ಒಂದೇ ವೇದಿಕೆಯಲ್ಲಿ 5,000 ಗಾಯಕರ ವಚನ ಗಾಯನ ಸಂಘಟಿಸುವ ಪ್ರಯತ್ನ
ದಾವಣಗೆರೆ:
‘ಜನರ ಬಾಹ್ಯ ಬದುಕು ಸುಂದರವಾಗಿ ಕಂಡರೂ ಆಂತರಿಕವಾಗಿ ಅದು ಕಲುಷಿತಗೊಂಡಿದೆ. ಇದರಿಂದ ಹೊರಬರಲು ಬಸವಾದಿ ಶರಣರ ತತ್ವಗಳ ಕಡೆ ಸಾಗಬೇಕು ಮತ್ತು ವಚನಗಳ ಹಿಂದಿನ ನಿಜಾರ್ಥವನ್ನು ತಿಳಿದುಕೊಂಡು ಅದನ್ನು ಮಕ್ಕಳಿಗೆ ತಲುಪಿಸಬೇಕು’ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಈಗಿನ ಮಕ್ಕಳು ಬೇರುಗಳಿಲ್ಲದ ಮರಗಳಂತೆ ಬೆಳೆಯುತ್ತಿದ್ದಾರೆ. ಮರ ಸಮೃದ್ಧವಾಗಲು ಬೇರುಗಳು ಆಳವಾಗಿ ಇಳಿಯಬೇಕು. ಮಕ್ಕಳು ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡಷ್ಟು ಸಂಸ್ಕಾರದ ಬೇರುಗಳನ್ನು ಇನ್ನಷ್ಟು ಗಟ್ಟಿಗೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.

ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಈಚೆಗೆ ಮಠಾಧೀಶರ ಒಕ್ಕೂಟದ ವತಿಯಿಂದ ನಡೆದ ‘ಸಾಮೂಹಿಕ ವಚನ ಗಾಯನ’ದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಮಕ್ಕಳು ಉನ್ನತ ಸ್ಥಾನಕ್ಕೆ ಏರಬೇಕು ಎಂಬ ಅಪೇಕ್ಷೆ ಎಲ್ಲ ಪಾಲಕರಲ್ಲಿರುತ್ತದೆ. ಇದೇ ಉದ್ಧೇಶದಿಂದ ಉನ್ನತ ಶಿಕ್ಷಣ ನೀಡಿ ಬೆಳೆಸುತ್ತಿದ್ದಾರೆ. ಹೀಗೆ ಬೆಳೆದು ದೊಡ್ಡವರಾದ ಮಕ್ಕಳು, ಪಾಲಕರನ್ನು ಮರೆಯುತ್ತಿದ್ದಾರೆ. ಇದರಿಂದ ಒಂಟಿತನ ಅನುಭವಿಸುವ ಪರಿಸ್ಥಿತಿ ವೃದ್ಧರಿಗೆ ಎದುರಾಗಿದೆ. ಶರಣರ ಸಂದೇಶ, ಮಾನವೀಯ ಮೌಲ್ಯಗಳನ್ನು ಬಾಲ್ಯದಿಂದಲೇ ಬೆಳೆಸಬೇಕು’ ಎಂದು ತಿಳಿಸಿದರು.
ಜೀವನದ ಎಲ್ಲ ಅಗತ್ಯಗಳನ್ನು ಹಣದಿಂದ ಮಾತ್ರವೇ ಈಡೇರಿಸಿಕೊಳ್ಳಲು ಸಾಧ್ಯವಿಲ್ಲ. ಮಾನವೀಯ ಸಂಬಂಧ, ಪ್ರೀತಿ, ವಿಶ್ವಾಸ ಮತ್ತು ಬಾಂಧವ್ಯ ಮುಖ್ಯವಾಗಿದೆ. ಮಕ್ಕಳಲ್ಲಿ ಇಂತಹ ಮೌಲ್ಯಗಳನ್ನು ಬಿತ್ತುವಲ್ಲಿ ವಚನಗಳು ಮಹತ್ತರ ಪಾತ್ರ ವಹಿಸುತ್ತವೆ. ವಚನಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ತುರ್ತು ಅಗತ್ಯವಿದೆ ಎಂದರು.
‘ಸಾಮೂಹಿಕ ಗಾಯನದ ಮೂಲಕ ವಚನ ಸಾಹಿತ್ಯವನ್ನು ಜನಮಾನಸಕ್ಕೆ ತಲುಪಿಸುವ ಪ್ರಯತ್ನ ಆರಂಭವಾಗಿದೆ. ಸಾವಿರಾರು ಜನರನ್ನು ಒಂದೆಡೆ ಸೇರಿಸಿ ಏಕಕಂಠದಲ್ಲಿ ವಚನ ಗಾಯನ ನಡೆಸುವ ಮೂಲಕ ಯುವಪೀಳಿಗೆಯನ್ನು ಸೆಳೆಯಬೇಕಿದೆ. ಈ ಮೂಲಕ ವಚನ ಸಾಹಿತ್ಯ ಮತ್ತು ಸಂಸ್ಕಾರದ ಬೀಜವನ್ನು ಬಿತ್ತಲು ಸಾಧ್ಯವಿದೆ’ ಎಂದರು.
‘ಒಂದೇ ವೇದಿಕೆಗೆ 5,000 ಗಾಯಕರು’:
ಶಿವಮೊಗ್ಗದ ಬಸವ ಮರುಳಸಿದ್ಧ ಸ್ವಾಮೀಜಿ ಮಾತನಾಡಿ, ಒಂದೇ ವೇದಿಕೆಗೆ 5,000 ಗಾಯಕರನ್ನು ತಂದು ವಚನ ಗಾಯನ ಸಂಘಟಿಸುವ ಪ್ರಯತ್ನ ನಡೆಯುತ್ತಿದೆ. ಶರಣ ಸಂಸ್ಕೃತಿ ಮತ್ತು ಬಸವತತ್ವದ ಪ್ರಭಾವ ಹೆಚ್ಚಾಗಿರುವ ದಾವಣಗೆರೆಯಲ್ಲಿ ಇದು ಯಶಸ್ವಿಯಾಗಲಿದೆ’ ಎಂದರು.
ಶಿವಮೊಗ್ಗದಲ್ಲಿ ನಡೆದ ವಚನ ಗಾಯನದಲ್ಲಿ 1,381 ಕಲಾವಿದರು ಪಾಲ್ಗೊಂಡಿದ್ದರು. ರಾಜ್ಯದ ಹಲವೆಡೆ ನಡೆದ ಇಂತಹ ಪ್ರಯೋಗಗಳು ಜನಮನ್ನಣೆ ಗಳಿಸಿವೆ’ ಎಂದರು.
ವಚನಗಳ ಸಮೂಹ ಗಾಯನದ ಸಮಾಲೋಚನಾ ಸಭೆಯ ಆರಂಭದಲ್ಲಿ ಅಕ್ಕನಾಗಮ್ಮನವರ ಜಯಂತಿಯ ಅಂಗವಾಗಿ ಅಕ್ಕನಾಗಮ್ಮನವರ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಸ್ವಾಮಿಗಳು, ಪಾಂಡೋಮಟ್ಟಿಯ ಗುರುಬಸವ ಸ್ವಾಮಿಗಳು ಹಾಗೂ ತುಮಕೂರಿನ ತಂಗನಹಳ್ಳಿಯ ಬಸವ ಮಹಾಲಿಂಗ ಸ್ವಾಮಿಗಳವರು ಇದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH
