ದಾವಣಗೆರೆ
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಸಂಜೆ 3,600 ಗಾಯಕರು ವಚನಗಳನ್ನು ಹಾಡಿ, ಸುಂದರವಾದ ವಚನ ನಾದಲೋಕ ನಿರ್ಮಿಸಿ, ಬೆಣ್ಣೆನಗರಿಯ ಇತಿಹಾಸದಲ್ಲಿ ಒಂದು ದಾಖಲೆ ಸೃಷ್ಟಿಸಿದರು.
ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಸವ ತತ್ವಾಭಿಮಾನಿಗಳು, ವಚನಾಸಕ್ತರು, ವಿದ್ಯಾರ್ಥಿಗಳು, ಗಾಯಕರು ತುಂಬು ಉತ್ಸಾಹದಿಂದ ನಿಗದಿತ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿಯೇ ಬಂದು ತಮಗೆ ಮೀಸಲಿರಿಸಿದ್ದ ಸ್ಥಳದಲ್ಲಿ ಆಸೀನರಾಗಿದ್ದುದು ಅವರ ಉತ್ಸಾಹಕ್ಕೆ ಸಾಕ್ಷಿಯಾಗಿತ್ತು.

ಬಸವಣ್ಣನವರ ಮೂರ್ತಿಗೆ ಸಾಣೇಹಳ್ಳಿಯ ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮಿಜಿ, ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ಬಸವತತ್ವ ಪೀಠ, ಚಿಕ್ಕಮಗಳೂರಿನ ಬಸವ ಮರುಳಸಿದ್ದ ಸ್ವಾಮೀಜಿ, ಚಿತ್ರದುರ್ಗ ಮುರುಘಾಮಠದ ಆಡಳಿತ ಮಂಡಳಿ ಸದಸ್ಯರಾದ ಬಸವಕುಮಾರ ಸ್ವಾಮೀಜಿ ಹಾಗೂ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.


ಕಾರ್ಯಕ್ರಮದ ಕುರಿತು ಪ್ರಾಸ್ತವಿಕವಾಗಿ ಪಂಡಿತಾರಾದ್ಯ ಸ್ವಾಮೀಜಿಯವರು ಮಾತನಾಡಿ, ಮಕ್ಕಳು ನಿತ್ಯವೂ ವಚನ ಸಾಹಿತ್ಯವನ್ನು ಅಭ್ಯಾಸ ಮಾಡಿ ಅಳವಡಿಸಿಕೊಂಡರೆ ನಾಡಿನ ಸತ್ಪ್ರಜೆಗಳು ಆಗುವುದರಲ್ಲಿ ಅನುಮಾನವಿಲ್ಲ.
ಜಗತ್ತಿನ ಮೊಟ್ಟಮೊದಲ ಪಾರ್ಲಿಮೆಂಟ್ ಅನುಭವ ಮಂಟಪದಲ್ಲಿ 770 ಅಮರಗಣಂಗಳು ತಮ್ಮ ನೈಜ ಅನುಭಾವವನ್ನು ವಚನಗಳ ಮುಖಾಂತರ ದಾಖಲಿಸಿದರು. ವಚನ ಸಾಹಿತ್ಯವು ಜಗತ್ತಿನ ಅತ್ಯಂತ ಶ್ರೇಷ್ಠ ಸಾಹಿತ್ಯವಾಗಿದೆ. ಜನಸಾಮಾನ್ಯರಲ್ಲಿ ವಚನಗಳ ಚಿಂತನೆಗಳನ್ನು ಬಿತ್ತಲು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಬಸವಣ್ಣನವರ 32 ವಚನಗಳು ಹಾಗೂ ಕಲ್ಯಾಣ ಗೀತೆ ಸೇರಿದಂತೆ 33 ವಚನಗಳನ್ನು ಗಾಯಕರು ರಾಗಬದ್ಧವಾಗಿ ಹಾಡಿದ್ದುದು ನೆರೆದ ಸಾವಿರಾರು ಸಭಿಕರಿಗೆ ಹೊಸದೊಂದು ಲೋಕವನ್ನೇ ಸೃಷ್ಟಿಸಿದಂತೆ ಭಾಸವಾಯಿತು.
ಪ್ರತಿ ವಚನಕ್ಕೂ ಮುನ್ನ ಪೂಜ್ಯರು ಹಾಗೂ ಗಣ್ಯರು ಅದರ ತಾತ್ಪರ್ಯವನ್ನು ಸೂಚ್ಯವಾಗಿ ಹೇಳುತ್ತಿದ್ದುದು ವಿಶೇಷವಾಗಿತ್ತು.
ಸಂಸದೆ ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, ವಚನಗಳು ಮನುಷ್ಯನ ಅಂತರಂಗ, ಬಹಿರಂಗ ಶುದ್ಧಿ ಮಾಡುತ್ತವೆ. ಬಸವಾದಿ ಶಿವಶರಣರ ವಿಚಾರಧಾರೆಗಳು ಜಗತ್ತಿಗೆ ಅತ್ಯಮೂಲ್ಯ ಸಂದೇಶಗಳನ್ನು ಸಾರುತ್ತವೆ ಎಂದರು.

ರಾಜ್ಯ ಮುಜರಾಯಿ, ಮೀನುಗಾರಿಕೆ, ಒಳನಾಡು ಜಲಸಾರಿಗೆ ಸಚಿವರಾದ ಕೆ. ಎಸ್. ಬಸವಂತಪ್ಪ ಅವರು ಮಾತನಾಡಿ, ವಚನ ನಾದಲೋಕ ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಕಡ್ಡಾಯವಾಗಿ ಆಯೋಜಿಸಬೇಕು. ವಚನಗಳು ಪಠ್ಯವಾಗಬೇಕು, ಈ ಪ್ರಯತ್ನಕ್ಕೆ ಪೂಜ್ಯ ಸ್ವಾಮೀಜಿಗಳು ಮುಂದೆ ಬಂದರೆ ಸರ್ಕಾರದ ಜೊತೆಗಿದ್ದು ಸಹಕರಿಸುತ್ತೇನೆ ಎಂದರು.
ಕಾರ್ಯಕ್ರಮ ನಿರ್ವಹಿಸಲು ಗ್ಯಾಲರಿಯಲ್ಲಿ 102 ಸ್ಟ್ಯಾಂಡ್ ಮೈಕ್ ಗಳು, 12 ಕಾರ್ಡ್ಲೆಸ್, 8 ಏರ್ ಇನ್ ದ್ವನಿವರ್ಧಕಗಳು, 70 ಸ್ಪೀಕರ್, ಗ್ಯಾಲರಿ ಸುತ್ತಲೂ 165 ಲೈಟ್ಗಳನ್ನು ಅಳವಡಿಸಲಾಗಿತ್ತು.

4000 ಸಾವಿರ ಆಸನ, 5,000 ಜನರಿಗೆ ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಮಹಿಳೆಯರು ಬಾದಾಮಿ ಬಣ್ಣದ ಸೀರೆ, ಪುರುಷರು ಶ್ವೇತವರ್ಣದ ಅಂಗಿ ಮತ್ತು ಪಂಚೆಯ ಡ್ರೆಸ್ ಕೋಡ್ ನಲ್ಲಿ ಕಂಗೊಳಿಸಿದರು.
ವಿಧಾನಪರಿಷತ್ ಸದಸ್ಯರಾದ ಕೆ.ಎಸ್. ನವೀನ್, ಧನಂಜಯ ಸರ್ಜಿ ಆಗಮಿಸಿದ್ದರು.

ಈ ಅಭೂತಪೂರ್ವ ಕಾರ್ಯಕ್ರಮಕ್ಕೆ ಶಾಲಾ ಕಾಲೇಜುಗಳಿಗೆ ತೆರಳಿ ವಚನ ಅಭ್ಯಾಸ ಮಾಡಿಸಿ, ಗಾಯನ ಸಾರಥ್ಯ ವಹಿಸಿದ ಯಶಾ ದಿನೇಶ, ಚೇತನಕುಮಾರ ಜೆ., ನಾಗರಾಜ ಎಚ್. ಎಸ್., ಶ್ರೀಧರ ಹೆಚ್.ಎಂ., ಮಾನಸ ವಿ., ಸಂಗೀತಾ ರಾಘವೇಂದ್ರ, ಸಹನಾ ಮಂಜುನಾಥ, ರೇವಣಸಿದ್ದಪ್ಪ ಎಂ.ಕೆ., ಖಾದರ್ ಪಿಂಜಾರ್ ಸಾಹೇಬ, ಹೆಗ್ಗೆರೆ ರಂಗಪ್ಪ, ಮಲ್ಲಿಕಾರ್ಜುನ ಶಾನಭೋಗ, ಚಿನ್ಮಯಿ ಕುಮಾರಿ ಸಂಗೀತ ಶಿಕ್ಷಕರಿಗೆ ವೇದಿಕೆಯ ಮೇಲೆ ಪೂಜ್ಯರು, ಗಣ್ಯರು ಸನ್ಮಾನಿಸಿದರು.

ಕಾರ್ಯಕ್ರಮಕ್ಕೆ ದಾಸೋಹ ಸೇವೆ ನೀಡಿದ ಎಲ್ಲಾ ಶರಣರನ್ನು ಹಾಗೂ ಸಹಕಾರ ನೀಡಿದ ಎಲ್ಲಾ ಸಂಘಟನೆಯವರನ್ನು ಸ್ಮರಿಸಲಾಯಿತು. ಪೊಲೀಸ್ ಇಲಾಖೆಯವರು ಅಚ್ಚುಕಟ್ಟಾಗಿ ತಮ್ಮ ಕಾರ್ಯನಿರ್ವಹಿಸಿ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದರು.

ಶರಣ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಹೆಚ್.ಕೆ. ಲಿಂಗರಾಜು ಎಲ್ಲರನ್ನು ಸ್ವಾಗತಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷೆ ಸುಮತಿ ಜಯಪ್ಪ ನಿರೂಪಿಸಿದರು. ವಿವಿಧ ಸಂಘಟನೆಯವರು, ವಚನ ಗಾಯಕರು ಸೇರಿ ಸುಮಾರು 5500 ಜನ ಸಮಾರಂಭದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಅಭೂತಪೂರ್ವಗೊಳಿಸಿದರು.

ಓಂ ಶ್ರೀ ಗುರು ಬಸವ ಲಿಂಗಾಯ ನಮಃ🙏🙏
ನಮ್ಮ ದಾವಣಗೆರೆ ನಮ್ಮ ಹೆಮ್ಮೆ
ಇಂತಹ ವಚನ ನಾದಲೋಕ ಕಾರ್ಯಕ್ರಮಗಳು ಪ್ರತಿ ತಾಲ್ಲೂಕು ಮಟ್ಟದಲ್ಲಿ ನೆಡೆಸಬೇಕೆಂದು ಪೂಜ್ಯ ಗುರುಗಳಲ್ಲಿ ಮನವಿ
ಶರಣು ಶರಣಾರ್ಥಿಗಳು🙏🙏🙏
ಒಳ್ಳೆಯ ಕಾರ್ಯಕ್ರಮವಾಗಿದೆ ಜೈ ಬಸವ ಶರಣು ಶರಣಾರ್ಥಿ