ಕೆಜಿಎಫ್ ನಗರದಲ್ಲಿ ಬಸವಣ್ಣ, ಅಕ್ಕನವರ ಅದ್ಧೂರಿ ಜಯಂತ್ಯೋತ್ಸವ

ಅಶೋಕ್ ಜಿ ಲೋಣಿ
ಅಶೋಕ್ ಜಿ ಲೋಣಿ

ಶರಣರ ತತ್ವಗಳು ಸಮಾಜಕ್ಕೆ ದಾರಿದೀಪ

ಕೆಜಿಎಫ್:

ಜಗಜ್ಯೋತಿ ಬಸವಣ್ಣ ಹಾಗೂ ಜಗನ್ಮಾತೆ ಅಕ್ಕಮಹಾದೇವಿ ಅವರ ತತ್ವ-ಸಿದ್ಧಾಂತಗಳು ಮತ್ತು ವಚನ ಸಾಹಿತ್ಯವು ಸಮಾಜಕ್ಕೆ ಸದಾ ದಾರಿದೀಪವಾಗಿವೆ. ಪ್ರತಿಯೊಬ್ಬರೂ ಈ ಮಹಾನ್ ಶರಣರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸುಸಂಸ್ಕೃತ ಹಾಗೂ ಉತ್ತಮ ಸಮಾಜದ ನಿರ್ಮಾಣ ಸಾಧ್ಯ ಎಂದು ನಾಗಲಾಪುರ ಮಠದ ಪೂಜ್ಯ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದರು.

ಬೆಮಲ್ ನಗರದಲ್ಲಿ ಸ್ಥಳೀಯ ಬಸವ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ಜಗಜ್ಯೋತಿ ಬಸವೇಶ್ವರ ಹಾಗೂ ಜಗನ್ಮಾತೆ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕಾರ್ಯಕ್ರಮದಲ್ಲಿ ಶರಣರ ಮೌಲ್ಯಗಳನ್ನು ಸ್ಮರಿಸಿದ ಶ್ರೀಗಳು, “ಮಕ್ಕಳಿಗೆ ಕೇವಲ ಶಾಲಾ ವಿದ್ಯೆಯನ್ನು ನೀಡುವುದಷ್ಟೇ ಪೋಷಕರ ಕರ್ತವ್ಯವಲ್ಲ; ಅದರೊಂದಿಗೆ ಉತ್ತಮ ಸಂಸ್ಕಾರ, ನೈತಿಕ ಮೌಲ್ಯಗಳು ಮತ್ತು ಜೀವನದ ಆದರ್ಶಗಳನ್ನು ಧಾರೆ ಎರೆಯುವ ಜವಾಬ್ದಾರಿಯೂ ಅವರ ಮೇಲಿದೆ. ಪೋಷಕರು ಮಕ್ಕಳನ್ನು ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು. ಹಿರಿಯರ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ದಾಟಿಸಿದಾಗ ಮಾತ್ರ ಸುಸಂಸ್ಕೃತ ಸಮಾಜ ನಿರ್ಮಾಣವಾಗುತ್ತದೆ,” ಎಂದು ಕಿವಿಮಾತು ಹೇಳಿದರು.

ಬಸವ ಪ್ರಜ್ಞೆ ಹಾಗೂ ಅಕ್ಕನ ಅರಿವು ಇಂದಿಗೂ ಪ್ರಸ್ತುತ:

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದೂರದರ್ಶನ ಮತ್ತು ಆಕಾಶವಾಣಿಯ ನಿವೃತ್ತ ನಿರ್ದೇಶಕರು, ಸಾಹಿತಿ ಹಾಗೂ ಸಂಶೋಧಕಿಯಾದ ಡಾ. ನಿರ್ಮಲಾ ಸಿ. ಯಲಿಗಾ‌ರ ಮಾತನಾಡಿ, “ಬಸವ ಎಂದರೆ ಚಿನ್ನದ ಗಣಿ; ಅದನ್ನು ಬಗೆದಷ್ಟು ಜ್ಞಾನ ಸಿಗುತ್ತದೆ. ಬಸವ ಪ್ರಜ್ಞೆ ಮತ್ತು ಅಕ್ಕನ ಅರಿವು ಇಂದಿಗೂ ಸಮಾಜಕ್ಕೆ ಅತ್ಯಂತ ಪ್ರಸ್ತುತವಾಗಿವೆ. ಅನುಭವ ಮಂಟಪದಲ್ಲಿ ಮೂಡಿದ ವಚನಗಳಲ್ಲಿ ಅಕ್ಕಮಹಾದೇವಿಯವರ ವಚನಗಳು ಅತ್ಯಂತ ಜನಪ್ರಿಯ. ಅನೇಕ ಮಹನೀಯರು ಶರಣರ ಸಾಮಾಜಿಕ ಕಳಕಳಿ ಬಿಂಬಿಸುವ ವಚನಗಳನ್ನು ವಿವಿಧ ಮಾಧ್ಯಮಗಳ ಮೂಲಕ ನಾಡಿಗೆ ಪರಿಚಯಿಸಿದ್ದಾರೆ,” ಎಂದರು.

ಇದೇ ಸಂದರ್ಭದಲ್ಲಿ ಬಸವ ಸಮಿತಿಯಲ್ಲಿ ನಿರಂತರ ಸೇವೆ ಸಲ್ಲಿಸಿದ ಸುರೇಶ ತುಪ್ಪದ, ಶಿವಪುತ್ರಪ್ಪ ಹಡಪದ ಹಾಗೂ ಸರೋಜಾ ಜೆ. ಹರ್ತಿ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಹಾಗೂ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲು ಸಹಕರಿಸಿದ ವಿಶೇಷ ಸೇವಾಕರ್ತರನ್ನು ಸಹ ಗೌರವಿಸಲಾಯಿತು.

ಬೆಮೆಲ್ ನಗರದ ಪ್ರಮುಖ ಬೀದಿಗಳಲ್ಲಿ ವಿಶ್ವಗುರು, ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರು ಹಾಗೂ ಜಗನ್ಮಾತೆ ಅಕ್ಕಮಹಾದೇವಿ ಅವರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಸಮಿತಿಯ ಮಕ್ಕಳಿಂದ ವಚನ ಗಾಯನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವ ಸಮಿತಿಯ ಗೌರವ ಅಧ್ಯಕ್ಷರಾದ ಕೆ.ಬಿ. ನರೇಂದ್ರ ವಹಿಸಿದ್ದರು. ಅಧ್ಯಕ್ಷರಾದ ಎಂ. ಮಂಜುನಾಥ, ಉಪಾಧ್ಯಕ್ಷರಾದ ಕೆ. ಕುಮಾರ, ಜಂಟಿಕಾರ್ಯದರ್ಶಿ ಉದಯಕುಮಾರ ಜಮಖಂಡಿ, ಖಜಾಂಚಿ ಶರಣಪ್ಪ ಎಚ್. ಹಾಗೂ ಅಕ್ಕನ ಬಳಗದ ಅಧ್ಯಕ್ಷೆ ಸಂಗೀತ ನರೇಂದ್ರ, ಪ್ರಧಾನಕಾರ್ಯದರ್ಶಿ ರಾಧಾ ಹೊಸಮನಿ ಹಾಗೂ ಇತರ ಪದಾಧಿಕಾರಿಗಳು ಮತ್ತು ಬಸವ ಸಮಿತಿಯ ಮಾಜಿ ಅಧ್ಯಕ್ಷರಾದ ಎಮ್.ಆರ್. ಶ್ರೀಕಂಠ ಹಾಗೂ ಮನೋಹರ ಮೋಟಗಿ, ಕನ್ನಡ ಮಿತ್ರರು ಅಧ್ಯಕ್ಷರಾದ ಆರ್.ಎ.ಎಸ್ ಪಾಟೀಲ ಹಾಗೂ ಪ್ರಮುಖ ಮುಖಂಡರಾದ ಬಾ.ಹ. ಶೇಖರಪ್ಪ, ಅಶೋಕ ಲೋಣಿ ಸೇರಿದಂತೆ ಅಪಾರ ಸಂಖ್ಯೆಯ ಶರಣರು ಮತ್ತು ಬಸವ ಅನುಯಾಯಿಗಳು ಉಪಸ್ಥಿತರಿದ್ದರು.

ಈ ಅದ್ದೂರಿ ಸಮಾರಂಭದಲ್ಲಿ ಬಸವ ಸಮಿತಿಯ ಸಹಕಾರ್ಯದರ್ಶಿ ಜಗದೀಶಗೌಡ ಸಾಲ್ಮನಿ ಸ್ವಾಗತ ಕೋರಿದರು. ಸಂಘಟನಾ ಕಾರ್ಯದರ್ಶಿ ಸಂಜೀವ ರೆಡ್ಡಿ ಮೇಟಿ ವಂದನಾರ್ಪಣೆ ಮಾಡಿದರು. ಹಾಗೂ ಪ್ರಧಾನಕಾರ್ಯದರ್ಶಿ ಬಸವರಾಜ ಹೂಗಾರ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
1 Comment
  • ಒಳ್ಳೆಯ ಕಾರ್ಯಕ್ರಮವಾಗಿದೆ

Leave a Reply

Your email address will not be published. Required fields are marked *