‘ಅಪ್ಪಣ್ಣನವರ ವಚನಗಳ ಪಾಲನೆಯಿಂದ ಸಾರ್ಥಕ ಬದುಕು ಸಾಧ್ಯ’

ಬಸವ ಮೀಡಿಯಾ
ಬಸವ ಮೀಡಿಯಾ

ಕೊಪ್ಪಳ:

12ನೇ ಶತಮಾನದ ಪ್ರಮುಖ ಶರಣರಾದ ಹಡಪದ ಅಪ್ಪಣ್ಣನವರು ರಚಿಸಿದ ವಚನಗಳನ್ನು ಬರಿ ಜಯಂತಿಯ ದಿನಗಳಲ್ಲಿ ನೆನಪಿಸಿಕೊಳ್ಳುವುದಷ್ಟೇ ಅಲ್ಲದೆ, ಅವುಗಳನ್ನು ನಿಜ ಜೀವನದಲ್ಲಿ ಪಾಲಿಸಿದಾಗ ಮಾತ್ರ ನಮ್ಮ ಬದುಕು ಸಾರ್ಥಕಗೊಳ್ಳುತ್ತದೆ ಎಂದು ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ ಅವರು ಹೇಳಿದರು.

ಕೊಪ್ಪಳ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ನಗರಸಭೆ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಿವಶರಣ ಹಡಪದ ಅಪ್ಪಣ್ಣನವರು ಜಗಜ್ಯೋತಿ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ, ಅವರ ನಂಬಿಕೆಗೆ ಪಾತ್ರರಾಗಿದ್ದ ಕರ್ತವ್ಯನಿಷ್ಠ ಶರಣರಾಗಿದ್ದರು. ಯಾವುದೇ ಲಿಂಗ ತಾರತಮ್ಯ ಅಥವಾ ಜಾತಿ ಭೇದವಿಲ್ಲದೆ ಮಾನವ ಕುಲದ ಉದ್ದಾರಕ್ಕಾಗಿ ಶ್ರಮಿಸಿದ ಕಾಯಕಜೀವಿ. ಸುಮಾರು 242ಕ್ಕೂ ಹೆಚ್ಚು ವಚನಗಳನ್ನು ರಚಿಸಿ, ಸಮಾಜಕ್ಕೆ ಅದ್ಭುತ ಆದರ್ಶಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

ಅನುಭವ ಮಂಟಪದಲ್ಲಿ ಪ್ರಮುಖ ಸ್ಥಾನ ಪಡೆದಿದ್ದ ಹಡಪದ ಅಪ್ಪಣ್ಣನವರ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಕೊಡುಗೆ ಅಪಾರ ಎಂದರು.

ಇಂದಿನ ದಿನಗಳಲ್ಲಿ ಸಮಾಜದ ಶೈಕ್ಷಣಿಕ ಪ್ರಗತಿ ಅತ್ಯಂತ ಅಗತ್ಯವಾಗಿದೆ. ಹೆಣ್ಣುಮಕ್ಕಳು ಹಾಗೂ ಯುವಜನತೆ ಶಿಕ್ಷಣದಲ್ಲಿ ಮುಂಚೂಣಿಗೆ ಬರಬೇಕು. ಪೋಷಕರು ತಮ್ಮ ಮಕ್ಕಳನ್ನು ಇಂಜಿನಿಯರಿಂಗ್, ಮೆಡಿಕಲ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧಗೊಳಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರಬೇಕು. ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು, ಸಮಾಜ ಕಟ್ಟುವ ಕೆಲಸದಲ್ಲಿ ಎಲ್ಲರೂ ಭಾಗಿಗಳಾಗಬೇಕು ಎಂದು ಕರೆ ನೀಡಿದರು.

ಕೊಪ್ಪಳ ಗವಿಶ್ರೀ ಸಂಸ್ಥಾನದ ಬಿಸರಳ್ಳಿ ಶಾಖಾ ಮಠದ ಪೂಜ್ಯ ಶಿವಶಾಂತವೀರ ಸ್ವಾಮಿಗಳು ಮಾತನಾಡಿ, ಶಿವಶರಣ ಹಡಪದ ಅಪ್ಪಣ್ಣನವರ ವಚನಗಳ ಬೆಳಕು ಎಂದಿಗೂ ಆರದು. ಸಾಮಾನ್ಯರು ಆಚರಿಸುವ ಜನ್ಮದಿನಕ್ಕೂ ಶಿವಶರಣ ಹಡಪದ ಅಪ್ಪಣ್ಣನವರಂತಹ ಮಹಾತ್ಮರ ಜಯಂತಿಗೂ ಅಂತರವಿದೆ. ಹಚ್ಚಿದ ದೀಪವನ್ನು ಆರಿಸಿ ಜನ್ಮದಿನ ಆಚರಿಸುವ ಈ ಕಾಲದಲ್ಲಿ, ಹಡಪದ ಅಪ್ಪಣ್ಣನವರು ಸಮಾಜದ ಮನಸ್ಸಿನಲ್ಲಿಂದಿಗೂ ಆರದ ವಚನಗಳೆಂಬ ಜ್ಯೋತಿಯನ್ನು ಬೆಳಗಿದ್ದಾರೆ.

ಅಪ್ಪಣ್ಣನವರು ಕೇವಲ ಶರೀರದ ಅನಗತ್ಯ ಕೇಶಗಳನ್ನು (ಕೂದಲು) ಕತ್ತರಿಸುವ ಕಾಯಕ ಮಾಡಲಿಲ್ಲ; ಮಾನವನ ತಲೆಯೊಳಗಿನ ಅಹಂಕಾರ, ಕ್ಲೇಶ ಹಾಗೂ ವಿಕಾರಗಳನ್ನು ಕಳೆಯುವ ಮಹತ್ಕಾರ್ಯ ಮಾಡಿದರು. ಇಂದು ಅವರ ಭೌತಿಕ ಕಾಯಕ ನಮ್ಮ ಮುಂದಿಲ್ಲದಿರಬಹುದು, ಆದರೆ ಅವರ ತತ್ವ ಮತ್ತು ತತ್ವಾದರ್ಶಗಳು ಜೀವಂತವಾಗಿವೆ” ಎಂದರು.

ಅನುಭವ ಮಂಟಪದಲ್ಲಿ ಬಸವಣ್ಣನವರಿಗೆ ಆಪ್ತ ಕಾರ್ಯದರ್ಶಿಯಾಗಿ ಅಪ್ಪಣ್ಣನವರು ಸೇವೆ ಸಲ್ಲಿಸಿದ್ದರು. ಬಸವಣ್ಣನವರ ಮೆಚ್ಚಿನ ಶರಣರಾಗಿದ್ದ ಅವರು ‘ಬಸವಪ್ರಿಯ ಚೆನ್ನಬಸವಣ್ಣ’ ಎಂಬ ಅಂಕಿತ ನಾಮದಲ್ಲಿ ವಚನಗಳನ್ನು ರಚಿಸಿದರು.

ವಂದನೆಗೆ ಹಿಗ್ಗದೆ, ನಿಂದನೆಗೆ ಕುಗ್ಗದೆ, ಗೊಂದಲಗಳಿಲ್ಲದೆ ಸರಳ ಹಾಗೂ ಶುದ್ಧ ಬದುಕನ್ನು ನಡೆಸುವ ಮಾರ್ಗವನ್ನು ತಮ್ಮ ವಚನಗಳ ಮೂಲಕ ಜಗತ್ತಿಗೆ ಸಾರಿದ್ದಾರೆ ಎಂದು ಹೇಳಿದರು.

ಶಿವಶರಣ ಹಡಪದ ಅಪ್ಪಣ್ಣನವರ ಕುರಿತು ವಿಶೇಷ ಉಪನ್ಯಾಸ ನೀಡಿದ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸದಸ್ಯರಾದ ಸಾವಿತ್ರಿ ಮಂಜುಮದಾರ ಅವರು ಮಾತನಾಡಿ, 12ನೇ ಶತಮಾನದ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರ, ಅನುಭವ ಮಂಟಪದ ಮಹಾನುಭಾವಿ ಹಾಗೂ ಬಸವಣ್ಣನವರ ನಿಕಟವರ್ತಿಯಾಗಿದ್ದವರು ಹಡಪದ ಅಪ್ಪಣ್ಣನವರು.

ಕಲ್ಯಾಣದಲ್ಲಿ ಸರ್ವ ಶಿವಶರಣರ ನಿಕಟ ಸಂಪರ್ಕ ಹೊಂದಿದ್ದ ಇವರು, ತಮ್ಮ ಶುದ್ಧ ಮನಸ್ಸಿನ ಬಲದಿಂದಲೇ ಬಸವಣ್ಣನವರಿಗೆ ಬಲಗೈ ಬಂಟನಾಗಿದ್ದರು. ಇವರಿಬ್ಬರ ಸ್ನೇಹ ಬಾಲ್ಯದಿಂದಲೂ ಇದ್ದು, ಅತ್ಯಂತ ಆತ್ಮೀಯತೆ ಹಾಗೂ ನಂಬಿಕೆಯಿಂದ ಕೂಡಿತ್ತು.

ಬೆಳಿಗ್ಗೆ ಎದ್ದ ತಕ್ಷಣ ಕ್ಷೌರಿಕನ ಮುಖ ನೋಡಬಾರದು ಎಂಬ ಅಂದಿನ ಕಾಲದ ಕಲ್ಪಿತ ಪದ್ಧತಿಯನ್ನು ಹೋಗಲಾಡಿಸುವ ಸಲುವಾಗಿಯೇ ಬಸವಣ್ಣನವರು ತಮ್ಮ ಆಪ್ತಕಾರ್ಯದರ್ಶಿಯಾಗಿ ಹಡಪದ ಅಪ್ಪಣ್ಣನವರನ್ನು ಇಟ್ಟುಕೊಂಡಿದ್ದರು. ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಬಸವಣ್ಣನವರು ಕಪ್ಪಡಿ ಸಂಗಮಕ್ಕೆ ನಿರ್ಗಮಿಸಿದಾಗಲೂ ಅಪ್ಪಣ್ಣನವರು ಅವರೊಂದಿಗೇ ತೆರಳಿದರು ಎಂದು ಸ್ಮರಿಸಿದರು.

ಅಪ್ಪಣ್ಣನವರು ವಿಜಾಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದ ಚೆನ್ನವೀರಪ್ಪ ಹಾಗೂ ದೇವಕಮ್ಮನವರ ಸುಪುತ್ರರಾಗಿದ್ದರು. ದೇವನಾಳ ಗ್ರಾಮದ ಧೀರ ನಾಗಪ್ಪ ಹಾಗೂ ಚೆನ್ನಬಸಮ್ಮನವರ ಮಗಳಾದ ಲಿಂಗಮ್ಮನವರನ್ನು ಅಪ್ಪಣ್ಣನವರು ವಿವಾಹವಾದರು. ಅಪ್ಪಣ್ಣನವರು 1160ರ ಕಾಲಘಟ್ಟದವರಾಗಿದ್ದು, ಬಸವಪ್ರಿಯ ಕೂಡಲಚೆನ್ನಬಸವಣ್ಣ ಎಂಬ ಅಂಕಿತನಾಮದಲ್ಲಿ ಸುಮಾರು 250 ವಚನಗಳನ್ನು ರಚಿಸಿದ್ದಾರೆ.

ಅಪ್ಪಣ್ಣನವರ ಪತ್ನಿ ಲಿಂಗಮ್ಮನವರು ಸಹ ಅಪಾರ ಜ್ಞಾನಿಯಾಗಿದ್ದು, ‘ಅಪ್ಪಣ್ಣಪ್ರಿಯ ಚೆನ್ನಬಸವಣ್ಣ’ ಎಂಬ ಅಂಕಿತನಾಮದಲ್ಲಿ 114 ವಚನಗಳನ್ನು ಬರೆದಿದ್ದಾರೆ. ಅಪ್ಪಣ್ಣನವರ ವಚನಗಳಲ್ಲಿ ಸರಳತೆ, ಸಹಜತೆ ಹಾಗೂ ಕಥನ ಶೈಲಿ ಎದ್ದು ಕಾಣುತ್ತದೆ. ಇಂತಹ ಶರಣರು ಯುಗಯುಗಾಂತರಗಳಿಗೂ ಪ್ರಸ್ತುತರಾಗಿರುವುದರಿಂದಲೇ ಸರ್ಕಾರ ಹಾಗೂ ಜಿಲ್ಲಾಡಳಿತ ಪ್ರತಿವರ್ಷ ಇಂತಹ ಮಹನೀಯರ ಜಯಂತಿಯನ್ನು ಗೌರವಪೂರ್ವಕವಾಗಿ ಆಚರಿಸಿಕೊಂಡು ಬರುತ್ತಿದೆ ಎಂದು ಹೇಳಿ, ಅಪ್ಪಣ್ಣನವರ ಬದುಕು, ವಚನ ಸಾಹಿತ್ಯ ಮತ್ತು ಬಸವಣ್ಣನವರೊಂದಿಗಿನ ಅವರ ಒಡನಾಟದ ಕುರಿತು ಬೆಳಕು ಚೆಲ್ಲಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಡಾ. ಮಹಾಂತೇಶ ಮಲ್ಲನಗೌಡ್ರ, ಜಿಲ್ಲಾ ಬಸವ ಸಮಿತಿ ಅಧ್ಯಕ್ಷರಾದ ಬಸವರಾಜ ಬಳೊಳ್ಳಿ, ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಎ.ವಿ ಕಣವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕರ್ಣಕುಮಾರ, ಜಿಲ್ಲಾ ಹಡಪದ ಸಮಾಜದ ಗೌರವ ಅಧ್ಯಕ್ಷರಾದ ಮಂಜುನಾಥ ಅಂದ್ರಾಳ, ತಾಲ್ಲೂಕಾಧ್ಯಕ್ಷರಾದ ಮೌನೇಶ ಹಡಪದ, ಸಮಾಜದ ಮುಖಂಡರಾದ ಮಲ್ಲಿಕಾರ್ಜುನ ಮಿಟಿಕೆರಿ, ವಿ.ಬಿ.ಎಸ್ ವೀರಾಪುರ, ಮುತ್ತು ಹುಬ್ಬಳ್ಳಿ, ಹನುಮಂತಪ್ಪ ಮುಂದೆ ಮುನಿರಾಬಾದ್, ನಿಂಗಪ್ಪ ಅಂದ್ರಾಳ, ಬಸಪ್ಪ ಹಲಗೇರಿ, ದ್ಯಾಮಣ್ಣ ಮಾದನೂರ, ಈಶಪ್ಪ ಮುದ್ದಾಬಳ್ಳಿ, ಶರಣಪ್ಪ ಇಟಗಿ, ಸುರೇಖಾ ಅಂದಪ್ಪ ಬೆಟಿಗೇರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಬಿ.ಎನ್. ಹೊರಪೇಟಿ‌ ಅವರು ಕಾರ್ಯಕ್ರಮ ನಿರೂಪಿಸಿದರು. ಅನ್ನಪೂರ್ಣಮ್ಮ ಮನ್ನಾಪುರ ಹಾಗೂ ತಂಡದವರು ಕಾರ್ಯಕ್ರಮದಲ್ಲಿ ನಾಡಗೀತೆ, ವಚನ ಮತ್ತು ಸಂಗೀತ ಗಾಯನ ಮಾಡಿದರು.

ಮೆರವಣಿಗೆ:

ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಪ್ರಯುಕ್ತ ಹಡಪದ ಅಪ್ಪಣ್ಣನವರ ಭಾವಚಿತ್ರದ ಮೆರವಣಿಗೆಗೆ ದೋಟಿಹಾಳ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರಸನ್ನ ವಿ. ಗಡಾದ ಅವರು ಚಾಲನೆ ನೀಡಿದರು. ‌ಮೆರವಣಿಗೆಯೂ ನಗರದ ಗದಗ ರಸ್ತೆಯ ಬನ್ನಿಕಟ್ಟಿ ಏರಿಯಾದ ಬಸವಪ್ರಿಯ ಹಡಪದ ಅಪ್ಪಣ್ಣ ಸಮುದಾಯದ ಭವನದಿಂದ ಆರಂಭಗೊಂಡು, ಸಾಹಿತ್ಯ ಭವನದವರೆಗೆ ಜರುಗಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *