ಗದಗ:
ಬಸವದಳ ವತಿಯಿಂದ ನಡೆದ ಶರಣಸಂಗಮ ಕಾಯ೯ಕ್ರಮದಲ್ಲಿ ನೂಲಿಯ ಚಂದಯ್ಯ ಶರಣರ ಕುರಿತು ಸಂಗನಬಸವನಶ್ರೀಪಾದ ಹಾದಿಮನಿ ಅವರು ಉಪನ್ಯಾಸ ನೀಡಿದರು.
ಅವರು ಮಾತನಾಡುತ್ತಾ, ಕೆರೆಯ ದಡದಲ್ಲಿ ಬೆಳೆಯುವ ಹುಲ್ಲನ್ನು ತಂದು, ಹಗ್ಗ ಹೊಸೆದು ಮಾರುವುದು ಮತ್ತು ಆ ಬಂದ ಹಣದಿಂದ ಜಂಗಮ ದಾಸೋಹ ನಡೆಸುವುದು ನೂಲಿಯ ಚಂದಯ್ಯನವರ ಕಾಯಕವಾಗಿತ್ತು.
ಅವರ ಎಲ್ಲ ವಚನಗಳು ಕಾಯಕ ಮೌಲ್ಯವನ್ನು ಎತ್ತಿ ಹಿಡಿಯುತ್ತವೆ. ಗುರು, ಲಿಂಗ, ಜಂಗಮ ಎಲ್ಲರಿಗೂ ಕಾಯಕ ಕಡ್ಡಾಯ. ಕಾಯಕದಿಂದ ಬಂದುದು ಮಾತ್ರ ಲಿಂಗಾರ್ಪಿತವಾಗುತ್ತದೆ ಎಂಬಂಥ ಮಾತುಗಳಲ್ಲಿ ಸ್ಪಷ್ಟವಾಗಿದೆ.
ಗುರುವಾದಡೂ ಕಾಯಕದಿಂದವೇ ಜೀವನ್ಮುಕ್ತಿ, ಲಿಂಗವಾದಡೂ ಕಾಯಕದಿಂದವೇ ವೇಷದ ಪಾಶ ಹರಿವುದು, ಗುರುವಾದಡೂ ಚರ ಸೇವೆಯ ಮಾಡಬೇಕು, ಲಿಂಗವಾದಡೂ ಚರ ಸೇವೆ ಮಾಡಬೇಕು, ಜಂಗಮವಾದಡೂ ಚರ ಸೇವೆ ಮಾಡಬೇಕು, ಚನ್ನಬಸವಣ್ಣ ಪ್ರಿಯ ಚಂದೇಶ್ವರ ಲಿಂಗದ ಅರಿವು. ಎಂಬುದು ಒಂದು ನೂಲಿಯ ಚಂದಯ್ಯ ಶರಣರ ವಚನವಾಗಿದೆ.
ಕಾಯಕವೇ ಶಿವ ಪೂಜೆ ಎಂದು ನಂಬಿ, ತಮ್ಮ ಕಾಯಕದಲ್ಲಿಯೇ ಸಂಪೂರ್ಣ ನಿಷ್ಠೆ ತೋರಿದ ಮಹಾನ್ ಶರಣರಲ್ಲಿ ನೂಲಿಯ ಚಂದಯ್ಯನವರು ಪ್ರಮುಖರಾಗಿದ್ದರು.

ಅವರು ಕೊನೆಯ ದಿನಗಳಲ್ಲಿ ಪದ್ಮಾವತಿ ಊರಲ್ಲಿ ನೆಲೆಸಿ ಅಲ್ಲಿಯೇ ಲಿಂಗೈಕ್ಯರಾಗುತ್ತಾರೆ. ನಂತರ ಚಂದಯ್ಯ ಅವರ ಕಾಯಕ ಸೂಚಿಸುವ ನುಲೆನೂರು ಎಂದು ಕರೆಸಿಕೊಳ್ಳುತ್ತದೆ ಎಂದು ಹಾದಿಮನಿ ಹೇಳಿದರು.
ಕಾಯ೯ಕ್ರಮದ ಅಧ್ಯಕ್ಷತೆಯನ್ನು ಬಸವದಳದ ಅಧ್ಯಕ್ಷ ವಿ.ಕೆ. ಕರೇಗೌಡ್ರ ವಹಿಸಿದ್ದರು. ಎಸ್.ಎಸ್. ಕಳಸಾಪುರಶೆಟ್ರ ಸ್ವಾಗತಿಸಿದರು. ಶೇಖಣ್ಣ ಕವಳಿಕಾಯಿ ಶರಣು ಸಮಪ೯ಣೆ ಗೈದರು. ಎಂ.ಬಿ. ಲಿಂಗದಾಳ ನಿರೂಪಣೆ ಮಾಡಿದರು.
ಬಸವ ಸಂಘಟನೆಗಳ ಸದಸ್ಯರು ಹಾಗೂ ಬಸವಾಭಿಮಾನಿಗಳು ಅನುಭಾವಿ ಶರಣರು ಉಪಸ್ಥಿತರಿದ್ದರು. ವಚನ ಮಂಗಲದೊಂದಿಗೆ ಕಾಯ೯ಕ್ರಮ ಸಂಪನ್ನಗೊಂಡಿತು.
