ಸಾಣೇಹಳ್ಳಿ:
ನಾವು 79 ವರ್ಷಗಳನ್ನು ಪೂರೈಸಿ 80ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದ್ದೇವೆ. ಆದರೆ ಈ ಅವಧಿಯ ಒಳಿತು-ಕೆಡಕುಗಳ ಸಿಂಹಾವಲೋಕನ ಮಾಡಿಕೊಳ್ಳಬೇಕಾಗಿದೆ.
ದೇಶದಲ್ಲಿ ಭ್ರಷ್ಟಾಚಾರ, ಬಡತನ ಹಾಗೂ ಅನ್ಯಾಯ ಮಿತಿಮೀರಿದ್ದು, ಮೌಲ್ಯ ಆಧಾರಿತ ಬದುಕು ಮತ್ತು ಕಾಯಕ ಪ್ರಜ್ಞೆಯನ್ನು ಮೈಗೂಡಿಸಿಕೊಂಡಾಗ ಮಾತ್ರ ಸ್ವಾತಂತ್ರ್ಯಕ್ಕೆ ನಿಜವಾದ ಸಾರ್ಥಕತೆ ಸಿಗುತ್ತದೆ” ಎಂದು ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

ಇಲ್ಲಿನ ಶಾಲಾ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ 80ನೇ ಸ್ವಾತಂತ್ರ್ಯ ದಿನಾಚರಣೆಯ ದ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಶಿಸ್ತು ಮತ್ತು ನೈರ್ಮಲ್ಯ ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗಬಾರದು. ಬಾಹ್ಯ ಸೌಕರ್ಯಗಳಿಂದ ನೆಮ್ಮದಿ ಸಿಗುವುದಿಲ್ಲ, ಬದಲಾಗಿ ಧ್ಯಾನ, ಮೌನ ಹಾಗೂ ಸತ್ಚಿಂತನೆಗಳ ಮೂಲಕ ಮನಸ್ಸನ್ನು ಸ್ವಚ್ಛಗೊಳಿಸಿಕೊಳ್ಳಬೇಕು.

ಕಾಯಕವೇ ಕೈಲಾಸ ಎಂಬ ತತ್ವವನ್ನು ನಾವು ಮರೆಯುತ್ತಿದ್ದೇವೆ. ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದುವುದು, ಬರೆಯುವುದು ಹಾಗೂ ವ್ಯಕ್ತಿತ್ವ ರೂಪಿಸಿಕೊಳ್ಳುವುದೇ ನಿಜವಾದ ಕಾಯಕ.
ದೇಶದ ನಾಯಕರಲ್ಲಿ ದೇಶಪ್ರೇಮ, ಸಂವಿಧಾನದ ಗೌರವ ಹಾಗೂ ಕಳಕಳಿ ಕೊರತೆಯಾದರೆ ರಾಷ್ಟ್ರ ನಿರ್ಮಾಣ ಸಾಧ್ಯವಿಲ್ಲ. ಇಂದಿನ ಮಕ್ಕಳು ದುಶ್ಚಟಗಳಿಂದ ದೂರವಿದ್ದು, ಬಾಲ್ಯದಲ್ಲೇ ಆದರ್ಶಗಳ ಬೀಜ ಬಿತ್ತಿ ಫಲವನ್ನು ಪಡೆಯಬೇಕೆಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ಥಳೀಯ ಸಲಹಾ ಸಮಿತಿಯ ಅಧ್ಯಕ್ಷ ಎ. ಸಿ. ಚಂದಣ್ಣ, “ನಮಗೆ ಸ್ವಾತಂತ್ರ್ಯ ತಂದುಕೊಟ್ಟ ಮಹನೀಯರ ತ್ಯಾಗ-ಬಲಿದಾನಗಳನ್ನು ಸ್ಮರಿಸುವುದು ನಮ್ಮ ಕರ್ತವ್ಯ. ವಿದ್ಯಾರ್ಥಿಗಳು ಬಾಲ್ಯದಲ್ಲೇ ಪಾನ್ ಮಸಾಲಾ, ಗುಟ್ಕಾದಂತಹ ದುಶ್ಚಟಗಳಿಗೆ ಬಲಿಯಾಗದೆ, ಶಿಸ್ತು ಮತ್ತು ಸ್ವಚ್ಛತೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸ್ಥಳೀಯ ಸಲಹಾ ಸಮಿತಿಯ ಉಪಾಧ್ಯಕ್ಷ ಎಸ್. ಆರ್. ಚಂದ್ರಶೇಖರಯ್ಯ ಮಾತನಾಡಿ, “ಬ್ರಿಟಿಷರ ಆಡಳಿತದಿಂದ ಹಿಡಿದು ಇಂದಿನವರೆಗಿನ ದೇಶದ ಬೆಳವಣಿಗೆಯನ್ನು ವಿದ್ಯಾರ್ಥಿಗಳು ಅರಿಯಬೇಕು. ಲಾಲಬಹಾದ್ದೂರ್ ಶಾಸ್ತ್ರಿ, ಡಾ. ರಾಜೇಂದ್ರ ಪ್ರಸಾದ ಅವರಂತಹ ಸರಳ ಹಾಗೂ ಆದರ್ಶ ನಾಯಕರ ಬದುಕು ನಮಗೆ ದಾರಿದೀಪ. ದೇಶದಲ್ಲಿ ವಿಜ್ಞಾನ, ತಂತ್ರಜ್ಞಾನ ಬೆಳೆದಿದ್ದರೂ ಬಡತನ, ಜಾತಿವಾದ ಹಾಗೂ ಅಪರಾಧಗಳ ವಿರುದ್ಧ ಗಂಭೀರ ಹೋರಾಟ ಮುಂದುವರಿಯಬೇಕಿದೆ,” ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳು ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಕುರಿತು ಭಾಷಣ ಹಾಗೂ ನೃತ್ಯರೂಪಕ ಮಾಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ಸಲಹಾ ಸಮಿತಿಯ ಪದಾಧಿಕಾರಿಗಳು, ಉಭಯ ಶಾಲೆಗಳ ಮುಖ್ಯಸ್ಥರು, ಶಿವಸಂಚಾರ ರಂಗಶಾಲೆಯ ಪ್ರಾಚಾರ್ಯರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಶಿಕ್ಷಕರಾದ ಬಸವನಗೌಡ ಪೋಲಿಸಪಾಟೀಲ ಹಾಗೂ ಶೋಭಾ ಎಸ್. ಪಿ. ಕಾರ್ಯಕ್ರಮ ನಡೆಸಿಕೊಟ್ಟರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH
