ಹೊಸಪೇಟೆ:
ಪೂಜ್ಯ ಡಾ.ಮಹಾಂತ ಶಿವಯೋಗಿಗಳವರು, ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನಮಠ, ಚಿತ್ತರಗಿ ಇಲಕಲ್ಲ ಇವರ ಜನ್ಮದಿನಾಚರಣೆಯನ್ನು ವ್ಯಸನ ಮುಕ್ತ ದಿನಾಚರಣೆಯನ್ನಾಗಿ ತಾಲೂಕ ಆಡಳಿತವತಿಯಿಂದ ತಾಲೂಕ ಕಚೇರಿಯಲ್ಲಿ ಶನಿವಾರ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾ ಘಟಕದ ಅಧ್ಯಕ್ಷರಾದ ಎಸ್. ಬಸವರಾಜ ಮಾವಿನಹಳ್ಳಿ ಅವರು ವ್ಯಸನಮುಕ್ತ ಸಮಾಜ ನಿರ್ಮಾಣದ ಪ್ರತಿಜ್ಞಾವಿಧಿ ಬೋಧಿಸಿದರು.
ಮಹಾಸಭೆಯ ಮಹಾ ಪ್ರಧಾನ ಕಾರ್ಯದರ್ಶಿಗಳಾದ ಡಾ. ಕೆ. ರವಿಂದ್ರನಾಥ ಅವರು ಮಾತನಾಡಿ, ಜಮಖಂಡಿ ತಾಲೂಕು ಮಳಲಿ ಗ್ರಾಮದಲ್ಲಿ ೧ ಆಗಸ್ಟ್ ೧೯೩೦ ರಲ್ಲಿ ಇಳಕಲ್ಲಿನ ಚತ್ತರಗಿ ಸಂಸ್ಥಾನ ಮಠದ ಪೂಜ್ಯರಾದ ಮಹಾಂತಸ್ವಾಮಿಗಳು ಜನಿಸಿದರು. ೪೮ ವರ್ಷಗಳ ಕಾಲ ಇಳಕಲ್ಲ-ಚಿತ್ತರಗಿ ಸಂಸ್ಥಾನಮಠದ ಅಧಿಪತಿಗಳಾಗಿ ಸಮಾಜದ ಏಳಿಗೆಗೆ ದುಡಿದರು.

ಅವರ ಜನ್ಮದಿನವನ್ನು ವ್ಯಸನಮುಕ್ತ ದಿನಾಚರಣೆಯನ್ನಾಗಿ ಆಚರಿಸಲು ಸರಕಾರ ನಿರ್ಣಯ ತೆಗೆದುಕೊಂಡ ಹಿನ್ನೆಲೆಯಲ್ಲಿ ಇಂದು ತಾಲೂಕು ಕಚೇರಿಯಲ್ಲಿ ದಿನಾಚರಣೆಯನ್ನು ಆಚರಿಸುತ್ತಿರುವುದು ಸಂತೋಷದ ಸಂಗತಿಯೆಂದರು.
ಮಹಾಂತ ಜೋಳಿಗೆ ಹೆಸರಿನಲ್ಲಿ ಸಾಮಾಜಿಕ ದುಚ್ಚಟಗಳನ್ನು ಬಿಡಿಸಿ ಸಮಾಜವನ್ನು ಸನ್ಮಾರ್ಗದಲ್ಲಿ ನಡೆಸಬೇಕೆಂಬ ಪೂಜ್ಯರ ಸಂಕಲ್ಪವನ್ನು ನಾವೆಲ್ಲ ಅನುಸರಿಸಬೇಕಾಗಿದೆ ಎಂದರು.
ಕಾಯಕ-ದಾಸೋಹ ಮುಂತಾದ ಬಸವಾದಿ ಪ್ರಮಥರ ಆಚರಣೆಯಲ್ಲಿ ಬದುಕಿದ್ದ ಪೂಜ್ಯರು ಮಧ್ಯಪಾನ, ಧೂಮಪಾನಗಳಂಥ ವ್ಯಸನಗಳಿಂದ ದೂರವಾಗಬೇಕೆಂದು ತಮ್ಮ ಬದುಕಿನ್ನುದ್ದಕ್ಕೂ ಹೋರಾಡಿದವರು. ಅಂಥವರ ಹೆಸರಿನಲ್ಲಿ ಆಚರಿಸುತ್ತಿರುವ ವ್ಯಸನಮುಕ್ತ ದಿನಾಚರಣೆ ಪ್ರತಿಯೊಂದು ಶಾಲಾ ಕಾಲೇಜುಗಳಲ್ಲಿ ಆಚರಿಸುವುದರ ಮೂಲಕ ಆರೋಗ್ಯಕರ ಸಮಾಜವನ್ನು ನಿರ್ಮಿಸ ಬೇಕೆಂದು ರವೀಂದ್ರನಾಥ ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ತಾಲೂಕ ಆಡಳಿತ ಸಿಬ್ಬಂದಿ ಹಾಗೂ ಸಮಾಜದ ಗಣ್ಯರಾದ ಮಹಾಬಲೇಶ್ವರ ರೆಡ್ಡಿ, ಬುಡ್ಗ ಜಂಗಮ ಸಮಾಜದ ರಾಜ್ಯಾಧ್ಯಕ್ಷರಾದ ಸಣ್ಣಮಾರಪ್ಪ, ಹಡಪದ ಬಸವರಾಜಪ್ಪ, ಅಂಗಡಿ ದೊಡ್ಡಬಸಪ್ಪ, ಅಕ್ಕಿ ಮಲ್ಲಿಕಾರ್ಜುನ, ಡಾ. ಡಿ. ಬಸವರಾಜ, ಸೋಧ ವಿರುಪಾಕ್ಷಗೌಡ, ಉಮಾಮಹೇಶ್ವರ, ಯಮುನಪ್ಪ ಮುಂತಾದವರು ಉಪಸ್ಥಿತರಿದ್ದರು.
ಕಚೇರಿಯ ಸಿಬ್ಬಂದಿಯಾದ ಶಿರಸ್ತೆದಾರ ನಾಗರಾಜ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM
