಪ್ರದರ್ಶನವಾಯಿತು.

ಕನ್ನಡ ಸಂಘದ ಅಧ್ಯಕ್ಷರಾದ ವೆಂಕಟೇಶ ಗದ್ದೆಮನೆ, ಪದಾಧಿಕಾರಿಗಳಾದ ಚೈತ್ರ ಮುಂತಾದವರು ತುಂಬಾ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.

ಸಿಂಗಾಪುರದ ನೂರಾರು ಕನ್ನಡಿಗರು ಉತ್ಸಾಹದಿಂದ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
1 Comment
  • ಸಿಂಗಾಪುರದಲ್ಲಿ ಈ ವಚನಾoಜಲಿ ಕಾರ್ಯಕ್ರಮದ ಮೂಲಕ ವಚನ ಸಾಹಿತ್ಯ, ಕಾಯಕ, ದಾಸೋಹ,ಸಮಾನತೆಯ ಅಂಶಗಳನ್ನು ದೂರದ ದೇಶದಲ್ಲೂ ಪ್ರಸಾರ ಮಾಡಿದ ಅವರೆಲ್ಲರಿಗೂ ಅಭಿನಂದನೆಗಳು, ಅವರು ಮಾಡುವ ಕಾರ್ಯಕ್ರಮ ಕುರಿತು ಈ ರೀತಿ ವರದಿ ಮಾಡುತ್ತಿರಲಿ, ಇಲ್ಲಿ ಅವರ ಬಗ್ಗೆ ಸಹಜ ಹೆಮ್ಮೆ ಮೂಡುತ್ತೆ.

Leave a Reply

Your email address will not be published. Required fields are marked *