‘ಅಸಮಾನತೆ, ಮೂಢನಂಬಿಕೆ, ವಿರುದ್ಧ ಸಿಡಿದೆದ್ದ ಲಿಂಗಾನಂದ ಸ್ವಾಮೀಜಿ’

ಬಸವ ಮೀಡಿಯಾ
ಬಸವ ಮೀಡಿಯಾ

ಅನುಭಾವ ಶ್ರಾವಣ: ಶರಣ ಚಿಂತನ ಮಾಲಿಕೆ

ಚಿತ್ರದುರ್ಗ:

ಯಾರ‍್ಯಾರ ಬದುಕು ಯಾವಾಗ ಯಾವಾಗ ಏನೇನು ತಿರುವು ಪಡೆದುಕೊಳ್ಳುತ್ತದೋ ಹೇಳಲಿಕ್ಕೆ ಬರುವುದಿಲ್ಲ. ಅಂತಹ ಸಂದರ್ಭ ಮೊದಲು ಸಂಗಮೇಶನಾಗಿದ್ದವರು ಕಡುಬಡತನದಲ್ಲಿ ಹುಟ್ಟಿ ಅವರಿವರ ಮನೆಯಲ್ಲಿ ಊಟ ಮಾಡಿ ಬೆಳೆದು ಹಂತ ಹಂತವಾಗಿ ಪ್ರಾಥಮಿಕ ಹಂತದಿಂದ ಪದವಿಯವರೆಗಿನ ಶಿಕ್ಷಣವನ್ನು ವಿದ್ಯಾರ್ಥಿ ವೇತನದಲ್ಲಿಯೇ ಮುಗಿಸುತ್ತಿರುವಾಗಲೇ ಎಡಪಂಥೀಯ ಧೋರಣೆಯ ಪ್ರಭಾವಕ್ಕೆ ಒಳಗಾಗಿ ಸಾಮಾಜಿಕ ಅಸಮಾನತೆ, ಮೂಢನಂಬಿಕೆ, ಅವೈಜ್ಞಾನಿಕ ವಿಚಾರಗಳ ವಿರುದ್ಧ ಮನಸ್ಥಿತಿ ರೂಪಿಸಿಕೊಂಡಿದ್ದ ಯುವಕ.

ಮುಂದೆ ಬಸವತತ್ವದ ವಿಚಾರಗಳಿಗೆ ಮನಸೋತು ಕಾವಿ ಲಾಂಛನ ಪಡೆದು ಹೊಸ ಜೀವನಕ್ಕೆ ಅಡಿ ಇಟ್ಟವರೆ ಕೂಡಲಸಂಗಮ ಬಸವಧರ್ಮ ಪೀಠದ ಸ್ವಾಮಿ ಲಿಂಗಾನಂದ ಶ್ರೀಗಳು ಎಂದು ನಿವೃತ್ತ ಉಪನ್ಯಾಸಕರು, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಪ್ರಧಾನಕಾರ್ಯದರ್ಶಿಗಳೂ ಆದ ಜಿ.ಟಿ. ನಂದೀಶ ಹೇಳಿದರು.

ಅವರು ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಶ್ರಾವಣ ಮಾಸದ ಪ್ರಯುಕ್ತ ಆಯೋಜಿಸಿರುವ ಅನುಭಾವ ಶ್ರಾವಣ ಶರಣಚಿಂತನ ಮಾಲಿಕೆಯಲ್ಲಿ ಗುರುವಾರ ಸಂಜೆ ಪಿಳ್ಳೆಕೇರನಹಳ್ಳಿ ಬಾಪೂಜಿ ವಿದ್ಯಾಸಂಸ್ಥೆಯ ಆವರಣದಲ್ಲಿ ಏರ್ಪಡಿಸಿದ್ದ ಕೂಡಲಸಂಗಮ ಬಸವಧರ್ಮಪೀಠದ ಸ್ಥಾಪಕರಾದ ಲಿಂಗೈಕ್ಯ ಲಿಂಗಾನಂದ ಸ್ವಾಮಿಗಳ ಜೀವನ ಸಾಧನೆ ಬಗ್ಗೆ ಮಾತನಾಡುತ್ತಿದ್ದರು.

ಲಿಂಗಾನಂದ ಶ್ರೀಗಳಿಗೆ ಸಮತವಾದ ಮತ್ತು ಜಾತ್ಯಾತೀತವಾದದ ಮೇಲೆ ರೂಪುಗೊಂಡ ಬಸವಧರ್ಮ ತಲೆಯೊಳಗೆ ಹೊಕ್ಕ ನಂತರ ಮತ್ತೆ ಯಾವ ವಿಚಾರಗಳ ಕಡೆಗೂ ತಿರುಗಿ ನೋಡದೆ ಬಸವಣ್ಣನನ್ನೇ ಸಂಪೂರ್ಣವಾಗಿ ಒಪ್ಪಿಕೊಂಡರು. ನಂತರದಲ್ಲಿ ಪ್ರವಚನದಲ್ಲಿ ಖ್ಯಾತಿ ಹೊಂದಿದ್ದ ಮಲ್ಲಿಕಾರ್ಜುನ ಸ್ವಾಮಿಗಳಿಂದ ಲಿಂಗದೀಕ್ಷೆ ಪಡೆಯುತ್ತಾರೆ.

ಮಂದೆ ಎಂ.ಎ. ತತ್ವಜ್ಞಾನ ಓದಿ ಧಾರವಾಡದ ನವಕಲ್ಯಾಣ ಮಠದ ಕುಮಾರ ಶ್ರೀಗಳವರ ವಚನ ವಾಙ್ಞಯಕ್ಕೆ ಪ್ರಭಾವಿತರಾಗುತ್ತಾರೆ. ಇದರಿಂದ ಬೌದ್ಧಿಕತೆ ಪಕ್ವಗೊಳ್ಳುತ್ತ ಹೋಗಿ ಇವರು ಸಹ ಅದ್ವಿತೀಯ ಪ್ರವಚನ ಪಟುವಾಗಿ ರೂಪುಗೊಂಡು ಒಂದು ರೀತಿ ವಿವೇಕಾನಂದರ ರೀತಿ ಎಲ್ಲರನ್ನೂ ಆಕರ್ಷಿಸುತ್ತಾರೆ ಎಂದು ಹೇಳಿದರು.

ಮುಂದೆ ಅಖಿಲ ಭಾರತ ವೀರಶೈವ ಮಹಾಧಿವೇಶನದಲ್ಲಿ ಭಾಗಿಯಾಗಿ ಮಾಡಿದ ವಿದ್ವತ್‌ಪೂರ್ಣ ಭಾಷಣಕ್ಕೆ ನೆರದವರಿಂದ ಅಭಿನಂದನಾ ಪೂರ್ವಕ ಮೆಚ್ಚುಗೆ ವ್ಯಕ್ತವಾಗುತ್ತದೆ. ನಂತರ ಸ್ವತಂತ್ರವಾಗಿ ಬಸವತತ್ವ ಪ್ರಚಾರ ಕೈಗೊಂಡ ಇವರಿಗೆ ಕೆಲ ಸಾಂಸ್ಥಿಕ ಮಠಾಧೀಶರುಗಳಿಂದ ವಿರೋಧ ವ್ಯಕ್ತವಾಗುತ್ತದೆ. ಅದರಲ್ಲಿಯೂ ಚಿತ್ರದುರ್ಗದಲ್ಲಿ ಪ್ರವಚನ ಮಾಡುತ್ತಿರುವಾಗ ಪ್ರಭಾವ ಹೊಂದಿದ ಯುವತಿ ರತ್ನಮ್ಮ ತಾನೂ ಧರ್ಮ ಪ್ರಚಾರಕ್ಕೆ ಬರುವುದಾಗಿ ಹೇಳಿದಾಗ ಅದಕ್ಕೆ ಸಮ್ಮತಿ ನೀಡಿ ಪ್ರಥಮವಾಗಿ ಮಹಿಳೆಯರಿಗೂ ಧಾರ್ಮಿಕ (ಲಾಂಛನ) ದೀಕ್ಷೆ ನೀಡಿದ ಹೆಗ್ಗಳಿಕೆ ಲಿಂಗಾನಂದ ಶ್ರೀಗಳದ್ದಾಗಿದೆ.

ಹೀಗೆ ಬಸವತತ್ವ ಪ್ರಚಾರಕ್ಕೆ ಏನು ಅಗತ್ಯವೋ ಆ ಎಲ್ಲಾ ಕ್ರಮಗಳನ್ನು ಅನುಸರಿಸಿ ಹಿರಿಯೂರಿನಲ್ಲಿ ಪ್ರವಚನ ಮಾಡುತ್ತಿರುವಾಗಲೇ ೧೯೯೫ರಲ್ಲಿ ಶ್ರೀಗಳು ಬಯಲಾಗುತ್ತಾರೆ ಎಂಬಿತ್ಯಾದಿ ವಿಷಯಗಳನ್ನು ಸವಿಸ್ತಾರವಾಗಿ ಮಂಡಿಸಿದರು.

ಸಾನ್ನಿಧ್ಯ ವಹಿಸಿದ್ದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಮಾತನಾಡಿ, ಕೆಲವರು ಆರಾಧನೆ, ಅನುಸರಣೆ ಮತ್ತೆ ಕೆಲವರು ಅನುಸಂಧಾನದಲ್ಲಿ ತನ್ನ ದೈವಭಕ್ತಿಯನ್ನು ಕಂಡುಕೊಂಡು ಮುನ್ನಡೆಯುತ್ತಾರೆ. ಲಿಂಗಾನಂದ ಶ್ರೀಗಳು ಬಸವತತ್ವದ ಅನುಸಂಧಾನದಲ್ಲಿ ಅಗ್ರಗಣ್ಯರಾಗಿ ನಮ್ಮ ಮುಂದೆ ಇದ್ದಾರೆ.

ಫ.ಗು. ಹಳಕಟ್ಟಿಯವರ ನಂತರ ಬಸವತತ್ವದ ಪ್ರಖರ ವಿಚಾರಧಾರೆಯನ್ನು ಪ್ರಚಾರ ಮತ್ತು ಪ್ರಸಾರ ಮಾಡುವಲ್ಲಿ ಮುಂಚೂಣಿಯಲ್ಲಿದ್ದರು. ಬೇರೆಯವರಿದ್ದರೂ ಅವರಿಗೆ ತಮ್ಮ ಮಠದ ಜವಾಬ್ದಾರಿಗಳ ಜತೆಗೆ ಬಸವತತ್ವಕ್ಕಾಗಿ ಹೆಚ್ಚಿನ ಸಮಯ ಮೀಸಲಿರಿಸಲು ಆಗಿರಲಿಲ್ಲ. ಇವರದು ಬಸವತತ್ವಕ್ಕಾಗಿ ಮೀಸಲಿರಿಸಿದ ಬದುಕಾಗಿತ್ತು ಎಂದು ಸ್ಮರಿಸಿದರು.

ಬಸವಣ್ಣನವರ ವಿಚಾರದಲ್ಲಿ ಇವರು ಕ್ರಿಶ್ಚಿಯನ್ ಮಿಷನರಿಯಂತೆ ಕೆಲಸ ಮಾಡಿದರು. ಅವರಿದ್ದಾಗ ಉಪಟಳ ಕೊಟ್ಟವರೇ ಜಾಸ್ತಿ. ಅವರು ಕಟ್ಟಿದ ಬಸವ ಚಳುವಳಿಗೆ ಮತ್ತೀಗ ಚಿತ್ರದುರ್ಗ, ಗದಗ, ಇಳಕಲ್, ಭಾಲ್ಕಿ ಮತ್ತಿತರ ಮಠಗಳು ಹೆಚ್ಚಾಗಿ ಶ್ರಮಿಸುತ್ತಿವೆ. ಅವರು ದೀಕ್ಷೆ ನೀಡಿದ ಅನೇಕ ಸಾಧಕರು, ಸ್ವಾಮಿಗಳು ಸ್ವತಂತ್ರವಾಗಿಯೇ ಮಠ ಪೀಠ ಕಟ್ಟಿ ತತ್ವಪ್ರಚಾರಕ್ಕೆ ಮುಂದಾಗಿದ್ದಾರೆ. ಅವರು ಕಟ್ಟಾ ಬಸವತತ್ವ ಅನುಯಾಯಿ. ಅವರು ಕಟ್ಟಿದ ಬಸವದಳ ನಿಷ್ಠೂರವಾದಿತನಕ್ಕೆ ಹೆಸರು. ಬಸವತತ್ವಕ್ಕೆ ಧಕ್ಕೆ ಬಂದಾಗ ಪ್ರತಿಭಟಿಸುವುದರಲ್ಲಿ ಆ ಸಂಘಟನೆಯು ಮುಂದೆ ನಿಲ್ಲುತ್ತದೆಂದು ಇನ್ನು ಅನೇಕ ಸಂದರ್ಭಗಳನ್ನು ಉದಾಹರಿಸಿದರು.

ಈ ಸಂದರ್ಭದಲ್ಲಿ ಬಸವಮುರುಘೇಂದ್ರ ಶ್ರೀಗಳು ಮಾತನಾಡಿದರು.

ಗುರುಮಠಕಲ್ ಖಾಸಾಮಠದ ಶ್ರೀ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಸಮ್ಮುಖ ವಹಿಸಿದ್ದರು.

ಬಾಪೂಜಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೆ.ಎಂ. ವೀರೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ವಿವಿಧ ಸಮಾಜ, ಸಂಘ-ಸಂಸ್ಥೆಗಳ ಪದಾಧಿಕಾರಿಗಳಾದ ಎಸ್. ಷಣ್ಮುಖಪ್ಪ, ಪ್ರೊ. ಲಿಂಗಪ್ಪ, ಬಸವರಾಜ ಕಟ್ಟಿ, ಎ.ಎಂ. ರುದ್ರಪ್ಪ, ಜಂಬುನಾಥ, ಸಿದ್ದಾಪುರ ಮಲ್ಲಿಕಾರ್ಜುನಪ್ಪ, ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ, ಗೀತಾ ರುದ್ರೇಶ, ಶೇಷಣ್ಣಕುಮಾರ, ಡಾ. ಈಶ್ವರಪ್ಪ, ಹುರಳಿ ಬಸವರಾಜ, ಡಿ.ವಿ. ಮುರುಘೇಶ, ಜೆ.ಎಸ್. ಮಹಂತೇಶ, ಎಸ್. ವೀರೇಶ್, ಟಿ. ವೀರಭದ್ರಸ್ವಾಮಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ಸಮಾರಂಭದ ಆರಂಭಕ್ಕೆ ಉಮೇಶ ಪತ್ತಾರ ವಚನ ಪ್ರಾರ್ಥನೆ ಮಾಡಿದರು. ಡಾ. ಜಯಲಕ್ಷ್ಮಿ ಸ್ವಾಗತಿಸಿದರು. ರಂಗಕರ್ಮಿ ಕೆ.ಪಿ.ಎಂ. ಗಣೇಶ ಕಾರ್ಯಕ್ರಮ ನಿರೂಪಿಸಿದರು.

ನಂತರ ರವಿ ಬೆಳಗೆರೆಯವರ ಧ್ವನಿಯ ಓ ಮನಸೆ ಏಕವ್ಯಕ್ತಿ ರೂಪಕವನ್ನು ರಂಗಕರ್ಮಿ ದಂಪತಿಗಳಾದ ಸಾಣೇಹಳ್ಳಿಯ ವೈ.ಡಿ. ಬದಾಮಿ ಅಭಿನಯಿಸಿದರು. ಇವರ ಜತೆಗೆ ಮಂಜುಳಾ ಬದಾಮಿ ಸಹಕರಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
1 Comment
  • ನಾಡಿನಾದ್ಯಂತ ಬಸವ ತತ್ವವನ್ನು ಮೊದಲು ಬೀರಿದ ವ್ಯಕ್ತಿ ಶ್ರೀ ಲಿಂಗಾನಂದ ಸ್ವಾಮೀಜಿ ಯವರು

Leave a Reply

Your email address will not be published. Required fields are marked *