ಭಾಲ್ಕಿ:
ಸಮಾಜದಲ್ಲಿ ಪ್ರತಿಯೊಬ್ಬರೂ ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಹೊಂದಾಣಿಕೆಯಿಂದ ಜೀವನ ನಡೆಸಿದರೆ ಅದುವೇ ನಿಜವಾದ ಬದುಕಾಗುತ್ತದೆ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಪೂಜ್ಯ ಗುರುಬಸವ ಪಟ್ಟದ್ದೇವರು ಹೇಳಿದರು.
ತಾಲೂಕಿನ ಬಾಜೋಳಗಾ ಗ್ರಾಮದಲ್ಲಿ ‘ನಮ್ಮೂರಲ್ಲಿ ಶ್ರಾವಣ ಸಂಭ್ರಮ’ ನಿಮಿತ್ತ ಆಯೋಜಿಸಲಾಗಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಸವಾದಿ ಶರಣರು “ದೇಹವೇ ದೇಗುಲ”ಎಂದು ಸಾರಿದ್ದಾರೆ. ಅತ್ಯಂತ ಪವಿತ್ರವಾಗಿರುವ ಮಾನವ ಶರೀರವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ದುಶ್ಚಟಗಳಿಗೆ ಬಲಿಯಾಗದೆ, ಉತ್ತಮ ವಿಚಾರಗಳು ಮತ್ತು ಸದ್ಗುಣಗಳನ್ನು ಅಳವಡಿಸಿಕೊಂಡು ಸುಂದರವಾದ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಕುಟುಂಬಗಳಲ್ಲಿ ಸಣ್ಣಪುಟ್ಟ ವಿಷಯಗಳಿಗೂ ಮನಸ್ತಾಪ ಉಂಟಾಗಿ, ಪರಸ್ಪರ ದ್ವೇಷ ಮತ್ತು ವೈಮನಸ್ಸಿನ ಭಾವನೆಗಳು ಬೆಳೆಯುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಇಂತಹ ಮನೋಭಾವದಿಂದ ದೂರ ಉಳಿದು, ಪ್ರೀತಿ-ಪ್ರೇಮ, ವಿಶ್ವಾಸ ಮತ್ತು ಪರಸ್ಪರ ಹೊಂದಾಣಿಕೆಯೊಂದಿಗೆ ಉತ್ತಮ ಕುಟುಂಬ ಜೀವನ ಸಾಗಿಸಬೇಕು ಎಂದು ಸಲಹೆ ನೀಡಿದರು.
ಮಾನವ ಜೀವನದಲ್ಲಿ ಪ್ರೀತಿಗಿಂತ ದೊಡ್ಡ ಶಕ್ತಿ ಮತ್ತೊಂದಿಲ್ಲ. ಕುಟುಂಬದ ಸದಸ್ಯರು ಒಬ್ಬರನ್ನೊಬ್ಬರು ಗೌರವಿಸಿ, ಅರ್ಥಮಾಡಿಕೊಂಡು ಬದುಕಿದಾಗ ಕುಟುಂಬದಲ್ಲಿ ಸಂತೋಷ, ಶಾಂತಿ ಮತ್ತು ನೆಮ್ಮದಿ ನೆಲೆಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಗ್ರಾಮದ ಹಾಗೂ ವಿವಿಧ ಕ್ಷೇತ್ರಗಳ ಅನೇಕ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಬಳಿಕ ಭಾಲ್ಕಿ ಹಿರೇಮಠ ಸಂಸ್ಥಾನದ ಹಾನಗಲ್ ಕುಮಾರೇಶ್ವರ ಪ್ರಸಾದ ನಿಲಯದ ವಿದ್ಯಾರ್ಥಿಗಳಿಂದ ಬಸವ ಆಧಾರಿತ ರೂಪಕ ಪ್ರದರ್ಶನ ನಡೆದು, ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.

ಶಾಮರಾವ ಎಂ, ಮಹಾದೇವ ದತ್ತಾತ್ರಿ, ಶಿವರಾಜ ಬಿರಾದಾರ, ವಿಷ್ಣು ಎಬಾಜಿ, ಲಕ್ಷ್ಮಣ ದಾವಲಜಿ, ನಾಗನಾಥ ದಾಡಗೆ, ಶಿವಕುಮಾರ ಬಿರಾದಾರ, ನಾಮದೇವ ಗೋಖಲೆ, ಜೈಪಾಲ ಹೆಚ್. ಎಂ, ಶರಣಪ್ಪ ಬಿರಾದಾರ, ಗಣಪತಿ ಬಾವಗೆ, ಧನರಾಜ ಬೊಂಬೋಳಗೆ, ಗೌರಮ್ಮ ಟೀಚರ ಸೇರಿದಂತೆ ಗ್ರಾಮಸ್ಥರು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
