(ಅಪ್ರತಿಮ ಸಂಶೋಧಕ ಡಾ. ಎಂ ಎಂ ಕಲಬುರ್ಗಿ ಆಗಸ್ಟ್ 30, 2015ರಂದು ಹಂತಕರ ಗುಂಡಿಗೆ ಬಲಿಯಾದರು. ಈ ತಿಂಗಳು ಪೂರ್ತಿ ಬಸವ ಮೀಡಿಯಾ ಕಲಬುರ್ಗಿ ಅವರ ಸಂಶೋಧನೆ ಹಾಗೂ ಚಿಂತನೆಯನ್ನು ಸರಳ ಕನ್ನಡದಲ್ಲಿ ಪರಿಚಯ ಮಾಡಿಕೊಡಲಿದೆ. #ಕಲಬುರ್ಗಿಮಾಸ)
ಆಂಧ್ರದ ಆರಾಧ್ಯರು ವೀರಶೈವರಾಗಿ ಬಂದರು

೧೨ನೇ ಶತಮಾನದ ಮಲ್ಲಿಕಾರ್ಜುನ ಪಂಡಿತಾರಾಧ್ಯರು ಆಂಧ್ರದ ಶೈವ ಬ್ರಾಹ್ಮಣ ಆರಾಧ್ಯರ ಗುರುಗಳು.
ಶರಣ ಚಳುವಳಿ ಪಂಡಿತಾರಾಧ್ಯರ ಮೇಲೆ ಪ್ರಬಲವಾದ ಪ್ರಭಾವ ಬೀರಿತ್ತು. ವೈದಿಕ ಮೂಲದವರಾಗಿದ್ದರೂ ಅವರು ಬಸವಣ್ಣನವರ ಪ್ರಭಾವದಿಂದ ಇಷ್ಟಲಿಂಗ ಹಿಡಿದರು. ಅವರ ಆರಾಧ್ಯ ಭಕ್ತರೂ ಕೂಡ ಶರಣ ಚಳುವಳಿಯನ್ನು ಸೇರಿಕೊಂಡರು.
ಕಲ್ಯಾಣಕ್ಕೆ ಬರುತ್ತಿದ್ದ ಪಂಡಿತಾರಾಧ್ಯರಿಗೆ ಎಂಟು ದಿನದ ಹಿಂದೆ ಬಸವಣ್ಣನವರು ಲಿಂಗೈಕ್ಯವಾದ ಸುದ್ದಿ ತಿಳಿಯಿತು. ದುಃಖದಿಂದ ‘ಬಸವ ಬಸವ…’ ಎಂದು ಸ್ತುತಿಸುತ್ತಾ ಅರ್ಧ ದಾರಿಯಿಂದಲೇ ಹಿಂದಿರುಗಿದರು.
ಸಿದ್ಧರಾಮರಿಗೆ ಉತ್ತರಾಧಿಕಾರಿ ಇಲ್ಲದ್ದರಿಂದ ನಾಥರು ಶರಣರಲ್ಲಿ ಲೀನರಾದರು. ಆದರೆ ಪಂಡಿತಾರಾಧ್ಯರ ನಂತರ ಅವರ ಮಗ ಪಟ್ಟಕ್ಕೆ ಬಂದಿದ್ದರಿಂದ ಆರಾಧ್ಯರು ಪ್ರತ್ಯೇಕವಾಗಿಯೇ ಉಳಿದರು.
ಆರಾಧ್ಯರು ಇಷ್ಟಲಿಂಗ ಧರಿಸಿದರೂ ಜನಿವಾರ ಬಿಡಲಿಲ್ಲ. ಶರಣ ಚಳುವಳಿಯಲ್ಲಿ ಸೇರಿಕೊಂಡರೂ ಪ್ರತ್ಯೇಕ ಜಾತಿ ಜಂಗಮರಾಗಿ, ವೈದಿಕತೆ ತುಂಬಿದ್ದ ಭಿನ್ನ ಪರಂಪರೆ ‘ವೀರಶೈವ’ವನ್ನು ಬೆಳೆಸಿದರು.
ಪಂಡಿತಾರಾಧ್ಯರೂ ಸೇರಿದಂತೆ ಆರಾಧ್ಯರು ಮೊದಮೊದಲು ಬಸವ ನಿಷ್ಠೆಯಿಂದಿದ್ದರು. ಆದರೆ ಮುಂದಿನ ಶತಮಾನಗಳಲ್ಲಿ ಪಂಚಾಚಾರ್ಯ ಪರಂಪರೆ ಬೆಳೆದಂತೆ ಅವರ ಬಸವ ನಿಷ್ಠೆ ಕ್ಷೀಣಿಸಿತು.
(‘ಸಿದ್ದರಾಮ-ಬಸವಣ್ಣ-ಪಂಡಿತಾರಾಧ್ಯ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೪)
‘ಲಿಂಗಾಯತ’, ‘ವೀರಶೈವ’ ಸಮಾನಾರ್ಥಕ ಪದಗಳಲ್ಲ

‘ಲಿಂಗಾಯತ’, ‘ವೀರಶೈವ’ ಪದಗಳನ್ನು ಸಮಾನಾರ್ಥಕ ಪದಗಳಂತೆ ಬಳಸುವುದು ಸರಿಯಲ್ಲ. ಈ ಪದಗಳ ಅರ್ಥ, ಹುಟ್ಟಿದ ಕಾಲ, ಬೆಳೆದ ಉದ್ದೇಶಗಳಲ್ಲಿ ಯಾವುದೇ ಸಾಮ್ಯತೆಯಿಲ್ಲ.
೧೨ನೇ ಶತಮಾನದ ಶರಣ ಸಮಾಜದಲ್ಲಿ ಲಿಂಗವಂತ, ಲಿಂಗಾಯತ ಮುಂತಾದ ಪದಗಳು ಚಾಲ್ತಿಯಲ್ಲಿದ್ದವು. ಸಾಹಿತ್ಯದಲ್ಲಿ ‘ಲಿಂಗವಂತ’ ಜನರಲ್ಲಿ ‘ಲಿಂಗಾಯತ’ ಹೆಚ್ಚಿನ ಬಳಕೆಯಲ್ಲಿತ್ತು.
ಬಸವಣ್ಣ, ಉರಿಲಿಂಗಪೆದ್ದಿಯಂತವರ ವಚನಗಳಲ್ಲಿ ‘ಲಿಂಗವಂತ’ ಪದ ಕಂಡರೆ, ಚನ್ನಬಸವಣ್ಣನವರು ‘ಲಿಂಗಾಯತ’ ಪದ ಬಳಸಿದರು. ವಚನಗಳಲ್ಲಿ ವೀರಶೈವ ತತ್ವದ ಸುಳಿವಿಲ್ಲ.
ಲಿಂಗ+ಆಯತ ಎಂದರೆ ವಿಧಿಪೂರ್ವಕವಾಗಿ ಲಿಂಗ ದೀಕ್ಷೆ ಪಡೆಯುವುದು ಎಂದು ಅರ್ಥ. ಹೀಗೆ ದೀಕ್ಷೆ ಪಡೆದವರನ್ನು ಮತ್ತವರ ಧರ್ಮವನ್ನು ‘ಲಿಂಗಾಯತ’ ಪದ ಸೂಚಿಸುತ್ತಿತ್ತು. (ಆಯತ = ಕ್ರಮಬದ್ಧ.)
ಆಂಧ್ರದ ಶೈವ ಬ್ರಾಹ್ಮಣ ಆರಾಧ್ಯರು ಬಸವಣ್ಣನವರ ಅನುಯಾಯಿಗಳಾದರೂ, ವೈದಿಕತೆ ಬಿಡದೆ ಪ್ರತ್ಯೇಕವಾಗಿ ಉಳಿದರು. ಇವರ ಪ್ರಭಾವ ವಿಜಯನಗರ, ಕೆಳದಿ ರಾಜರ ಸಮಯದಲ್ಲಿ ಬೆಳೆಯಿತು.
ಬಸವಣ್ಣನವರ ಸಮ ಸಮಾಜ ಕಟ್ಟುವ ಪ್ರಯತ್ನಗಳನ್ನು ವಿರೋಧಿಸಿದ ಇವರು, ಶರಣ ಧರ್ಮದ ಮೇಲೆ ಹಿಡಿದ ಸಾಧಿಸಲು ‘ಲಿಂಗಾಯತ’ ಪದಕ್ಕೆ ಪರ್ಯಾಯವಾಗಿ ‘ವೀರಶೈವ’ ಪದವನ್ನು ಬೆಳೆಸಿದರು.
(‘ಲಿಂಗಾಯತವಂತ >ಲಿಂಗವಂತ/ಲಿಂಗಾಯತ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೩)
‘ವೀರಶೈವ’ – ಒಂದು ವ್ರತದ ಹೆಸರು

ಆಂಧ್ರದ ಶೈವ ಬ್ರಾಹ್ಮಣ ಆರಾಧ್ಯರು ವೀರಭದ್ರನನ್ನು ಪೂಜಿಸಲು ಆಚರಿಸುತ್ತಿದ್ದ ಒಂದು ವ್ರತದ ಹೆಸರು ‘ವೀರಶೈವ.’ ಅವರು ಶರಣ ಚಳುವಳಿ ಸೇರಿಕೊಂಡಂತೆ, ಆ ಪದವೂ ಕೂಡ ಶರಣ ಸಮಾಜದಲ್ಲಿ ಸೇರಿಕೊಂಡಿತು.
ಇಷ್ಟಲಿಂಗ ಹಿಡಿದರೂ ಆರಾಧ್ಯರು ತಮ್ಮ ಜನಿವಾರ ಬಿಡಲಿಲ್ಲ. ಬಸವ ಸಿದ್ದಾಂತಕ್ಕೆ ವರ್ಣ, ಗೋತ್ರ, ಜಾತಿ, ಆಗಮಿಕ, ವೈದಿಕ ಆಚರಣೆಗಳನ್ನು ಬೆರೆಸಿದ ಮಿಶ್ರ ಧರ್ಮವಾಗಿ ‘ವೀರಶೈವ’ವನ್ನು ಪಾಲಿಸುತ್ತಿದ್ದರು.
ಶರಣ ಸಮಾಜದಲ್ಲಿ ಮೇಲುಗೈ ಸಾಧಿಸಲು ಜಂಗಮ ಜಾತಿ ಮತ್ತು ಪಂಚಾಚಾರ್ಯ ಮಠಗಳನ್ನು ಹುಟ್ಟು ಹಾಕಿ, ಕನ್ನಡದ ಬದಲು ಸಂಸ್ಕೃತ, ‘ಲಿಂಗಾಯತ’ದ ಬದಲು ‘ವೀರಶೈವ’ ಬೆಳೆಸಿದರು.
ಕನ್ನಡ ಕೃತಿಗಳಲ್ಲಿ ‘ವೀರಶೈವ’ ಪದ ಮೊದಲು ಕಾಣಸಿಕೊಳ್ಳುವುದು ೧೪ನೇ ಶತಮಾನದ ಬಸವ ಪುರಾಣದಲ್ಲಿ. ಇದನ್ನು ಬರೆದವನು ಆಂಧ್ರದ ಕಡಪ ಜಿಲ್ಲೆಯ ಆರಾಧ್ಯ ಸಮುದಾಯದ ಭೀಮಕವಿ.
ಮುಂದಿನ ದಿನಗಳಲ್ಲಿ ಆರಾಧ್ಯರ ಪ್ರಭಾವ ಹೆಚ್ಚಿದಂತೆ, ಅವರ ಮಿಶ್ರ ಧರ್ಮವನ್ನು ಪ್ರಚಾರಮಾಡುವ ಸಂಸ್ಕೃತ ಮತ್ತು ಕನ್ನಡ ಕೃತಿಗಳು ವಿಪುಲವಾಗಿ ಹುಟ್ಟಿಕೊಂಡವು.
ಅವು ವೀರಶೈವ ತತ್ವವನ್ನು ಲಿಂಗಾಯತಕ್ಕೆ ಪರ್ಯಾಯವಾಗಿ ಬೆಳೆಸಿದವು. ಅವರ ಪ್ರಧಾನ ಕೃತಿ ಸಂಸ್ಕೃತದ ‘ಸಿದ್ಧಾಂತ ಶಿಖಾಮಣಿ’ ಬಸವ ಧರ್ಮವನ್ನು ಸೂಚಿಸಲು ‘ವೀರಶೈವ’ ಪದ ಬಳಸುತ್ತದೆ.
(‘ವೀರಶೈವ ಇತಿಹಾಸ ಮತ್ತು ಭೂಗೋಲ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೭)
ಲಿಂಗಾಯತರಿಗೆ ದಾರಿ ತಪ್ಪಿಸಿದ ವೀರಶೈವರು

೧೨ನೇ ಶತಮಾನದಲ್ಲಿ ಆಂಧ್ರದ ಆರಾಧ್ಯ ಸಮುದಾಯ ಬಸವಣ್ಣನವರ ಪ್ರಭಾವಕ್ಕೆ ಸಿಲುಕಿದರೂ ಜನಿವಾರ ಬಿಟ್ಟಿರಲಿಲ್ಲ. ಅರ್ಧ ಲಿಂಗಾಯತ ಅರ್ಧ ವೈದಿಕತೆಯ ಮಿಶ್ರ ಧರ್ಮ ‘ವೀರಶೈವ’ವನ್ನು ಆಚರಿಸುತ್ತಿದ್ದರು.
ಮೂಲತಃ ಜಾತಿವಾದಿ ಶೈವ ಆಚಾರ್ಯರಾಗಿದ್ದ ಇವರು ಬಸವಣ್ಣನವರ ಕಾಲದಲ್ಲಿಯೇ ಅವರ ಎಲ್ಲಾ ವರ್ಗಗಳನ್ನು ಸೇರಿಸಿ ಏಕ ಸಮಾಜವನ್ನು ಕಟ್ಟುವ ಪ್ರಯತ್ನವನ್ನು ವಿರೋದಿಸಿದರು.
ಭಕ್ತರಾಗಿ ಒಳ ಬಂದ ಇವರು ಆಚಾರ್ಯರಾಗಿ ಲಿಂಗಾಯತರ ಮೇಲೆ ಹಿಡಿತ ಸಾಧಿಸಿದರು. ‘ಜಂಗಮ’ ಜಾತಿ ಹುಟ್ಟು ಹಾಕಿ, ‘ಗುರು-ಭಕ್ತ’ ರೆಂಬ ಎರಡು ಮೇಲು-ಕೀಳು ವರ್ಗಗಳನ್ನು ಹುಟ್ಟು ಹಾಕಿದರು.
೧೭-೧೮ನೇ ಶತಮಾನಗಳವರೆಗೆ ಪಂಚಾಚಾರ್ಯ ಮಠಗಳನ್ನು ಹುಟ್ಟುಹಾಕಿ ಅವುಗಳ ಮೂಲಕ ಶೈವ ಭಕ್ತರನ್ನು, ಮಠಗಳನ್ನು ವಶಕ್ಕೆ ತೆಗೆದುಕೊಂಡರು.
ತಮ್ಮ ಸಂಪ್ರದಾಯದ ಮಠಗಳಿಗೆ ಜಾತಿ ಜಂಗಮರನ್ನು ಅದರಲ್ಲೂ ಒಂದೇ ಕುಟುಂಬದ ಸದಸ್ಯರನ್ನು ಪೀಠಕ್ಕೆ ತರುವ ಪದ್ಧತಿ ತಂದರು. ಇದರಿಂದ ಲಿಂಗಾಯತ ಮಠಗಳು ಕೆಲವೇ ಜನರ ಸ್ವತ್ತಾದವು.
ಮುಖ್ಯವಾಗಿ ತಮ್ಮ ಮಿಶ್ರ ಧರ್ಮದ ಪ್ರತೀಕವಾಗಿ ‘ವೀರಶೈವ’ ಪದವನ್ನು ‘ಲಿಂಗಾಯತ’ ಪದಕ್ಕೆ ಪರ್ಯಾಯವಾಗಿ ಬೆಳೆಸಿ, ಬಸವ ಭಕ್ತರ ತತ್ವಗಳಿಗೆ, ಅಸ್ಮಿತೆಗೆ ದಕ್ಕೆ ತಂದರು.
(‘ಶರಣ ಧರ್ಮ: ಜಾತಿ ನಾಶ- ಜಾತಿ ನಿರ್ಮಾಣ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೪)
ಲಿಂಗಾಯತರನ್ನು ಮೂಲೆಗುಂಪಾಗಿಸಿದ ವೀರಶೈವರು

ನೂರಾರು ವರ್ಷಗಳಿಂದ ವೈದಿಕರು ವೀರಶೈವ ತತ್ವವನ್ನು ಹೇರಿದರೂ, ಅದು ಇತ್ತೀಚಿನವರೆಗೆ ಜನರನ್ನು ತಲುಪಲಿಲ್ಲ. ಹಳಕಟ್ಟಿ, ಚನ್ನಬಸಪ್ಪರಂತವರು ತಪ್ಪಿಯೂ ಆ ಪದವನ್ನು ಬಳಸಲಿಲ್ಲ.
ಶರಣರು ಕಟ್ಟಿದ ಯಾವುದೆ ಸಂಸ್ಥೆಯಲ್ಲಿ ವೀರಶೈವ ಹೆಸರಿರಲಿಲ್ಲ: ಲಿಂಗಾಯತ ಬೋರ್ಡಿಂಗ್ (1868), ಲಿಂಗಾಯತ ವಿದ್ಯಾಭಿವೃದ್ಧಿ ಸಭೆ (1883), ಲಿಂಗಾಯತ ಎಜುಕೇಶನ್ ಸೊಸೈಟಿ (1916) ಇತ್ಯಾದಿ.
ಆದರೆ ಕ್ರಮೇಣವಾಗಿ ೨೦ನೇ ಶತಮಾನದಲ್ಲಿ ವೀರಶೈವ ಬಲಿಷ್ಠವಾಗಿ ಲಿಂಗಾಯತ ಕ್ಷೀಣಿಸಿತು. ಕಾಶಿಗೆ ಹೋಗಿ ಸಂಸ್ಕೃತದಲ್ಲಿ ಓದಿ ಬಂದ ಮಠಾಧೀಶರಿಗೆ ವೈದಿಕ ಮಿಶ್ರಧರ್ಮವೇ ಆಪ್ಯವಾಯಿತು.
ಕೆಲ ಲಿಂಗಾಯತರು ಬ್ರಾಹ್ಮಣರೊಂದಿಗೆ ಶ್ರೇಷ್ಠತೆಗೆ ಸ್ಪರ್ಧಿಸಲು ಶುರುಮಾಡಿದರು. ತಮ್ಮನ್ನು ವರ್ಣ ಭೇದ ಆಚರಿಸುವ ಲಿಂಗಿ ಬ್ರಾಹ್ಮಣರೆಂದು ಕರೆದುಕೊಂಡು ಸಂಸ್ಕೃತ ಶಾಲೆಗಳನ್ನು ತೆರೆದರು.
ಶಿಕ್ಷಣ ಹೆಚ್ಚಿದಂತೆ ವೀರಶೈವ ಶಿಷ್ಟ ಲಿಂಗಾಯತ ಅಶಿಷ್ಟ ಎಂಬ ಭಾವನೆ ಬೆಳೆಯಿತು. ಇದು ನಗರದಿಂದ ಹಳ್ಳಿಗೆ, ದಕ್ಷಿಣದಿಂದ ಉತ್ತರ ಕರ್ನಾಟಕಕ್ಕೆ ಹರಡಿ ಲಿಂಗಾಯತ ತತ್ವ ಕ್ಷೀಣಿಸಿತು.
1904ರಲ್ಲಿ ವೀರಶೈವ ಮಹಾಸಭಾ ಹುಟ್ಟಿದಾಗ, ಉತ್ತರ ಕರ್ನಾಟಕದವರು ಅದನ್ನು ಲಿಂಗಾಯತ ಮಹಾಸಭಾ ಎಂದು ಕರೆಯಬೇಕು ಎಂದರೆ, ‘ಸುಶಿಕ್ಷಿತ’ರಾಗಿದ್ದ ದಕ್ಷಿಣದವರು ವಿರೋಧಿಸಿ ಗೆದ್ದರು.
(‘ವೀರಶೈವ ಇತಿಹಾಸ ಮತ್ತು ಭೂಗೋಲ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೭)
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

ವೀರಶೈವ ಸಮುದಾಯ ಮತ್ತು ಲಿಂಗಾಯತ ಧರ್ಮದ ಇತಿಹಾಸ ತಿಳಿಸುವ ಕಲಬುರ್ಗಿ ಅವರು ತಮ್ಮ ಲೇಖನ