ಬೆಳಗಾವಿ:
ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘವು ಶ್ರಾವಣ ಮಾಸದ ಅಂಗವಾಗಿ ಮನೆ ಮನಗಳಲ್ಲಿ ಬಸವ ಭಾವಪೂಜೆ ಕಾರ್ಯಕ್ರಮ ಹಮ್ಮಿಕೊಂಡಿದೆ.
ರೇಖಾ ಬಸವರಾಜ ಮುದ್ದಾಪುರ ಶರಣ ದಂಪತಿಗಳ ಮನೆಯಲ್ಲಿ ರವಿವಾರ ನೇರೆವೇರಿದ ಕಾರ್ಯಕ್ರಮದಲ್ಲಿ ಖಾನಾಪುರ ಮರಾಠಿ ಮಂಡಳಿ ಮಹಾವಿದ್ಯಾಲಯದ ವಿಜಯಲಕ್ಷ್ಮಿ ಅವರು ಉಪನ್ಯಾಸ ನಡೆಸಿಕೊಟ್ಟರು. ‘ಅನುಭಾದ ಹೆಜ್ಜೆಗಳು ಶರಣರಿಂದ ಜನಪದರವರೆಗೆ’ ವಿಷಯವಾಗಿ ಮಾತನಾಡಿದರು.
ಜಾನಪದ ಸಾಹಿತ್ಯವು ಸುಮಾರು ಐದನೇ ಶತಮಾನದಿಂದ ಇದ್ದು ಅದು ಅನುಭವದ ನೆಲೆಯಿಂದ ಬಂದಿದ್ದು, ಅನಕ್ಷರಸ್ಥರು ಆಡುಭಾಷೆಯಲ್ಲಿ ರಚಿಸಿದ ಪದಗಳಾಗಿವೆ.
ಶರಣರು ಕೂಡಾ ತಮ್ಮ ಜೀವನದ ಅನುಭಾದಿಂದ ವಚನಗಳನ್ನು ರಚಿಸಿದರು. ಜನಪದ ಸಾಹಿತ್ಯ ಮತ್ತು ವಚನ ಸಾಹಿತ್ಯಕ್ಕೂ ಒಂದು ಅವಿನಾಭಾವ ಸಂಬಂಧವಿದೆ. ಇವೆರಡೂ ಅನುಭವದ ಮೂಲಕ ರಚನೆಯಾಗಿವೆ. ಇವುಗಳ ಕ್ಷೇತ್ರ ವಿಶಾಲವಾಗಿದ್ದು ಅವುಗಳಲ್ಲಿ ಮುಖ್ಯವಾಗಿ ಎರಡನ್ನು ಆಯ್ದುಕೊಂಡು ನೋಡುವುದಾದರೆ ಕಾಯಕ ಮತ್ತು ದಾಂಪತ್ಯ ಜೀವನ ಬಹಳ ಮಹತ್ವದ್ದಾಗಿದೆ.
ಶರಣರು ಕಾಯಕಕ್ಕೆ ಹೆಚ್ಚಿನ ಮಹತ್ವ ಕೊಟ್ಟರೆ ಜಾನಪದರು ಬದುಕೆ ಒಕ್ಕಲುತನವಾಗಿತ್ತು. ಬೆಳಿಗ್ಗೆಯಿಂದ ರಾತ್ರಿಯವರೆಗೆ ದುಡಿಯುತಿದ್ದರು. ಸತಿಪತಿಗಳ ಭಕ್ತಿ ಹಿತವಪ್ಪುವುದು ಶಿವಂಗೆ ಎಂಬಂತೆ ಜನಪದರು ಒಲುವಿನಿಂದ, ಹುಸಿಮುನಿಸು, ಸರಸ, ವಿರಸ, ಸಮರಸದಿಂದ ಬದುಕುತ್ತಿದ್ದರು.
ಬದುಕನ್ನು ಸುಂದರವಾಗಿ ಕಟ್ಟಿಕೊಂಡು ಬದುಕಿ ಬಾಳಿ ನಮಗೆ ಮಾದರಿಯಾಗಿ ವಚನ ಸಾಹಿತ್ಯವನ್ನು ಮತ್ತು ಜಾನಪದ ಸಾಹಿತ್ಯವನ್ನು ಕೊಟ್ಟು ಹೋಗಿದ್ದಾರೆ ಎಂದು ಅನೇಕ ವಚನಗಳು ಮತ್ತು ತ್ರಿಪದಿಗಳನ್ನು ಹಾಡಿ ಮನ ಮುಟ್ಟುವಂತೆ ಹೇಳಿದರು.
ಅಷ್ಟೇ ಅಲ್ಲದೆ ಪ್ರಸ್ತುತ ದಿನಮಾನದಲ್ಲಿ ಇವುಗಳ ಅರಿವು ಅತ್ಯಂತ ಅವಶ್ಯವಾಗಿದ್ದು, ಇಂದು ವಿಚ್ಛೇದನಗಳು ಹೆಚ್ಚುತಿದ್ದು ಹೊಂದಾಣಿಕೆ ಎಂಬುದು ಕಡಿಮೆಯಾಗಿದೆ. ಯುವ ಜನಾಂಗವು ಈ ಸಾಹಿತ್ಯವನ್ನು ಅರ್ಥೈಸಿಕೊಳ್ಳುವುದು ತುಂಬಾ ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘವು ಇಂತಹ ವಿಷಯಗಳನ್ನು ಎಲ್ಲರ ಮನ ಮನೆಗಳಿಗೆ ತಲುಪಿಸುವ ಕೆಲಸ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಹೇಳಿದರು.
ಪ್ರೊ ಶ್ರೀಕಾಂತ ಶಾನವಾಡ ಅವರು ಬಸವ ಭಾವಪೂಜೆ ಕುರಿತು ಶರಣ ಸಿದ್ದರಾಮರ ವಚನ ವಿಶ್ಲೇಷಣೆ ಮಾಡಿದರು.
ಸುನಿತಾ ನಂದೆಣ್ಣವರ ನಿರೂಪಣೆ ಮಾಡಿದರು. ಶೋಭಾ ಶಿವಳ್ಳಿ ಮತ್ತು ಸಂಗಡಿಗರು ವಚನ ಪ್ರಾರ್ಥನೆ ನಡೆಸಿಕೊಟ್ಟರು. ನಯನಾ ಗಿರಿಗೌಡರ, ಕಾವೇರಿ ಕಿಲಾರಿ, ವಚನ ಗಾಯನ ಮಾಡಿದರು.
ಅಧ್ಯಕ್ಷರಾದ ಎಸ್.ಜಿ. ಸಿದ್ನಾಳ, ಕಾರ್ಯದರ್ಶಿ ಶಂಕರ ಶೆಟ್ಟಿ, ಉಪಾಧ್ಯಕ್ಷ ಕುಂದ್ರಾಳ, ಕಟ್ಟಿಮನಿ, ರುದ್ರಗೌಡರ, ಕೋರೆ, ಉಮಾ ಸಂಕೇಶ್ವರ, ವಿಜಯಾ ಅಮ್ಮ, ಲಲಿತಾ ರುದ್ರಗೌಡರ, ಶಾರದಾ ಉಡಕೇರಿ, ನಾಗರತ್ನಾ ಪಾಟಿಲ ಮುಂತಾದವರು ಉಪಸ್ಥಿತರಿದ್ದರು.
