‘ನನ್ನನ್ನು ಕಾಣಬರುವವರು ಮೊದಲು ಅಪ್ಪಣ್ಣನವರನ್ನು ಕಾಣಬೇಕೆಂದವರು ಬಸವಣ್ಣ’

ಬಸವ ಮೀಡಿಯಾ
ಬಸವ ಮೀಡಿಯಾ

ಚಿತ್ರದುರ್ಗ:

೧೨ನೇ ಶತಮಾನದಲ್ಲಿ ನಿಕೃಷ್ಟ ರೀತಿಯಲ್ಲಿ ಕಾಣುತ್ತಿದ್ದ ಜಾತಿಗಳವರನ್ನು ಒಂದು ಸೂರಿನಡಿ ತಂದು ಅವರನ್ನು ಅತ್ಯಂತ ಗೌರವದಿಂದ ಕಂಡ ಧೀಮಂತ ವ್ಯಕ್ತಿತ್ವದ ನಾಯಕ ಅಣ್ಣ ಬಸವಣ್ಣನವರು.

ಅದರ ಫಲವಾಗಿ ಎಲ್ಲ ಕಸುಬಿನವರು ತಾರತಮ್ಯವಿಲ್ಲದೆ ಸೇರಿದ ಫಲವಾಗಿ ನಮ್ಮ ಹಡಪದ ಅಪ್ಪಣ್ಣನವರು ಬಂದರು ಎಂದು ನಿವೃತ್ತ ಇತಿಹಾಸ ಪ್ರಾಧ್ಯಾಪಕ ಬಿ. ರಾಜಶೇಖರಯ್ಯ ಅಭಿಪ್ರಾಯಪಟ್ಟರು.

ಇತ್ತೀಚೆಗೆ ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮೂಲಕರ್ತೃ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾವಿಶ್ರಾಂತಿ ಸನ್ನಿಧಾನ ಆವರಣದಲ್ಲಿ ಏರ್ಪಡಿಸಿದ್ದ ಶಿವಶರಣ ಹಡಪದ ಅಪ್ಪಣ್ಣನವರ ಶರಣೋತ್ಸವದಲ್ಲಿ ಅವರು ಮಾತನಾಡಿದರು.

ಚಾತುರ್ವರ್ಣ ವ್ಯವಸ್ಥೆಯ ವಿರುದ್ಧ ಒಂದುಗೂಡಿ ವೈಚಾರಿಕ ಕ್ರಾಂತಿಯನ್ನೇನು ಆರಂಭ ಮಾಡಿದರು ಅದನ್ನೇ ಶರಣ ಅಥವಾ ಭಕ್ತಿ ಚಳವಳಿ ಎನ್ನುತ್ತೇವೆ. ಇದಕ್ಕೆಲ್ಲ ಕೇಂದ್ರಬಿಂದು ಬಸವಣ್ಣನವರು.

ಸಮಾನತೆಯನ್ನು ಎತ್ತಿಹಿಡಿಯಲು ತುಳಿತಕ್ಕೊಳಪಟ್ಟ ಸಮುದಾಯಗಳನ್ನು ತನ್ನ ತೋಳ್ತೆಕ್ಕೆಗೆ ತರಲು ಪ್ರಯತ್ನಿಸಿದರು. ಇಂತಹ ಅಸಮಾನತೆಯನ್ನು ಹೋಗಲಾಡಿಸಲು ಹುಟ್ಟಿಕೊಂಡದ್ದೆ ೧೨ನೇ ಶತಮಾನದ ವಚನ ಚಳುವಳಿ.

ಹಡಪದ ಅಪ್ಪಣ್ಣನವರನ್ನು ಬಸವಣ್ಣನವರು ಆಪ್ತಕಾರ್ಯದರ್ಶಿಯನ್ನಾಗಿ ಮಾಡಿಕೊಳ್ಳುತ್ತಾರೆ. ಅಂತರಂಗದ ವಿಚಾರಗಳನ್ನು ಅವರೊಂದಿಗೆ ಹಂಚಿಕೊಳ್ಳುತ್ತಿದ್ದರು. ಅಧಿಕಾರ ಇದ್ದಾಗ ಮಾತ್ರ ಅಪ್ಪಣ್ಣ ಇರಲಿಲ್ಲ ಬದಲಿಗೆ ಬಸವಣ್ಣನವರ ಅಂತ್ಯದ ದಿನಗಳವರೆಗೂ ಇದ್ದದ್ದು ವಿಶೇಷ.

ಹಡಪದರ ವಿಚಾರದಲ್ಲಿ ಏನೇ ಗೊಂದಲಗಳು, ಮೌಢ್ಯ, ಮೂಢನಂಬಿಕೆಗಳಿರಬಹುದು. ನಮ್ಮ ಎಲ್ಲಾ ಶುಭ ಕಾರ್ಯಗಳಿಗೆ ಅವರು ಬೇಕು. ಆದರೆ ಬೆಳಗ್ಗೆ ಎದ್ದು ಅವರ ಮುಖ ನೋಡಬಾರದು ಎಂದು ಹೇಳೋದು ಎಷ್ಟು ಸರಿ. ಇದನ್ನೇ ಶೋಷಣೆ ಅನ್ನೋದು. ಇದನ್ನು ಕಂಡ ಬಸವಣ್ಣ ನನ್ನನ್ನು ಯಾರೇ ಭೇಟಿ ಮಾಡಲು ಬಂದರೆ ಮೊದಲು ಅಪ್ಪಣ್ಣನವರನ್ನು ಕಂಡು ನನ್ನ ಬಳಿ ಬರಲಿ ಎಂದು ಆದೇಶಿಸಿದ ಪರಿಣಾಮ ಅಪ್ಪಣ್ಣನವರಿಗೆ ಎಲ್ಲಿಲ್ಲದ ಗೌರವ ಬಂತು. ಅದೇರೀತಿ ಅಪ್ಪಣ್ಣ ಬಸವಣ್ಣನವರಿಗೆ ಅಷ್ಟೆ ಗೌರವವನ್ನು ನೀಡಿದ್ದು ವಿಶೇಷ.

ಬಸವಣ್ಣನವರು ಎಲ್ಲರನ್ನು ಅವರವರ ವೃತ್ತಿಯಲ್ಲಿ ಲೀನ ಮಾಡಿಕೊಂಡರು. ಎಲ್ಲ ವಿಷಯಗಳನ್ನು ಒತ್ತಾಯಪೂರ್ವಕವಾಗಿ ಹೇರದೆ ಪ್ರಯೋಗಾತ್ಮಕವಾಗಿ ಮನನ ಮಾಡಿಸಿದರು. ಇದರಿಂದ ವಿಚಾರಗಳು ಜಗತ್ತನ್ನಾಳುತ್ತವೆ ಎನ್ನುವುದಕ್ಕೆ ಅಪ್ಪಣ್ಣ – ಬಸವಣ್ಣನವರಲ್ಲಿನ ಮಧುರ ಬಾಂಧವ್ಯವೇ ಸಾಕ್ಷಿ. ಇದರಿಂದ ವಿಚಾರಗಳಿಗೆ ಸಾವಿಲ್ಲ ಎನ್ನುವುದು ಗೊತ್ತಾಗುತ್ತದೆ.

ಅಪ್ಪಣ್ಣನವರ ವಚನಗಳಿಗೆ ಕಾರ್ಲ್ ಮಾರ್ಕ್ಸ್ ಕೂಡ ಪ್ರೇರಣೆ ಹೊಂದಿದ್ದರು. ಹೀಗೆ ಅಪ್ಪಣ್ಣ ಬಸವಣ್ಣನವರ ಜತೆಗಿದ್ದು ಅನೇಕ ಕ್ಲಿಷ್ಟಕರ ಸಂದರ್ಭದಲ್ಲಿ ಅವನ್ನು ಪರಿಹರಿಸುವ ಹೊಣೆಗಾರಿಕೆ ಹೊಂದಿದ್ದರು. ಅಲ್ಲಮಪ್ರಭುಗಳು, ಸಿದ್ಧರಾಮರು ಕಲ್ಯಾಣಕ್ಕೆ ಬಂದಾಗಿನ ಸಂದರ್ಭವನ್ನು ಅಪ್ಪಣ್ಣ ನಿಭಾಯಿಸಿದ ಸಂದರ್ಭ ಹೀಗೆ ಅನೇಕ ಸಂದರ್ಭಗಳಿಗೆ ಅಪ್ಪಣ್ಣ ಸಾಕ್ಷಿಯಾಗಿದ್ದಾರೆ. ಬಸವಾದಿ ಶರಣರು ಬೇಡುವುದನ್ನು ಕಲಿಸಲಿಲ್ಲ. ದುಡಿದು ತಿನ್ನುವ ಸ್ವಾಭಿಮಾನದ ಬದುಕನ್ನು ಕಲಿಸಿದರು. ಇದು ಅಪ್ಪಣ್ಣನವರಲ್ಲಿತ್ತು ಎಂದು ವಿಶ್ಲೇಷಿಸಿದರು.

ಸಮಾರಂಭದ ಸಾನಿಧ್ಯ ವಹಿಸಿದ್ದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಮಾತನಾಡಿ, ೧೨ನೇ ಶತಮಾನದ ಅನುಭವ ಮಂಟಪ ಎಲ್ಲ ಕುಶಲಕರ್ಮಿಗಳಿಂದ ನಿರ್ಮಾಣವಾಗಿತ್ತು. ಆದರೆ ಈಗ ಧರ್ಮ- ಧರ್ಮಗಳಲ್ಲಿ, ಜಾತಿ-ಜಾತಿಗಳಲ್ಲಿ ದ್ವೇಷಮಯ ವಾತಾವರಣ ಸೃಷ್ಟಿಯಾಗಿರುವುದು ಆತಂಕಕಾರಿ ಮತ್ತು ಕಳವಳಕಾರಿ ಎಂದ ಅವರು ಇದಕ್ಕೆಲ್ಲಾ ಮದ್ದು ಬಸವಾದಿ ಶಿವಶರಣರ ವಚನಗಳಲ್ಲಿವೆ.

ಅಪ್ಪಣ್ಣನವರ ವ್ಯಕ್ತಿತ್ವ ವರ್ಣನೆಗೆ ನಿಲುಕಲಾರದ್ದು. ಅವರು ಜ್ಯೋತಿಯಾಗಿ ಬೆಳಗಿ ಈ ನಾಡಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅಂತಹ ಮಹಿಮಾಪುರುಷನ ಜಯಂತ್ಯುತ್ಸವವು ಇಂದಿನ ಗುರುಪೂರ್ಣಿಮೆಗೆ ಸಾಕ್ಷಿಯಾಗಿರುವುದು ಯೋಗಾಯೋಗ ಎಂದು ನುಡಿದರು.

ಸಮಾರಂಭದ ಸಮ್ಮುಖ ವಹಿಸಿದ್ದ ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಸ್ವಾಮೀಜಿ ಮಾತನಾಡಿ, ೧೨ನೇ ಶತಮಾನ ಈ ಪ್ರಪಂಚದ ಸುವರ್ಣಯುಗ. ಸಮಾನತೆಯು ಜಾರಿಗೆ ಬರಬೇಕೆಂದು ಬಸವಣ್ಣ ತಂದ ಕ್ರಾಂತಿ, ಶೋಷಣೆಮುಕ್ತ ಸಮಾಜ ನಿರ್ಮಾಣಕ್ಕೆ ಕಟಿಬದ್ಧರಾಗಿ ನಿಂತರು. ಅಂತಹವರ ಜತೆಗೆ ಆಪ್ತರಾಗಿದ್ದವರು ಅಪ್ಪಣ್ಣನವರು.

ಅವರನ್ನು ಯಾವುದೋ ಮೌಢ್ಯದಿಂದ ಹೀಗಳೆಯುವ ಅವಮಾನಿಸುವ ಪ್ರವೃತ್ತಿ ಸಲ್ಲದ ನಡವಳಿಕೆ. ಅವರು ಮತ್ತು ಅವರ ಕಾಯಕವಿಲ್ಲದೇ ಹೋದರೆ ಮನುಷ್ಯರ ಶರೀರದ ತಲೆಯ ಭಾಗ ಯಾವ ರೀತಿ ಇರುತ್ತಿತ್ತು ಎನ್ನುವುದನ್ನೊಮ್ಮೆ ಊಹಿಸಿಕೊಳ್ಳಿ ಎಂದ ಶ್ರೀಗಳು, ಅಪ್ಪಣ್ಣ ಸಮಾಜ ಮೌಢ್ಯಗಳಿಗೆ ಸೊಪ್ಪು ಹಾಕದೆ ಮುನ್ನಡೆಯಬೇಕೆಂದು ಸಲಹೆ ಮಾಡಿದರು. ಇದೇ ಸಂದರ್ಭದಲ್ಲಿ ಸವಿತಾ ಸಮಾಜದವರ ಸೇವೆಯು ಮನನೀಯ ಎಂದು ಶ್ಲಾಘಸಿದರು.

ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾಧ್ಯಕ್ಷ ಕೆ. ನಾಗರಾಜ ಸಮಾರಂಭ ಕುರಿತು ಮಾತನಾಡಿದರು.

ಸಮಾರಂಭದಲ್ಲಿ ಬಸವ ಮುರುಘೇಂದ್ರ ಶ್ರೀಗಳು, ಈಚಲನಾಗೇನಹಳ್ಳಿ ಗೋವಿಂದ ಶ್ರೀಗಳು ಸೇರಿದಂತೆ ಹಡಪದ ಅಪ್ಪಣ್ಣ ಸಮಾಜದ ಚಿತ್ರದುರ್ಗ ತಾಲ್ಲೂಕು ಅಧ್ಯಕ್ಷ ವಿ. ವೃಷಭೇಂದ್ರಪ್ಪ, ಗಂಗಮ್ಮ, ಸವಿತಾ ಸಮಾಜದ ಅಧ್ಯಕ್ಷ ಪ್ರಸನ್ನ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಹಡಪದ ಅಪ್ಪಣ್ಣ ಸಮಾಜದ ರವಿಕುಮಾರ, ಶಿವಕುಮಾರ, ಪ್ರಕಾಶ ಹಂಪನೂರು, ಜಯದೇವಪ್ಪ, ಸುರೇಶ ಆರ್., ಚನ್ನವೀರಪ್ಪ, ಶ್ರೀನಿವಾಸ, ಚನ್ನಬಸಪ್ಪ, ನಾಗರಾಜ, ವೀರೇಶ್, ಕೆ. ನಾಗರಾಜ, ಅಜ್ಜಯ್ಯ, ಪಾರ್ವತಮ್ಮ, ಅನುಪಮ, ತಾರಾ ಸೇರಿದಂತೆ ಸವಿತಾ ಸಮಾಜದ ರಂಜಿತ್, ಶ್ರೀನಿವಾಸ, ಅರುಣ, ಸಂತೋಷ, ರಾಜು, ಅನಿತ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು. ಹಾಗೆಯೇ ವಿವಿಧ ಸಮಾಜ ಸಂಘಟನೆಗಳ ಮುಖಂಡರಾದ ಬಸವರಾಜ ಕಟ್ಟಿ, ನಾಗರಾಜ ಸಂಗಮ್, ಕಣಿವೆಮಾರಮ್ಮ ತಿಪ್ಪೇಸ್ವಾಮಿ, ಕೋದಂಡರಾಮ, ಎಸ್. ವೀರೇಶ್, ಕವಿ ಗಂಗಾಧರಪ್ಪ, ಕುಂಚಿಗ ಕುಬೇಂದ್ರಪ್ಪ, ಸಿದ್ದಾಪುರದ ಮಲ್ಲಿಕಾರ್ಜುನಪ್ಪ, ಬಸವಾಭಿಮಾನಿ ಚಂದ್ರಣ್ಣ ಸೇರಿದಂತೆ ಆಯುಷ್ ಯೋಗ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಶಾಲಾಕಾಲೇಜುಗಳ ಕೆಲ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಎಸ್.ಜೆ.ಎಂ. ರೆಸಿಡೆನ್ಸಿಯಲ್ ಶಾಲೆಯ ನಿರ್ವಹಣೆಯಲ್ಲಿ ನಡೆದ ಸಮಾರಂಭಕ್ಕೆ ಕಲಾವಿದ ಉಮೇಶ್ ಪತ್ತಾರ ಹಡಪದ ಅಪ್ಪಣ್ಣನವರ ವಚನವನ್ನು ಹಾಡಿದರು. ಶಿಕ್ಷಕಿ ವೀಣಾ ಸ್ವಾಗತಿಸಿದರು. ಮುಖ್ಯಶಿಕ್ಷಕಿ ಗಾಯತ್ರಿ ಶರಣು ಸಮರ್ಪಣೆ ಮಾಡಿದರು. ಮತ್ತೋರ್ವ ಶಿಕ್ಷಕಿ ಭಾರತಿ ಕಾರ್ಯಕ್ರಮ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *