ತಾವರಗೇರಾ
ಇಂದು ಲಿಂಗಾಯತ ರಾಜಕೀಯ ನಾಯಕರನ್ನು ತುಳಿಯುವ ಕೆಲಸ ಕೆಲವರು ಮಾಡುತ್ತಿದ್ದಾರೆ. ಬಸವ ಸಂಘಟನೆಗಳು ಇದರ ಬಗ್ಗೆ ಜಾಗೃತವಾಗಬೇಕು, ಎಂದು ಹೊಸಪೇಟೆ ಜೆಎಲ್ಎಂ ಅಧ್ಯಕ್ಷ ಬಸವರಾಜ ಮಾವಿನಹಳ್ಳಿ ಹೇಳಿದರು.
ತಾವರಗೇರಾದಲ್ಲಿ ಇತ್ತೀಚೆಗೆ ನಡೆದ ಕೊಪ್ಪಳ ಜಿಲ್ಲೆಯ ಬಸವಶಕ್ತಿ ಶಿಬಿರದಲ್ಲಿ ಬಸವ ಸಂಘಟನೆಗಳು ಚುನಾವಣೆಗಳಲ್ಲಿ ಸಕ್ರಿಯರಾಗಬೇಕೇ ವಿಷಯದ ಮೇಲೆ ಅವರು ಮಾತನಾಡಿದರು.
2023 ಚುನಾವಣೆಯಲ್ಲಿ 12 ಜನ ಹಿರಿಯ ನಾಯಕರಿಗೆ ಟಿಕೆಟ್ ಕೊಡಲಿಲ್ಲ. ಹಿರಿಯರನ್ನು ಪಕ್ಕಕ್ಕೆ ಸರಿಸಿ, ಹೊಸಬರಿಗೆ ಟಿಕೆಟ್ ಕೊಟ್ಟರೆ, ಅವರು ಹೇಳಿದಂತೆ ಕೇಳುತ್ತಾರೆ ಎನ್ನುವ ಲೆಕ್ಕಾಚಾರವಿತ್ತು ಇದರ ಹಿಂದೆ.
ಬಸವ ಸಂಘಟನೆಗಳು ರಾಜಕೀಯವಾಗಿ ಸಬಲವಾದರೆ ಮಾತ್ರ ಇಂತಹ ಕುತಂತ್ರಗಳನ್ನು ಮಣಿಸಬಹುದು, ಎಂದು ಮಾವಿನಹಳ್ಳಿ ಹೇಳಿದರು.
ರಾಜಕೀಯ ಪ್ರಭಾವ ಬೆಳೆಸಿಕೊಳ್ಳಲು ಬಸವ ಸಂಘಟನೆಗಳು ಬೂತ್ ಮಟ್ಟದ್ದಲ್ಲಿ ಕೆಲಸ ಮಾಡಬೇಕು. ಒಂದೊಂದು ಕ್ಷೇತ್ರದಲ್ಲೂ 30% ಲಿಂಗಾಯತ ಮತಗಳನ್ನು ಕ್ರೋಡೀಕರಿಸುವ ಸಾಮರ್ಥ್ಯ ಬಸವ ಸಂಘಟನೆಗಳಿಗಿದೆ.
ಆದರೆ ಬರೀ ಚುನಾವಣೆ ಸಮಯದಲ್ಲಿ ಹೋದರೆ ಜನ ಒಪ್ಪುವುದಿಲ್ಲ. ನಿರಂತರವಾಗಿ ಅವರ ಸಂಪರ್ಕದಲ್ಲಿದ್ದು, ಅವರಿಗೆ ಬೇಕಾದ ಕೆಲಸ ಮಾಡಿಕೊಡುತ್ತಿರಬೇಕು. ಪೊಲೀಸ್ ಠಾಣೆ, ಸರಕಾರಿ ಕಚೇರಿಗಳಲ್ಲಿ ಜನರಿಗೆ ನೆರವಾಗಬೇಕು, ಎಂದು ತಮ್ಮ ಅನುಭವ ಹಂಚಿಕೊಂಡರು.
ರಾಜಕೀಯ ಸಾಮರ್ಥ್ಯದಿಂದ ಮಾತ್ರ ಲಿಂಗಾಯತ ಧರ್ಮ ಹೋರಾಟ ಸಫಲವಾಗುತ್ತದೆ. ನಾವು ಪ್ರತ್ಯೇಕ ಧರ್ಮವಾದರೆ ನಮ್ಮ ಆಚರಣೆ ಉಳಿಸಿಕೊಳ್ಳಲು, ಸಮುದಾಯಕ್ಕೆ ಸವಲತ್ತುಗಳನ್ನು ಕೊಡಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಇದೇ ವಿಷಯದ ಮೇಲೆ ಮಾತನಾಡಿದ ಸಿಂಧನೂರಿನ ಬಸವಕೇಂದ್ರದ ಬಸಲಿಂಗಪ್ಪ ಬಾದರ್ಲಿ ಪ್ರತ್ಯೇಕ ಧರ್ಮ ಮಾನ್ಯತೆಯ ಹೋರಾಟ ಹಾಗೂ ಅನುಭವ ಮಂಟಪ ನಿರ್ವಹಣೆ, ರಕ್ಷಣೆ ಬಸವ ಸಂಘಟನೆಗಳ ಆಧ್ಯತೆಯಾಗಬೇಕು.
ನಾವು ರಾಜಕೀಯವಾಗಿ ಸಬಲವಾಗಲು ಒಳಪಂಗಡಗಳನ್ನು ಒಗ್ಗೂಡಿಸಬೇಕು. ದಲಿತ, ಹಿಂದುಳಿದ, ಪ್ರಗತಿಪರರ ವಿಶ್ವಾಸಪಡೆದು ಮುಂದುವರೆಯಬೇಕು.
ಇಂದು ರಾಜಕೀಯ ಎಂದರೆ ಛಿ ಎನ್ನುವ ಅಭಿಪ್ರಾಯವಿದೆ. ಬಸವ ಸಂಘಟನೆಗಳು ಒಳ್ಳೆಯ ರೀತಿಯಲ್ಲಿ ರಾಜಕೀಯ ಮಾಡಿ ಅದನ್ನು ಬದಲಿಸಬೇಕು, ಎಂದು ಹೇಳಿದರು.


ವೈದಿಕರ ಕೈಯಲ್ಲಿರುವ ಕ್ಷೇತ್ರಗಳನ್ನು ಕಸಿದು ಕೊಳ್ಳಿ ನೆಟ್ಟಗಾಗುತ್ತಾರೆ.
ಒಳ್ಳೆಯ ವಿಚಾರ ಜೈ ಬಸವ