ಬೀದರ:
ಗುರು ಮತ್ತು ದೇವರಲ್ಲಿನ ವ್ಯತ್ಯಾಸವು ತಾಯಿ ತಂದೆಯರ ವ್ಯತ್ಯಾಸದಂತೆ ಇದೆ. ಮಗುವನ್ನು ಸ್ವಚ್ಛಗೊಳಿಸಿ ಅಲಂಕರಿಸಿ ಬಿಟ್ಟಾಗ ತಂದೆ ಎತ್ತಿಕೊಂಡು ಮುದ್ದಿಸುವ ಹಾಗೆ, ದೇವರಿಗೆ ಸಲ್ಲುವಂತೆ ಭಕ್ತರನ್ನು ರೂಪಿಸಿ ತಿಕ್ಕಿ ತಿಕ್ಕಿ ತೊಳೆದು ದೇವನ ತೊಡುಗೆ ಮಾಡುವವ ಸದ್ಗುರು. ಅಂತೆಯೇ ಗುರುವಿನ ಕೈಹಿಡಿದು ದೇವನೆಡೆಗೆ ಪಯಣಿಸುವವ ಜಾಣ. ಎಂದು ಲಿಂಗಾಯತ ಮಹಾಮಠದ ಪೀಠಾಧಿಪತಿಗಳಾದ ಪೂಜ್ಯ ಪ್ರಭುದೇವ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು.
ಗೋರ್ಟಾದ ಲಿಂಗಾಯತ ಮಹಾಮಠದಲ್ಲಿ ತಿಂಗಳ ಮಾಸಿಕ ಶರಣ ಸಂಗಮ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಪೂಜ್ಯರು, ಗುರುಕೃಪೆಯಾದರೆ ಕರ್ಮಗಳೆಲ್ಲ ಬೆಚ್ಚಿ ಬೀಳುವವು. ಯಾರ ಬದುಕಿನಲ್ಲಿ ಗುರುವಿಲ್ಲವೋ ಅವರು ದಿಕ್ಕೇಡಿಗಳು. ದಿಕ್ಕು ತೋರಿಸುವ ದಿಕ್ಸೂಚಿ ಗುರು. ಮಾರ್ಗದರ್ಶಕ ಗುರು. ಆಕಾಶದಲ್ಲಿ ನಕ್ಷತ್ರ, ಸೂರ್ಯನಿದ್ದರೂ ಮನೆಯಲ್ಲಿ ಒಂದು ದೀಪ ಬೇಕಲ್ಲವೇ? ಹಾಗೆ ಮನೆಯ ದೀಪ ಗುರು- ಮನವನ್ನು ಬೆಳಗುವನು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶಂಭುಲಿಂಗ ಕಾಮಣ್ಣ ಮಾತನಾಡಿ, ಬಸವಣ್ಣನವರು ಜಗದ ಗುರು ಮರ್ತ್ಯದ ಮಾನವರ ಮನದ ಮೈಲಿಗೆಯ ತೊಳೆಯಬಂದವರು.
ಅಂತೆಯೇ ಅಲ್ಲಮಪ್ರಭುದೇವರು ಹೇಳುತ್ತಾರೆ, ಎನಗೆಯೂ ಗುರು ನಿನಗೆಯೂ ಗುರು ಜಗವೆಲ್ಲಕೆಯೂ ಗುರು ಕಾಣ ಗುಹೇಶ್ವರ ಎಂದು.
ಅದೇ ರೀತಿ ಚೆನ್ನಬಸವಣ್ಣನವರು ಹೇಳುತ್ತಾರೆ ಹರ ತನ್ನ ರೂಪವನ್ನು ತೋರಲೆಂದು ಗುರುವಾಗಿ ಬಂದ. ಪರಮಾತ್ಮ ತನ್ನ ಸಾಕಾರ ರೂಪವನ್ನು ತೋರಿಸಲು ಧರೆಗೆ ಗುರುವಾಗಿ ಬಂದವರು ಎಂದು ಹೇಳುತ್ತಾರೆ.
ಬಾಲ್ಯದಲ್ಲಿ ಹಣ್ಣು ಕೊಡುವವರು ಬಹಳ ಜನ,
ಯೌವನದಲ್ಲಿ ಹೆಣ್ಣು ಹೊನ್ನು ಕೊಡುವವರು ಬಹಳ ಜನ,
ಸತ್ತಾಗ ಮಣ್ಣು ಕೊಡುವವರು ಬಹಳ ಜನ,
ಆದರೆ ಬದುಕಿಗೆ ಒಂದು ದಾರಿ ತೋರುವವನು ಸದ್ಗುರು ಎಂದು ತಿಳಿಸಿದರು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅಲ್ಲಮಪ್ರಭು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಚಂದ್ರಕಾಂತ ಅಕ್ಕಣ್ಣ ಮಾತನಾಡಿ, ಇಂದಿನ ಯುವಪೀಳಿಗೆ ನೋಡಿದರೆ ಮನ ಮರುಗುತ್ತದೆ. ಗೊತ್ತು ಗುರಿ ಇಲ್ಲದೆ ಹಾಳಾಗಿ ಹೋಗುವ ಯುವಜನಕ್ಕೆ ದಾರಿ ತೋರಲೆಂದು ಲಿಂಗಾಯತ ಮಹಾಮಠದಲ್ಲಿ ಪ್ರತಿ ತಿಂಗಳ ಮಾಸಿಕ ಶರಣ ಸಂಗಮದ ಮುಖಾಂತರ ಸದ್ಗುಣಗಳನ್ನು ಬಿತ್ತುವ ಕಾರ್ಯ ಪೂಜ್ಯರು ಮಾಡುತ್ತಿರುವುದು ಶ್ಲಾಘನೀಯ.
ನೀರಿನಲ್ಲಿ ಮೀನು ಇದ್ದರೆ ನೀರು ಶುದ್ಧವಾಗುತ್ತದೆ ಅದೇ ರೀತಿ ಊರಿನಲ್ಲಿ ಜ್ಞಾನಿಗಳು ಇದ್ದರೆ ಊರು ಪರಿವರ್ತನೆಯಾಗುತ್ತದೆ. ಪರಿವರ್ತನೆ ಮಾಡುವ ಕಾರ್ಯ ಪೂಜ್ಯರು ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿಗಳಾಗಿ 37 ವರ್ಷ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಶರಣಬಸವ ಮಠಪತಿ ಇವರಿಗೆ ಲಿಂಗಾಯತ ಮಹಾಮಠದ ಶರಣರೆಲ್ಲಾ ಸೇರಿ ಪೂಜ್ಯರ ಸನ್ನಿಧಾನದಲ್ಲಿ ಅಭಿನಂದಿಸಿದರು.

ಆರತಿ ಚನ್ನಬಸವ ಯರನಾಳೆ, ಶ್ರೀದೇವಿ ಶರಣಬಸವ ಮಠಪತಿ ಮುಖ್ಯ ಅತಿಥಿಗಳಾಗಿದ್ದರು. ಅಧ್ಯಕ್ಷತೆಯನ್ನು ವೀರಶೆಟ್ಟಿ ರಾಜೋಳೆ ವಹಿಸಿದ್ದರು.
ಭಕ್ತಿ ದಾಸೋಹವನ್ನು ಮಲ್ಲಮ್ಮ ಸುಭಾಷ ಪತಂಗೆ ಮಾಡಿದರು. ನಿರೂಪಣೆಯನ್ನು ಪ್ರಜ್ವಲ ಪತಂಗೆ, ಸ್ವಾಗತ ಸಾನಿಧ್ಯ ಪತಂಗೆ, ವಚನಗಾಯನ ಗೌರಿ ಮಠಪತಿ, ಪ್ರಾರ್ಥನೆಯನ್ನು ನೀಲಮ್ಮನ ಬಳಗ, ಗೋರ್ಟಾ ಇವರು ಮಾಡಿದರು. ಲಿಂಗಾಯತ ಸೇವಾದಳ ಸಹಯೋಗ ನೀಡಿತು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM
