2026ರ ಬಸವ ಜಯಂತಿ ಯಶಸ್ವಿಗೊಳಿಸಿದ ಅಧ್ಯಕ್ಷ ಪಿ. ಮರಿಸ್ವಾಮಿ ಅವರಿಗೆ ಅಭಿನಂದನೆ
ಚಾಮರಾಜನಗರ:
ಚಾಮರಾಜನಗರ ಜಿಲ್ಲಾ ಬಸವ ಬಳಗಗಳ ಒಕ್ಕೂಟದ 2027ನೇ ಸಾಲಿನ ಬಸವ ಜಯಂತಿ ಆಚರಣೆ ಸಮಿತಿಯ ಅಧ್ಯಕ್ಷರಾಗಿ ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ನಗರದ ಶ್ರೀ ಸಿದ್ದಮಲ್ಲೇಶ್ವರ ವಿರಕ್ತಮಠದ ಆವರಣದಲ್ಲಿರುವ ಶ್ರೀ ಬಸವರಾಜಸ್ವಾಮಿ ಅನುಭವ ಮಂಟಪದಲ್ಲಿ ನಡೆದ 2026ನೇ ಸಾಲಿನ ಬಸವ ಜಯಂತಿ ಲೆಕ್ಕಪತ್ರ ಮಂಡನೆ ಹಾಗೂ ಕೃತಜ್ಞತಾ ಸಭೆಯಲ್ಲಿ ಈ ಆಯ್ಕೆ ನಡೆಯಿತು.

ಚಾಮರಾಜನಗರ ಮಠದ ಶ್ರೀ ಚನ್ನಬಸವಸ್ವಾಮೀಜಿಗಳ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷರಾಗಿದ್ದ ಪಿ. ಮರಿಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಮಹಾಸಭೆಯ ಕೇಂದ್ರ ಸಮಿತಿ ಸದಸ್ಯ ಹಾಗೂ ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷ ಎನ್ ರಿಚ್ ಮಹದೇವಸ್ವಾಮಿ ಪ್ರಸ್ತಾವಿಕವಾಗಿ ಮಾತನಾಡಿದರು.
ಒಕ್ಕೂಟದ ಖಜಾಂಚಿ ಸಿದ್ದಮಲ್ಲಪ್ಪ ಅವರು ಲೆಕ್ಕಪತ್ರ ಮಂಡಿಸಿದರು. 2026ರ ಬಸವ ಜಯಂತಿ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಅತ್ಯಂತ ಯಶಸ್ವಿಯಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಿದ ಹಿನ್ನೆಲೆಯಲ್ಲಿ ಪಿ. ಮರಿಸ್ವಾಮಿ ಅವರನ್ನು ಸಭೆಯಲ್ಲಿ ಅಭಿನಂದಿಸಿ ಕೃತಜ್ಞತೆ ಸಲ್ಲಿಸಲಾಯಿತು.
ಅಧ್ಯಕ್ಷ ಪಿ. ಮರಿಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಎಲ್ಲಾ ವೀರಶೈವ-ಲಿಂಗಾಯತ ಸಂಘ-ಸಂಸ್ಥೆಗಳನ್ನು ಒಂದೇ ವೇದಿಕೆಯಡಿ ತಂದು ಬಸವ ಬಳಗಗಳ ಒಕ್ಕೂಟ ರಚಿಸಿ, ಬಸವ ಜಯಂತಿಯನ್ನು ಜಿಲ್ಲಾದ್ಯಂತ ಅದ್ಧೂರಿಯಾಗಿ ಆಚರಿಸಲು ಎಲ್ಲರ ಸಹಕಾರ ದೊರೆಯಿತು.
ಜಿಲ್ಲೆಯ ಐದು ತಾಲೂಕು ಕೇಂದ್ರಗಳು, ಹೋಬಳಿಗಳು ಹಾಗೂ ಗ್ರಾಮಗಳಿಗೆ ಭೇಟಿ ನೀಡಿ ಬಸವ ಜಯಂತಿ ಆಚರಣೆಗೆ ಜನರನ್ನು ಸಂಘಟಿಸಲಾಯಿತು. ಮಠಾಧೀಶರು, ಸಮಾಜದ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಯುವಕರು ನೀಡಿದ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಯಿತು ಎಂದರು.
ಶ್ರೀಮಠದ ವತಿಯಿಂದ ಪ್ರಸಾದ ವ್ಯವಸ್ಥೆ ಮಾಡಿದ್ದರಿಂದ ಕಾರ್ಯಕ್ರಮದ ವೆಚ್ಚ ಕಡಿಮೆಯಾಗಿ, ರೂ. 3.47 ಲಕ್ಷ ಉಳಿತಾಯ ಮಾಡಲು ಸಾಧ್ಯವಾಯಿತು ಎಂದು ಅವರು ತಿಳಿಸಿದರು. ಬಸವ ಜಯಂತಿ ಯಶಸ್ಸಿಗೆ ಶ್ರೀಮಠಗಳ ಸಹಕಾರ ಹಾಗೂ ಸುತ್ತೂರು ಶ್ರೀಗಳ ಮಾರ್ಗದರ್ಶನ ಪ್ರಮುಖವಾಗಿತ್ತು ಎಂದು ಅವರು ಹೇಳಿದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ ಅವರು ಬಸವಧ್ವಜ ಸ್ವೀಕರಿಸಿ ಮಾತನಾಡಿ, ಜಿಲ್ಲೆಯ ಎಲ್ಲಾ ಮುಖಂಡರು ಹಾಗೂ ಸಂಘ-ಸಂಸ್ಥೆಗಳ ಪ್ರಮುಖರು ಸರ್ವಾನುಮತದಿಂದ ತಮ್ಮನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ. 2027ನೇ ಸಾಲಿನ ಬಸವ ಜಯಂತಿಯನ್ನು ಎಲ್ಲರ ಸಲಹೆ, ಸಹಕಾರ ಮತ್ತು ಮಾರ್ಗದರ್ಶನದೊಂದಿಗೆ ಸುತ್ತೂರು ಶ್ರೀಗಳು, ಚಾಮರಾಜನಗರದ ಶ್ರೀಗಳು ಹಾಗೂ ಜಿಲ್ಲೆಯ ಎಲ್ಲಾ ಮಠಾಧೀಶರ ನೇತೃತ್ವದಲ್ಲಿ ಇನ್ನಷ್ಟು ಅರ್ಥಪೂರ್ಣವಾಗಿ ಮತ್ತು ಅದ್ಧೂರಿಯಾಗಿ ಆಚರಿಸಲು ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದರು.

ಬಸವ ಜಯಂತಿಯಲ್ಲಿ ಜಿಲ್ಲೆಯ ಎಲ್ಲಾ ಬಸವಾನುಯಾಯಿಗಳು, ಸಂಘ-ಸಂಸ್ಥೆಗಳು, ಯುವಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಿತ ಪ್ರಯತ್ನ ಮಾಡಲಾಗುವುದು ಎಂದು ಅವರು ತಿಳಿಸಿದರು.
ಶ್ರೀ ಚನ್ನಬಸವಸ್ವಾಮೀಜಿ ಮಾತನಾಡಿ, ಶ್ರೀಮಠದೊಂದಿಗೆ ಕೈಜೋಡಿಸಿ ಜಿಲ್ಲಾ ಮಟ್ಟದಲ್ಲಿ ಬಸವ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ಬಸವ ಬಳಗಗಳ ಒಕ್ಕೂಟ ರಚಿಸಿರುವುದು ಸಂತಸದ ಸಂಗತಿ. ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಂತಸ ತಂದಿದ್ದು, ಅವರ ನೇತೃತ್ವದಲ್ಲಿ ಮುಂದಿನ ಬಸವ ಜಯಂತಿಯನ್ನು ಇನ್ನಷ್ಟು ಅರ್ಥಪೂರ್ಣವಾಗಿ ಆಚರಿಸಲು ಶ್ರೀಮಠದ ಸಂಪೂರ್ಣ ಸಹಕಾರ ಇರುತ್ತದೆ ಎಂದು ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ದೊಡ್ಡರಾಯಪೇಟೆ ಗಿರೀಶ ನಿರೂಪಿಸಿದರು, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ಕೆ. ರವಿಕುಮಾರ ಸ್ವಾಗತಿಸಿದರು. ಕೊಳ್ಳೇಗಾಲ ಮಹಾಸಭೆಯ ನಿರ್ದೇಶಕ ಪ್ರಭಾಕರ ಪ್ರಾರ್ಥಿಸಿದರು. ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಕಾಳನಹುಂಡಿ ಗುರುಸ್ವಾಮಿ, ಕೊಳ್ಳೇಗಾಲ ಮಹಾಸಭೆಯ ಅಧ್ಯಕ್ಷ ತಿಮ್ಮರಾಜಿಪುರ ಪುಟ್ಟಣ್ಣ, ಕೊಳ್ಳೆಗಾಲ ನೌಕರರ ಸಂಘದ ಪ್ರತಿನಿಧಿ ಮಲ್ಲೇಶಪ್ಪ, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ನಿರ್ದೇಶಕ ಸದಾಶಿವಮೂರ್ತಿ, ಸಂತೇಮರಳ್ಳಿ ಹೋಬಳಿ ಅಧ್ಯಕ್ಷ ಪರ್ವತಪ್ಪ, ಮಹಾಸಭೆಯ ರಾಜ್ಯ ಯುವ ಘಟಕದ ನಿರ್ದೇಶಕ ಪ್ರಣಯ, ಮಹಾಸಭೆಯ ಜಿಲ್ಲಾ ನಿರ್ದೇಶಕರುಗಳಾದ ಯಳಂದೂರು ಮಹಾಸಭೆಯ ಅಧ್ಯಕ್ಷ ದೇವರಹಳ್ಳಿ ಮಹದೇವಪ್ಪ, ತಾಳವಾಡಿ ಪಿರ್ಕಾ, ಬಸವ ಸಮಿತಿಯ ಶಾಂತಪ್ಪ, ಸೇರಿದಂತೆ ಬಸವ ಬಳಗಗಳ ಒಕ್ಕೂಟದ ಪದಾಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಹಾಗೂ ಬಸವಾನುಯಾಯಿಗಳು ಉಪಸ್ಥಿತರಿದ್ದರು.
