‘ಭವರೋಗಕ್ಕೂ ಚಿಕಿತ್ಸೆ ನೀಡುವ ಶರಣ ವೈದ್ಯ ಸಂಗಣ್ಣ’

ಸಿದ್ದಣ್ಣ ಅಂಗಡಿ
ಸಿದ್ದಣ್ಣ ಅಂಗಡಿ

ಗದಗ:

ಶರಣ ಧರ್ಮದಲ್ಲಿ ಪ್ರತಿಯೊಂದು ಕಾಯಕಕ್ಕೆ ತುಂಬ ಮಹತ್ವವಿದೆ. ಆದರೆ ಬರೀ ಕಾಯಕವಷ್ಟೇ ಅಲ್ಲ ಸಮಾಜಮುಖಿ ಕೆಲಸಗಳಿಗೂ ಈ ಧರ್ಮ ಒತ್ತು ನೀಡುತ್ತದೆ.

ಹಾಗೆಯೇ ಅಂದು ಕಲ್ಯಾಣದ ಅನುಭವ ಮಂಟಪದಲ್ಲಿದ್ದ ಅಸಂಖ್ಯ ಶರಣರಲ್ಲಿ, ವೈದ್ಯ ಕಾಯಕ ಮಾಡುತ್ತಾ ಜೊತೆಗೆ ತಮ್ಮ ವೈದ್ಯಕೀಯ ಜ್ಞಾನವನ್ನು ಆಧ್ಯಾತ್ಮಿಕತೆಯೊಂದಿಗೆ ಬೆರೆಸಿ ತಮ್ಮದೇ ಆದ ರೀತಿಯಲ್ಲಿ ಸೇವೆಯನ್ನು ಶರಣ ವೈದ್ಯ ಸಂಗಣ್ಣನವರು ಮಾಡುತ್ತಿದ್ದರೆಂದು ನಿವೃತ್ತ ಶಿಕ್ಷಕಿ ನೀಲಲೋಚನಾ ಹಂಚಿನಾಳ ತಿಳಿಸಿದರು.

ಬಸವದಳದ ಬಸವ ಮಂಟಪದಲ್ಲಿ ನಡೆದ ೧೭೦೮ನೇ ಶರಣ ಸಂಗಮ ಕಾರ್ಯಕ್ರಮದಲ್ಲಿ ಬಸವಾದಿ ಶರಣ ‘ವೈದ್ಯ ಸಂಗಣ್ಣನವರ’ ಕುರಿತು ಉಪನ್ಯಾಸ ಮಾಡುತ್ತಿದ್ದರು.

ಬಸವಣ್ಣನವರ ಸಮಸಮಾಜ ಕಲ್ಪನೆಯ ಸೌಧವೇ ಅನುಭವ ಮಂಟಪವಾಗಿತ್ತು. ಇಲ್ಲಿ ಹಲವಾರು ಕಾಯಕ, ಜಾತಿ, ಧರ್ಮ, ಅಂತಸ್ತುಗಳ ಶರಣರ ಮಿಳಿತವಾಗಿತ್ತು. ಅಲ್ಲಿ ನಡೆಯುತ್ತಿದ್ದ ಸತ್ಸಂವಾದಗಳಿಂದ ಶರಣ ಬಳಗವು ಅಧ್ಯಾತ್ಮಿಕತೆಯ ಜ್ಞಾನ ಸಂಪನ್ನತೆ ಹೊಂದಿ ಅದನ್ನು ವಚನಗಳ ಮೂಲಕ ಸಮಾಜಕ್ಕೆ ಧಾರೆ ಎರೆದರು. ಅಂತಹ ಶರಣರಲ್ಲಿ ವೈದ್ಯ ಸಂಗಣ್ಣನವರೂ ಒಬ್ಬರು.

ಅವರು ೧೧೬೦ರ ಅವದಿಯಲ್ಲಿದ್ದವರು. ಇವರ ಊರು ಕಲಬುರಗಿ ಆಗಿತ್ತು. ರೋಗಿಗಳಿಗೆ ಚಿಕಿತ್ಸೆ ನೀಡುವುದು ಇವರ ಕಾಯಕವಾಗಿತ್ತು. ಇವರ ಅಂಕಿತ ಹಲವಾರಿವೆ. ‘ಮರುಳಶಂಕರಪ್ರಿಯ ಸಿದ್ಧರಾಮೇಶ್ವರ’ ಎಂಬುದು ಒಂದಾಗಿದೆ. ಇವರ ಒಟ್ಟಾರೆ ೨೧ ವಚನಗಳು ಲಭ್ಯವಿವೆ ಎಂದರು.

ಇವರ ವಚನಗಳು ವೈದ್ಯ ಭಾಷೆಯಲ್ಲಿದ್ದು ಮಾನವ ಶರೀರದ ನಾಡಿಗಳು, ರೋಗಗಳ, ತ್ರಿದೋಷಗಳು ಮತ್ತು ವಿವಿಧ ಔಷಧಗಳ ಪರಿಭಾಷೆಯ ಮೂಲಕವೇ ಆತ್ಮಜ್ಞಾನ ಹಾಗೂ ಆಧ್ಯಾತ್ಮದ ತತ್ವಗಳನ್ನು ಬೋಧಿಸುತ್ತವೆ. ಕಾಯಿಲೆಗೆ ಔಷಧಿ ಎಷ್ಟು ಮುಖ್ಯವೋ ಹಾಗೆಯೇ ಸಂಸಾರದ ಭವರೋಗಕ್ಕೆ ಗುರಿಯಾದಾತನಿಗೆ ಶಿವಯೋಗದ ಚಿಕಿತ್ಸೆ ಬೇಕೆನ್ನುವರು.

ಅವರ ವಚನಗಳಲ್ಲಿ “ಕಕ್ಕಯ್ಯನೆನಗೆ ಕಾಮಧೇನುವಯ್ಯಾ, ಚೆನ್ನಯ್ಯನೆನಗೆ ಕಲ್ಪವೃಕ್ಷವಯ್ಯಾ. ಹರಳಯ್ಯನೆನಗೆ ಚಿಂತಾಮಣಿಯಯ್ಯಾ. ಕೆಂಬಾವಿಯ ಭೋಗಯ್ಯನೆನಗೆ ಸುದಾಭ್ದಿಯಯ್ಯಾ, ಶಿವನಾಗಮಯ್ಯನೆನಗೆ ಪರುಷದ ಸಿರಿಯಯ್ಯಾ, ಇಂತೀವರ ಕಾರುಣ್ಯ ಪ್ರಸಾದವ ಕೊಂಡು ಬದಲಾದೆನಯ್ಯಾ, ಮರುಳಶಂಕರಪ್ರಿಯ ಸಿದ್ಧರಾಮೇಶ್ವರಯ್ಯಾ”.

ಅನುಭವ ಮಂಟಪದ ಶರಣರ ಸಂಘದಲ್ಲಿದ್ದ ಸಂಗಣ್ಣನವರಿಗೆ ಅಲ್ಲಿದ್ದ ಶರಣರಾದ ಕಕ್ಕಯ್ಯ, ಚೆನ್ನಯ್ಯ, ಹರಳಯ್ಯ ಸೇರಿದಂತೆ ಹಲವಾರು ಶರಣರು ನೀಡಿದ ಮಾರ್ಗದರ್ಶನದಿಂದ ತಾನು ಸಂಪೂರ್ಣ ಬದಲಾಗಿ ಅಹಂಕಾರ ಮದಾದಿಗಳನ್ನು ತೊರೆದು ಶರಣತ್ವ ಹೊಂದಿದ್ದನ್ನು ಇಲ್ಲಿ ಸಂಗಣ್ಣನವರು ಹೇಳುವರು.

ಬಹುತೇಕ ಸಂಗಣ್ಣನವರ ಬಹಳಷ್ಟು ವಚನಗಳು ದೇಹ, ಮನದ ರೋಗಗಳಿಗೆ ಶಿವಯೋಗವೇ ಪರಮ ಔಷಧಿ ಎಂದು ಹೇಳುವರು. ತಾವು ಅನುಭವಮಂಟಪದಲ್ಲಿ ಇತರ ಶರಣರ ಒಡನಾಟದಲ್ಲಿ ಬದಲಾಗಿದ್ದುದನ್ನು ಹೇಳುವರು. ಒಟ್ಟಾರೆ ಸಂಗಣ್ಣನವರ ಬದುಕು, ವಚನಗಳು ಸರ್ವ ಶರಣ ಸಂಕುಲಕ್ಕೆ ಆದರ್ಶ ಪ್ರಾಯವಾಗಿವೆ ಎಂದು ನೀಲಲೋಚನಾ ಹಂಚಿನಾಳ ವಚನಗಳ ಅನೇಕ ಉದಾಹರಣೆ ನೀಡುತ್ತಾ ಉಪನ್ಯಾಸಗೈದರು.

ಶರಣತತ್ವ ಚಿಂತಕಿ ಗಿರಿಜಕ್ಕ ಧರ್ಮರೆಡ್ಡಿಯವರು ಕೂಡಾ ಸಂಗಣ್ಣನವರ ಬಗೆಗೆ ಮಾತನಾಡುತ್ತಾ, ವೈದ್ಯ ಸಂಗಣ್ಣನವರ ವಚನಗಳು ದೇಹರೋಗದ ಜೊತೆಗೆ ಅದಕ್ಕಿಂತಲೂ ಕೆಟ್ಟದಾದ ಮನೋವಿಕಾರ, ಮಲೀನತೆ ತೊಳೆದು ಅಂತರಂಗವನ್ನು ಫಳಫಳ ಹೊಳೆವಂತೆ ಮಾಡುತ್ತವೆ. ವಚನ ಸಾಹಿತ್ಯ ಅಧ್ಯಯನದಿಂದ ಮಾನವ ತನ್ನ ಅಂತರಂಗವನ್ನು ಶುದ್ಧಗೊಳಿಸಿಕೊಳ್ಳಲು ಸಾಧ್ಯವೆಂದರು.

ಮಂಗಳಕ್ಕ ಕಾಮಣ್ಣನವರು ಇತ್ತೀಚಿನ ತಮ್ಮ ಶ್ರೀಶೈಲದ ಪ್ರವಾಸದ ವಿವರಗಳನ್ನು ನೀಡಿದರು.

ಬಸವದಳದ ಅಧ್ಯಕ್ಷರಾದ ವಿ.ಕೆ. ಕರೇಗೌಡ್ರ ಅಧ್ಯಕ್ಷೀಯ ನುಡಿಗಳನ್ನಾಡಿದರು.  ಪ್ರಾರಂಭದಲ್ಲಿ ಶರಣೆ ನಾಗರತ್ನಾ ಅಸುಂಡಿ ಹಾಗೂ ನೀಲಮ್ಮ ಮರಳಿಯವರಿಂದ ವಚನ ಪ್ರಾರ್ಥನೆ ಜರುಗಿತು. ಅತಿಥಿಗಳಾಗಿ ಕಸ್ತೂರಮ್ಮ ಗೋಣಿ ಭಾಗಿಗಳಾಗಿದ್ದರು. ಸ್ವಾಗತವನ್ನು ಸಹನಾ ಆಲತಗಿ ಮಾಡಿದರು. ಸುಜಾತಾ ವಾರದ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ ಅಸುಂಡಿ ಶರಣು ಸಮರ್ಪಣೆ ಗೈದರು.

ಕೊನೆಗೆ ಇತ್ತೀಚಿಗೆ ಲಿಂಗೈಕ್ಯರಾದ ಸಿದ್ಧಲಿಂಗಪ್ಪ ವಾಲಿಯವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ವಚನ ಮಂಗಲದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *