ಅಣ್ಣಿಗೇರಿಯಲ್ಲಿ ತೋಂಟದ ಸಿದ್ಧಲಿಂಗ ಸ್ವಾಮೀಜಿಗಳ ಶಿಕ್ಷಣ ದಾಸೋಹ ಸ್ಮರಣೆ

ಶರಣ ಶ್ರಾವಣ-2026

ಅಣ್ಣಿಗೇರಿ :

ಪಟ್ಟಣದ ಬಸವ ಕೇಂದ್ರ ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಯುವ ಘಟಕದ ಆಶ್ರಯದಲ್ಲಿ ಸ್ಥಳೀಯ ತೋಂಟದಾರ್ಯ ಪ್ರಸಾದ ನಿಲಯದಲ್ಲಿ ಜರುಗಿದ ಶರಣ ಶ್ರಾವಣ ಕಾರ್ಯಕ್ರಮದಲ್ಲಿ ಗದಗ ತೋಟದ ಸಿದ್ಧಲಿಂಗ ಶ್ರೀಗಳ ಶಿಕ್ಷಣ ದಾಸೋಹವನ್ನು ಸ್ಮರಿಸಲಾಯಿತು.

ಉಪನ್ಯಾಸ ನೀಡಿದ ಶಿಕ್ಷಕಿ ಸುಮಿತ್ರಾ ಹುಣಸಿಮರದ, ಪೂರ್ವದಲ್ಲಿ ಸಿದ್ದರಾಮರಾಗಿದ್ದ ಸಿದ್ದಲಿಂಗ ಶ್ರೀಗಳು ಹಿರಿಯ ಶ್ರೀಗಳ ಮಾರ್ಗದರ್ಶನದಂತೆ ಮೂರುಸಾವಿರ ಮಠದಲ್ಲಿ ವಿದ್ಯಾಭ್ಯಾಸ ಮಾಡಿದರು. ಅವರ ಮೇಲೆ ಸಿ.ಎಂ. ಮಣ್ಣೂರ ಎಂಬ ಗುರುಗಳು ಅಗಾಧ ಪ್ರಭಾವ ಬೀರಿದ್ದರು ಎಂದರು.

ಮುಂದೆ ಹಿರಿಯ ಶ್ರೀಗಳ ಆಶಯದಂತೆ ಗದಗ ತೋಂಟದಾರ್ಯ ಮಠದ 19ನೇ ಪೀಠಾಧಿಪತಿಯಾದ ಅವರು ಶಿಕ್ಷಣದ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿದರು.

ನಮ್ಮ ಜನ ದೇವಾಲಯಗಳ ಮುಂದೆ ಸರದಿ ಸಾಲಿನಲ್ಲಿ ನಿಲ್ಲುವ ಬದಲಾಗಿ ಗ್ರಂಥಾಲಯಗಳ ಮುಂದೆ ನಿಂತರೆ ನಮ್ಮ ದೇಶ ಉದ್ಧಾರವಾಗುತ್ತದೆ ಎನ್ನುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಾತನ್ನು ತಮ್ಮ ಮೈಮನಗಳಲ್ಲಿ ತುಂಬಿಕೊಂಡಿದ್ದ ಶ್ರೀಗಳು ಗದಗದಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸುವ ಮೂಲಕ ಶಿಕ್ಷಣ ದಾಸೋಹಕ್ಕೆ ಮುನ್ನುಡಿ ಬರೆದರು.

ತೋಂಟದಾರ್ಯ ಮಠದ ಎಲ್ಲ ಶಾಖಾ ಮಠಗಳ ಊರುಗಳಲ್ಲಿ ವಿದ್ಯಾಲಯಗಳನ್ನು ಆರಂಭಿಸಿ ಬಡ ಮಕ್ಕಳ ಶಿಕ್ಷಣ ಕಲಿಯುವ ಹಂಬಲಕ್ಕೆ ಜೀವ ತುಂಬಿದರು. ಆ ಶಾಲೆಗಳಲ್ಲಿ ಕಲಿತ ಎಷ್ಟೋ ವಿದ್ಯಾರ್ಥಿಗಳು ಇಂದು ದೊಡ್ಡ ದೊಡ್ಡ ವ್ಯಕ್ತಿಗಳಾಗಿದ್ದಾರೆ ಎಂದು ಸ್ಮರಿಸಿದರು.

ಆಹ್ವಾನಿತರಾಗಿದ್ದ ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕಿ ಡಾ. ಸುಧಾ ಕೌಜಗೇರಿ ಮಾತನಾಡಿ, ತೋಂಟದಾರ್ಯ ಶ್ರೀಗಳ ಶಿಕ್ಷಣ ದಾಸೋಹವನ್ನು ಎಷ್ಟು ಸ್ಮರಿಸಿದರೂ ಕಡಿಮೆಯೇ. ಅವರ ಆಶಯದಂತೆ ಆದಿಕವಿ ಪಂಪನ ನೆಲದ ಜಿಗುಟುತನವನ್ನು ಉಳಿಸಿ ಬೆಳಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ನಿಂಗಮ್ಮ ಹೂಗಾರ ವಿದ್ಯಾಲಯದ ಮಕ್ಕಳು ಪ್ರದರ್ಶಿಸಿದ ತೋಂಟದಾರ್ಯ ಶ್ರೀಗಳ ಕುರಿತು ‘ನಡೆ ಕಲಿಸಿದ ಬಸವಣ್ಣ’ ರೂಪಕ ಸಭಿಕರ ಹೃದಯ ತಟ್ಟಿತು.

ಪ್ರೊ. ಎಸ್. ಎಸ್. ಹರ್ಲಾಪೂರ ಉಪಸ್ಥಿತರಿದ್ದರು.  ನಿಂಗಮ್ಮ ಹೂಗಾರ ವಿದ್ಯಾಲಯಗಳ ನಿರ್ದೇಶಕ ಶಿವಯೋಗಿ ಹುಬ್ಬಳ್ಳಿ ಅಧ್ಯಕ್ಷತೆ ವಹಿಸಿದ್ದರು. ಕವಿತಾ ಬಿರಸಲ ಪ್ರಸಾದ ದಾಸೋಹ ಮಾಡಿದರು. ಶೈಲಶ್ರೀ ಗುಗ್ಗರಿ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *

ಪತ್ರಕರ್ತರು, ಅಣ್ಣಿಗೇರಿ