ಜನಸಮುದಾಯಕ್ಕೆ ಬಸವಾದಿ ಶಿವಶರಣರ ಕೊಡುಗೆ ಅಪಾರ: ಬಸವನಗೌಡ ಪೋಲಿಸಪಾಟೀಲ
ಯಲಬುರ್ಗಾ:
ತಾಲೂಕಿನ ಮರಕಟ್ಟ ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ತ ಬಸವ ಕೇಂದ್ರದಿಂದ ಹಮ್ಮಿಕೊಂಡಿರುವ ‘ಮನೆಯಿಂದ ಮನೆಗೆ ಮನದಿಂದ ಮನಕ್ಕೆ ವಚನ ಜ್ಯೋತಿ’ 9ನೇ ದಿನದ ಕಾಯ೯ಕ್ರಮ ಮಹಾಂತಮ್ಮ ಅಮರೇಶಪ್ಪ ಬಳ್ಳಾರಿ ಇವರ ಮನೆಯಲ್ಲಿ ನಡೆಯಿತು.
ಕಾರ್ಯಕ್ರಮ ಕುರಿತು ಪ್ರಾಸ್ತಾವಿಕ ಮಾತನಾಡಿದ ಬಸವ ಕೇಂದ್ರದ ಅಧ್ಯಕ್ಷ ಅಮರೇಶಪ್ಪ ಬಳ್ಳಾರಿ, ಬಸವಣ್ಣ ಮತ್ತು ಇತರ ಶರಣರ ವಚನಗಳ ಸಂದೇಶವನ್ನು ಮನೆ ಮನೆಗೆ ತಲುಪಿಸುವುದು ಮತ್ತು ಮೌಲಿಕ ಸತ್ಯ, ಸಮಾನತೆ, ಕಾಯಕ ಮತ್ತು ದಾಸೋಹ ತತ್ವಗಳನ್ನು ಜನಸಾಮಾನ್ಯರಿಗೆ ಪರಿಚಯಿಸುವದು ಕಾರ್ಯಕ್ರಮದ ಉದ್ಧೇಶವಾಗಿದೆ ಎಂದರು.

ಉಪನ್ಯಾಸ ನೀಡಿದ ಬಸವನಗೌಡ ಪೋಲಿಸಪಾಟೀಲ ಅವರು ಮಾತನಾಡಿ, ಜಗದ್ಗುರು ಬಸವಣ್ಣನವರು 12ನೇ ಶತಮಾನದ ಶ್ರೇಷ್ಠ ಸಮಾಜ ಸುಧಾರಕರು, ದಾರ್ಶನಿಕರು, ಮಹಾನ್ ಕವಿಗಳು ಮತ್ತು ಲಿಂಗಾಯತ ಧರ್ಮದ ಸಂಸ್ಥಾಪಕರು.
ಸಮಾಜದಲ್ಲಿದ್ದ ಮೂಢನಂಬಿಕೆ, ಜಾತೀಯತೆ ಮತ್ತು ಲಿಂಗ ತಾರತಮ್ಯದ ವಿರುದ್ಧ ಧ್ವನಿ ಎತ್ತಿದ ಕ್ರಾಂತಿಕಾರಿ ಪುರುಷನೇ ಗುರು ಬಸವಣ್ಣನವರು.
ಇವರು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಆರಾಧ್ಯ ಬ್ರಾಹ್ಮಣ ಕುಟುಂಬದ ಮಾದರಸ ಮತ್ತು ಮಾದಲಾಂಬಿಕೆ ತಾಯಿಯ ಚಿತ್ಗರ್ಭದಲ್ಲಿ ಜನಿಸಿದ ಇವರು, ಬಾಲ್ಯದಲ್ಲೇ ಸಾಂಪ್ರದಾಯಿಕ ಉಪನಯನ ಜನಿವಾರ ಧರಿಸುವ ಸಂಸ್ಕಾರವನ್ನು ತಿರಸ್ಕರಿಸಿ, ವೈದಿಕ ಆಚರಣೆಗಳ ವಿರುದ್ಧ ಬಂಡೆದ್ದರು.
ಕೂಡಲಸಂಗಮಕ್ಕೆ ತೆರಳಿ ಸಂಗಮನಾಥನ ಸನ್ನಿಧಿಯಲ್ಲಿ ವಿದ್ಯಾಭ್ಯಾಸ ಮಾಡಿದರು. ಇವರ ವಚನಗಳ ಅಂಕಿತನಾಮ “ಕೂಡಲಸಂಗಮದೇವ” ಅಂಕಿತನಾಮದೊಂದಿಗೆ ಸಾವಿರಾರು ವಚನಗಳನ್ನು ರಚಿಸಿ ಜನ ಸಮುದಾಯಕ್ಕೆ ಕೊಟ್ಟರು.
ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಪ್ರಧಾನ ಮಂತ್ರಿಯಾಗಿ(ಭಂಡಾರಿ) ಸೇವೆ ಸಲ್ಲಿಸಿದರು. ಕಾಯಕವೇ ಕೈಲಾಸ ಎನ್ನುವ ನುಡಿಯೊಂದಿಗೆ ಯಾವುದೇ ಕೆಲಸವಾದರೂ ಅದನ್ನು ಪ್ರಾಮಾಣಿಕವಾಗಿ ಮಾಡುವುದೇ ದೇವರ ಪೂಜೆ ಎಂಬ ಕಾಯಕ ತತ್ವವನ್ನು ಜಾರಿಗೆ ತಂದರು.
ಪ್ರಪಂಚದ ಮೊದಲ ಧಾರ್ಮಿಕ ಮತ್ತು ಸಾಮಾಜಿಕ ಸಂಸತ್ತು ಎನ್ನಲಾಗುವ ‘ಅನುಭವ ಮಂಟಪ’ವನ್ನು ಸ್ಥಾಪಿಸಿದರು. ಜಾತಿ, ಧರ್ಮ, ಲಿಂಗದ ಭೇದವಿಲ್ಲದೆ ಅಲ್ಲಮಪ್ರಭು, ಅಕ್ಕಮಹಾದೇವಿ, ಚನ್ನಬಸವಣ್ಣ, ಮಡಿವಾಳ ಮಾಚಯ್ಯ, ಹರಳಯ್ಯ ಮುಂತಾದ ಶರಣರೆಲ್ಲರೂ ಇಲ್ಲಿ ಒಂದಾಗಿ ಆಧ್ಯಾತ್ಮಿಕ ಚರ್ಚೆ ನಡೆಸುತ್ತಿದ್ದರು.
ಜನಸಾಮಾನ್ಯರ ಭಾಷೆಯಾದ ಕನ್ನಡದಲ್ಲಿ ವಚನಗಳನ್ನು ರಚಿಸುವ ಮೂಲಕ ಶೋಷಿತರಿಗೆ ಧ್ವನಿಯಾದರು.
ಶರಣ ಹರಳಯ್ಯ (ಚಮ್ಮಾರ) ಮತ್ತು ಶರಣ ಮಧುವರಸರ (ಬ್ರಾಹ್ಮಣ) ಮಕ್ಕಳ ನಡುವೆ ಅಂತರ್ಜಾತಿ ವಿವಾಹ ಮಾಡಿಸಿ ಸಾಮಾಜಿಕ ಕ್ರಾಂತಿ ಮಾಡಿದರು. ಇದು ಅಂದಿನ ಸಂಪ್ರದಾಯಸ್ಥರ ವಿರೋಧಕ್ಕೆ ಕಾರಣವಾಯಿತು.
ಕಲ್ಯಾಣದಲ್ಲಿ ಕ್ರಾಂತಿ ನಡೆದು ಶರಣರು ಚದುರಿದ ನಂತರ, ಬಸವಣ್ಣನವರು ಕೂಡಲಸಂಗಮಕ್ಕೆ ಮರಳಿ ಅಲ್ಲಿಯೇ ಲಿಂಗಾಂಗ ಸಾಮರಸ್ಯದಿಂದ ಲಿಂಗೈಕ್ಯರಾದರು. ಅಂದಾಗ ಗುರು ಬಸವಣ್ಣನವರು ಉಪಮಿಸಬಾರದ ಉಪಮಾತೀತರು, ಮಾನವನಿಂದ ದೇವ ಮಾನವನಾಗಿ ಬಾಳಿ ಬದುಕಿದ್ದಾರೆ.

ಅದಕ್ಕಾಗಿ ನಾವು ಅವರ ಚಿಂತನೆಗಳನ್ನು ಈ ಶ್ರಾವಣ ಮಾಸ ನೆಪ ಮಾಡಿಕೊಂಡು ಮನೆಯಿಂದ ಮನೆಗೆ ವಚನಗಳ ಚಿಂತನೆಗಳನ್ನು ಜನ ಮನಗಳಿಗೆ ಭಿತ್ತರಿಸಿ, ಬಸವಾದಿ ಶಿವಶರಣರು ಬದುಕಿರುವಂತೆ, ಇಂದಿನ ಯುವ ಪೀಳಿಗೆ ಮತ್ತು ಜನ ಸಮುದಾಯಗಳನ್ನು ಪರಿವರ್ತನೆ ಮಾಡಿ ಸುಂದರ ಬದುಕನ್ನು ಕಲಿಸುವುದೆ ಈ ಕಾರ್ಯಕ್ರಮದ ಉದ್ದೇಶ, ಅದಕ್ಕಾಗಿ ನಾವು ಬಸವಾದಿ ಶಿವಶರಣರ ಬದುಕಿನಂತೆ ಬಾಳಿ ಬದುಕೋಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹನಮಗೌಡ ಬಳ್ಳಾರಿ, ಷಣ್ಮುಖಪ್ಪ ಬಳ್ಳಾರಿ, ಶರಣಪ್ಪ ಮೇಟಿ, ಮಹೇಶ ಮೇಟಿ ಹಾಗು ಬಸವ ಕೇಂದ್ರದ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH
