ಪ್ರಭುಲಿಂಗಲೀಲೆ : ಒಂದು ಸಮಗ್ರ ಚಿಂತನೆ 19
ಚಾಮರಸ ಕನ್ನಡದ ಒಬ್ಬ ಮಹತ್ವದ ಕವಿ. ತನ್ನ ಯಾವುದೇ ಕುರುಹನ್ನು ಹೇಳಿಕೊಳ್ಳದೆ, ಕಾವ್ಯದ ವಸ್ತುವಾದ ಕಥಾನಾಯಕ ಅಲ್ಲಮ ಪ್ರಭುದೇವರನ್ನೇ ಮುಖ್ಯವಾಗಿಸಿ ಕಾವ್ಯ ರಚಿಸಿದ್ದಾನೆ. ಆತನದು ಎಷ್ಟು ವಿನೀತಭಾವ ಎಂದರೆ, ದೇಗುಲವೇ ಮಾತಾಡುವಂದದಿ ನಾನು ಈ ಕಾವನ್ನು ಹೇಳುತ್ತಿದ್ದೇನೆ, ಒಂದು ಬೃಹತ್ ಕಟ್ಟಡದಲ್ಲಿ ಕೂಗು ಹಾಕಿದಾಗ, ಅದರಿಂದ ಹೊರಹೊಮ್ಮುವ ಪ್ರತಿಧ್ವನಿಯ ರೂಪದಲ್ಲಿ ನಾನು ಗುಹೇಶ್ವರನ ಪ್ರತಿಧ್ವನಿಯಾಗಿ ಈ ಕಾವ್ಯವನ್ನು ರಚಿಸುತ್ತಿದ್ದೇನೆ ಎಂಬ ವಿನೀತ ಭಾವ ಚಾಮರಸನದು. ಇನ್ನೂ ಒಂದು ಮಾತನ್ನು ಆತ ಹೇಳುತ್ತಾನೆ- “ಹೇಳುವವನು ನಾನಲ್ಲ, ಕೇಳುವರು ನೀವಲ್ಲ, ಹೇಳುವವನು ಗುಹೇಶ್ವರ, ಕೇಳುವವನು ಗುಹೇಶ್ವರ” ಎಂಬ ಭಾವ ಆತನಲ್ಲಿದೆ. ಭಾಮಿನಿ ಷಟ್ಪದಿಯಲ್ಲಿ ಸಂಪೂರ್ಣ ಅಧ್ಯಾತ್ಮಕೇಂದ್ರೀತವಾಗಿರುವಂತಹ ಕಾವ್ಯವನ್ನು ರಚಿಸಿದ ಅಗ್ಗಳಿಕೆ ಚಾಮರಸನದು.
ಈ ಕಾವ್ಯದ ಒಂದು ವಿಶೇಷತೆಯೆಂದರೆ, ಈ ಕೃತಿ ರಚನೆಯಾದ ಅಲ್ಪಾವಧಿಯಲ್ಲಿ ನೆರೆಯ ಭಾಷೆಗಳಿಗೆ ಅನುವಾದವಾಗಿರುವುದು. ಮಾನವ ಜೀವನದ ಪರಮ ಸತ್ಯವನ್ನೂ ಸಾಹಿತ್ಯದ ಚಿರಂತನ ಮೌಲ್ಯಗಳನ್ನೂ ಒಳಗೊಂಡ ಪುಸ್ತಕವೊಂದು ಯಾವುದೇ ಭಾಷೆಯಲ್ಲಿ ರಚನೆಗೊಂಡರೂ ಇತರ ಭಾಷಿಕರನ್ನೂ ಅದು ಆಕರ್ಷಿಸುತ್ತದೆ. ಈ ಹಿನ್ನೆಲೆಯಲ್ಲಿ ರಾಮಾಯಣ-ಮಹಾಭಾರತ-ಕಾಳಿದಾಸನ ಕಾವ್ಯಗಳು ಮೊದಲುಗೊಂಡು ಸಾವಿರಾರು ಸಂಸ್ಕೃತದ ಕೃತಿಗಳು ವಿಶ್ವದ ಬಹುತೇಕ ಭಾಷೆಗಳಲ್ಲಿ ಭಾಷಾಂತರವಾಗಿವೆ. ಸಂಸ್ಕೃತ, ಮರಾಠಿ, ಬಂಗಾಲಿ ಭಾಷೆಗಳಿಂದ ಕನ್ನಡಕ್ಕೆ ಸಾವಿರಾರು ಕೃತಿಗಳು ಕನ್ನಡಕ್ಕೆ ಅನುವಾದಗೊಂಡಿವೆ. ಆದರೆ ಕನ್ನಡದ ಕೃತಿಗಳು ಬೇರೆ ಭಾಷೆಗೆ ಅನುವಾದಗೊಂಡಿರುವುದು ತೀರ ಅಪರೂಪ ವೆನ್ನಬೇಕು. ಪಂಪ-ರನ್ನ-ಕುಮಾರವ್ಯಾಸ ಮೊದಲಾದ ಮಹಾಕವಿಗಳ ಕೃತಿಗಳು ಸಂಸ್ಕೃತ ಭಾಷೆಯಿಂದ ಕನ್ನಡಕ್ಕೆ ಬಂದಿರುವ ಕಾರಣ, ಈ ಕೃತಿಗಳು ಮತ್ತೆ ಬೇರೆ ಭಾಷೆಗೆ ಅನುವಾದವಾಗಲಿಲ್ಲ. ಆದರೆ ಚಾಮರಸನ ‘ಪ್ರಭುಲಿಂಗಲೀಲೆ’ ಮತ್ತು ನಿಜಗುಣರ ‘ವಿವೇಕ ಚಿಂತಾಮಣಿ’ ಈ ಎರಡು ಕೃತಿಗಳು ತೆಲಗು, ತಮಿಳು, ಸಂಸ್ಕೃತ ಮತ್ತು ಮರಾಠಿ ಭಾಷೆಗಳಿಗೆ ಭಾಷಾಂತರವಾಗಿರುವುದು ಸಮಸ್ತ ಕನ್ನಡಿಗರು ಹೆಮ್ಮೆ ಮತ್ತು ಅಭಿಮಾನ ಪಡುವ ಸಂಗತಿಯಾಗಿದೆ. ಚಾಮರಸನ ಕನ್ನಡ ಪ್ರಭುಲಿಂಗಲೀಲೆ ಕೃತಿಯ ಪರಿಚಯ ಕನ್ನಡಿಗರಿಗೆ ಇರುವುದರಿಂದ, ಅದರ ಭಾಷಾಂತರ ಕೃತಿಗಳಲ್ಲಿ ಹುದುಗಿರುವ ಕೆಲವು ವಿಶೇಷ ಹೊಳವುಗಳ ಕುರಿತು ಇಲ್ಲಿ ಚಿಂತನೆ ಮಾಡೋಣ.
ತೆಲುಗು ಭಾಷಾಂತರಗಳು
ಪಿಡುಪರ್ತಿ ಸೋಮನಾಥ ಕವಿ
ತೆಲುಗುಭಾಷೆಯಲ್ಲಿ ನಾಲ್ಕು ಪ್ರಭುಲಿಂಗಲೀಲೆಗಳು ರಚನೆಗೊಂಡಿವೆ. ಪಿಡುಪರ್ತಿ ಸೋಮನಾಥನು ದ್ವಿಪದಿಯಲ್ಲಿಯೂ, ಪಾಲನಾರ್ಯ ಪುತ್ರನಾದ ಪಿಡುಪರ್ತಿ ಬಸವಕವಿಯು ಚಂಪೂವಿನಲ್ಲಿಯೂ ರಚಿಸಿದ್ದಾರೆ. ತೆಲುಗು ಪ್ರಭುಲಿಂಗಲೀಲೆಯಲ್ಲಿ ಕವಿಯ ವಿಷಯವಾಗಿ ಹೀಗೆ ಪ್ರಸ್ತಾಪಿಸಲಾಗಿದೆ. “ಕನ್ನಡದಲ್ಲಿ ಚಾಮರಸ ಕವಿ ಬರೆದ ಕೃತಿಯನ್ನು, ಕಾಂಚಿಪುರವಾಸಿಯಾದ ಬಿರುತೊಂಡ ನಂಬಿಯೆಂಬ ವಣಿಕನ ಕಂಜಸಂಭೂತನಾದ ನೆಲ್ಲೂರು ರಾಮಲಿಂಗಯ್ಯ ಎಂಬಾತನ ಪ್ರೇರಣೆಯಿಂದ ಪಿಡುಪರ್ತಿ ಸೋಮನಾಥ ಕವಿಯು ತೆಲುಗಿನಲ್ಲಿ ರಚಿಸಿದನು. ಈತ ಶೈವಬ್ರಾಹ್ಮಣ. ತಂದೆ ಬಸವಯ್ಯ, ತಾಯಿ ನಾಗಾಂಬ, ತಾತ ದೇವಯ್ಯ, ಮುತ್ತಾತ ಸೋಮನಾಥ. ಕಾಲ ಸುಮಾರು ಕ್ರಿ.ಶ. ೧೫೧೦. ವಿಜಯನಗರದ ಪ್ರೌಢದೇವರಾಯನ ಕಾಲದಲ್ಲಿ ಇವನ ಮುತ್ತಾತ ಸೋಮನಾಥನು ಆತನ ಪೂರ್ವಜರು ಕಳೆದುಕೊಂಡ ಅಗ್ರಹಾರವನ್ನು ಜಹಾಗೀರಾಗಿ ಮತ್ತೆ ಸಂಪಾದಿಸಿದನು”
ಕನ್ನಡದಲ್ಲಿ ೨೫ ಗತಿಗಳಿರುವಂತೆ, ತೆಲುಗು ಪಿಡುಪರ್ತಿ ಸೋಮನಾಥನ ಅನುವಾದದಲ್ಲಿಯೂ ೨೫ ಗತಿಗಳಿಂದ ಕೂಡಿದ ಐದು ಆಶ್ವಾಸಗಳಿವೆ. ಐದನೆಯ ಆಶ್ವಾಸಾಂತ ಗದ್ಯದಲ್ಲಿ ಹೀಗೆ ಹೇಳುತ್ತಾನೆ-
‘ಇಪ್ಪತ್ತು ಮೇಲೈದು ಗತಿಗಳಿಂ ಪ್ರಭುವಿ
ನೊಪ್ಪುವ ಚರಿತಮಂ ಶಿವ ಶಿವೆಗೆ ಪೇಳ್ದಂ
ಸದಮಲಪದವೇದಿ ಚಾಮರಸಂದು
ಪದಗಳ ಸಾಸಿರಹನ್ನೊಂದು ಬಳಸಿ,
ಪ್ರಭುಲಿಂಗಲೀಲೆಯಂ ಪಂಚವಿಂಶತಿಯಿಂ
ದಭಿನವದಿ ಬರೆದನದ ತೆಲುಗಿನಲ್ಲಿ,
ಪಿಡುಪರ್ತಿ ಸೋಮಾಭಿಧನು ನಾನು ಪೇಳ್ದೆ.
ಇದು ಪಾಲಕುರಿಕಿ ಸೋಮೇಶ ಪ್ರಸಾದ
ವಿದಿತಾಷ್ಟಭಾಷಾಕವಿತ್ವ ಪ್ರವೀಣಂ,
ಭಾಮಿತ್ರ ಪಿಡುಪರ್ತಿ ಬಸವೇಶಪುತ್ರಂ
ಸೋಮದೇವಾಖ್ಯಾ ಸುಕವೀಂದ್ರಮುಖ್ಯಂ
ಫಣಿತವಾಗೆಸೆವಂಥ ಪ್ರಭುಲಿಂಗಲೀಲೆ
ಯನು ಸರಿಯಿಲ್ಲೆನೆ ಪಂಚಮಾಶ್ವಾಸ’
ಕೈಲಾಸದ ಶಿವನ ಸಭೆಯ ವರ್ಣನೆಯೊಂದಿಗೆ ಪ್ರಾರಂಭವಾಗುವ ಈ ಕೃತಿ ಬನವಾಸಿ ಪುರದಲ್ಲಿ ಅಲ್ಲಮ ಜನ್ಮತಾಳುವುದು, ಮಧುಕೇಶ್ವರನ ಮುಖಮಂಟಪದಲ್ಲಿ ಕುಳಿತು ಮದ್ದಳೆ ಬಾರಿಸುವುದು, ಮಾಯೆ ಅಲ್ಲಿಗೆ ಬರುವುದು, ಅವಳು ಅಲ್ಲಮನನ್ನು ನೋಡಿ ಆಕರ್ಷಿತಳಾಗುವುದು, ಅಲ್ಲಮನನ್ನು ಒಲಿಸಿಕೊಳ್ಳಲು ಅನೇಕ ಪ್ರಯತ್ನಗಳನ್ನು ಮಾಡುವಳು. ಆದರೆ ಆ ಕಾರ್ಯದಲ್ಲಿ ಅವಳು ಸಫಲವಾಗುವುದಿಲ್ಲ. ಇದರಿಂದ ಕೈಲಾಸಪತಿ ಪರಶಿವನ ಹೆಂಡತಿ ಗೌರಿಯು ವಿಮಳೆಯನ್ನು ಭೂಲೋಕಕ್ಕೆ ಕಳಿಸುವುದು, ಉಡುತಡಿ ಗ್ರಾಮದಲ್ಲಿ ಅಕ್ಕಮಹಾದೇವಿಯಾಗಿ ಜನ್ಮ ತಳೆದ ವಿಮಲೆ ಅಲ್ಲಮನ್ನು ಅನುಭವ ಮಂಟಪದಲ್ಲಿ ಸೋಲಿಸುವುದು ಮೊದಲಾದ ವಿವರಗಳ ಅಲ್ಲಮನ ಮುಖ್ಯ ಕಥೆಯೊಂದಿಗೆ ಗೊಗ್ಗಯ್ಯನ ಕಥೆ, ಮುಕ್ತಾಯಕ್ಕನ ಕಥೆ, ಸಿದ್ಧರಾಮನ ಕಥೆ, ಪ್ರಭುದೇವರು ಕಲ್ಯಾನಪುರಕ್ಕೆ ಬರುವುದು, ಇಷ್ಟಲಿಂಗದ ಗತಿ, ಗೋರಕ್ಷನ ಗತಿ, ಪ್ರಾಣಲಿಂಗೈಕ್ಯ ಗತಿ, ಶೂನ್ಯಸಿಂಹಾಸನ ಗತಿ, ಬಸವೇಶ್ವರರು ಪ್ರಭುಗಳನ್ನು ಎದುರುಗೊಳ್ಳುವ ಗತಿ, ತತ್ವೋಪದೇಶ ಗತಿ, ಪ್ರಭುವಿನ ಮಹಿಮೆಯನ್ನು ಪರಮೇಶ್ವರನು ಉಪದೇಶ ಮಾಡುವ ಗತಿ ಇವೆಲ್ಲ ಈ ಕೃತಿಯಲ್ಲಿ ಸಮಗ್ರವಾಗಿ ಬಂದಿವೆ.
ಸೋಮನಾಥ ಕವಿಯು ತನ್ನ ಪ್ರಭುಲಿಂಗಲೀಲೆಯ ಅನುವಾದದ ಪ್ರಥಮ ಅಧ್ಯಾಯದಲ್ಲಿ ಕವಿ ಪಾಲ್ಕುರಿಕೆ ಸೋಮನಾಥ, ಅಲ್ಲಮಪ್ರಭು, ಬಸವೇಶ್ವರ, ಚೆನ್ನಬಸವೇಶ್ವರ, ಅಕ್ಕಮಹಾದೇವಿ ಮೊದಲಾದವರ ಸ್ತುತಿಯಾದ ಮೇಲೆ ತನ್ನ ಗುರು ಸಿದ್ಧವೀರೇಶನನ್ನು ಸ್ತುತಿಸಿದ್ದಾನೆ.
ಪಿಡುಪರ್ತಿ ಬಸವಪ್ಪ
ಪಿಡುಪರ್ತಿ ಸೋಮೇಶ್ವರನು ದ್ವಿಪದಿಯಲ್ಲಿ ರಚಿಸಿದ ಪ್ರಭುಲಿಂಗಲೀಲೆಯನ್ನೇ ಆತನ ಸೋದರನಾದ ಪಾಲನಾರ್ಯನ ಕುಮಾರ ಪಿಡುಪರ್ತಿ ಬಸವಪ್ಪನೆಂಬ ಕವಿ ಪದ್ಯಗ್ರಂಥವಾಗಿ ರಚಿಸಿದ್ದಾನೆ. ತನ್ನ ಕೃತಿಯ ಅಂತ್ಯ ಗದ್ಯದಲ್ಲಿ ಕೃತಿ ಕುರಿತು ಹೀಗೆ ಹೇಳಿದ್ದಾನೆ-
“ಇದು ಪಾಲ್ಕುರಿಕೆ ಸೋಮೇಶ್ವರವರಪ್ರಸಾದಲಬ್ಧ ಕವಿತಾಚಾತುರ್ಯಧುರ್ಯ, ಪಿಡುಪರ್ತಿ ಪಾಲನಾರ್ಯ ಸತ್ಪುತ್ರ, ಕುಲಪವಿತ್ರ, ಬಸವಪ್ಪ ನಾಮಧೇಯ ಪ್ರಣೀತವಾದ ಪ್ರಭುಲಿಂಗಲೀಲೆಯೆಂಬ ಶಿವಜ್ಞಾನದಲ್ಲಿ ಪಂಚಮಾಶ್ವಾಸ’
ಪದ್ಯ ಪ್ರಭುಲಿಂಗಲೀಲೆ ಅಚ್ಚಾಗಿದೆ. ಆದರೆ ದ್ವಿಪದಿ ಪ್ರಭುಲಿಂಗಲೀಲೆ ಇಲ್ಲಿಯವರೆಗೆ ಅಚ್ಚಾಗಿಲ್ಲ. ಆದರೆ ಬಸವಪ್ಪ ಕವಿ ತನ್ನ ಕೃತಿಯಲ್ಲಿ ‘...ಪಿಡುಪರ್ತಿವಾಸುಡೌ, ಸೋಮಗುರುಂಡುದಾ ದ್ವಿಪದ ಚೊಪ್ಪಡ ಜೆಪ್ಪೆ ವಿಚಿತ್ರ ವೈಖರಿನ್’ (ಪಿಡುಪರ್ತಿ ನಿವಾಸಿಯಾದ ಸೋಮಗುರು ಆ ದ್ವಿಪದಿಯನ್ನು ವಿಚಿತ್ರ ವೈಖರಿಯಲ್ಲಿ ಹೇಳಿದ). ಬಸವಪ್ಪ ಕವಿ ಮೂಲ ಚಾಮರಸನ ಪ್ರಭುಲಿಂಗಲೀಲೆಯನ್ನು ನೋಡಲು ಹೋಗಿಲ್ಲ. ಆದರೆ ಸೋಮನಾಥನ ಕೃತಿಯನ್ನು ನೇರವಾಗಿ ತನ್ನ ಕಾವ್ಯಕ್ಕೆ ಆಕರವಾಗಿ ಬಳಸಿಕೊಂಡಿದ್ದರೂ ಅಲ್ಲಲ್ಲಿ ಸ್ವಾತಂತ್ರ್ಯ ವಹಿಸಿ ಕೆಲವು ವರ್ಣನೆಗಳನ್ನು ಕಡಿಮೆ ಮಾಡಿದ್ದಾನೆ, ಕೆಲವು ಕಡೆ ಹೆಚ್ಚು ಮಾಡಿದ್ದಾನೆ. ರಾಮಾಯಣ ಭಾರತಗಳ ಭಾಷಾಂತರೀಕರಣದಂತೆ ಬಸವಪ್ಪ ಕವಿಯು ತನ್ನ ಕೃತಿಯಲ್ಲಿ ಬೇಕಾದಂತೆ ಮಾರ್ಪಾಡು ಮಾಡಿಕೊಂಡಿದ್ದಾನೆ.
ಪಿಡುಪರ್ತಿ ಸೋಮನಾಥ ಕೃತ ದ್ವಿಪದಿ ಪ್ರಭುಲಿಂಗಲೀಲೆ ಇದುವರೆಗೂ ಪ್ರಕಟವಾಗಿಲ್ಲ. ಆದರೆ ಬಸವಪ್ಪ ಕವಿಯ ಪದ್ಯ ಪ್ರಭುಲಿಂಗಲೀಲೆ ೧೯೨೩ರಲ್ಲಿ ಮದರಾಸಿನ ಶ್ರೀರಾಜರಾಜೇಶ್ವರಿ £ಕೇತನ ಮುದ್ರಣಾಲಯದಲ್ಲಿ ಪಮ್ಮಿ ತ್ಯಾಗರಾಯಶೆಟ್ಟಿ ಅವರ ಕುಮಾರರಿಂದ ಮುದ್ರಿಸಲ್ಪಟ್ಟಿತು. ಆದರೆ ಈ ಮುದ್ರಣದಲ್ಲಿ ಹೇರಳವಾಗಿ ತಪ್ಪುಗಳು ಉಳಿದಿವೆ. ಮೇಲಿನ ಎರಡು ಗ್ರಂಥಗಳನ್ನು ಪರಿಶುದ್ಧವಾಗಿ ಮುದ್ರಿಸಬೇಕಾಗಿದೆ. ‘ಶಿವಜ್ಞಾನ’ವೆಂಬ ನಾಮಾಂತರುವುಳ್ಳ ಈ ಪ್ರಭುಲಿಂಗಲೀಲೆಗಳನ್ನು ಮೇಲಿನ ಕವಿದ್ವಯರೇ ಅಲ್ಲದೆ ಕೊಚ್ಚಡರ್ಲಕೋಟಿ ರಾಮಕವಿ, (ಈತನ ಕಾಲ ೧೬ನೇ ಶತಮಾನ), ನಡುಕುದುಟಿ ರಾಮಕವಿ (ಈತನ ಕಾಲ ಕ್ರಿ.ಶ. ೧೮೮೫) ಎಂಬಿಬ್ಬರು ಪದ್ಯರೂಪದಲ್ಲಿ ಬರೆದಿದ್ದಾರೆ. ಇವರಿಬ್ಬರೂ ಈಗಿನವರು. ಇವರಿಬ್ಬರಿಗೂ ಮೂಲ ಆಕರವಾದುದು ಪಿಡುಪತಿ ಸೋಮನಾಥನ ಪ್ರಭುಲಿಂಗಲೀಲೆ.
ಸಂಸ್ಕೃತ ಪ್ರಭುಲಿಂಗಲೀಲೆ
ಕಂಚಿಪುರನಿವಾಸಿಯಾದ ಶಂಕರಾರಾಧ್ಯರು ಸಂಸ್ಕೃತ ಪ್ರಭುಲಿಂಗಲೀಲೆಯನ್ನು ರಚಿಸಿದ್ದಾರೆಂದು ಗುರುಸಿದ್ಧಪ್ಪ ಬಸವಪ್ಪ ಬಳ್ಳಾರಿ ಅವರು ಅಭಿಪ್ರಾಯಪಡುತ್ತಾರೆ. ಆದರೆ ಕೆಲವು ವಿದ್ವಾಂಸರ ಪ್ರಕಾರ ತೆಲುಗಿನ ಸೋಮನಾಥನ ಪ್ರಭುಲಿಂಗಲೀಲೆಯನ್ನೇ ಕಂಚಿ ಶಂಕರಾರಾಧ್ಯರು ಸಂಸ್ಕೃತಕ್ಕೆ ಅನುವಾದಿಸಿದ್ದಾರೆಂದು ಅಭಿಪ್ರಾಯ ಮಡುತ್ತಾರೆ. ‘ಸಂಸ್ಕೃತ ಪ್ರಭುಲಿಂಗಲೀಲಾ ಭವಿಷತ್ಪುರಾಣಾಂತರ್ಗತವಾದುದೆಂದು ಅದರಲ್ಲಿ ಹೇಳಲಾಗಿದೆ. ಸಂಸ್ಕೃತ ಪ್ರಭುಲಿಂಗಲೀಲೆ ಕ್ರಿ.ಶ. ೧೬ನೇ ಶತಮಾನದಲ್ಲಿ ರಚನೆಯಾಗಿರಬಹುದು. ಇದನ್ನು ಚೆನ್ನಬಸವ ಪುರಾಣ ಕರ್ತೃವಾದ ಹಂಪೆಯ ವಿರೂಪಾಕ್ಷ ಪಂಡಿತನು ಬರೆದನೆಂದು ಪಂಡಿತ ಶ್ರೀ ಗುರುಸಿದ್ಧ ಶಾಸ್ತ್ರಿ ಉಜ್ಜಯಿನಿ ಅವರು ಹೇಳಿದ್ದಾರೆ. ಆದರೆ ಪಿಡುಪರ್ತಿ ಸೋಮನಾಥನ ಗ್ರಂಥಕ್ಕೂ ಸಂಸ್ಕೃತ ಪ್ರಭುಲಿಂಗಲೀಲೆಗೂ ಬಹಳ ಸಾಮ್ಯವಿರುವುದರಿಂದಲೂ, ಅನೇಕ ಕಡೆಗಳಲ್ಲಿ ಸಂಸ್ಕೃತ ಸಮಾಜದ ಪುಂಜಗಳೂ ಪದ್ಯಗಳೂ ಸಮಾನವಾಗಿರುವುದರಿಂದಲೂ ಒಂದು ವೇಳೆ ಈ ಸೋಮನಾಥನೇ ಸಂಸ್ಕೃತದಲ್ಲಿಯೂ ಬರೆದಿರಬಹುದೇ ಎಂಬ ಅನುಮಾನವು ನಮಗೆ ತಲೆದೋರುತ್ತದೆ. ಇದು ಹೀಗೆಯೇ ಸರಿ ಎಂದು ಹೇಳುವುದು ಸದ್ಯದಲ್ಲಿ ಸಾಧ್ಯವಿಲ್ಲ” ಎಂದು ಎಂ. ಆರ್. ಶ್ರೀ ಅವರು ಅಭಿಪ್ರಾಯ ಪಡುತ್ತಾರೆ.
ಎಂ.ಆರ್.ಶ್ರೀ ಅವರು ಹೇಳುವಂತೆ ತೆಲುಗು ಪ್ರಭುಲಿಂಗಲೀಲೆಗೂ ಸಂಸ್ಕೃತ ಪ್ರಭುಲಿಂಗಲೀಲೆಗೂ ಬಹಳೇ ಸಾಮ್ಯವಿರುವುದು ಕಂಡುಬರುತ್ತದೆ. ಆದರೂ ಕವಿ ಸೋಮನಾಥನೇ ಸಂಸ್ಕೃತ ಪ್ರಭುಲಿಂಗಲೀಲೆಯನ್ನೂ ಬರೆದಿರಬಹುದೆಂದು ಹೇಳಲು ಬರುವಂತಿಲ್ಲ. ಏಕೆಂದರೆ ಚಾಮರಸನ ಕನ್ನಡ ಪ್ರಭುಲಿಂಗಲೀಲೆಯನ್ನು ತೆಲುಗಿನಲ್ಲಿ ಅನುವಾದಿಸಿದ್ದೇನೆಂದು ಹೇಳಿಕೊಂಡ ಕವಿ ಸೋಮನಾಥನು ಸಂಸ್ಕೃತದಲ್ಲಿ ಅದನ್ನು ‘ಭವಿಷತ್ ಪುರಾಣಾಂತ್ಘತ’ ಎಂದು ಹೇಳಿದುದೇಕೆ? ಎಂಬ ಪ್ರಶ್ನೆ ಏಳುತ್ತದೆ. ಅಲ್ಲದೆ ಆ ಕಾವ್ಯದಲ್ಲಿ ತನ್ನ ಹೆಸರನ್ನೂ ರಹಸ್ಯವಾಗಿಟ್ಟುಕೊಂಡುದ್ದೇಕೆ? ಈ ಮೊದಲಾದ ಸಮಸ್ಯೆಗಳು ಸಂಸ್ಕೃತ ಪ್ರಭುಲಿಂಗಲೀಲೆಯ ಕರ್ತೃ ಸೋಮನಾಥನೆಂಬ ಅನುಮಾನಕ್ಕೆ ಅಡ್ಡಿಯನ್ನು ಮಾಡುತ್ತವೆ. ಅಲ್ಲದೆ ಪಂಡಿತ ಗುರುಸಿದ್ಧ ಶಾಸ್ತ್ರಿ ಉಜ್ಜಯಿನಿ ಅವರು ಹೇಳುವಂತೆ ವಿರೂಪಾಕ್ಷ ಪಂಡಿತನೂ ಸಂಸ್ಕೃತ ಪ್ರಭುಲಿಂಗಲೀಲೆಯ ಕರ್ತೃ ಆಗಲಾರ. ಏಕೆಂದರೆ ಚಾಮರಸನನ್ನು ತನ್ನ ‘ಚೆನ್ನಬಸವ ಪುರಾಣ’ ಕಾವ್ಯದಲ್ಲಿ ಸ್ಮರಿಸಿದ ಕವಿ ವಿರೂಪಾಕ್ಷ ಪಂಡಿತನು ಒಂದು ವೇಳೆ ಸಂಸ್ಕೃತ ಪ್ರಭುಲಿಂಗಲೀಲೆಯನ್ನು ರಚಿಸಿದ್ದೇ ಆಗಿದ್ದರೆ, ಅವನು ತನ್ನ ನಾಮಗೋತ್ರ ಗುರುಪರಂಪರೆ ಇತ್ಯಾದಿ ವಿಷಯಗಳನ್ನು ಹಾಗೂ ಚಾಮರಸನ ಪ್ರಭುಲಿಂಗಲೀಲೆಯ ನಾಮನಿರ್ದೇಶನವನ್ನು ಮಾಡದೇ ಇರುತ್ತಿರಲಿಲ್ಲ.
ಇನ್ನು ಗುರುಸಿದ್ಧಪ್ಪ ಬಳ್ಳಾರಿ ಅವರು ಹೇಳಿದಂತೆ ಕಂಚಿಪುರ ನಿವಾಸಿಯಾದ ಶಂಕರಾರಾಧ್ಯರು ಸಂಸ್ಕೃತ ಪ್ರಭುಲಿಂಗಲೀಲೆಯ ಕರ್ತೃ ಎನ್ನುವ ಅಭಿಪ್ರಾಯವನ್ನು ಬಹುತೇಕ ವಿದ್ವಾಂಸರು ಒಪ್ಪಿಕೊಂಡಿದ್ದಾರೆ. ವಸ್ತುಸ್ಥಿತಿಯಿಂದ ಗಮನಿಸಿದರೆ ಸಂಸ್ಕೃತ ಪ್ರಭುಲಿಂಗಲೀಲೆ ಸೋಮನಾಥನ ತೆಲುಗು ಪ್ರಭುಲಿಂಗಲೀಲೆಯ ಅನುವಾದವಾಗಿರಬೇಕೆಂದು ಹೇಳಲು ಅವೆರಡರ ಆಂತರ್ಯದಲ್ಲಿ ಸಾಕಷ್ಟು ಆಧಾರಗಳು ಲಭಿಸುತ್ತವೆ. ಇನ್ನೂ ವಿಶೇಷವೆಂದರೆ ಸೋಮನಾಥ ಮತ್ತು ಶಂಕರಾರಾಧ್ಯ ಈ ಉಭಯ ಕವಿಗಳು ಕಾಂಚಿಪುರನಿವಾಸಿಗಳಾಗಿದ್ದಾರೆ. ಅಲ್ಲದೆ ಇವರಿಬ್ಬರ ಗುರುವೂ ಸಿದ್ಧವೀರೇಶನಾಗಿದ್ದಾನೆ. ಇನ್ನು ಸಂಸ್ಕೃತ ಪ್ರಭುಲಿಂಗಲೀಲೆ ‘ಭವಿಷತ್ ಪುರಾಣಾಂತರ್ಗತ’ವೆಂದು ಹೇಳಿರುವುದಕ್ಕೂ ಕಾರಣ ಕೊಡಬಹುದು. ಸಂಸ್ಕೃತ ಪ್ರಭುಲಿಂಗಲೀಲೆಯ ಕವಿಗೆ ತನ್ನ ಕಾವ್ಯ ‘ಪ್ರಾಚೀನ’ವೆಂದು ತೋರಿಸುವ ವ್ಯಸನವಿದ್ದಿರಬಹುದು. ಅದಕ್ಕಾಗಿ ಆತ ಕವಿ ಸೂತಮುನಿ ಶೌನಕಾದಿ ಋಷಿಗಳಿಗೆ ಪ್ರಭುಲೀಲೆಯನ್ನು ಹೇಳಿದಂತೆ ಕಲ್ಪಿಸಿಕೊಂಡಿದ್ದಾನೆ. ಆದರೂ ಸಂಸ್ಕೃತ ಕಾವ್ಯಕರ್ತೃ ತನ್ನ ಪ್ರಭುಲಿಂಗಲೀಲೆ ಅನುವಾದವೆಂದು ಹೇಳಿಕೊಂಡಿದ್ದರೂ ಅದು ಯಾರ ಕೃತಿಯ ಅನುವಾದ? ಮತ್ತು ಕೃತಿಯಲ್ಲಿ ತನ್ನ ಹೆಸರನ್ನು ಏಕೆ ಹೇಳಿಕೊಳ್ಳಲಿಲ್ಲ? ಎಂಬುವು ಸಮಸ್ಯೆಯಾಗಿಯೇ ಉಳಿಯುತ್ತವೆ. ಕೃತಿಯ ಕೊನೆಯಲ್ಲಿ ‘ಇತ್ಯಾದಿ ಭವಿಷತ್ಪುರಾಣ ಕಥಾ ವಿಶಾಲಾಯಾಂ ಶ್ರೀ ವೀರಮಾಹೇಶ್ವರಾಮೃತಾನಂದ ಸೂಕ್ತಿಸೂತ್ರಗ್ರಂಥಿತಿ ಪಂಚವಿಂಶತಿ ತತ್ತ್ವ ಮೌಕ್ತಿಕ ಮಹನೀಯಮಾಲಾಯಾಂ ಪ್ರಮಥಗಣ ವಚನ ಪರಂಪರಾನುಕೂಲಾಯಾಂ ಕಲಿಕಲ್ಮಷ ನಿಮಗ್ನ ಜನ ಸಮುದ್ದರಣ ಶೀಲಾಯಾಂ ಪ್ರಭುಲಿಂಗಲೀಲಾಯಾಂ ಪರಮೇಶ್ವರ ಪ್ರಸಾದ ಸಂಪ್ರಾಪ್ತ ಮಾಹೇಶ್ವರೀ ಮನಃ ಸಮಾಧಾನ ವೀರಶೈವ ಮಹಿಮಾನುಸಂಧಾನು ಪ್ರಸ್ತುತ ಕಥೋಪಸಂಹೃತಿ ಕಥನ ಗತಿರ್ನಾಮ ಪಂಚವಿಂಶೋಧ್ಯಾಯಃ”
ತಮಿಳು ಭಾಷೆಯಲ್ಲಿ
ತಮಿಳು ಸಾಹಿತ್ಯದಲ್ಲಿ ಶ್ರೇಷ್ಠ ಕವಿಗಳೆಂದು ಪ್ರಖ್ಯಾತರಾದ ತಿರುವಣ್ಣಾಮಲೆಯ ಶಿವಪ್ರಕಾಶ ಸ್ವಾಮಿಗಳು ಚಾಮರಸ ಕವಿಯ ಪ್ರಭುಲಿಂಗಲೀಲೆಯನ್ನು ತಾವು ತಮಿಳಿನಲ್ಲಿ ಅನುವಾದಿಸಿರುವುದಾಗಿ ಕೃತಿಯ ಆರಂಭದಲ್ಲಿ ಹೇಳಿಕೊಂಡಿದ್ದಾರೆ. ಇವರ ಕಾಲವನ್ನು ಕ್ರಿ.ಶ. ೧೬೫೦ಎಂದು ಗುರುತಿಸಲಾಗಿದೆ. ತಮಿಳು ಭಾಷೆಯ ಈ ಕೃತಿ ಒಂದು ರೀತಿಯಲ್ಲಿ ಸಮಗ್ರವೂ ಸಮರ್ಪಕವೂ ಆದ ಅನುವಾದವಾಗಿದೆ ಎಂದು ಹೇಳಬಹುದು.
ಇದು ಕೂಡ ೨೫ ಗತಿಗಳನ್ನು ಹೊಂದಿದೆ. ಈ ಕೃತಿಯನ್ನು ಕಾಂಚಿಪುರದ ನಿವಾಸಿಗಳಾದ ಶ್ರೀ ರಾಮಯೋಗಿಗಳು ‘ಪ್ರಭುಲಿಂಗಲೀಲೆ ವಚನ’ ಎಂಬ ಹೆಸರಿನಲ್ಲಿ ಶಿವಪ್ರಕಾಶ ಸ್ವಾಮಿಗಳ ಕೃತಿಯನ್ನೇ ಇನ್ನಷ್ಟು ಸರಳವಾಗಿ ನಿರೂಪಿಸುವ ಪ್ರಯತ್ನ ಮಾಡಿದ್ದಾರೆ. ಪ್ರಾರಂಭದಲ್ಲಿ ಶಿವಪ್ರಕಾಶ ಸ್ವಾಮಿಗಳ ಚರಿತ್ರೆಯನ್ನು ನೀಡಿದ್ದಾರೆ. ಆದರೆ ಕನ್ನಡ ಕವಿಯ ಹೆಸರನ್ನು ಪ್ರಸ್ತಾಪ ಮಾಡಿಲ್ಲವಾದ್ದರಿಂದ, ಇವರು ಕೂಡ ಮೂಲ ಕನ್ನಡ ಪಠ್ಯವನ್ನು ನೋಡದೆ, ಶಿವಪ್ರಕಾಶ ಸ್ವಾಮಿಗಳ ಕೃತಿಯನ್ನೇ ಆಧರಿಸಿ ಕೃತಿ ರಚಿಸಿರುವುದು ಕಂಡು ಬರುತ್ತದೆ. ೧೯೧೨ರಲ್ಲಿ ಮದ್ರಾಸ ರಿಪ್ಸನ್ ಅಚ್ಚುಕೂಟದಲ್ಲಿ ಈ ಕೃತಿ ಎರಡನೆಯ ಆವೃತ್ತಿ ಮುದ್ರಣವಾಗಿದೆ.
