ಕಾರಟಗಿ:
ತಾಲೂಕಿನ ನಂದಿಹಳ್ಳಿ ಆಯುಷ್ಮಾನ್ ಆರೋಗ್ಯ ಮಂದಿರದ ವತಿಯಿಂದ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಸನಮುಕ್ತ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.
ಇಲಕಲ್ಲಿನ ವಿಜಯ ಮಹಾಂತೇಶ್ವರ ಮಠದ ಲಿಂಗೈಕ್ಯ ಡಾ. ಮಹಾಂತ ಶಿವಯೋಗಿಗಳು ‘ಮಹಾಂತ ಜೋಳಿಗೆ’ ಹಿಡಿದು ತಿರುಗಾಡಿ, ಜನರಲ್ಲಿರುವ ತಮ್ಮ ಕೆಟ್ಟದಾದ ವ್ಯಸನ ಜೋಳಿಗೆಗೆ ಹಾಕಲು ಹೇಳಿದ್ದರು. ವ್ಯಸನಮುಕ್ತ ಸಮಾಜ ಕಟ್ಟಲು ಅವರು ಪ್ರಯತ್ನಿಸಿದ್ದರು.

ಪೂಜ್ಯರ ಜನ್ಮದಿನದ ಅಂಗವಾಗಿ ಅವರು ನೀಡಿರುವ ಸಂದೇಶವನ್ನು ವ್ಯಸನಮುಕ್ತ ದಿನವಾಗಿ ಆಚರಿಸಲಾಗುತ್ತಿದೆ.
ವ್ಯಸನಗಳಿಂದ ಮನುಷ್ಯನು ಆರ್ಥಿಕ ನಷ್ಟ, ಆರೋಗ್ಯ ನಷ್ಟ ಅನುಭವಿಸಿ ಸಮಾಜಕ್ಕೆ ಕಂಟಕಪ್ರಾಯನಾಗುತ್ತಾನೆ. ಮಕ್ಕಳು ವ್ಯಸನಗಳಿಂದ ದೂರವಿದ್ದು ತಮ್ಮ ಉತ್ತಮ ಭವಿಷ್ಯದ ಕಡೆಗೆ ಗಮನಹರಿಸಬೇಕು.

ಅಲ್ಲದೆ ಪಾಲಕರು ಮಕ್ಕಳ ಭವಿಷ್ಯ ಹಾಗೂ ಸಮಾಜದ ಆರೋಗ್ಯಕ್ಕಾಗಿ ಪ್ರಯತ್ನಪೂರ್ವಕವಾಗಿ ವ್ಯಸನಮುಕ್ತ ಸಮಾಜಕ್ಕಾಗಿ ದೃಢ ಮನಸ್ಸಿನಿಂದ ಹೆಜ್ಜೆ ಇಡಬೇಕು ಎಂದು ಸರಕಾರಿ ಆಯುಷ್ಮಾನ್ ಆರೋಗ್ಯ ಮಂದಿರದ ವೈದ್ಯಾಧಿಕಾರಿಗಳಾದ ಡಾ. ಶಿವಲಿಂಗಪ್ರಭು ಸುಂಕದ ತಿಳಿಸಿದರು.
ಶಾಲೆಯ ಮುಖ್ಯೋಪಾಧ್ಯಾಯರಾದ ವಿಜಯಕುಮಾರ ಮಾತನಾಡಿ, ಆರೋಗ್ಯಪೂರ್ಣ ಬದುಕಿಗೆ ವ್ಯಸನ ಮುಕ್ತರಾಗಿ ಬದುಕಲು ಕಾರ್ಯಾನ್ಮುಖರಾಗುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ವೈದ್ಯಾಧಿಕಾರಿಗಳು ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಸಿಬ್ಬಂದಿಗಳಿಗೆ ವ್ಯಸನಮುಕ್ತ ಪ್ರಮಾಣ ವಚನ ಬೋಧಿಸಿದರು.
ಶಾಲೆಯ ಶಿಕ್ಷಕ ಶಿಕ್ಷಕಿಯರು, ಸಿಬ್ಬಂದಿ ಶರಣಬಸವ ಹಾಜರಿದ್ದರು, ವೀರೇಶ ಶಿಕ್ಷಕರು ನಿರೂಪಿಸಿ, ವಂದಿಸಿದರು.
