ವೀರಶೈವ, ಲಿಂಗಾಯತ ಮಠಾಧೀಶರು ನನ್ನ ಸೇವೆ ಮಾಡಿದರೆ ಮುಕ್ತಿ: ಡಿಕೆಶಿ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ಇತ್ತೀಚೆಗೆ ನಗರದಲ್ಲಿ ನಡೆದ ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಸಮಾವೇಶದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಡಿದ ಮಾತುಗಳು ವೈರಲ್ ಆಗಿ ವ್ಯಾಪಕ ಆಕ್ರೋಶ ಹುಟ್ಟುಹಾಕಿದೆ.

ಸುಮಾರು 30 ನಿಮಷಗಳ ಭಾಷಣದ ಕೊನೆಯಲ್ಲಿ ಶಿವಕುಮಾರ್ ‘ವೀರಶೈವ ಲಿಂಗಾಯತ’ ಸಮುದಾಯವನ್ನು ತಾವು ರಕ್ಷಿಸುವುದಾಗಿ ಭರವಸೆ ನೀಡಿದರು.

ಮಾತನ್ನು ಮುಂದುವರೆಸಿ “ಮೂರು ಸಾವಿರ ಮಠ ಇದ್ಯೋ ಆರು ಸಾವಿರ ಮಠ ಇದ್ಯೋ, ನೀವೆಲ್ಲ ನನ್ನ ರಾಯಭಾರಿಗಳಾಗಿ ಸೇವೆ ಮಾಡಿ ಮುಕ್ತಿ ಪಡೆಯಿರಿ, ಆವಾಗಷ್ಟೇ ನಿಮಗೆ ಶಾಂತಿ ನಿಮ್ಮ ಅಭಿವೃದ್ಧಿ ಎಂದು ಹೇಳಿದರು.

ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಆಯೋಜಿಸಿದ್ಧ ಕಾರ್ಯಕ್ರಮದಲ್ಲಿ ನೆರೆದಿದ್ದವರು ಮುಖ್ಯಮಂತ್ರಿಗಳ ಮಾತು ಕೇಳಿ ಚಪ್ಪಾಳೆ ತಟ್ಟಿ ಸ್ವಾಗತಿಸಿದರು.

ಮುಖ್ಯಮಂತ್ರಿಗಳ ಮಾತಿನ ದಾಟಿಗೆ ಅದಕ್ಕೆ ಕಾರ್ಯಕ್ರಮದಲ್ಲಿ ಬಂದ ಪ್ರತಿಕ್ರಿಯೆಗೆ ತೀಕ್ಷ್ಣ ಆಕ್ಷೇಪ ವ್ಯಕ್ತವಾಗಿದೆ.

‘ವೀರಶೈವ ಲಿಂಗಾಯತ’ ಹೆಸರಿನ ಟ್ವಿಟರ್ ಖಾತೆಯೊಂದು ಮುಖ್ಯಮಂತ್ರಿಗಳ ಮಾತಿಗೆ ಯಾವುದೇ ರೀತಿಯ ವಿರೋಧ ವ್ಯಕ್ತಪಡಿಸದೆ ವೇದಿಕೆಯಲ್ಲಿದ್ದ ಪಂಚಪೀಠಾಧೀಶರು ಚಪ್ಪಾಳೆ ತಟ್ಟಿ ಸಹಮತ ಸೂಚಿಸಿದ್ದನ್ನು ಖಂಡಿಸಿದೆ.

“ಧೀರೋದಾತ್ತವಾಗಿ ಭಾಷಣ ಮಾಡುವ ಸಚಿವ ಈಶ್ವರ ಖಂಡ್ರೆ ಹಾಗೂ ವಿಜಯಾನಂದ ಕಾಶಪ್ಪನವರ್ ನಮ್ಮ ಧರ್ಮದ ಮರ್ಯಾದೆಯನ್ನು ಮೂರು ಕಾಸಿಗೆ ಮಾರಿದ್ದಾರೆ.

ಇದೇ ರೀತಿ ಬೇರೆ ಸಮುದಾಯದ ಕುರಿತು ಹೇಳಿಕೆ ನೀಡಿದ್ದರೆ, ಆ ಸಮುದಾಯದ ನಾಯಕರು ಅದಕ್ಕೆ ತಕ್ಕ ಉತ್ತರ ನೀಡುತ್ತಿದ್ದರು. ಆದರೆ, ನಮ್ಮ ಸಮುದಾಯದ ಧಾರ್ಮಿಕ ಹಾಗೂ ಐತಿಹಾಸಿಕ ವಿಚಾರಗಳ ಕುರಿತು ಅವಹೇಳನಕಾರಿ ಅಥವಾ ವ್ಯಂಗ್ಯಾತ್ಮಕ ಹೇಳಿಕೆಗಳು ಬಂದಾಗಲೂ, ಅದನ್ನು ಪ್ರಶ್ನಿಸದೆ ಚಪ್ಪಾಳೆ ತಟ್ಟುವುದು ನಮ್ಮ ಧರ್ಮದ ದುರ್ದೈವ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

‘ಶಿವಕುಮಾರ ವೀರಶೈವ, ಲಿಂಗಾಯತ ಮಠಗಳ ಕುರಿತು ಹಗುರವಾಗಿ ಮಾತನಾಡಿದ್ದಾರೆ. ಇದರಿಂದ ನಾಡಿನ ವೀರಶೈವ, ಲಿಂಗಾಯತ ಸಮುದಾಯದವರಿಗೆ ಅವಮಾನವಾಗಿದ್ದು, ಮುಖ್ಯಮಂತ್ರಿ ತಕ್ಷಣ ವೀರಶೈವ, ಲಿಂಗಾಯತ ಸ್ವಾಮೀಜಿಗಳ ಕ್ಷಮೆ ಕೇಳಬೇಕು’ ಎಂದು ಗದಗ ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಆನಂದಗೌಡ ಪಾಟೀಲ ಒತ್ತಾಯಿಸಿದ್ದಾರೆ.

ಈ ಕುರಿತು ಬುಧವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ಮುಖ್ಯಮಂತ್ರಿ ಸ್ಥಾನದಲ್ಲಿರುವವರು ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ತುಂಬಾ ಎಚ್ಚರಿಕೆ ಹಾಗೂ ಜವಾಬ್ದಾರಿಯಿಂದ ಮಾತನಾಡಬೇಕು ಎಂದು ತಿಳಿಸಿದ್ದಾರೆ.

‘ಹುಬ್ಬಳ್ಳಿಯ ಮೂರುಸಾವಿರ ಮಠವು ನಾಡಿನ ಸುಪ್ರಸಿದ್ಧ ಲಿಂಗಾಯತ ಮಠವಾಗಿದ್ದು, ಸಮಾರಂಭದಲ್ಲಿ ಮಾತನಾಡುವ ಭರದಲ್ಲಿ ಡಿ.ಕೆ. ಶಿವಕುಮಾರ ಅವರು, ಹುಬ್ಬಳ್ಳಿಯ ಮೂರುಸಾವಿರ ಮಠದ ಕುರಿತು ‘ಮೂರುಸಾವಿರ ಮಠವಿದೆಯೋ, ಆರಸಾವಿರ ಮಠವಿದೆಯೋ…’ ಎಂದು ತುಂಬಾ ಹಗುರವಾಗಿ ಮಾತನಾಡಿರುವುದು ಅಕ್ಷಮ್ಯ’ ಎಂದಿದ್ದಾರೆ.

‘ಮಠಾಧೀಶರು ನಮ್ಮ ಸೇವೆ ಮಾಡಬೇಕು ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಶಿವಕುಮಾರ ಅವರು ಮಠಾಧೀಶರಿಗಿಂತಲೂ ದೊಡ್ಡವರಾಗಲು ಹೊರಟಿದ್ದಾರೆ. ಮಠಾಧೀಶರು ಎಲ್ಲರಿಗಿಂತ ದೊಡ್ಡವರು ಎನ್ನುವ ಪರಂಪರೆ ನಮ್ಮ ಸಂಪ್ರದಾಯದಲ್ಲಿದೆ. ನಾಡಿನ ಹಲವಾರು ಮಠಾಧೀಶರ ಸಮ್ಮುಖದಲ್ಲಿ ಶಿವಕುಮಾರ ಆಡಿರುವ ಮಾತುಗಳು ಸಂಪ್ರದಾಯ ವಿರೋಧಿ’ ಎಂದು‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ನಾಯಕ ಚಲವಾದಿ ನಾರಾಯಣಸ್ವಾಮಿ ಕೂಡ ಶಿವಕುಮಾರ್ ಹೇಳಿಕೆ ಖಂಡಿಸಿದ್ದಾರೆ.

Share This Article
1 Comment
  • ಒಬ್ಬ ಮುಖ್ಯ ಮಂತ್ರಿಯಾಗಿ ನಾಡಿನ ಬಹುದೊಡ್ಡ ಸಮಾಜದ ಸ್ವಾಮೀಜಿಗಳ ಬಗ್ಗೆ ಇಷ್ಟು ಕೀಳಾಗಿ ಯಾರೂ ಮಾತಾಡಿಲ್ಲ.
    ಇವರ ಈ ಸೊಕ್ಕಿನ ಮಾತಿಗೆ ವೇದಿಕೆಯಲ್ಲಿದ್ದ ಯಾರೂ ಸಮರ್ಪಕ ಉತ್ತರ ನೀಡದೆ ಇದ್ದುದು ಇನ್ನೂ ನೋವಿನ ಸಂಗತಿ.

    ಒಂದಂತೂ ನಿಜ ನಮಗೆ ಕೆಲವೊಂದು ಅನುಕೂಲ ಮಾಡಿ ಕೊಟ್ಟಿದ್ದಾರೆ ಅಂತ ನಾವು ಯಾವ ರಾಜಕೀಯ ಪಕ್ಷಕ್ಕೂ ಅವಶ್ಯಕತೆಗಿಂತ ಹೆಚ್ಚಿನ ಮರ್ಯಾದೆ ತೋರಿಸುವುದು ಸಲ್ಲದು. ಅದಕ್ಕಿಂತಲೇ ನಾನು ಮೊದಲಿನಿಂದಲೂ ಕರ್ನಾಟಕದ ಈ ಮೂರೂ ರಾಜಕೀಯ ಪಕ್ಷಗಳಿಂದ ಸಮಾನ ದೂರ ಕಾಯ್ದುಕೊಳ್ಳಬೇಕೆಂದು ಪ್ರತಿಪಾದಿಸಿದ್ದು.
    ನಮ್ಮ ಸಂಘಟನೆಗಳು ಬಲಿಷ್ಟವಾದರೆ ನಮ್ಮ ಸ್ವಾಮೀಜಿಗಳು ಇಂಥ ನೀಚರ ಸೇವೆ ಮಾಡುವುದಲ್ಲ, ಈ ನೀಚರು ನಮ್ಮ ಸೇವೆ ಮಾಡಲು ಮುಂದಾಗಬಹುದು.
    ಇಂಥ ಅಗೌರವದ ಮಾತನಾಡಿದ್ದಕ್ಕೆ ಡಿಕೆಶಿ ಎಲ್ಲ ಲಿಂಗಾಯತರ ಕ್ಷಮೆ ಕೇಳಲೇಬೇಕು.

Leave a Reply

Your email address will not be published. Required fields are marked *