ಬಸವಶಕ್ತಿ ಶಿಬಿರಗಳಿಗೆ ಯಶಸ್ಸು ಹಾರೈಸಿದ ನೂತನ ಸಭಾಪತಿ ಜಿ.ಎಸ್. ಪಾಟೀಲ್

ಬಸವಶಕ್ತಿ ಶಿಬಿರಗಳನ್ನು ಎಲ್ಲಾ ತಾಲೂಕುಗಳಲ್ಲಿ ನಡೆಸಲು ಸಲಹೆ ನೀಡಿದ ಸಭಾಪತಿ

ಹೊಸಪೇಟೆ

ರಾಜ್ಯಾದ್ಯಂತ ಆರಂಭವಾಗಿರುವ ಬಸವಶಕ್ತಿ ಶಿಬಿರಗಳು ಯಶಸ್ವಿಯಾಗಿ ನಡೆಯಲೆಂದು ನೂತನ ಸಭಾಪತಿ ಜಿ. ಎಸ್. ಪಾಟೀಲ್ ಹಾರೈಸಿದ್ದಾರೆ.

ಶನಿವಾರ ವೈಕುಂಠ ಅತಿಥಿ ಗೃಹದಲ್ಲಿ ತಮ್ಮನ್ನು ಭೇಟಿಯಾದ ಜಾಗತಿಕ ಲಿಂಗಾಯತ ಮಹಾಸಭಾದ ತಂಡದೊಡನೆ ನಡೆಸಿದ ಸಭೆಯಲ್ಲಿ ಬಸವಶಕ್ತಿ ಶಿಬಿರಗಳಿಗೆ ಯಶಸ್ಸು ಹಾರೈಸಿದರು. ಬಗ್ಗೆ ಮಾತನಾಡಿದರು.

“ಬಸವ ಸಂಘಟನೆಗಳಲ್ಲಿ ರಾಜಕೀಯ ಪ್ರಜ್ಞೆ ಮೂಡಿಸುವುದು ಈಗ ನಡೆಯಬೇಕಾಗಿರುವ ಅತ್ಯಂತ ಜರೂರಿ ಕಾರ್ಯ. ಬಸವಶಕ್ತಿ ಶಿಬಿರಗಳು ಜಿಲ್ಲೆಗಳಿಗೆ ಸೀಮಿತವಾಗದೆ ತಾಲೂಕು, ಹೋಬಳಿ ಮಟ್ಟದಲ್ಲಿಯೂ ನಡೆಯಬೇಕು. ಮುಖ್ಯವಾಗಿ ಎಲ್ಲಾ ಒಳ ಪಂಗಡಗಳನ್ನು ಸೇರಿಸಿಕೊಂಡು ಈ ಶಿಬಿರಗಳು ನಡೆಯಬೇಕು,” ಎಂದು ಪಾಟೀಲರು ಹೇಳಿದರು.

“ಪಾಟೀಲರು ಬಸವತತ್ವದಲ್ಲಿ ಅಚಲವಾದ ನಂಬಿಕೆ ಇರುವ ರಾಜಕಾರಣಿ. ಸಭಾಪತಿಯಾಗಿ ಆಯ್ಕೆಯಾದ ಮೇಲೆ ಜಿಲ್ಲೆಗೆ ಮೊದಲ ಬಾರಿಗೆ ಬಂದಿದ್ದ ಅವರನ್ನು ಭೇಟಿಯಾಗಿ ಅಭಿನಂದಿಸಿದೆವು. ಹಲವಾರು ಪ್ರಚಲಿತ ವಿಷಯಗಳ ಬಗ್ಗೆ ಅವರೊಡನೆ ಚರ್ಚಿಸಿದೆವು, ಮುಖ್ಯವಾಗಿ ಲಿಂಗಾಯತ ಸ್ವತಂತ್ರ ಧರ್ಮ ಸ್ಥಾನಮಾನಕ್ಕೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದ ವತಿಯಿಂದ ಹಕ್ಕೊತ್ತಾಯ ಮಾಡಬೇಕೆಂದು ಮನವಿ ಮಾಡಿದೆವು” ಎಂದು ಜಿಲ್ಲಾ ಜೆಎಲ್ಎಂ ಅಧ್ಯಕ್ಷ ಬಸವರಾಜ ಮಾವಿನಹಳ್ಳಿ ಹೇಳಿದರು.

ಈ ಸಂದರ್ಭದಲ್ಲಿ ಲಿಂಗಾಯತ ಮತ್ತು ಬಸವಪರ ಸಂಘಟನೆಗಳ ಪ್ರಮುಖರಾದ ಡಾ. ಕೆ. ರವೀಂದ್ರನಾಥ, ಕೋರಿಶೆಟ್ರು ಲಿಂಗಪ್ಪ, ಜೆ.ಜೆ. ವಿರೂಪಾಕ್ಷ, ಅಕ್ಕಿ ಮಲ್ಲಿಕಾರ್ಜುನ, ಎಲ್. ಬಸವರಾಜ, ಗೊಗ್ಗ ಚೆನ್ನಬಸವರಾಜ, ಕೆ. ಕೊಟ್ರೇಶಪ್ಪ, ಮಲ್ಲಿಕಾರ್ಜುನ ಮೇತ್ರಿ, ಬಸವರಾಜ ಟಿ.ಎಚ್. ಮತ್ತಿತರರು ಉಪಸ್ಥಿತರಿದ್ದರು

ಪಾಟೀಲರಿಗೆ ವಿಭೂತಿ, ರುದ್ರಾಕ್ಷಿಮಾಲೆ ನೀಡಿ ಅವರೊಡನೆ ವಚನ ಪಠಿಸಲಾಯಿತು. ಜೊತೆಗೆ ಬಸವ ಮೀಡಿಯಾ ಪ್ರಕಾಶನದ ಎಸ್.ಎಂ. ಜಾಮದಾರ್ ಬರೆದಿರುವ ‘ನೂತನ ಅನುಭವ ಮಂಟಪ’ ಹಾಗೂ ಎಂ.ಎ. ಅರುಣ್ ಬರೆದಿರುವ ‘ಕಲಬುರ್ಗಿ ಕಲಿಸಿದ್ದು’ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಲಾಯಿತು.

ಬಸವ ಮೀಡಿಯಾ, ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಇತರ ಬಸವ ಸಂಘಟನೆಗಳ ಸಹಯೋಗದಲ್ಲಿ ಬಸವ ಶಕ್ತಿ ಶಿಬಿರಗಳನ್ನು ರಾಜ್ಯಾದ್ಯಂತ ಆಯೋಜಿಸಲಾಗುತ್ತಿದೆ.

ವಿಜಯನಗರ, ಗದಗ, ಕೊಪ್ಪಳ ಜಿಲ್ಲೆಗಳಲ್ಲಿಈಗಾಗಲೇ ಶಿಬಿರಗಳು ನಡೆದಿವೆ.

“ಸಭಾಪತಿಗಳ ಸಲಹೆಯಂತೆ ತಾಲೂಕುಗಳಿಗೆ ಬಸವ ಶಕ್ತಿ ಶಿಬಿರಗಳನ್ನು ಕೊಂಡೊಯ್ಯುವ ಪ್ರಯತ್ನವನ್ನು ಗಂಭೀರವಾಗಿ ಮಾಡಲಾಗುವುದು. ಎಲ್ಲಾ ಒಳ ಪಂಗಡಗಳ ಸದಸ್ಯರು ಈಗಾಗಲೇ ಈ ಶಿಬಿರಗಳಲ್ಲಿ ಭಾಗವಹಿಸುತ್ತಿದ್ದಾರೆ,” ಎಂದು ಬಸವ ಮೀಡಿಯಾ ಟ್ರಸ್ಟಿನ ಛೇರ್ಮನ್ ಟಿ.ಆರ್. ಚಂದ್ರಶೇಖರ್ ಹೇಳಿದರು.

“ಆಯ್ದ ಕ್ಷೇತ್ರ, ಆಯ್ದ ಬೂತುಗಳಲ್ಲಿ ಪಕ್ಷಾತೀತವಾಗಿ ಮತಗಳನ್ನು ಕ್ರೋಡೀಕರಿಸುವ ಕೆಲಸವನ್ನು 2028ರ ಚುನಾವಣೆಯಿಂದಲೇ ಬಸವ ಸಂಘಟನೆಗಳು ಆರಂಭಿಸಬೇಕು. ಅದಕ್ಕೆ ಸಿದ್ಧತೆಯಾಗಿ ಬಸವ ಶಕ್ತಿ ಶಿಬಿರಗಳು ನಡೆಯುತ್ತಿವೆ.

ಇಂದು ಲಿಂಗಾಯತ ಧರ್ಮಕ್ಕೆ ತೀವ್ರವಾದ ರಾಜಕೀಯ ವಿರೋಧವಿದೆ. ಲಿಂಗಾಯತ ರಾಜಕಾರಣಿಗಳನ್ನೇ ನಮ್ಮ ವಿರುದ್ಧ ಬಳಸಿಕೊಳ್ಳುತ್ತಿದ್ದಾರೆ. ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ, ಪ್ರಭಾವ ಬೆಳೆಸಿಕೊಂಡರೆ ಮಾತ್ರ ಇದನ್ನು ತಡೆಯಬಹುದು,” ಎಂದು ಅವರು ತಿಳಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *