ವಚನ ನಿರ್ವಚನ: ಅಂಗ, ಲಿಂಗ ಬೇರೆಯಲ್ಲ, ಎರಡೂ ಒಂದೇ

ಬಸವ ಮೀಡಿಯಾ
ಬಸವ ಮೀಡಿಯಾ

ನಾವೆಲ್ಲ ಶಿವಾಂಶ ಸಂಭೂತರೇ ಆಗಬೇಕಾಗಿದೆ

ಗುಳೇದಗುಡ್ಡ:

ಬಸವ ಕೇಂದ್ರದ ವತಿಯಿಂದ ಶನಿವಾರ ಅಶೋಕ ನಾಯನೇಗಲಿ ಅವರ ಮನೆಯಲ್ಲಿ ‘ಮಹಾಮನೆ’ ಕಾರ್ಯಕ್ರಮ ನಡೆಯಿತು.

ಶರಣ ಅಲ್ಲಮಪ್ರಭುದೇವರ ಈ ಕೆಳಗಿನ ವಚನವನ್ನು ಅನುಭಾವಕ್ಕಾಗಿ ಆಯ್ದುಕೊಳ್ಳಲಾಗಿತ್ತು.

ಚಿತ್ತವೆಂಬ ಬಿತ್ತು ಬಲಿದು ಎರಡಾದಲ್ಲಿ

ಲಿಂಗವೆಂಬ ಕಳೆ ಅಂಕುರಿಸಿ ಮೂರ್ತಿ ಯಾಗಿತ್ತು                                                                    

ಆ ಮೂರ್ತಿಯ ಘನತೆಯ ಏನೆಂದು ಉಪಮಿಸಬಾರದು ನೋಡಿದರೆ ಮೂರ್ತಿ ˌ ಹಿಡಿವಡೆ ಬಯಲು!

ಆ ಮೂರ್ತಿಯೊಳಗದೆ ಈರೇಳುಲೋಕದ ಪ್ರಾಣ ಕಳೆ.

ಆ ಕಳೆಯ ಬೆಳಗು ತಾನೆ!

ನಮ್ಮ ಗುಹೇಶ್ವರ ಲಿಂಗದಲ್ಲಿ ಲೀಲಾ ಮೂಲದ ಪ್ರಥಮ ಬಿತ್ತಿ.

ಈ ವಚನವನ್ನು ಅನುಭಾವಕ್ಕೆ ಅಳವಡಿಸುತ್ತಾˌ, ಪ್ರೊ. ಶ್ರೀಕಾಂತ ಗಡೇದ ಅವರು ಈ ವಚನದ ಕರ್ತೃ ಅಲ್ಲಮ ಪ್ರಭುದೇವರು. ಅವರು ವ್ಯೋಮಮೂರುತಿˌ ವ್ಯೋಮಕಾಯ ಎಂದೆಲ್ಲ ಶರಣರಿಂದ ಹೊಗಳಿಕೆಗೆ ಪಾತ್ರರಾದವರು. ಅದಕ್ಕೆ ತಕ್ಕಂತೆಯೇ ಈ ವಚನವಿದೆ.

ಎಲ್ಲ ಶರಣರ ಚಿಂತನೆಗಳನ್ನು ನಿಷ್ಕರ್ಷಕ್ಕೆ ಒಳಪಡಿಸಿದವರು. ಸ್ವತ: ಇಲ್ಲಿ ಶರಣಧರ್ಮದ ಮೂಲ ತತ್ವವಾದ ಪರಶಿವತತ್ವˌಆ ಮೂಲಕ ಉಂಟಾದ ಅಂಗ ಲಿಂಗ ಎಂಬೆರಡಾದ ಪರಿಯನ್ನು ಇಲ್ಲಿ ವಿವರವಾಗಿ ತಿಳಿಸಿದ್ದಾರೆ.

ಇರುವ ಎಂಭತ್ನಾಲ್ಕು ಜೀವರಾಶಿಗಳಲ್ಲಿ ಆಂತರ್ಗತವಾದ ವಿಶ್ವ ಚೈತನ್ಯವೇ ಪರಶಿವತತ್ವ. ಹೀಗಾಗಿ ಇಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ. ಮಲತ್ರಯಕ್ಕೆ ಒಳಗಾಗಿ ಅಜ್ಞಾನದಿಂದ ಈ ಶರೀರವನ್ನೇ ನಾವೆಂದು ಭ್ರಮಿಸಿದ್ದೇವೆ. ಇದರಿಂದ ಹೊರಬಂದು ನಾವೆಲ್ಲ ಶಿವಾಂಶ ಸಂಭೂತರೇ ಆಗಬೇಕಾಗಿದೆ” ಎಂದು ತಿಳಿಸಿದರು.

ಡಾ. ಗಿರೀಶ ನೀಲಕಂಠಮಠ ಅವರು ಈ ವಚನದ ಆಳಕ್ಕಿಳಿದುˌ ಇಡೀ ಲಿಂಗತತ್ವವನ್ನೇ ವಿವರವಾಗಿ ಬಿಡಿಸಿಟ್ಟರು. ಶಿವ, ಜೀವ ಮತ್ತು ಜಗತ್ತು ಈ ಮೂರನ್ನು ಹಾಗೂ ಇವುಗಳ ಪರಸ್ಪರ ಸಂಬಂಧವನ್ನು ಎಲ್ಲ ಧರ್ಮ ಹಾಗೂ ದರ್ಶನಗಳು ಹೇಳುತ್ತ ಬಂದಿವೆ. ಸಾಂಖ್ಯ ವೈಶೇಷಿಕ ಮೊದಲಾದವುಗಳು ಶಿವಜೀವರ ಸಂಬಂಧ, ಜೀವಜಗತ್ತಿನ ಸಂಬಂಧಗಳನ್ನು ಕುರಿತು ನಾನಾ ಪ್ರಕಾರವಾಗಿ ಹೇಳಿವೆ. ಆದರೆ ಈ ವಚನದಲ್ಲಿ ಶ್ರೀಮದ್ ಅಲ್ಲಮರು ಶರಣ ಧರ್ಮವೆಂಬುದು ಅನುಭವ ಪ್ರಮಾಣವನ್ನು ಒಪ್ಪಿದ, ವಿಭೂತಿವಾದವನ್ನು ಹೊಂದಿದ ಸಮಗ್ರ ಧರ್ಮವಾಗಿದೆ ಎಂದು ಹೇಳುತ್ತಾ ಅದಕ್ಕೆ ಆಕರವಾಗಿ ಈ ವಚನವನ್ನು ಬಳಸಿಕೊಂಡರು.

ಮೂಲದಲ್ಲಿ ಆದಿ ಆಧಾರವಿಲ್ಲದಂದುˌ ಹಮ್ಮು ಬಿಮ್ಮುಗಳು ಇಲ್ಲದಂದುˌ ಸಚರಾಚರವೆಲ್ಲ ರಚನೆಗೆ ಬಾರದ ಮುನ್ನ ಏನೊಂದು ಇಲ್ಲದಂತ ಚೈತನ್ಯವಿತ್ತು. ಇದು ಎಲ್ಲಕ್ಕೂ ಮೂಲವಾದದ್ದು. ಇಂದಿನ ಆಧುನಿಕ ಲೋಕಕ್ಕಿಂತ ಹಿಂದಿನ ಶಿಲಾಯುಗ ಹಳೆ ಶಿಲಾಯುಗ ದೈತ್ತ್ಯೋರಗ ಯುಗಗಳನ್ನು ಕುರಿತು ನಮ್ಮ ವಿಜ್ಞಾನಿಗಳು ಏನನ್ನು ಹೇಳಿದ್ದಾರೋ ಅಲ್ಲಮಾದಿ ಶರಣರು ಅದನ್ನೇ ಹೇಳಿದ್ದಾರೆ.

ಆಗ ಕೇವಲˌ ತಾನೇ ತಾನಾದ ಪರಶಿವ ವಸ್ತುವಿತ್ತು. ಅದಕ್ಕೆ ಅಣು ಲಿಂಗವೆಂದು ಹೆಸರು. ನಿಕಲ ಲಿಂಗವೆಂದು ಕರೆಯುತ್ತಾರೆ. ಇದು ಮೂಲ ಚಿತ್ತದಿಂದ ಪ್ರಣವಾಕ್ಷರತ್ರಯಗಳಾಗಿ ನಾದ ಬಿಂದು ಕಲೆಗಳೊಂದಿಗೆ ಮೂಲ ಚಿತ್ತು ಸೇರಿ ಮಹಾಲಿಂಗವೆನಿಸುತ್ತದೆ. ಇದನ್ನೇ ಆದಿಶರಣನೆಂದು ಕರೆಯುತ್ತಾರೆ. ಈ ವಸ್ತುವೇ ಆತ್ಮ ಪರಮಾತ್ಮವೆಂದುˌ ಅಂಗ ಲಿಂಗವೆಂಬುದಾಗಿ ಎರಡಾಗಿತ್ತು.

ಇಂತಹ ಲಿಂಗವನ್ನು ಶೂನ್ಯವೆಂದು, ಬಯಲೆಂದು, ಘನವೆಂದು ಕರೆಯಲಾಗುತ್ತದೆ. ಹೀಗಾಗಿ ಅಂಗ ಮತ್ತು ಲಿಂಗಗಳು ಬೇರೆಯಲ್ಲ ಅವೆರಡು ಒಂದೇ. ಪರಮಾತ್ಮನ ಚಿಚ್ಛಕ್ತಿಯೇ ಅಂಗವಾಗಿ ಕಂಡರೂ ಅದು ಪರಬ್ರಹ್ಮ ಸ್ವರೂಪವೇ ಇದೆ.  ಈ ಅಂಗನಲ್ಲಿಯೇ ಯಾವೆಲ್ಲ ಜಗತ್ ಸೃಷ್ಟಿ ಇದೆ. ಇದು ಎಂಭತ್ನಾಲ್ಕು ಜೀವರಾಶಿಗಳಂತೆ ಭಿನ್ನ-ಭಿನ್ನವಾಗಿ ಕಂಡರೂ ಮೂಲ ಜೀವ ಚೈತನ್ಯ ಶಕ್ತಿ ಒಂದೇಯಾಗಿದೆ. ಅದನ್ನು ಶರಣರು ಅರಿತು ಅಂಗದ ಗುಣಗಳನ್ನು ಕಳೆದು ಹಾಕಿದಲ್ಲಿ ಲಿಂಗವೇ ಆಗಿ ಮೂಲವಸ್ತುವಿನಲ್ಲಿ ಸಮರಸಗೊಂಡು ಗುಹೇಶ್ವರನೆನೆಸಿಕೊಳ್ಳುತ್ತಾರೆ. ಒಟ್ಟಾರೆ ಕಾಣಬರುವ ಈ ಜಗತ್ತಿನ ಜೀವರಾಶಿಗಳೆಲ್ಲ ಪರಶಿವನೆ ಆಗಿದ್ದಾರೆ ಎಂಬುದು ಈ ವಚನದ ಸಾರವಾಗಿದೆ” ಎಂದು ನೀಲಕಂಠಮಠ ಅವರು ಸುಧೀರ್ಘವಾಗಿ ವಿವರಿಸಿದರು.

ಪ್ರೊ. ಎಂ.ಪಿ. ನೀಲಕಂಠಮಠ ಅವರು ಕಾರ್ಯಕ್ರಮದ ಸಮಾರೋಪ ಮಾಡಿದರು.

ಪ್ರಾರಂಭದಲ್ಲಿ ಶರಣೆ ಶ್ರೀದೇವಿ ಶೇಖಾ ಅವರು ವಚನ ಪ್ರಾರ್ಥನೆ ಮಾಡಿದರು. ಮುರುಗೇಶ ಶೇಖಾ ಅವರು ಸ್ವಾಗತಿಸಿದರು ಹಾಗೂ ಕೊನೆಯಲ್ಲಿ ಶರಣು ಸಮರ್ಪಣೆಗೆದರು.

ಕಾರ್ಯಕ್ರಮದಲ್ಲಿ ಪಾಂಡಪ್ಪ ಕಳಸಾ, ಪುತ್ರಪ್ಪ ಬೀಳಿಗೆˌ ಬಸಲಿಂಗಯ್ಯ ಕಂಬಾಳಿಮಠ, ರಾಚಣ್ಣ ಕೆರೂರ, ರಾಚಪ್ಪ ಎಂಡಿಗೇರಿ ಬಸವರಾಜ ಖಂಡಿ, ˌದಾನಪ್ಪ ಬಂಡಿˌ ಅಶೋಕ ನಾಯನೇಗಲಿ ಹಾಗೂ ಅವರ ಪರಿವಾರದˌ ಶರಣೆಯರಾದ ದಾಕ್ಷಾಯಣಿ ತೆಗ್ಗಿˌ ಸುರೇಖಾ ಗೆದ್ದಲಮರಿ, ವಿಶಾಲಾಕ್ಷಿ ಗಾಳಿ, ಪ್ರೊ. ಗಾಯತ್ರಿ ಕಲ್ಯಾಣಿ ಮೊದಲಾದವರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
3 Comments
  • ನಿಜ ಶರಣ ನುಡಿಗಳು 👏🏻👏🏻ಧನ್ಯವಾದಗಳು 🙏🏻

  • This is 100 percent correct and truth.
    All religions of world come to same realisation.
    Even science comes to this realisation.
    Consciousness and matter are one and same.
    From Consciousness matter came ? Or from matter Consciousness came is explained in this allama prabhudeva ‘s vachana.

Leave a Reply

Your email address will not be published. Required fields are marked *